ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷೆ ಪ್ರಮಾಣ ಹೆಚ್ಚಿಸಲು ಸರ್ಕಾರದ ಗಂಭೀರ ಚಿಂತನೆ

Last Updated 8 ಜನವರಿ 2011, 8:05 IST
ಅಕ್ಷರ ಗಾತ್ರ

ಮಡಿಕೇರಿ: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಮೂಲಕ ಅಪಘಾತ ಮಾಡಿ ಅಮಾಯಕ ಜನರನ್ನು ಬಲಿ ತೆಗೆದುಕೊಳ್ಳುವಂತಹ ವಾಹನ ಚಾಲಕರಿಗೆ ಶಿಕ್ಷೆ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಕೆ. ಅಣ್ಣಿಗೇರಿ ಶುಕ್ರವಾರ ಇಲ್ಲಿ ತಿಳಿಸಿದರು.ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ದೇಶದಲ್ಲಿ ವಾಹನ ಚಾಲನಾ ನಿರ್ಲಕ್ಷ್ಯದಿಂದ ಸಂಭವಿಸುವಂತಹ ಅಪಘಾತ ಪ್ರಕರಣಗಳಲ್ಲಿ ಚಾಲಕರಿಗೆ ವಿಧಿಸುವ ಶಿಕ್ಷೆ ಪ್ರಮಾಣ ಬಹಳಷ್ಟು ಕಡಿಮೆ. ಇದೇ ಕಾರಣದಿಂದಲೇ ಚಾಲಕರು ತುಂಬಾ ಲಘುವಾಗಿ ಶಿಕ್ಷೆ ಪ್ರಮಾಣವನ್ನು ಪರಿಗಣಿಸುತ್ತಿರುವುದರಿಂದ ಪೊಲೀಸರು ಏನೆಲ್ಲಾ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಅಪಘಾತಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ’ ಎಂದು ವಿಷಾದಿಸಿದರು.

‘ಅಂತೆಯೇ, ನಿರ್ಲಕ್ಷ್ಯ ಚಾಲಕರಿಗೆ ವಿಧಿಸುವಂತಹ ದಂಡದ ಪ್ರಮಾಣ ಕೂಡ ತೀರಾ ಕಡಿಮೆ. ದೊಡ್ಡ ಅಪಘಾತ ಪ್ರಕರಣಗಳಲ್ಲಿ ಹಲವರ ಸಾವಿಗೆ ಕಾರಣವಾಗುವ ಚಾಲಕನಿಗೆ ವಿಧಿಸುತ್ತಿರುವ ದಂಡ ಕೇವಲ 5.5 ಸಾವಿರ ರೂಪಾಯಿಗಳು. ಇಂತಹ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಮೂರು ವರ್ಷಗಳಿದ್ದರೂ ತಪ್ಪಿತಸ್ಥರು ಕೇವಲ 6 ತಿಂಗಳಿಂದ ಒಂದು ವರ್ಷ ಕೂಡ ಶಿಕ್ಷೆ ಅನುಭವಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನರ ಪ್ರಾಣಕ್ಕೆ ಸಂಚಕಾರ ತರುವಂತಹ ಗಂಭೀರ ಅಪಘಾತ ಪ್ರಕರಣಗಳಲ್ಲಿ ನಿರ್ಲಕ್ಷ್ಯ ಚಾಲಕರಿಗೆ 10 ವರ್ಷಗಳವರೆಗೆ ಶಿಕ್ಷೆ ವಿಧಿಸುವ ಕುರಿತು ಗಂಭೀರ ಚಿಂತನೆ ನಡೆಯುತ್ತಿದೆ’ ಎಂದು ಎಸ್ಪಿ ತಿಳಿಸಿದರು.

ಸಂಚಾರಿ ಮಾದರಿ ನಿಯಮ ಜಾರಿ: ರಾಜ್ಯದಲ್ಲಿ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೊಸ ಮಾದರಿ ಸಂಚಾರಿ ನಿಯಮಗಳನ್ನು ಜಾರಿಗೊಳಿಸಲು ಕೂಡ ಇಲಾಖೆ ತೀರ್ಮಾನಿಸಿದೆ. ಪ್ರಾಯೋಗಿಕವಾಗಿ ಎರಡು ಜಿಲ್ಲೆಗಳಲ್ಲಿ ಜಾರಿಗೆ ಬರುತ್ತಿರುವ ಈ ಮಾದರಿ ನಿಯಮಗಳು, ಮುಂದಿನ ದಿನಗಳಲ್ಲಿ ಇಡೀ ರಾಜ್ಯಾದ್ಯಂತ ಜಾರಿಗೆ ಬರಲಿದೆ ಎಂದು ಹೇಳಿದರು.

‘ಈಗಾಗಲೇ ಪೊಲೀಸ್ ಠಾಣೆಗಳನ್ನು ಕಂಪ್ಯೂಟರೀಕರಣಗೊಳಿಸುವ ಯೋಜನೆಯನ್ನು ಪೊಲೀಸ್ ಇಲಾಖೆ ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅಪಘಾತಕ್ಕೆ ಕಾರಣವಾಗುವ ಪ್ರತಿಯೊಂದು ವಾಹನಗಳ ವಿವರಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಲಾಗುತ್ತದೆ. ಇದರಿಂದ ಒಂದು ವಾಹನ ಎಷ್ಟು ಬಾರಿ ಅಪಘಾತಕ್ಕೀಡಾಗಿದೆ? ಎಷ್ಟು ಬಾರಿ ಚಾಲಕ ನಿರ್ಲಕ್ಷ್ಯದಿಂದ ಅಪಘಾತ ಮಾಡಿದ್ದಾನೆ ಎಂಬ ಮಾಹಿತಿ ಸಂಗ್ರಹಿಸಲು ಅನುಕೂಲವಾಗಲಿದೆ. ಈ ರೀತಿ, ಪದೇ ಪದೇ ವಾಹನ ಅಪಘಾತಕ್ಕೀಡಾದಲ್ಲಿ ಆ ಚಾಲಕನ ಚಾಲನಾ ಪರವಾನಗಿಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಸ್ಪಿ ತಿಳಿಸಿದರು.

‘ಪಾಶ್ಚಿಮಾತ್ಯ ದೇಶಗಳಲ್ಲಿ ರಸ್ತೆ ಸಂಚಾರಿ ನಿಯಮ ಹಾಗೂ ಕಾನೂನು ಉಲ್ಲಂಘಿಸಿ ವಾಹನ ಚಾಲನೆ ಮಾಡುವಂತಹ ಚಾಲಕ ಎರಡು-ಮೂರು ತಪ್ಪು ಮಾಡಿದ ನಂತರ ನಾಲ್ಕನೇ ಬಾರಿಯ ತಪ್ಪಿಗೆ ತಾನೇ ತಾನಾಗಿ ಚಾಲನಾ ಪರವಾನಗಿ ರದ್ದಾಗಲಿದೆ. ಅಂತಹ ಕಠಿಣ ನಿಯಮಗಳನ್ನು ನಮ್ಮಲ್ಲೂ ಜಾರಿಗೆ ತಂದಲ್ಲಿ ಅಪಘಾತಗಳ ಸಂಖ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗಬಹುದು ಎಂದು’ ಅಣ್ಣಿಗೇರಿ ಪ್ರತಿಪಾದಿಸಿದರು.

‘ದೇಶದಲ್ಲಿ ಅವೈಜ್ಞಾನಿಕ ರಸ್ತೆ ನಿರ್ಮಾಣ, ವಾಹನಗಳ ಯಾಂತ್ರಿಕ ದೋಷ ಹಾಗೂ ಚಾಲಕರ ನಿರ್ಲಕ್ಷ್ಯತೆ ಅಪಘಾತಗಳಿಗೆ ಪ್ರಮುಖ ಕಾರಣ. ಅದರಲ್ಲಿ ವಾಹನ ಚಾಲಕರ ನಿರ್ಲಕ್ಷ್ಯತೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂಬುದು ಗಮನಾರ್ಹ. ಅತಿವೇಗ ಚಾಲನೆ, ಮುಂದಿನ ವಾಹನಗಳನ್ನು ಹಿಂದಿಕ್ಕುವ ಭರ, ಮದ್ಯಪಾನ ಮಾಡಿ ವಾಹನಗಳನ್ನು ಓಡಿಸುವುದು ಇಂತಹ ಅಪಘಾತಗಳಿಗೆ ಕಾರಣವಾಗುತ್ತಿದೆ’ ಎಂದು ವಿಶ್ಲೇಷಿಸಿದರು.

46 ಮಂದಿ ಸಾವು: ಕೊಡಗಿನಲ್ಲಿ 80 ಸಾವಿರ ವಾಹನಗಳಿದ್ದು, 75 ಸಾವಿರ ಚಾಲನಾ ಪರವಾಗಿ ಪತ್ರಗಳನ್ನು ವಿತರಿಸಲಾಗಿದೆ. ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ 2010ರಲ್ಲಿ ಸಂಭವಿಸಿದ ಅಪಘಾತಗಳಲ್ಲಿ 46 ಮಂದಿ ಸಾವನ್ನಪ್ಪಿದ್ದಾರೆ. ನೂರರಲ್ಲಿ ಕನಿಷ್ಠ 10ರಷ್ಟು ವಾಹನಗಳು ಅಪಘಾತಕ್ಕೀಡಾಗುತ್ತಿದ್ದು, ಅದರಲ್ಲಿ ಪ್ರಯಾಣಿಸುವ ಪ್ರಯಾಣಿಕರು ಗಾಯಗೊಳ್ಳುತ್ತಿದ್ದಾರೆ ಎಂದು ಮಂಜುನಾಥ್ ಅಣ್ಣಿಗೇರಿ ಅಂಕಿ-ಅಂಶಗಳ ಸಹಿತ ವಿವರಿಸಿದರು.

ಜಿಲ್ಲಾಧಿಕಾರಿ ಕೆ.ಎಚ್. ಅಶ್ವತ್ಥನಾರಾಯಣಗೌಡ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಕೃಷ್ಣಪ್ಪ, ಡಿವೈಎಸ್‌ಪಿ ಜೆ.ಡಿ. ಪ್ರಕಾಶ್ ಉಪಸ್ಥಿತರಿದ್ದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಮೊಹಮ್ಮದ್ ಹಬೀಬುಲ್ಲಾ ಖಾನ್ ಸ್ವಾಗತಿಸಿದರು. ನಗರ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಮಹದೇವಯ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT