ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ-ಕಾಲೇಜಿಗೆ ಅನುದಾನ ಬಿಡುಗಡೆಗೆ ಒತ್ತಾಯ

Last Updated 16 ಫೆಬ್ರುವರಿ 2011, 17:40 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಈ ಹಿಂದೆ ನೀಡಿರುವ ಭರವಸೆಯಂತೆ 1987ರಿಂದ 1995ರ ಅವಧಿಯಲ್ಲಿ ಆರಂಭವಾಗಿರುವ ಶಾಲಾ- ಕಾಲೇಜುಗಳಿಗೆ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿ, ಶಿಕ್ಷಕರು, ಉಪನ್ಯಾಸಕರು ಹಾಗೂ ನೌಕರರ ಒಕ್ಕೂಟ ಒತ್ತಾಯಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅನುದಾನ ಬಿಡುಗಡೆ ಸಂಬಂಧ ನೀಡಿರುವ ಭರವಸೆ ವರ್ಷವಾದರೂ ಈಡೇರಿಲ್ಲ. ಈ ಬಾರಿಯ ಬಜೆಟ್‌ನಲ್ಲಾದರೂ ವೇತನ ಅನುದಾನ ಬಿಡುಗಡೆ ಮಾಡಬೇಕು ಎಂದು ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಜಾಲಮಂಗಲ ನಾಗರಾಜ್, ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ  ಜಿ.ಶಿವಣ್ಣ ಕೊತ್ತೀಪುರ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಈ ವರ್ಷದ ಏಪ್ರಿಲ್‌ನಿಂದ ಅನುದಾನ ಬಿಡುಗಡೆ ಮಾಡುವುದಾಗಿ ಸಚಿವ ಕಾಗೇರಿ ಅವರು ಕಳೆದ ತಿಂಗಳ 8ರಂದು ಹೇಳಿಕೆ ನೀಡಿದ್ದಾರೆ. ಅಧ್ಯಾಪಕರ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಬೇಕಿದ್ದ ಸಚಿವರು ಉದಾಸೀನ ತೋರಿಸುತ್ತಿದ್ದಾರೆ.

ಅವರ ಈ ನಿಲುವಿನಿಂದಾಗಿ ಅನುದಾನ ಬಿಡುಗಡೆ ಮಾಡುವಂತೆ ಕಳೆದ ಒಂದು ವರ್ಷದಿಂದ ಮಾಡಿದ ನಿರಂತರ ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅನುದಾನ ನೀಡಿಕೆಯ ಷರತ್ತುಗಳನ್ನು ಪೂರೈಸಿರುವ ಪದವಿಪೂರ್ವ ಕಾಲೇಜುಗಳು, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಅನುದಾನ ನೀಡದೆ ಮೀನ- ಮೇಷ ಎಣಿಸುತ್ತಿರುವುದು ವಿಪರ್ಯಾಸ. ಹಿಂದಿನ ಸರ್ಕಾರ 1994-95ನೇ ಶೈಕ್ಷಣಿಕ ಸಾಲಿನ ಒಳಗೆ ಪ್ರಾರಂಭಗೊಂಡಿರುವ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಿ ರೂ 195 ಕೋಟಿಯನ್ನು ಆಯವ್ಯಯದಲ್ಲಿ ಮೀಸಲಿಟ್ಟಿತ್ತು.

ಆದರೆ ಆರ್ಥಿಕ ಮಿತವ್ಯಯದ ನೆಪದಿಂದಾಗಿ ಅನುದಾನಕ್ಕೆ ಮೀಸಲಿಟ್ಟ ಹಣ ಇಂದಿಗೂ ಶಿಕ್ಷಕರ, ಉಪನ್ಯಾಸಕರ ಕೈ ಸೇರಿಲ್ಲ. ಯಡಿಯೂರಪ್ಪ ಅವರಿಗೆ ಅನುದಾನ ನೀಡುವಂತೆ ಹತ್ತಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹದ ಹಿನ್ನೆಲೆಯಲ್ಲಿ ಸರ್ಕಾರ ಆರ್ಥಿಕ ಮಿತವ್ಯಯ ನೀತಿಯನ್ನು ಜಾರಿಗೆ ತಂದಿದೆ. 

ಈ ಮಿತವ್ಯಯ ನೀತಿಯು ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಲ್ಲಿ ಕಳೆದ 20 ವರ್ಷಗಳಿಂದ ಕಡಿಮೆ ಸಂಬಳಕ್ಕೆ, ಕೆಲವೊಮ್ಮೆ ಸಂಬಳ ಇಲ್ಲದೆ ದುಡಿಯುತ್ತಿರುವ ಶಿಕ್ಷಕರು, ಉಪನ್ಯಾಸಕರಿಗೆ ವೇತನ ಅನುದಾನ ಬಿಡುಗಡೆಯಾಗದಂತೆ ತಡೆಡಿದಿದೆ.

ಉದ್ಯೋಗ ಭದ್ರತೆ ಇಲ್ಲದೆ, ಸಾಕಷ್ಟು ವೇತನವೂ ಇಲ್ಲದೆ ಕೆಲಸ ಮಾಡುತ್ತಿದ್ದ ಶಿಕ್ಷಕರು, ಉಪನ್ಯಾಸಕರಿಗೆ ಮಾನಸಿಕ ಆಘಾತವನ್ನುಂಟುಮಾಡಿದೆ.
ಕಳೆದ ಸಾಲಿನ ಬಜೆಟ್ ಭಾಷಣದಲ್ಲಿ 1987ರಿಂದ 1995 ಶೈಕ್ಷಣಿಕ ಸಾಲಿನಲ್ಲಿ ಪ್ರಾರಂಭವಾಗಿರುವ ಶಾಲಾ- ಕಾಲೇಜುಗಳಿಗೆ ವೇತನ ಅನುದಾನ ಬಿಡುಗಡೆ ಮಾಡಲು ತಾತ್ಕಾಲಿಕವಾಗಿ ವಿಧಿಸಲಾಗಿದ್ದ ಆರ್ಥಿಕ ಮಿತವ್ಯಯವನ್ನು ಸಡಿಲಿಸಿ, 2010ರ ಏಪ್ರಿಲ್ ಒಂದರಿಂದಲೇ ಜಾರಿಗೆ ಬರುವಂತೆ ಅನುದಾನ ನೀಡಿಕೆಯ ಷರತ್ತುಗಳನ್ನು ಪೂರೈಸಿದ ಎಲ್ಲಾ ಶಾಲಾ ಕಾಲೇಜುಗಳಿಗೆ ಅನುದಾನವನ್ನು ಬಿಡುಗಡೆ ಮಾಡುವಂತೆ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದರು.
ಆದರೆ ಇದುವರೆಗೂ ಜಾರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT