ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲೆಯಲ್ಲ; ಕಲೆಯ ಬಲೆ

Last Updated 12 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹಂಪಿ, ಬೇಲೂರು, ಹಳೆಬೀಡು, ಸೋಮನಾಥಪುರ ಮತ್ತಿತರ ಊರುಗಳ ಹೆಸರು ಕೇಳಿದಾಕ್ಷಣ ಅಲ್ಲಿನ ಶಿಲ್ಪಕಲಾ ಶ್ರೀಮಂತಿಕೆ ಕಣ್ಮುಂದೆ ಬರುತ್ತದೆ. ಆದರೆ ಕೋಲಾರ ಜಿಲ್ಲೆಯ ಶಿವಾರಪಟ್ಟಣದ ವಿಷಯ ಇದಕ್ಕೆ ತದ್ವಿರುದ್ಧ. ಇಲ್ಲಿ ಶ್ರೀಮಂತ ಶಿಲ್ಪಕಲೆಯನ್ನೇ ನಂಬಿದ ಬಡ ಕಲಾವಿದರಿದ್ದಾರೆ. ಇವರ ಶಿಲ್ಪಕಲಾ ಕೌಶಲ್ಯ ಸಾಟಿಯಿಲ್ಲದ್ದು.

ಇವರ ಈ ಕಲೆಯನ್ನು ಬೆಂಗಳೂರಿಗೆ ಪರಿಚಯಿಸುವ ಪ್ರದರ್ಶನವೊಂದು ಈಗಾಗಲೇ ಆರಂಭವಾಗಿದ್ದು ಸೆ. 18ರ ವರೆಗೆ ನಡೆಯಲಿದೆ. ಜತೆಗೆ ಶಿಲ್ಪಕಲೆಯಲ್ಲಿ ಹೆಸರು ಮಾಡಿರುವ ದೇಶದ ಪ್ರಸಿದ್ಧ ಕಲಾವಿದರ ಕಲಾ ನೈಪುಣ್ಯಕ್ಕೂ ಇಲ್ಲಿ ವೇದಿಕೆ ಕಲ್ಪಿಸಲಾಗಿದೆ.

ಸರಪಂಟೈನ್, ಸೋಪ್ ಸ್ಟೋನ್, ಬ್ಲ್ಯಾಕ್ ಗ್ರ್ಯಾನೈಟ್, ಖಾಂಡ್‌ಲೈಟ್, ಇಂಡಿಯನ್ ಜೇಡ್, ರಾ ಒನ್-ಎಕ್ಸ್, ಅಮೃತಶಿಲೆ ಹಾಗೂ ಕೃಷ್ಣಶಿಲೆಯಲ್ಲಿ ಅರಳಿದ ಸೂಕ್ಷ್ಮ ಕೆತ್ತನೆಗಳು ಪ್ರದರ್ಶನದಲ್ಲಿವೆ.

ರಾಧಾಕೃಷ್ಣ, ಧ್ಯಾನಾಸಕ್ತ ಬುದ್ಧ, ಗಣೇಶ, ಮೇರಿ, ಶಿವಲಿಂಗ, ವೆಂಕಟೇಶ್ವರ, ಕನಕದಾಸ, ವಿಷ್ಣು, ಕೃಷ್ಣ ಸೇರಿದಂತೆ ಹಲವು ದೇವ ದೇವತೆಗಳು ಹಾಗೂ ಮಹಾತ್ಮರ ಮೂರ್ತಿಗಳು ಶಿಲೆಯಲ್ಲಿ ಅರಳಿ ನಿಂತಿವೆ. 60ಕ್ಕೂ ಹೆಚ್ಚು ಶಿಲ್ಪಕಲಾ ಶೈಲಿಗಳು, ಇದಲ್ಲದೇ ಮಿಶ್ರ ಲೋಹ, ಜೇಡಿಮಣ್ಣಿನಲ್ಲಿ ತಯಾರಿಸಲಾಗಿರುವ ಸೂಕ್ಷ್ಮ ಸಾಂಪ್ರದಾಯಿಕ ಕಲಾ ಪ್ರಕಾರಗಳಿವೆ. 

ರಾಜ ಉಡುಗೆಯಲ್ಲಿರುವ ಡಾ. ರಾಜ್‌ಕುಮಾರ್ ಅವರ ಮೂರ್ತಿ ಬಹಳ ಸುಂದರವಾಗಿ ಮೂಡಿಬಂದಿದ್ದು, ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಇದಲ್ಲದೇ ಮೈಸೂರಿನ ಕಿರಣ್ ಸುಬ್ಬಯ್ಯ ಅವರು ಒಂದೇ ಶಿಲೆಯಲ್ಲಿ ಕೆತ್ತಿರುವ ಬಹು ಆಕೃತಿಯ 21 ಶಿಲ್ಪಗಳು ಯೋಚನೆಗೂ ನಿಲುಕಲಾರವು.

ತಮಿಳುನಾಡು, ಮಹಾರಾಷ್ಟ್ರ, ರಾಜಸ್ತಾನ, ಗುಜರಾತ್, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರ ಪಾರಂಪರಿಕ ಕೈಚಳಕ ಇಲ್ಲಿ ನೋಡಬಹುದು. ಶಿಲ್ಪಿಗಳು ಹೇಗೆ ವಿಗ್ರಹ ತಯಾರಿಸುತ್ತಾರೆ ಎಂಬುದರ ಪ್ರಾತ್ಯಕ್ಷಿಕೆಯೂ ಇದೆ.

ಕಲಾ ಲೋಕದ ಎಲ್ಲ ಕಲಾವಿದರನ್ನು ಒಂದೇ ಸೂರಿನಡಿ ತಂದು ಹೊರಜಗತ್ತಿಗೆ ಪರಿಚಯಿಸುವುದು ಮತ್ತು ಕಲಾ ಪ್ರಕಾರಕ್ಕೆ ಮಾರುಕಟ್ಟೆ ಒದಗಿಸುವುದು ಇದರ ಮುಖ್ಯ ಉದ್ದೇಶ.

ಸ್ಥಳ: ಹೆಬ್ಬಾಳ- ನಾಗವಾರ ರಸ್ತೆಯ (ಲುಂಬಿನಿ ಗಾರ್ಡನ್ಸ್ ಮತ್ತು ಮಾನ್ಯತಾ ಟೆಕ್ ಪಾರ್ಕ್ ಮಧ್ಯೆ) ಮ್ಯಾನ್‌ಫೋ ಸಮ್ಮೇಳನ ಸಭಾಂಗಣ. ಬೆಳಿಗ್ಗೆ 10ರಿಂದ ರಾತ್ರಿ 8.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT