ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಮೈದಾನದಲ್ಲಿ ಜಿನುಗುವ ನೀರು

ನಗರ ಸಂಚಾರ
Last Updated 15 ಜುಲೈ 2013, 5:34 IST
ಅಕ್ಷರ ಗಾತ್ರ

ಕಾರವಾರ: ಮಳೆಗಾಲ ಬಂತೆಂದರೆ ಸಾಕು ಈ ಸರ್ಕಾರಿ ಶಾಲೆಯ ಆವರಣದಲ್ಲಿ ಸದಾ ನೀರು ಜಿನುಗುತ್ತದೆ. ಇದರಿಂದ ಇಲ್ಲಿನ ಮಕ್ಕಳು ಹಾಗೂ ಶಿಕ್ಷಕರು ನಿತ್ಯ ನಿಂತ ನೀರಲ್ಲೇ ಓಡಾಡಬೇಕಾದ ದುಃಸ್ಥಿತಿ ಇದೆ.

ಮಳೆಗಾಲದಲ್ಲಿ ಕಾರವಾರದ ಬೈತಖೋಲ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮೈದಾನವೆಲ್ಲ ನೀರು ತುಂಬಿಕೊಂಡು ರಾಡಿಯಾಗುತ್ತದೆ. ಇದರಿಂದ ಮಕ್ಕಳು ಆಟ ಆಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಮಕ್ಕಳು ಸದಾ ನೀರಿನಲ್ಲೇ ಓಡಾಡುವುದರಿಂದ ಕಜ್ಜಿಯಂತಹ ಚರ್ಮವ್ಯಾಧಿ ಸಮಸ್ಯೆಗಳು ಮಕ್ಕಳನ್ನು ಕಾಡುತ್ತಿವೆ.

ಶಾಲೆಯ ಬಳಿಯಲ್ಲಿಯೇ ಗುಡ್ಡವಿದೆ. ಮಳೆ ಬಂದಾಗ ಆ ನೀರು ಕೆಳಗೆ ಹರಿಯುತ್ತದೆ. ಹೀಗೆ ಹರಿಯುವ ನೀರು ಶಾಲಾ ಕಟ್ಟಡದ ಅಡಿಭಾಗದಲ್ಲಿ ನೀರು ಜಿನುಗುತ್ತಿದೆ. ಇದರಿಂದ ಆವರಣದ ತುಂಬೆಲ್ಲ ನೀರು ನಿಲ್ಲುತ್ತದೆ. ಇದರಿಂದ ಮಕ್ಕಳು ಬೆಳಗ್ಗಿನ ಪ್ರಾರ್ಥನೆ ಮಾಡುವುದು ಎಲ್ಲಿ ಹಾಗೂ ಅವರು ಆಟ ಆಡುವುದು ಎಲ್ಲಿ ಎನ್ನುವುದು ಪ್ರಶ್ನೆಯಾಗಿದೆ. ನೀರು ಜಿನುಗುವುದರಿಂದ ಶಾಲೆ ಕಟ್ಟಡವೂ ಹಾನಿಯಾಗಬಹುದಾದ ಸಂಭವವಿದೆ.  

ಈ ಆವರಣದಲ್ಲಿ ಹಿರಿಯ ಪ್ರಾಥರ್ಮಿಕ ಶಾಲೆ ಅಲ್ಲದೇ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಇದೆ. ಇಲ್ಲಿ ಒಟ್ಟು ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಪ್ರತಿವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ಇಲ್ಲಿನ ಶಾಲಾ ಆವರಣದಲ್ಲಿ ನೀರು ರಾಡಿಯಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎನ್ನುವುದು ಶಿಕ್ಷಕರು ಹಾಗೂ ಆಡಳಿತ ಸಿಬ್ಬಂದಿಯ ತಲೆನೋವಾಗಿದೆ. 

`ಈ ಬಗ್ಗೆ ಹೋದ ವರ್ಷ ಮಳೆಗಾಳದಲ್ಲಿ ನಗರಸಭೆಗೆ ದೂರು ನೀಡಲಾಗಿತ್ತು. ನಗರಸಭೆಯವರು ಮೈದಾನದಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದ್ದರು. ಆದರೆ, ನೀರಿನ ಜೊತೆಗೆ ಮಣ್ಣು ಸಹ ಕೊಚ್ಚಿಕೊಂಡು ಹೋಗಿದೆ. ಈ ವರ್ಷವೂ ಇದೇ ಪರಿಸ್ಥಿತಿ ಮುಂದುವರಿದಿದ್ದು, ಶಾಲೆ ವತಿಯಿಂದ ನಗರಸಭೆ ಹಾಗೂ ಸಂಬಂಧಪಟ್ಟವರಿಗೆ ದೂರು ನೀಡಿದ್ದೇವೆ' ಎಂದು ಇಲ್ಲಿನ ಶಿಕ್ಷಕರು `ಪ್ರಜಾವಾಣಿ'ಗೆ ತಿಳಿಸಿದರು.

`ಶಾಲೆ ಬಳಿಯಲ್ಲಿಯೇ ಬೆಟ್ಟವಿದ್ದು, ಮಳೆ ಬಂದಾಗ ನೀರು ಝರಿಯಂತೆ ಕೆಳಭಾಗಕ್ಕೆ ಹರಿದುಬರುತ್ತದೆ. ಹೀಗೆ ಬಂದ ನೀರು ಕಟ್ಟಡದ ಅಡಿಯಲ್ಲಿ ಜಿನುಗುತ್ತದೆ. ಆದರೆ, ಇದಕ್ಕೆ ಪರಿಹಾರ ಏನೆಂಬುದು ತಿಳಿಯದ್ದಾಗಿದೆ' ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಶಿಕ್ಷಕರು.
ಇದಕ್ಕೆ ಸೂಕ್ತ ಪರಿಹಾರೋಪಾಯ ಕಂಡುಕೊಳ್ಳಬೇಕಾಗಿದ್ದು, ಈ ನಿಟ್ಟಿನಲ್ಲಿ ನಗರಸಭೆ ಚಿಂತಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT