ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭ

Last Updated 15 ನವೆಂಬರ್ 2011, 6:05 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಸುಂಕರಹಿತ ರೇಷ್ಮೆ ಆಮದು ನಿಷೇಧಿಸಬೇಕು, ರೇಷ್ಮೆ ಆಮದಿಗೆ ಶೇ 31ರಷ್ಟು ಸುಂಕ ನಿಗದಿಪಡಿಸವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯ ಸದಸ್ಯರು ಸೋಮವಾರ ಅನಿರ್ದಿಷ್ಟಾಧಿ ಕಾಲ ಪ್ರತಿಭಟನೆ ಆರಂಭಿಸಿದರು.

ಪಟ್ಟಣದ ರೇಷ್ಮೆಗೂಡು ಮಾರುಕಟ್ಟೆ ಆವರಣದಲ್ಲಿ ಪ್ರತಿಭಟನೆ ಆರಂಭಿಸಿದ ಪ್ರತಿಭಟನಾಕಾರರು, `ಹಲವು ತಿಂಗಳುಗಳಿಂದ ಬಾಕಿಯಿರುವ ನಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕೂಡಲೇ ಕ್ರಮ ತೆಗೆದು ಕೊಳ್ಳಬೇಕು. ರೇಷ್ಮೆಕೃಷಿಕರ ಸಮಸ್ಯೆಗಳನ್ನು ಪರಿಹರಿಸಬೇಕು~ ಎಂದು ಒತ್ತಾಯಿಸಿದರು.

ಹಸಿರು ಸೇನೆ ಮುಖಂಡ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, `ಸರ್ಕಾರವು ರೈತರ ಸಹನೆಯನ್ನು ಪರೀಕ್ಷಿಸುತ್ತಿದೆ. ಹಲವು ಬಾರಿ ರೈತರನ್ನು ಅನ್ಯಾಯ ಮಾಡಿರುವ ಸರ್ಕಾರ ತನ್ನ ನಿರ್ಲಕ್ಷ್ಯದ ವರ್ತನೆ ಮುಂದುವರೆಸಿದೆ. ಆರ್ಥಿಕ ನಷ್ಟ ಮತ್ತು ಸಂಕಷ್ಟಕ್ಕೆ ಒಳಗಾಗಿ ರೇಷ್ಮೆಕೃಷಿಕರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ತಲುಪಿದರೂ ಸರ್ಕಾರ ಮಾತ್ರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೇಂದ್ರ ಸರ್ಕಾರದಲ್ಲಿ ಪ್ರಭಾವಿ ಸಚಿವರಿದ್ದರೂ ಪ್ರಯೋಜನವಾಗಿಲ್ಲ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ರೇಷ್ಮೆಕೃಷಿಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಳ್ಳೂರು ಶಿವಣ್ಣ ಮಾತನಾಡಿ, `ಉತ್ಸವ, ಸಮಾರಂಭ ಗಳಿಗೆ ಭಾರಿ ದುಂದು ವೆಚ್ಚ ಮಾಡುವ ಸರ್ಕಾರ ರೇಷ್ಮೆಕೃಷಿಕರನ್ನು ಸಂಪೂರ್ಣ ನಿರ್ಲಕ್ಷ್ಯಸಿದೆ. ರೈತರಿಂದ ತೆರಿಗೆ ಪಡೆಯುವ ಸರ್ಕಾರ ಸಮರ್ಪಕವಾದ ಬೆಂಬಲ ಬೆಲೆಯನ್ನು ಘೋಷಿಸಲು ಹಿಂಜರಿಯುತ್ತಿದೆ. ರೇಷ್ಮೆಗೂಡಿನ ಬೆಲೆ ಕೆಜಿಗೆ ರೂ.160 ಇರುವಾಗ ರೂ.30 ತಾತ್ಕಾಲಿಕ ಪರಿಹಾರ ನೀಡಿದರೆ, ಯಾರಿಗೆ ಪ್ರಯೋಜನ. ರೈತರ ಸಂಕಷ್ಟ ಪರಿಹರಿಸಲು ಪ್ರತ್ಯೇಕ ನಿಧಿ ಸ್ಥಾಪಿಸಬೇಕು~ ಎಂದು ಆಗ್ರಹಿಸಿದರು.

ವೇದಿಕೆ ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, `ರೇಷ್ಮೆ ಗೂಡಿನ ಉತ್ಪಾದನಾ ವೆಚ್ಚ ಹೆಚ್ಚಿರುವುದರಿಂದ ರೇಷ್ಮೆ ಗೂಡಿನ ಬೆಲೆಯನ್ನು ಕೆಜಿಗೆ 350 ರೂಪಾಯಿ ಮತ್ತು ರೇಷ್ಮೆ ನೂಲಿನ ಬೆಲೆಯನ್ನು ಕೆಜಿಗೆ 3000 ರೂಪಾಯಿ ನಿಗದಿಪಡಿಸಬೇಕು. ರೇಷ್ಮೆಕೃಷಿಕರ ಮತ್ತ ರೀಲರುಗಳ ರಕ್ಷಣೆಗೆ ರೂ.1000 ಕೋಟಿ ಆವರ್ತ ನಿಧಿ ಸ್ಥಾಪಿಸ ಬೇಕು~.ಕರ್ನಾಟಕ ರಾಜ್ಯ ರೈತ ಸಂಘದ ಸಂಘದ ಮುಖಂಡ ಬಿ.ಎಚ್.ನರಸಿಂಹಪ್ಪ ಮಾತನಾಡಿ, `ಹನಿ ನೀರಾವರಿಗೆ ಶೇ 100ರಷ್ಟು ಸಹಾಯಧನ ಘೋಷಿಸಬೇಕು. ರೇಷ್ಮೆ ಆಮದು ಸುಂಕವನ್ನು ಶೇ 31ರ ಪ್ರಮಾಣಕ್ಕೆ ಏರಿಸಬೇಕು. ಕಳ್ಳ ಮಾರ್ಗದಿಂದ ದೇಶದೊಳಕ್ಕೆ ನುಸುಳುತ್ತಿರುವ ರೇಷ್ಮ್ನೆ ತಡೆಯಬೇಕು. ರೇಷ್ಮೆ ಬ್ಯಾಂಕ್ ಮತ್ತು ರೇಷ್ಮೆ ವಿಚಕ್ಷಣ ದಳ ರಚಿಸಬೇಕು~ ಎಂದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ವಿ.ಮುನಿಯಪ್ಪ ಬೆಂಬಲ ಸೂಚಿಸಿದರು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರಾಜಣ್ಣ, ಜಿಲ್ಲಾ ರೇಷ್ಮೆಕೃಷಿಕರ ಹಿತರಕ್ಷಣಾ ವೇದಿಕೆ  ಪ್ರಧಾನ ಕಾರ್ಯದರ್ಶಿ ಸೊಣ್ಣೇನಹಳ್ಳಿ ನಾರಾಯಣಸ್ವಾಮಿ, ಸಂಘಟನಾ ಕಾರ್ಯದರ್ಶಿ ಮಳ್ಳೂರು ಹರೀಶ್, ರೈತ ಮುಖಂಡರಾದ ದೇವರಾಜ್, ಕೃಷ್ಣಪ್ಪ, ನಂಜುಡಪ್ಪ, ಹರೀಶ್, ನರಸಿಂಹಪ್ಪ, ಬೆಳ್ಳೂಟಿ ವೆಂಕಟೇಶ್, ಹಿತ್ತಲಹಳ್ಳಿ ಸುರೇಶ್, ವಿಶ್ವನಾಥ್, ಕ್ಯಾತಪ್ಪ, ಭಾಸ್ಕರರೆಡ್ಡಿ, ಮುನಿರಾಜು, ಬೋದಗೂರು ಆಂಜಿನಪ್ಪ, ಡಿ.ಕೆ.ಶ್ರೀರಾಮ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT