ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷೆಗೆ ಒಳಗಾಗಿದ್ದ ನಟ ಹೈಕೋರ್ಟ್‌ನಿಂದ ಖುಲಾಸೆ

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರ ನಿರ್ಮಾಪಕರೊಬ್ಬರಿಗೆ ವಂಚನೆ ಎಸಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಶಿಕ್ಷೆಗೆ ಗುರಿಯಾಗಿದ್ದ ಚಿತ್ರನಟ ಜೆ.ಕೆ.ಶ್ರೀನಿವಾಸಮೂರ್ತಿ ಅವರನ್ನು ಬಂಧಮುಕ್ತಗೊಳಿಸಿ ಹೈಕೋರ್ಟ್ ಸೋಮವಾರ ಆದೇಶಿಸಿದೆ.

ನಿರ್ಮಾಪಕ ಕೆ.ಆರ್.ಮುರಳಿಕೃಷ್ಣ ಅವರಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟ್ 2010ರಲ್ಲಿ 3 ವರ್ಷಗಳ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ವಿ.ಜಗನ್ನಾಥನ್ ಮಾನ್ಯ ಮಾಡಿದ್ದಾರೆ.

ಇವರ ಜೊತೆ ಆರೋಪಿಯಾಗಿದ್ದ ಚಿತ್ರದ ಪಾಲುದಾರ ಜಫರ್ ಉಲ್ಲಾ ಅವರನ್ನೂ ಖುಲಾಸೆಗೊಳಿಸಿ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ.1987ರಲ್ಲಿ ಬಿಡುಗಡೆಗೊಂಡ `ಬಾಳನೌಕೆ~ ಚಲನಚಿತ್ರದ ವಿವಾದ ಇದಾಗಿದೆ.

ಚಿತ್ರ ಬಿಡುಗಡೆ ನಂತರ ಮುರಳಿಕೃಷ್ಣ ಅವರಿಗೆ ಶ್ರೀನಿವಾಸ್ ಅವರು 5.2ಲಕ್ಷ ರೂಪಾಯಿ ನೀಡಬೇಕಿತ್ತು. ಆದರೆ 3.45ಲಕ್ಷ ರೂಪಾಯಿಗಳನ್ನು ಮಾತ್ರ ನೀಡಿದ್ದಾರೆ ಎನ್ನುವುದು ಮುರಳಿಕೃಷ್ಣ ಅವರ ಆರೋಪ. ಉಳಿದ ಹಣಕ್ಕೂ ರಸೀತಿ ನೀಡಿರುವ ಮೂರ್ತಿ ಅವರು ಅದರಲ್ಲಿ ತಮ್ಮ ನಕಲು ಸಹಿ ಹಾಕಿದ್ದಾರೆ ಎನ್ನುವುದು ಅವರ ಆಪಾದನೆಯಾಗಿತ್ತು.

ಈ ಕುರಿತು ಮುರಳಿಕೃಷ್ಣ ಅವರು ದೂರು ದಾಖಲು ಮಾಡಿದ್ದ ಹಿನ್ನೆಲೆಯಲ್ಲಿ ಇಬ್ಬರಿಗೂ ಮೂರು ವರ್ಷಗಳ ಶಿಕ್ಷೆ ವಿಧಿಸಿ 2007ರಲ್ಲಿ ಎಸಿಎಂಎಂ ಕೋರ್ಟ್ ಆದೇಶಿಸಿತ್ತು. ಈ ಆದೇಶವನ್ನು ಸೆಷನ್ಸ್ ಕೋರ್ಟ್ ಕೂಡ ಎತ್ತಿಹಿಡಿದಿತ್ತು.

ಆದರೆ ನಕಲಿ ಸಹಿ ಮಾಡಿದ್ದಾರೆ ಎಂಬ ಕುರಿತಾದ ದಾಖಲೆಗಳ ಮೂಲ ಪ್ರತಿಯನ್ನು ಕೋರ್ಟ್‌ಗೆ ಹಾಜರು ಪಡಿಸದ ಅರ್ಜಿದಾರರು, ನಕಲು ಪ್ರತಿ ಮಾತ್ರ ನೀಡಿದ್ದಾರೆ. ಈ ಬಗ್ಗೆ ಗಮನ ಹರಿಸದ ಅಧೀನ ಕೋರ್ಟ್‌ಗಳು ಶಿಕ್ಷೆ ವಿಧಿಸಿರುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟರು. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಖುಲಾಸೆಗೊಳಿಸಿ ಆದೇಶಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT