ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಶಾಹು ಮಹಾರಾಜ್ ಮಹಾ ಮಾನವತಾವಾದಿ'

Last Updated 28 ಜುಲೈ 2013, 10:36 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದವರ ಹುಟು ಹಬ್ಬ ಸಮಾರಂಭಗಳು ವಿಜೃಂಭಣೆಯಿಂದ ಆಚರಿಸಲ್ಪಡುತ್ತಿವೆ. ಆದರೆ ದಲಿತರ, ಶೋಷಿತರ ಏಳಿಗೆಗಾಗಿ ದುಡಿದ ಮಹನೀಯರ  ಜನ್ಮದಿನಾಚರಣೆಗಳು ಕೆಲವೇ ಮಂದಿಗೆ ಸೀಮಿತವಾಗಿರುವುದು ವಿಷಾದಕರ ಸಂಗತಿ ಎಂದು ಪಿವಿಸಿ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ಹೇಳಿದರು.

ನಗರದ ಪುರಭವನದಲ್ಲಿ ಪ್ರಜಾ ವಿಮೋಚನಾ ಚಳವಳಿ (ಸ) ವತಿಯಿಂದ ನಡೆದ ಛತ್ರಪತಿ ಶಾಹು ಮಹಾರಾಜರ 139ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿ ಪುರೋಹಿತಶಾಹಿ ವ್ಯವಸ್ಥೆ ಹಿಡಿತದಿಂದ ಮೇಲ್ವರ್ಗದವರ ವಿರೋಧವನ್ನು ಲೆಕ್ಕಿಸಿದೇ ದಲಿತರು, ಹಿಂದುಳಿದವರು ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯಪೂರ್ವದಲ್ಲಿಯೇ ಮೀಸಲಾತಿಯನ್ನು ಕಲ್ಪಿಸಿದ ಛತ್ರಪತಿ ಶಾಹು ಮಹಾರಾಜರ ಸಾಧನೆಯನ್ನು ನಾವೆಲ್ಲ ಸ್ಮರಿಸಬೇಕಿದೆ. ಶಿಕ್ಷಣದ ಮಹತ್ವವನ್ನು ಅಂದೇ ಅರಿತ ಮಹಾರಾಜರು ತಮ್ಮ ಜೀವನದುದ್ದಕ್ಕೂ ಶಿಕ್ಷಣ ಕ್ಷೇತ್ರಕ್ಕೆ ಸೇರಿದಂತೆ ಆರ್ಥಿಕ, ಸಾಮಾಜಿಕ,ಸಮಾನತೆ ಸಹಬಾಳ್ವೆಗಾಗಿ ಯೋಜನೆಗಳನ್ನು ರೂಪಿಸಿದ ಮಹಾ ಮಾನವತಾವಾದಿ ಎಂದರು.

`ಶಾಹು ಮಹಾರಾಜರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಆದರೆ ಇಂದಿನ ರಾಜಕೀಯ ಪಕ್ಷಗಳು ಸ್ವಾರ್ಥ ಸಾಧನೆಗಾಗಿ ಶೋಷಿತರನ್ನು ಬಳಸಿಕೊಳ್ಳುತ್ತಿವೆ. ಕೊಳಚೆ ಪ್ರದೇಶಗಳಲ್ಲಿ ಇಂದಿಗೂ ಮೂಲ ಸೌಕರ್ಯಗಳನ್ನು ಕಲ್ಪಿಸಿಲ್ಲ. ಈ ನಿಟ್ಟಿನಲ್ಲಿ ಪಿವಿಸಿ ಸಂಘಟನೆ ಪಾತ್ರ ಮಹತ್ವದ್ದಾಗಿದೆ. ಬುದ್ಧ, ಬಸವಣ್ಣ, ಪೆರಿಯಾರ್, ಜ್ಯೋತಿ ಬಾ ಫುಲೆ, ಶಾಹು ಮಹಾರಾಜರಂತಹ ಮಹನೀಯರ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಅವರ ವಿಚಾರಧಾರೆಗಳನ್ನು ತಿಳಿಸುವಂತಹ ಕಾರ್ಯವಾಗಬೇಕು. ಅನ್ಯಾಯ ಅಕ್ರಮಗಳ ವಿರುದ್ಧ ನಿರಂತರ ಹೋರಾಟ ರೂಪಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪಿವಿಸಿ (ಎಸ್) ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿಆಂಜಿನಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಮುನಿಕೃಷ್ಣಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಮುನಿಕೃಷ್ಣ, ವೆಂಕಟೇಶ್ ಚಿಕ್ಕನರಸಯ್ಯ, ನಾಗರಾಜ್, ಶಾರದಮ್ಮ, ಗೌರಮ್ಮ, ಎಚ್.ಶಿವು ಇದ್ದರು.

`ಧೀಮಂತ ನಾಯಕ'
ಆನೇಕಲ್:
ಶಾಹು ಮಹಾರಾಜರು ಎಲ್ಲಾ ವರ್ಗಗಳ ಶೋಷಿತರಿಗೆ ಶೇ 50 ರಷ್ಟು ಮೀಸಲಾತಿ ನೀಡಬೇಕು ಎಂದು ಹೋರಾಟ ಮಾಡಿದ ಧೀಮಂತ ನಾಯಕರು. ಅವರ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ಅವರ ಕಾರ್ಯವನ್ನು ಸ್ಮರಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಪ್ರಜಾ ವಿಮೋಚನಾ ಚಳವಳಿ (ಮಾನವತಾವಾದ) ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾಗರಾಜ್ ನುಡಿದರು.

ಅವರು ಪಟ್ಟಣದಲ್ಲಿ ಪ್ರಜಾ ವಿಮೋಚನಾ ಚಳವಳಿ (ಎಂ) ಆಯೋಜಿಸಿದ್ದ ಶಾಹು ಮಹಾರಾಜರ 139ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಎಲ್ಲಾ ಜಾತಿ ಧರ್ಮದವರಿಗೆ ಸಮಾನತೆಯ ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ನೀಡಿದ ಮಹಾನ್ ಚೇತನ ಛತ್ರಪತಿ ಶಾಹು ಮಹಾರಾಜ್. ಎಲ್ಲಾ ಜಾತಿಯವರಿಗೂ ಶಿಕ್ಷಣವು ಸಮಾನ ರೀತಿಯಲ್ಲಿ ಸಿಗಬೇಕು ಎನ್ನುವ ನಿಟ್ಟಿನಲ್ಲಿ ವಸತಿ ಶಾಲೆಯಲ್ಲಿ ಪ್ರತಿ ಜಾತಿ ಧರ್ಮಗಳಿಗೂ ವ್ಯವಸ್ಥೆ ಮಾಡಿದ ದೂರಗಾಮಿ ಚಿಂತಕ ಎಂದು ಹೇಳಿದರು.

ಪಿವಿಸಿ (ಎಂ) ರಾಜ್ಯ ಪ್ರಧಾನ ಕಾರ್ಯದರ್ಶಿ ಆದೂರು ಪ್ರಕಾಶ್ ಮಾತನಾಡಿ, `ಡಾ. ಬಿ.ಆರ್. ಅಂಬೇಡ್ಕರ್ ಅವರು ಉನ್ನತ ಶಿಕ್ಷಣವನ್ನು ಪಡೆಯಲು ಲಂಡನ್ನಿಗೆ ತೆರಳಲು ಆರ್ಥಿಕ ಸಹಾಯವನ್ನು ಮಾಡಿ, ಈ ದೇಶದಲ್ಲಿ ಒಬ್ಬ ಮಹಾನ್ ನಾಯಕನನ್ನು ಹುಟ್ಟು ಹಾಕಲು ಕಾರಣಕರ್ತರಾದವರು ಶಾಹು ಮಹಾರಾಜರು ಎಂಬುದು ಸ್ಮರಣೀಯ' ಎಂದರು.

   ಕಾರ್ಯಕ್ರಮದಲ್ಲಿ ರಾಜ್ಯ ಘಟಕದ ಉಪಾಧ್ಯಕ್ಷ ಗೆರಟಿಗನಬೆಲೆ ಡಿ. ಮುನಿಯಲ್ಲಪ್ಪ ತಾಲ್ಲೂಕು ಅಧ್ಯಕ್ಷ ಕೆ.ಸಿ.ನಾಗರಾಜ್, ಸಂಘಟನೆಯ ದೊಡ್ಡ ಹಾಗಡೆ ಕೃಷ್ಣಪ್ಪ, ಹೊಂಫಲಘಟ್ಟ ರವಿ, ಶಾಂತಕುಮಾರ್, ಪಿಳ್ಳಪ್ಪ, ಪಾಪಣ್ಣ, ಶೇಖರ್ ಮುಂತಾದವರು ಹಾಜರಿದ್ದರು.

ಶಿಕ್ಷಣಕ್ಕೆ ನೆರವು
ಆನೇಕಲ್: 
ಶೋಷಿತ ದೀನ ದಲಿತರ ಪ್ರಗತಿಗಾಗಿ ಶ್ರಮಿಸಿದ ಧೀಮಂತ ನಾಯಕ ಛತ್ರಪತಿ ಶಾಹು ಮಹಾರಾಜರು ಇಂತವರ ಆದರ್ಶಗಳನ್ನ ಯುವಕರು ಮೈಗೂಡಿಸಿಕೊಳ್ಳಬೇಕು ಎಂದು ಪ್ರಜಾವಿಮೋಚನಾ ಚಳವಳಿಯ (ಸಮತವಾದ) ಬೆಂಗಳೂರು ವಿಭಾಗೀಯ ಅಧ್ಯಕ್ಷ ಬಸವರಾಜು ಕರೆ ನೀಡಿದರು.

ಅವರು ತಾಲ್ಲೂಕಿನ ಯಡವನಹಳ್ಳಿ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸಂಘಟನೆಯ ವತಿಯಿಂದ ಏರ್ಪಡಿಸಿದ್ದ ಛತ್ರಪತಿ ಶಾಹು ಮಹರಾಜರ 139 ನೇ ಜಯಂತಿ ಉತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಶಾಹು ಮಹಾರಾಜರು ಕಡ್ಡಾಯ ಶಿಕ್ಷಣವನ್ನು ಜಾರಿಗೆ ತಂದು ಎಲ್ಲರಿಗೂ ಶಿಕ್ಷಣ ನೀಡಲು ಶ್ರಮಿಸಿದರು. ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಿದರು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ವಿದ್ಯಾಭ್ಯಾಸಕ್ಕೂ ನೆರವು ನೀಡಿದ ಮಹಾನ್ ನಾಯಕರು ಎಂದರು.

ಸಂಘಟನೆಯ ಜಿಲ್ಲಾಧ್ಯಕ್ಷ ಯಡವನಹಳ್ಳಿ ಕೃಷ್ಣಪ್ಪ, ರಗ್ಗೇಶ್,  ತಾಲ್ಲೂಕು ಅಧ್ಯಕ್ಷ ಅಶ್ವಥ್, ಯುವ ಮುಖಂಡ ವಜ್ರಹಳ್ಳಿ ಶ್ರೀರಾಮ್, ಮುನಿರಾಜು, ಮಂಚನಹಳ್ಳಿ ಅಳ್ಳಳಪ್ಪ, ವೆಂಕಟೇಶ್, ಆದೂರು ಲೋಕೇಶ್  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT