ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಷ್ಟಾಚಾರದ ಹೆಸರಿನಲ್ಲಿ ಕಾಲಹರಣ ಬೇಡ - ನ್ಯಾ. ಸೇನ್

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಶಿಷ್ಟಾಚಾರ, ಸಂಪ್ರದಾಯದ ಹೆಸರಿನಲ್ಲಿ ಅಧೀನ ಕೋರ್ಟ್ ನ್ಯಾಯಾಧೀಶರು ವಿನಾಕಾರಣ ಸಮಯವನ್ನು ವ್ಯರ್ಥ ಮಾಡುವುದು ಸಲ್ಲದು~ ಎಂದು ಹೈಕೋರ್ಟ್ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಇಲ್ಲಿ ಸೋಮವಾರ ತಿಳಿಸಿದರು.

`ನಾನು ಈಚೆಗೆ ಕೆಲವು ನ್ಯಾಯಾಲಯಗಳಿಗೆ ಭೇಟಿ ನೀಡಿದ್ದೆ. ನಾನು ಅಲ್ಲಿಗೆ ಹೋಗುತ್ತಿರುವುದು ತಿಳಿಯುತ್ತಿದ್ದಂತೆ ಹಲವು ಹಿರಿಯ (ಅಧೀನ ಕೋರ್ಟ್) ನ್ಯಾಯಾಧೀಶರು ನನಗೆ ಗೌರವ ತೋರುವುದಕ್ಕಾಗಿ ಕಾಯುತ್ತಿದ್ದರು. ಗೌರವ ಕೊಡುವ ಹೆಸರಿನಲ್ಲಿ ನ್ಯಾಯಾಂಗ ಅಧಿಕಾರಿಗಳು ಈ ರೀತಿ ಕಾಯುತ್ತಿರುವುದು ನನಗೆ ಸರಿ ಕಂಡುಬರುತ್ತಿಲ್ಲ. ಇದು ನ್ಯಾಯಾಧೀಶರ ಸ್ವಂತ ದೃಷ್ಟಿಯಿಂದ ಮಾತ್ರವಲ್ಲದೇ ಜನರ ದೃಷ್ಟಿಯಿಂದಲೂ ಗೌರವಕ್ಕೆ ತಕ್ಕುದಲ್ಲ~ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ಮುಖ್ಯ ನ್ಯಾಯಮೂರ್ತಿಗಳಾಗಿ ಕಾಯಂಗೊಂಡ ಅವರನ್ನು ಅಭಿನಂದಿಸಲು ರಾಜ್ಯ ವಕೀಲರ ಪರಿಷತ್ತು ಹೈಕೋರ್ಟ್‌ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

`ಜನರಿಗೆ ಶೀಘ್ರ ನ್ಯಾಯದಾನ ಮಾಡುವುದು ನಮ್ಮ ಸಂಸ್ಥೆಗೆ ಇರುವ ಸವಾಲು. ಅದನ್ನು ಎದುರಿಸಲು ನಾವೆಲ್ಲ ಸನ್ನದ್ಧರಾಗಬೇಕೆ ವಿನಾ ಈ ರೀತಿಯಾಗಿ ಸಮಯ ಹಾಗೂ ಶ್ರಮ ವ್ಯರ್ಥ ಮಾಡುವುದು ಸಲ್ಲದು~ ಎಂದು ಅವರು ತಿಳಿಸಿದರು.

`ಇತ್ಯರ್ಥಕ್ಕೆ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದಾಗಿಯೇ ಎಲ್ಲರೂ ಈಗ ಮಾತನಾಡಿಕೊಳ್ಳುತ್ತಿದ್ದಾರೆ. ಪ್ರಕರಣ ಶೀಘ್ರ ಇತ್ಯರ್ಥಗೊಳ್ಳಬೇಕು ಎನ್ನುವುದೇ  ನನ್ನ ಗುರಿ. ಆದುದರಿಂದ ಹೆಚ್ಚಿನ ಕಾರ್ಯಕ್ರಮಗಳಿಗೆ ನಾನು ಭೇಟಿ ನೀಡುವುದಿಲ್ಲ~ ಎಂದು ಅವರು ಸ್ಪಷ್ಟಪಡಿಸಿದರು.

`ಯಾವುದಾದರೂ ಕಾಮಗಾರಿಗೆ ಶಂಕುಸ್ಥಾಪನೆ ಮಾಡುವಂತೆ ಹಲವು ತಾಲ್ಲೂಕು ಹಾಗೂ ಜಿಲ್ಲಾ ಕೋರ್ಟ್‌ಗಳಿಂದ ನನಗೆ ಆಮಂತ್ರಣ ಬರುತ್ತಲೇ ಇರುತ್ತದೆ. ಆದರೆ ಅಲ್ಲಿಗೆ ಸಾಗಿ ಶ್ರಮ ವ್ಯರ್ಥ ಮಾಡಿಕೊಳ್ಳುವ ಬದಲು ಅದೇ ಶ್ರಮ ಹಾಗೂ ಸಮಯವನ್ನು ಪ್ರಕರಣ ಇತ್ಯರ್ಥಕ್ಕೆ ಬಳಸಿಕೊಳ್ಳಿ ಎನ್ನುವವ ನಾನು~ ಎಂದರು.

ಸೌಲಭ್ಯದ ಕೊರತೆ: `ಕಳೆದ 50 ವರ್ಷಗಳಿಗಿಂತ ಹೆಚ್ಚಿನ ಹಣವನ್ನು ಸರ್ಕಾರವು ಈ ಬಾರಿ ನ್ಯಾಯಾಂಗದ ಸೌಕರ್ಯಗಳಿಗೆ ನೀಡಿದೆ. ಆದರೆ ನ್ಯಾಯಾಂಗಕ್ಕೆ ಅಗತ್ಯ ಇರುವ ಮೂಲ ಸೌಕರ್ಯಗಳನ್ನು ಒದಗಿಸಲು ಇಷ್ಟು ಹಣ ಸಾಕಾಗುತ್ತಿಲ್ಲ. ಇನ್ನೂ ಹೆಚ್ಚಿನ ಹಣ ಮೀಸಲು ಇಡುವ ಅಗತ್ಯ ಇದೆ ಎಂದು ನ್ಯಾ.ಸೇನ್ ಅಭಿಪ್ರಾಯಪಟ್ಟರು.

ರಾಜ್ಯದಲ್ಲಿನ ನ್ಯಾಯಾಲಯಗಳಿಗೆ ಭದ್ರತೆ ಒದಗಿಸಲು, ಬೆಂಗಳೂರಿನ ಕೋರ್ಟ್‌ಗಳಲ್ಲಿ ಪಾರ್ಕಿಂಗ್ ಸಮಸ್ಯೆ ನೀಗಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT