ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಮಕ್ಕಳಿಗೆ ಕಾಯಂ ಗುರುತು ಸಂಖ್ಯೆ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮುಂದಿನ ತಿಂಗಳು ಆನ್‌ಲೈನ್‌ನಲ್ಲಿ ಲಭ್ಯ
 

ಹುಬ್ಬಳ್ಳಿ: ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಐ) ಪರಿಣಾಮಕಾರಿ ಜಾರಿ ಹಾಗೂ ಅರ್ಧದಲ್ಲಿಯೇ ಶಾಲೆ ಬಿಡುವವರನ್ನು ಗುರುತಿಸುವುದಕ್ಕಾಗಿ ಶಾಲಾ ಮಕ್ಕಳಿಗೆ ಶಾಶ್ವತ ಗುರುತಿನ ಸಂಖ್ಯೆ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ.

ರಾಜ್ಯದಲ್ಲಿ 1ರಿಂದ 10ನೇ ತರಗತಿವರೆಗೆ ಕಲಿಯುತ್ತಿರುವ 1.97 ಕೋಟಿ ಮಕ್ಕಳು ಗುರುತಿನ ಸಂಖ್ಯೆಯನ್ನು ಪಡೆಯಲಿದ್ದಾರೆ. ಇದರಿಂದ ರಾಜ್ಯದ ಯಾವುದೇ ಭಾಗದಿಂದ ಆನ್‌ಲೈನ್ ಮೂಲಕ ವಿದ್ಯಾರ್ಥಿಯ ವೈಯಕ್ತಿಕ ವಿವರ ಪಡೆಯಬಹುದಾಗಿದೆ.

ಮಗುವಿನ ಭಾವಚಿತ್ರ, ಜೈವಿಕ ಮಾಹಿತಿಗಾಗಿ ಹೆಬ್ಬೆಟ್ಟಿನ ಗುರುತು, ಹುಟ್ಟಿದ ದಿನ, ರಕ್ತದ ಗುಂಪು, ಜನ್ಮಸ್ಥಳ, ಪೋಷಕರ ವಿವರ, ವಿಳಾಸ, ಶೈಕ್ಷಣಿಕ ಸಾಧನೆ ಹೀಗೆ ಮಗುವಿನ ಸಮಗ್ರ ಮಾಹಿತಿ ಶಾಶ್ವತವಾಗಿ ದೊರೆಯುವಂತೆ ಮಾಡುವ ವಿಶಿಷ್ಟ ಯೋಜನೆ ಇದಾಗಿದೆ.

ಬಿಆರ್‌ಸಿಗಳಿಗೆ ಜವಾಬ್ದಾರಿ: ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಲಿಯುತ್ತಿರುವ ಎಲ್ಲಾ ಮಕ್ಕಳ ಸಮಗ್ರ ಮಾಹಿತಿಯನ್ನು ಆನ್‌ಲೈನ್‌ಗೆ ದಾಖಲಿಸುವ ಪ್ರಕ್ರಿಯೆಯನ್ನು ಸೆಪ್ಟಂಬರ್1 ರಿಂದ ಇಲಾಖೆ ಆರಂಭಿಸಿದೆ.

ಆಯಾ ಕ್ಲಸ್ಟರ್ ಹಾಗೂ ಬ್ಲಾಕ್ ಮಟ್ಟದಲ್ಲಿ ಇರುವ ಸಮೂಹ ಸಂಪನ್ಮೂಲ ಅಧಿಕಾರಿಗೆ (ಸಿಆರ್‌ಪಿ ಮತ್ತು ಬಿಆರ್‌ಪಿ) ತಮ್ಮ ವ್ಯಾಪ್ತಿಯ 15ರಿಂದ 30 ಶಾಲೆಗಳ ಮಕ್ಕಳ ಮಾಹಿತಿಯನ್ನು ಸಂಗ್ರಹಿಸಿ ಆನ್‌ಲೈನ್‌ನಲ್ಲಿ ದಾಖಲಿಸುವ ಜವಾಬ್ದಾರಿ ವಹಿಸಲಾಗಿದೆ. ಇದಕ್ಕೆ ತರಬೇತಿ ಪಡೆದ ಸಿಬ್ಬಂದಿ ಸೇವೆ ಬಳಸಿಕೊಳ್ಳಲಾಗುತ್ತಿದೆ. ಬಿಆರ್‌ಸಿ ಕಚೇರಿ ಮೂಲಕ ಆಯಾ ಜಿಲ್ಲೆಯ ಡಿಡಿಪಿಐ ಕಚೇರಿಯಲ್ಲಿರುವ `ಏಕೀಕೃತ ಜಿಲ್ಲಾ ಶಾಲಾ ಶಿಕ್ಷಣ ಮಾಹಿತಿ ವಿಭಾಗ~ದಲ್ಲಿ (ಯುಡೈಸ್) ಪ್ರತಿ ವರ್ಷ ಮಾಹಿತಿ ನವೀಕರಣಗೊಳ್ಳಲಿದೆ.

ಇಲಾಖೆ ನಿಗದಿಗೊಳಿಸಿದ ವೇಗದಲ್ಲಿ ದಾಖಲಾತಿ ಕಾರ್ಯ ನಡೆದಲ್ಲಿ ಅಕ್ಟೋಬರ್ 30ಕ್ಕೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ನವೆಂಬರ್‌ನಲ್ಲಿ  ಆಯಾ ಶಾಲೆಯ ಮೂಲಕವೇ ಮಕ್ಕಳಿಗೆ ಶಾಶ್ವತ ಗುರುತಿನ ಸಂಖ್ಯೆ ನೀಡುವ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತದೆ. ಮಗುವೊಂದು ಒಂದನೇ ತರಗತಿಗೆ ದಾಖಲಾಗಿ ಅದು 10ನೇ ತರಗತಿ ಪೂರ್ಣಗೊಳಿಸುವವರೆಗೂ ಒಮ್ಮೆ ನೀಡಿದ ಸಂಖ್ಯೆ ಚಾಲನೆಯಲ್ಲಿ ಇರಲಿದೆ.

ಇಲಾಖೆಗೂ ಅನುಕೂಲ: ಮುಂದಿನ ಶೈಕ್ಷಣಿಕ ವರ್ಷದಿಂದ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದ್ದು, ಮಕ್ಕಳ ವಿವರವನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಿಡುವುದರಿಂದ ಕಾಯ್ದೆಯಡಿ ಪ್ರವೇಶ ಪಡೆದ ಮಕ್ಕಳ ಸಂಖ್ಯೆಯನ್ನು ಪಾರದರ್ಶಕವಾಗಿ ಇಡಲು ಸಹಾಯವಾಗಲಿದೆ.

ಕಾಯ್ದೆ ಜಾರಿ ಬಗ್ಗೆ ಸಮಗ್ರ ಮಾಹಿತಿಯನ್ನು ಪೋಷಕರು, ಶಿಕ್ಷಣ ತಜ್ಞರು ಹಾಗೂ ಜನಪ್ರತಿನಿಧಿಗಳು ಇನ್ನು ಮುಂದೆ ಬೇಕಾದಾಗ ಆನ್‌ಲೈನ್ ಮೂಲಕವೇ ಪಡೆಯಬಹುದಾಗಿದೆ. ಇನ್ನೊಂದೆಡೆ ಯಾವುದೇ ಮಗು ಅರ್ಧದಲ್ಲಿಯೇ ಶಾಲೆ ಬಿಟ್ಟರೆ ಆ ವರ್ಷದ ದಾಖಲಾತಿ ನವೀಕರಣ ವೇಳೆ ನೈಜ ಮಾಹಿತಿ ಇಲಾಖೆ ಗಮನಕ್ಕೆ ಬರಲಿದೆ ಎಂದು ವರ್ಧನ ಹೇಳಿದರು.

ಹೀಗೆ ಲಾಗ್‌ಆನ್ ಆಗಿ
ಶಾಶ್ವತ ಗುರುತಿನ ಸಂಖ್ಯೆಯನ್ನು ಇಲಾಖೆಯ ಆನ್‌ಲೈನ್ ವಿಳಾಸ `www.schooleducation.kar.nic~ಲಾಗ್‌ಆನ್ ಮಾಡಿದರೆ ಸಂಬಂಧಿಸಿದ ಮಗುವಿನ ಮಾಹಿತಿ ದೊರೆಯುತ್ತದೆ. ಕೇಂದ್ರ ಸರ್ಕಾರದ ~ಆಧಾರ್~ ಗುರುತಿನ ಪತ್ರದ ದಾಖಲೆಯನ್ನು ಈ ಪ್ರಕ್ರಿಯೆಗೆ ಮಾದರಿಯಾಗಿ ಇಟ್ಟುಕೊಳ್ಳಲಾಗಿದೆ ಎಂದು ಧಾರವಾಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಿ.ಕೆ.ಎಸ್. ವರ್ಧನ `ಪ್ರಜಾವಾಣಿ~ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT