ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಗ್ಯ ಗ್ರಾ.ಪಂ. ಚುನಾವಣೆ ಅವಾಂತರ

Last Updated 26 ಡಿಸೆಂಬರ್ 2012, 6:31 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಿನ್ನೆ ಚುನಾವಣೆ ವೇಳೆ ನಡೆದ ಗೊಂದಲ ಈಗ ರಾಜಕೀಯವಾಗಿ ತೀವ್ರಸ್ವರೂಪ ಪಡೆದಿದೆ.

`ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಸಂವಿಧಾನಬಾಹಿರವಾಗಿದೆ. ನಮ್ಮ ಬಣದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಆಕಾಂಕ್ಷಿಯ ನಾಮಪತ್ರವನ್ನೇ ಚುನಾವಣೆಗೂ ಮೊದಲೇ ಹರಿದು ಹಾಕಲಾಗಿದೆ.

ಪಂಚಾಯತ್‌ರಾಜ್ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಲಿಂಗಶೆಟ್ಟಿ ಚುನಾವಣಾಧಿಕಾರಿಯಾಗಿದ್ದರು. ಅವರ ಮುಂದೆಯೇ ಈ ಘಟನೆ ನಡೆದಿದೆ. ನಮ್ಮ ಬಣದ 8 ಸದಸ್ಯರನ್ನು ಪೊಲೀಸರ ಬಲ ಬಳಸಿಕೊಂಡು ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡಲಾಗಿತ್ತು. ರಾಜಕೀಯ ಪ್ರಭಾವ ಹಾಗೂ ಪೊಲೀಸ್ ದೌರ್ಜನ್ಯದಿಂದ ನಮ್ಮ ಹಕ್ಕಿಗೆ ಚ್ಯುತಿಯಾಗಿದೆ' ಎಂದು ಸದಸ್ಯ ಮಹೇಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 18 ಸದಸ್ಯರಿದ್ದಾರೆ. ನಮ್ಮ ಬಣದಿಂದ ಅಧ್ಯಕ್ಷ ಸ್ಥಾನಕ್ಕೆ ಯಶೋದಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ದೇವಮ್ಮ ನಾಮಪತ್ರ ಸಲ್ಲಿಸಿದ್ದರು. ಸದಸ್ಯ ಗೋವಿಂದನಾಯಕ ನಮ್ಮ ಬಣದಲ್ಲಿಯೇ ಇದ್ದರು. ಚುನಾವಣೆ ಪ್ರಕ್ರಿಯೆ ಆರಂಭವಾದರೂ ಅವರು ಸಭೆಗೆ ಬರಲಿಲ್ಲ. ಈ ನಡುವೆ ಮತದಾನ ಪ್ರಕ್ರಿಯೆ ಆರಂಭಕ್ಕೆ ಇನ್ನೂ 15 ನಿಮಿಷದಷ್ಟು ಕಾಲಾವಕಾಶವಿತ್ತು. ಅದಕ್ಕೂ ಮೊದಲೇ ಯಶೋದಮ್ಮ ಸಲ್ಲಿಸಿದ್ದ ನಾಮಪತ್ರವನ್ನು ವಿರೋಧಿ ಬಣದ ಸದಸ್ಯ ನಾಗರಾಜ್ ಹರಿದುಹಾಕಿದರು ಎಂದರು.

ಈ ಸಂಬಂಧ ಸಭೆಯಲ್ಲಿ ವಾಗ್ವಾದ ನಡೆಯಿತು. ಆಗ ಚುನಾವಣಾ ಅವಧಿಯೂ ಪೂರ್ಣಗೊಂಡಿತು. ನಾಮಪತ್ರ ಹರಿದು ಹಾಕಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವಂತೆ ಚುನಾವಣಾಧಿಕಾರಿಗೆ ಕೋರಿದೆವು. ಆಗ ಪೊಲೀಸರು 8 ಸದಸ್ಯರನ್ನು ಕರೆದುಕೊಂಡು ಬಂದು ವ್ಯಾನ್‌ನಲ್ಲಿ ಕುಳ್ಳಿರಿಸಿದರು. ಬಳಿಕ ವಿರೋಧಿ ಬಣದ 9 ಮಂದಿಯ ಸಮ್ಮುಖದಲ್ಲಿ ಚುನಾವಣೆ ನಡೆಸಲಾಗಿದ್ದು, ಕಾನೂನಿಗೆ ವಿರುದ್ಧವಾಗಿದೆ ಎಂದು ಟೀಕಿಸಿದರು.

ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಕ್ರಮವಾಗಿ ರಾಜಮ್ಮ ಹಾಗೂ ಮೋಕ್ಷರಾಗಿಣಿ ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಆಯ್ಕೆ ಕಾನೂನಾತ್ಮಕವಾಗಿ ನಡೆದಿಲ್ಲ. ಈ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಮನವಿ ಸಲ್ಲಿಸಲಾಗುವುದು ಎಂದರು.

ವಿರೋಧಿ ನಿಲುವು:
`ನಾವು ಬಿಜೆಪಿ ಅಥವಾ ಕೆಜೆಪಿ ಎಂದು ಅರ್ಥೈಸಿಕೊಳ್ಳುವುದಿಲ್ಲ. ನಮಗೆ ನಮ್ಮ ಬಣದವರು ಅಧ್ಯಕ್ಷ, ಉಪಾಧ್ಯಕ್ಷರಾಗಬೇಕೆಂಬುದೇ ಮುಖ್ಯ ಉದ್ದೇಶ. ಈ ಎಲ್ಲ ಗೊಂದಲಕ್ಕೆ ಶಾಸಕ ಆರ್. ನರೇಂದ್ರ ಅವರೇ ಕಾರಣ. ಚುನಾವಣಾಧಿಕಾರಿಯು ಶಾಸಕರ ಪ್ರಭಾವಕ್ಕೆ ಸಿಲುಕಿದ್ದಾರೆ' ಎಂದು ಸದಸ್ಯ ಮಹೇಶ್ ದೂರಿದರು.

ಈ ಬಾರಿ ನಮ್ಮ ಬಣದಿಂದ ಮಾದಿಗ ಸಮುದಾಯ ಪ್ರತಿನಿಧಿಸುವ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಹನೂರು ಕ್ಷೇತ್ರದಲ್ಲಿ ಇಂದಿಗೂ ಈ ಸಮುದಾಯಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ಇದನ್ನು ತಪ್ಪಿಸಲು ಶಾಸಕರೇ ಷಡ್ಯಂತ್ರ ರೂಪಿಸಿ ನಮ್ಮ ಮತದಾನದ ಹಕ್ಕು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದರು.

ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬುದು ಅವರ ಉದ್ದೇಶವಾಗಿದೆ. ಬಸವ ವಸತಿ ಯೋಜನೆಯಡಿ ಪರಿಶಿಷ್ಟರಿಗೆ ಮಂಜೂರಾಗಿದ್ದ 135 ಮನೆ ಹಂಚಿಕೆ ಮಾಡುವಲ್ಲಿಯೂ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಮಾದಿಗ ಸಮಾಜದ ಬಗ್ಗೆ ವಿರೋಧಿ ನಿಲುವು ತಳೆದಿದ್ದಾರೆ ಎಂದರು.
ಸದಸ್ಯರಾದ ಯಶೋದಮ್ಮ, ರಾಜಮ್ಮ, ದೇವಮ್ಮ, ಪ್ರಭುಸ್ವಾಮಿ, ದೇವರಾಜು, ಶಿವರಾಜ್, ಸಣ್ಣಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT