ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ಮನಸ್ಸಿನ ಶುದ್ಧಕಲ್ಯಾಣ

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಅನೇಕ ಪ್ರತಿಷ್ಠಿತ ಸಂಗೀತ ಸಮ್ಮೇಳನಗಳು ನಿಯಮಿತವಾಗಿ ನಡೆಯುತ್ತವೆ. ಗ್ವಾಲಿಯರ್‌ನ `ಹರಿದಾಸ ಸಂಗೀತ ಸಮ್ಮೇಳನ~, ಪುಣೆಯಲ್ಲಿ ಜರುಗುವ `ಸವಾಯಿಗಂಧರ್ವ ಸಂಗೀತ ಸಮ್ಮೇಳನ~ ಹೀಗೆ ಅವುಗಳನ್ನು ಪಟ್ಟಿ ಮಾಡಬಹುದು. ಇವುಗಳಲ್ಲಿ ಹಾಡಿ ಸಂಗೀತಲೋಕದಲ್ಲಿ ತಮ್ಮ ಅಸ್ತಿತ್ವ - ವರ್ಚಸ್ಸುಗಳನ್ನು ಬೆಳೆಸಿಕೊಳ್ಳಲು ಸಂಗೀತಗಾರರು ಕಾತರಿಸುತ್ತಾರೆ.

ಕರ್ನಾಟಕದ ಕುಂದಗೋಳದಲ್ಲಿ ಸವಾಯಿಗಂಧರ್ವರ ಪುಣ್ಯತಿಥಿಯಂದು ನಡೆಯುವ ಸಂಗೀತೋತ್ಸವವೂ ಸಮ್ಮೇಳನದ ಸ್ವರೂಪದ್ದೇ ಆಗಿದೆ. ದೇಶದ ಮೂಲೆಮೂಲೆಗಳಿಂದ ಇಲ್ಲಿಗೆ ಕಲಾವಿದರು ಆಗಮಿಸಿ ತಮ್ಮ ಸಂಗೀತ ಸೇವೆ ಸಲ್ಲಿಸುತ್ತಾರೆ.

ಇದನ್ನು ಆಯೋಜಿಸುತ್ತಿದ್ದ ಡಾ.ಗಂಗೂಬಾಯಿ ಹಾನಗಲ್ಲರ ಆಶೀರ್ವಾದ ಪಡೆಯಲು ಹಾಗೂ ಅವರ ಗುರುಗಳಾದ ಸವಾಯಿ ಗಂಧರ್ವರ ಕೃಪೆಗೆ ಪಾತ್ರರಾಗಲು ಉದಯೋನ್ಮುಖ ಕಲಾವಿದರ ದಂಡೇ ಕುಂದಗೋಳಕ್ಕೆ ಆಗಮಿಸುತ್ತಿತ್ತು. ಈಗಲೂ ಗುರುಶಿಷ್ಯೆಯ ನೆನಪಿನಲ್ಲೇ ಸಹೃದಯರ ದೊಡ್ಡ ದಂಡು ಕುಂದಗೋಳದಲ್ಲಿ ನೆರೆಯುತ್ತದೆ.

ಗಂಗೂಬಾಯಿ ಹಾನಗಲ್ಲರು ಅನೇಕ ಸಂಗೀತ ಸಮ್ಮೇಳನಗಳಲ್ಲಿ ಪ್ರಮುಖ ಗಾಯಕಿಯಾಗಿ ಹಾಡಿದ್ದಾರೆ. ಆದರೆ ಆ ಹಂತಕ್ಕೇರಲು ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅನೇಕ ಸಲ ಇವರನ್ನು ಸಂಘಟಕರು ಉಪೇಕ್ಷಿಸಿದ ಪ್ರಸಂಗಗಳೂ ಉಂಟು. ಆಗೆಲ್ಲ ಗಂಗೂಬಾಯಿ ತಮ್ಮ ಸಂಗೀತದಿಂದಲೇ ತಕ್ಕ ಉತ್ತರ ನೀಡಿದ್ದಾರೆ. ಅಂಥದೊಂದು ರಸನಿಮಿಷ ಇಲ್ಲಿದೆ.

1940ರ ದಶಕ. ಗಯಾದಲ್ಲಿ ರಾಷ್ಟ್ರಮಟ್ಟದ ಸಂಗೀತ ಸಮ್ಮೇಳನ. ಅದಕ್ಕೆ ಕುಮಾರಗಂಧರ್ವರಾದಿಯಾಗಿ ಅನೇಕ ಪ್ರಖ್ಯಾತ ಗಾಯಕರು ಆಮಂತ್ರಿತರು.

ಗಂಗೂಬಾಯಿ ಹಾನಗಲ್ಲರೂ ಮೊದಲ ಸಲ ಆಮಂತ್ರಿತರಾದರು. ಆ ಸಲ ಉಸ್ತಾದ್ ಫೈಯಾಜ್‌ಖಾನ್, ಪಂ.ಓಂಕಾರನಾಥ ಠಾಕೂರ, ದಿಲೀಪ ಚಂದ್ರವೇದಿ, ಉಸ್ತಾದ್ ಬಡೇಗುಲಾಮ್ ಅಲೀಖಾನ್ ಮೊದಲಾದವರೂ ಹಾಡುವವರ ಪಟ್ಟಿಯಲ್ಲಿದ್ದರು.

ಸಂಘಟಕರು ಗಂಗೂಬಾಯಿ ಅವರಿಗೆ ಕೇವಲ ಹದಿನೈದು ನಿಮಿಷಗಳ ಅವಕಾಶವನ್ನು ಒದಗಿಸಿದರು. ದೂರದ ಕರ್ನಾಟಕದಿಂದ ಗಯಾದವರೆಗೂ ಬಂದು ಹದಿನೈದು ನಿಮಿಷ ಹಾಡುವುದೆ? ಹದಿನೈದು ನಿಮಿಷಗಳಲ್ಲಿ ಏನು ಹಾಡುವುದು? ಈ ಅಪಮಾನ ಪ್ರತಿಭಟಿಸಿ ಹಾಡುವುದಿಲ್ಲವೆಂದು ಹೇಳಿಬಿಡಲೆ?- ಹೀಗೆಲ್ಲ ಗಂಗೂಬಾಯಿ ಯೋಚಿಸಿರಬಹುದು. ಅವರ ತಳಮಳ ಗಮನಿಸಿದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಹೇಳಿದರು-   `ಹದಿನೈದೇ ನಿಮಿಷದಲ್ಲಿ ನೀನು ಏನೆಂದು ತೋರಿಸಿ ಬಿಡು. ಇವರಿಗೆಲ್ಲ ನೀನಾರೆಂದು ತಿಳಿಯಲಿ~.

ಗಂಗೂಬಾಯಿ ಧೈರ್ಯದಿಂದ ವೇದಿಕೆಯನ್ನೇರಿದರು. ವ್ಹಿ.ಜಿ.ಜೋಗ್ ಪಿಟೀಲು ಸಾಥಿ ನೀಡುವುದಾಗಿ ಹುರಿದುಂಬಿಸಿದರು. ಬಸಂತರಾಗದ  ಪಿಯಾಸಂಗ ಚೀಜನ್ನು ಎತ್ತರದ ಸ್ವರದಲ್ಲಿ ಹಾಡಿ ಗಂಗೂಬಾಯಿ ರಂಜಿಸಿದರು. ಸಹೃದಯರು ಕಿವಿಗಡಚಿಕ್ಕುವ ಚಪ್ಪಾಳೆ ಮೂಲಕ ತಮ್ಮ ಖುಷಿ ವ್ಯಕ್ತಪಡಿಸಿದರು.

ಮರುದಿನ, ಚಹಾವಿರಾಮ ವೇಳೆಯಲ್ಲಿ ಬಡೇಗುಲಾಮಖಾನರಾದಿಯಾಗಿ ಎಲ್ಲರೂ ಗಂಗೂಬಾಯಿಯವರು ಪೂರ್ಣಪ್ರಮಾಣದ ಹಾಡುಗಾರಿಕೆ ಪ್ರಸ್ತುತಪಡಿಸಬೇಕೆಂದು ಒತ್ತಾಯಿಸತೊಡಗಿದರು. ಹಾಡುವ ಮನಸ್ಸಿಲ್ಲದಿದ್ದರೂ, ಹಿರಿಯರ ಆಗ್ರಹಕ್ಕೆ ಮಣಿದು ಗಂಗೂಬಾಯಿ ಮನಸೋಕ್ತ ಶುದ್ಧಕಲ್ಯಾಣ ಹಾಡಿದರು. ಎಲ್ಲರೂ ಅಹುದಹುದೆಂದು ತಲೆದೂಗಿದರು! ಬಡೇಗುಲಾಮ್ ಅಲಿಖಾನ್ ಹೇಳಿದರು- `ಬೇಟಿ, ತುಮ್ ಭೀ ಗಾವೋ, ಹಮ್ ಭೀ ಗಾಯೇಂಗೆ~.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT