ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ-ಕಾಲೇಜುಗಳಲ್ಲಿ ಯೋಗ ಶಿಕ್ಷಕರ ನೇಮಕ

Last Updated 4 ಅಕ್ಟೋಬರ್ 2012, 6:25 IST
ಅಕ್ಷರ ಗಾತ್ರ

ಬೆಳ್ತಂಗಡಿ: ವಿದ್ಯಾರ್ಥಿಗಳಲ್ಲಿ ಮಾನವೀಯ ಗುಣಗಳು, ನೈತಿಕ ಮೌಲ್ಯ ಹಾಗೂ ಸೇವಾ ಮನೋಭಾವವನ್ನು ಉದ್ದೀಪನಗೊಳಿಸುವ ಉದ್ದೇಶದಿಂದ ಶಾಲಾ-ಕಾಲೇಜುಗಳಲ್ಲಿ ಯೋಗ ಶಿಕ್ಷಕರ ನೇಮಕ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಉಜಿರೆಯ ಎಸ್.ಡಿ.ಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಬುಧವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಆವರು ಮಾತನಾಡಿದರು.

ರಾಜ್ಯದಲ್ಲಿ ಈಗಾಗಲೇ ಹತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಧರ್ಮಸ್ಥಳದ ಸಹಯೋಗದೊಂದಿಗೆ ಆಯುಷ್ ಕೇಂದ್ರಗಳಿದ್ದು (ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ), ಇನ್ನೂ 30 ಸರ್ಕಾರಿ ಆಸ್ಪತ್ರೆಗಳಲ್ಲಿ ಆಯುಷ್ ಕೇಂದ್ರಗಳನ್ನು ಆರಂಭಿಸಲಾಗುವುದು. ಇದನ್ನು ಧರ್ಮಸ್ಥಳದ ನೇತೃತ್ವದಲ್ಲಿ ನಡೆಸಬೇಕೆಂದು ಡಾ. ಹೆಗ್ಗಡೆ ಅವರನ್ನು ಸಚಿವರು ಕೋರಿದರು.

ಎಂಡೊ ಪೀಡಿತರಿಗಾಗಿ ಹತ್ತು ಎಕರೆ ಪ್ರದೇಶದಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ಆರಂಭಿಸಲು ಉದ್ದೇಶಿಸಿದ್ದು ಇದನ್ನೂ ಧರ್ಮಸ್ಥಳದ ವತಿಯಿಂದ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಜನಪ್ರಿಯವಾಗಿರುವ ನಾಟಿ ವೈದ್ಯ ಪದ್ಧತಿಯನ್ನು ನಿಷೇಧಿಸುವುದಿಲ್ಲ. ಆಯುರ್ವೇದ ಪದ್ಧತಿ ವೈದ್ಯರು ಹಾಗೂ ಅಲೋಪತಿ ವೈದ್ಯರ ಮಧ್ಯೆ  ಇರುವ ವೇತನ ತಾರತಮ್ಯ ನಿವಾರಿಸಿ ಸಮಾನ ವೇತನ ಹಾಗೂ ಮಾನ್ಯತೆ ನೀಡಲಾಗುವುದು ಎಂದು ಪ್ರಕಟಿಸಿದರು.

ನೂತನ ಪದವೀಧರರು ಸೇವಾ ಮನೋಭಾವದಿಂದ ರೋಗಿಗಳ ಸೇವೆ ಮಾಡಬೇಕು. ನಿರಂತರ ಆಧ್ಯಯನ ಹಾಗೂ ಸಂಶೋಧನೆಯೊಂದಿಗೆ ತಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಯುಷ್ ವಿಭಾಗದ ನಿರ್ದೇಶಕ ಜಿ.ಎನ್.ಶ್ರೀಕಂಠಯ್ಯ ಮಾತನಾಡಿ ಪ್ರಕೃತಿ ಚಿಕಿತ್ಸಾ ಪದ್ದತಿ ಬಗ್ಗೆ ಕೀಳರಿಮೆ ಸಲ್ಲದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ ಭಾರತದ ಪ್ರಾಚೀನ ಪಾರಂಪರಿಕ ಚಿಕಿತ್ಸಾ ಪದ್ಧತಿಯನ್ನು ಜನಪ್ರಿಯಗೊಳಿಸಲು ಹಾಗೂ ಜನರಿಗೆ ಆರೋಗ್ಯ ದಾನ ಮಾಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಆಯುಷ್ ಕೇಂದ್ರಗಳನ್ನು ನಿರ್ವಹಿಸಲು ಸೂಕ್ತ ಸಹಕಾರ ನೀಡಲಾಗುವುದು. ಹಿರಿಯ ನಾಗರಿಕರ ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಣೆಗಾಗಿ ಔಷಧಿರಹಿತ ಪ್ರಕೃತಿ ಚಿಕತ್ಸಾ ಪದ್ಧತಿ ಆತ್ಯಂತ ಪರಿಣಾಮಕಾರಿಯಾಗಿದೆ ಎಂದು ಆವರು ಅಭಿಪ್ರಾಯಪಟ್ಟರು.

ಮಂಜುಳಾ ಅರವಿಂದ ಲಿಂಬಾವಳಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ.ಹರ್ಷೇಂದ್ರ ಕುಮಾರ್ ಮತ್ತು ಡಾ. ಬಿ.ಯಶೋವರ್ಮ,ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT