ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಶಿಕ್ಷಣ ಹಕ್ಕು ಅಭಿಯಾನ' ಸಮೀಕ್ಷೆ

Last Updated 25 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದಲ್ಲಿ ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಜಾರಿಯಾಗಿರುವ  `ಶಿಕ್ಷಣ ಹಕ್ಕು ಅಭಿಯಾನ'ದ ಅನುಷ್ಠಾನದ ಹೇಗಿದೆ ಎಂಬುದನ್ನು ಪರಿಶೀಲಿಸಿ, ಸುಧಾರಣೆ ತರುವ ಉದ್ದೇಶದಿಂದ ಶಾಲೆಗಳಲ್ಲಿ ಸಮೀಕ್ಷೆ ಆರಂಭಿಸಲಾಗಿದೆ.

ಪ್ರತಿ ಮಗುವಿಗೂ ಶಿಕ್ಷಣದ ಸೌಲಭ್ಯ ಕಲ್ಪಿಸಬೇಕು ಎಂಬ ಉದ್ದೇಶದಿಂದ ಸರ್ವ ಶಿಕ್ಷಣ ಅಭಿಯಾನ ಆರಂಭಿಸಲಾಗಿದೆ. ಇದಕ್ಕೆ ಪೂರಕವಾಗಿ ಸೌಲಭ್ಯಗಳು ಯಾವ ಪ್ರಮಾಣದಲ್ಲಿ ದೊರೆಯುತ್ತಿವೆ ಎಂಬ ಮಾಹಿತಿ ಹೊಂದುವ ಉದ್ದೇಶದಿಂದ 59 ಸಾವಿರ ಶಾಲೆಗಳಲ್ಲಿ ಸಮೀಕ್ಷೆಗೆ ಚಾಲನೆ ನೀಡಲಾಗಿದೆ. ಜನವರಿ 15ರೊಳಗೆ ಸಮೀಕ್ಷೆ ಪೂರ್ಣಗೊಳ್ಳಲಿದ್ದು, ಶಾಲೆಗಳಲ್ಲಿನ ಸ್ಥಿತಿಗತಿಯ ಸಂಪೂರ್ಣ ಚಿತ್ರಣ ದೊರೆಯಲಿದೆ.

ನಂತರ, ತೊಂದರೆಗಳನ್ನು ನಿವಾರಿಸಲು-ವ್ಯವಸ್ಥೆಗಳನ್ನು ಕಲ್ಪಿಸಲು ಯೋಜನೆ ರೂಪಿಸುವುದು ಸರ್ಕಾರದ ಉದ್ದೇಶ. ಇದಕ್ಕಾಗಿ ಏಕರೂಪವಾದ `ಪ್ರಶ್ನಾವಳಿ' ಸಿದ್ಧಪಡಿಸಿ ಪ್ರತಿ ಜಿಲ್ಲೆಗೂ ಒದಗಿಸಲಾಗಿದೆ.

ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಜಾರಿಯಾಗಿರುವ ಈ ಸಂದರ್ಭದಲ್ಲಿ ಶಾಲೆಗಳ ಸ್ಥಿತಿಗತಿಯ ಸಮೀಕ್ಷೆ ಮಹತ್ವ ಪಡೆದುಕೊಂಡಿದೆ. ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ಆಶಯಗಳಾದ ಸಾರ್ವತ್ರಿಕ, ದಾಖಲಾತಿ, ಉಳಿಕೆ ಮತ್ತು ಪೂರ್ಣಗೊಳಿಸುವಿಕೆಯ ಅಂಶಗಳನ್ನು ಪೂರೈಸಲು ಮಾಹಿತಿ ನೆರವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.

ಈ ಅಂಶಗಳ ಮಾಹಿತಿ: ಸಮೀಕ್ಷೆಯ ಮೂಲಕ, ಶಾಲೆಗಳಲ್ಲಿರುವ ವ್ಯವಸ್ಥೆ ಹಾಗೂ ಶಿಕ್ಷಕರ ಲಭ್ಯತೆ ತಿಳಿಯಲಿದೆ. ಶಿಕ್ಷಕರ ಕಾರ್ಯವೈಖರಿ ಹಾಗೂ ಕೆಲಸದ ಸ್ಥಿತಿಗತಿ ಹೇಗಿದೆ ಎಂಬುದನ್ನು ಸಹ ತಿಳಿಯಬಹುದು ಎನ್ನುತ್ತಾರೆ ಅಧಿಕಾರಿ.

ಶಾಲೆಗಳಲ್ಲಿ ದಾಖಲಾತಿ, ಹಾಜರಾತಿ, ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿರುವ ಶಿಕ್ಷಕರ ವಿವರ, ಶಾಲೆಗೆ ಮುಖ್ಯ ಶಿಕ್ಷಕರ ಹುದ್ದೆ ಮಂಜೂರಾಗಿದೆಯೇ, 2011-12ನೇ ಸಾಲಿನಲ್ಲಿ ಶಾಲೆ ತೆರೆದಿದ್ದ ದಿನಗಳೆಷ್ಟು, ಒಂದು ವಾರಕ್ಕೆ ಪ್ರತಿ ಶಿಕ್ಷಕರ ಕೆಲಸದ ಅವಧಿ (ಗಂಟೆಗಳಲ್ಲಿ) ಎಷ್ಟು. ಶಿಕ್ಷಕರಿಗೆ ಶಿಕ್ಷಕೇತರ ಕೆಲಸಗಳನ್ನು ನೀಡಲಾಗಿತ್ತೇ ಇವೇ ಮೊದಲಾದ ಸಂಗತಿಗಳನ್ನು ಶಾಲೆಗಳ ಬಗ್ಗೆ ದಾಖಲಿಸುವ ಕಾರ್ಯ ಪ್ರಗತಿಯಲ್ಲಿದೆ.

ಸರ್ವಋತುವಿನಲ್ಲಿಯೂ ಶಾಲೆಯನ್ನು ತಲುಪುವುದಕ್ಕೆ ಉತ್ತಮ ರಸ್ತೆ ಸೌಕರ್ಯ ಇದೆಯೇ. ಶಿಕ್ಷಕರು ಸರಿಯಾದ ಸಮಯಕ್ಕೆ ಹೋಗಿ ಬರಲು ಸರಿಯಾದ ವಾಹನ ಸೌಲಭ್ಯವಿದೆಯೇ. ಸರಾಸರಿ ಎಷ್ಟು ಗಂಟೆಗಳು ತಡವಾಗಿ ಬರುತ್ತಾರೆ ಹಾಗೂ ಹೋಗುತ್ತಾರೆ. ಲಭ್ಯವಿರುವ ತರಗತಿ ಕೊಠಡಿಗಳೆಷ್ಟು, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ರ‌್ಯಾಂಪ್ ನಿರ್ಮಿಸಲಾಗಿದೆಯೇ. ಮಧ್ಯಾಹ್ನದ ಬಿಸಿಯೂಟ ಶಾಲೆಯಲ್ಲಿಯೇ ತಯಾರಾಗುತ್ತಿದ್ದೆಯೇ. ಅಡುಗೆ ಕೋಣೆ, ಶೌಚಾಲಯಗಳ ಸೌಲಭ್ಯ, ಕುಡಿಯುವ ನೀರಿನ ವ್ಯವಸ್ಥೆ, ಆಟದ ಮೈದಾನ, ಮೈದಾನ ಇಲ್ಲದಿದ್ದಲ್ಲಿ ಇತರೆಡೆ ಬಳಸಲಾಗುತ್ತಿದೆಯೇ? ಕಾಂಪೌಂಡ್, ವಿದ್ಯುತ್ ಸೌಲಭ್ಯ, ಗ್ರಂಥಾಲಯ ಇದೆಯೇ ಎಂಬುದನ್ನು ಪರಿಶೀಲಿಸಲಾಗುವುದು.

ಶಾಲೆಗಳಲ್ಲಿ ಗ್ರಂಥಾಲಯಗಳ ಸೌಲಭ್ಯ ಹೇಗಿದೆ, ಮಕ್ಕಳಿಗೆ ಪುಸ್ತಕಗಳನ್ನು ಕೊಡಲಾಗುತ್ತಿದೆಯೇ, ಶಾಲೆ ಸುತ್ತಮುತ್ತ ಶಾಲೆಗೆ ದಾಖಲಾದ- ಹಾಜರಾಗದ ಮಕ್ಕಳಿದ್ದಲ್ಲಿ ಮಾಹಿತಿ ನೀಡಬೇಕು. ಮಕ್ಕಳನ್ನು ಶಾಲೆಗೆ ಕರೆತರಲು ಶಿಕ್ಷಕರು ಕೈಗೊಂಡ ಕ್ರಮಗಳೇನು ಎಂಬುದನ್ನು ತಿಳಿಸಬೇಕು ಎಂದು ಶಿಕ್ಷಕರಿಗೆ ಸೂಚಿಸಲಾಗಿದೆ.

ಮಕ್ಕಳನ್ನು ಸ್ವಚ್ಛತಾ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆಯೇ, ಮಧ್ಯಾಹ್ನದ ಬಿಸಿಯೂಟಕ್ಕೆ ಎಲ್ಲ ಮಕ್ಕಳನ್ನು ಒಂದೆಡೆಯೇ ಕೂರಿಸಲಾಗುತ್ತಿದೆಯೇ ಇಲ್ಲವೇ. ಮಕ್ಕಳು ಮನೆಯಿಂದಲೇ ತಟ್ಟೆ ತರುತ್ತಾರೆಯೇ, ಪ್ರತಿ ಮಗುವಿಗೆ ನಿರ್ದಿಷ್ಟದ ಊಟದ ತಟ್ಟೆಯನ್ನು ಶಾಲೆಯಲ್ಲಿಯೇ ವ್ಯವಸ್ಥೆ ಮಾಡಲಾಗಿದೆಯೇ, ಮಕ್ಕಳು ಇತರರಿಂದ ಅವಮಾನ ಆಗುವಂತಹ `ಅಡ್ಡಹೆಸರು'ಗಳಿಂದ ಸಂಬೋಧನೆಗೆ ಒಳಗಾಗುತ್ತಿರುವರೇ. ಎಲ್ಲಾ ಮಕ್ಕಳು ಒಂದೇ ಸಾಮಾನ್ಯ ಮೂಲದ ನೀರು ಬಳಸುತ್ತಾರೆಯೇ... ಮೊದಲಾದ ಅಂಶಗಳನ್ನು ದಾಖಲಿಸುವಂತೆ ಕೇಳಲಾಗಿದೆ.

ಎಸ್‌ಡಿಎಂಸಿ ಕಾರ್ಯ ನಿರ್ವಹಿಸುತ್ತಿದೆಯೇ, ಕಳೆದ ವರ್ಷ ನಡೆಸಿದ ಸಭೆಗಳೆಷ್ಟು, ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಪೋಷಕರೊಡನೆ ಸಭೆ ಆಯೋಜಿಸಲಾಗುತ್ತದೆಯೇ. ಸರ್ಕಾರದ ಸೌಲಭ್ಯವನ್ನು ಉಚಿತವಾಗಿ ಒದಗಿಸಲಾಗುತ್ತಿದೆಯೇ ಎಂದು ಮಾಹಿತಿ ಕೋರಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ.ಕೆ. ಶಿವಕುಮಾರ್, ಡಿ. 10ರಿಂದ 15ರವರೆಗೆ ಸಮೀಕ್ಷೆ ಕಾರ್ಯ ನಡೆದಿದೆ. ಜಿಲ್ಲೆಯ ಸಂಪೂರ್ಣ ಮಾಹಿತಿಯ ಕ್ರೋಡೀಕರಣ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರವೇ ಸಂಪೂರ್ಣ ಮಾಹಿತಿಯನ್ನು ಇಲಾಖೆಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT