ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ನೀತಿಯ ಉದ್ದೇಶ ಈಡೇರಿಲ್ಲ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಶಿಕ್ಷಣ ನೀತಿಯ ಉದ್ದೇಶಗಳು ಈವರೆಗೂ ಈಡೇರಿಲ್ಲ~ ಎಂದು ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿಲೀಪ್ ರಂಜೇಕರ್ ಹೇಳಿದರು.

ಆಲ್ ಇಂಡಿಯಾ ಮೂವ್‌ಮೆಂಟ್ ಫಾರ್ ಸೇವಾ ಸಂಘಟನೆಯು ನಗರದ ದೊಮ್ಮಲೂರಿನಲ್ಲಿರುವ ಶಕ್ತಿ ಹಾಗೂ ಸಂಪನ್ಮೂಲ ಸಂಸ್ಥೆಯ (ಟೆರಿ) ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಲೇಖಕಿ ಶೀಲಾ ಬಾಲಾಜಿ ಅವರ `ಸ್ವಾಮಿ ದಯಾನಂದ ಸರಸ್ವತಿ (ಅರ್ಷ ವಿದ್ಯಾ ಗುರುಕುಲ) ಅವರ ಕೊಡುಗೆ ಮತ್ತು ಬರಹಗಳು~ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ಸಮಾಜದಲ್ಲಿ ಸಮಗ್ರ ಬದಲಾವಣೆ ತರಲು ಇರುವ ಅಹಿಂಸಾತ್ಮಕ ಸಾಧನ ಶಿಕ್ಷಣವಾಗಿದೆ. ಶಿಕ್ಷಣ ನೀತಿ ರೂಪಿಸಿದಾಗ ಶಿಕ್ಷಣದ ಉದ್ದೇಶಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಇಂದಿನ ಶಿಕ್ಷಣದ ಗುಣಮಟ್ಟ ನೋಡಿದರೆ ಯಾವ ಉದ್ದೇಶವೂ ಈಡೇರಿಲ್ಲ ಎನಿಸುತ್ತದೆ. ಈ ಉದ್ದೇಶ ಸಾಧನೆಗಾಗಿ ಇಂದು ಅನೇಕ ಸಂಸ್ಥೆಗಳು ಕೆಲಸ ಮಾಡುತ್ತಿವೆ~ ಎಂದು ಹೇಳಿದರು.

`ನೈರ್ಮಲ್ಯ, ಶಿಕ್ಷಣ ಮತ್ತು ಆರೋಗ್ಯ ಮಾನವನಿಗೆ ಮೂಲಭೂತವಾಗಿ ಸಿಗಬೇಕು. ಆದರೆ ಈ ಮೂರೂ ವಿಷಯದಲ್ಲಿ ಭಾರತದ ಸಾಧನೆ ತೀರ ಕಳಪೆ ಇದೆ. ಸಮೀಕ್ಷೆಗಳ ಪ್ರಕಾರ ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯದಲ್ಲಿ ಭಾರತ ಕೊನೆಯ ಸ್ಥಾನದಲ್ಲಿದೆ. ಹಳ್ಳಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲಾಗುತ್ತದೆ. ಎಲ್ಲ ರೀತಿಯ ಸಾಧನಗಳನ್ನೂ ನೀಡಲಾಗುತ್ತದೆ. ಆದರೆ ಅಲ್ಲಿ ಸಿಬ್ಬಂದಿ ಇರುವುದಿಲ್ಲ ಮತ್ತು ಸಾಧನಗಳನ್ನು ಬಳಸುವುದೇ ಇಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಈ ಎಲ್ಲ ಸಮಸ್ಯೆಗೆ ಕಾರಣ~ ಎಂದು ಹೇಳಿದರು.

`ಆರ್ಥಿಕ ಅಸಮಾನತೆಯೂ ಹೆಚ್ಚಾಗುತ್ತಿದೆ. ಶೇ 1ರಷ್ಟು ಜನ ಶೇ 40ರಷ್ಟು ಸಂಪತ್ತನ್ನು ನಿಯಂತ್ರಿಸುತ್ತಾರೆ. ಈಗಲೂ ಶೇ 80ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ~ ಎಂದರು.

`ಓದುಗರಲ್ಲಿ ಕಂಪನ ಉಂಟು ಮಾಡುವ ಶಕ್ತಿ, ಶೀಲಾ ಬಾಲಾಜಿ ಅವರ ಪುಸ್ತಕಕ್ಕೆ ಇದೆ. ಮನುಷ್ಯನಲ್ಲಿರುವ ದೈವತ್ವವನ್ನು ಗುರುತಿಸಿಕೊಳ್ಳಲು ಈ ರೀತಿಯ ಪುಸ್ತಕಗಳು ಸಹಾಯಕವಾಗುತ್ತವೆ. ಸಮಾಜಕ್ಕೆ ಇಂತಹ ಪುಸ್ತಕಗಳ ಅಗತ್ಯವಿದೆ~ ಎಂದು ಭಾರತೀಯ ನಿರ್ವಹಣಾ ಸಂಸ್ಥೆಯ (ಐಐಎಂಬಿ) ಪ್ರೊ.ಬಿ.ಮಹದೇವನ್ ಹೇಳಿದರು.
ನಾನೂರು ಪುಟಗಳ ಪುಸ್ತಕದಲ್ಲಿ ದಯಾನಂದ ಸರಸ್ವತಿ ಅವರ ಬೋಧನೆ, ಕೊಡುಗೆ, ಲೇಖಕಿ ಅವರ ಜತೆ ನಡೆಸಿದ ಸಂಭಾಷಣೆಯ ವಿವರಗಳನ್ನು ಚಿತ್ರ ಸಹಿತ ದಾಖಲಿಸಲಾಗಿದೆ. ಶೀಲಾ ಬಾಲಾಜಿ ಮತ್ತಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT