ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುರುವಾಗದ ಮಕ್ಕಳ ಗ್ರಾಮಸಭೆಗಳು

ಸರ್ಕಾರದ ಆದೇಶವಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ
Last Updated 4 ಡಿಸೆಂಬರ್ 2013, 8:48 IST
ಅಕ್ಷರ ಗಾತ್ರ

ಯಾದಗಿರಿ: ತಮ್ಮ ಪರಿಸರದಲ್ಲಿ ನಡೆಯುವ ನ್ಯಾಯ, ಅನ್ಯಾಯಗಳನ್ನು ಗುರುತಿಸಿ ಅವುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ನಿಟ್ಟಿನಲ್ಲಿ ಮಕ್ಕಳ ಗ್ರಾಮಸಭೆಗಳನ್ನು ಪ್ರತಿ ವರ್ಷ ನವೆಂಬರ್‌ ತಿಂಗಳಲ್ಲಿ ಆಯೋಜಿಸಲಾಗುತ್ತದೆ. ಮಕ್ಕಳ ಗ್ರಾಮ­ಸಭೆಯು ಮಕ್ಕಳಿಗೆ ತಮ್ಮ ಸಂರಕ್ಷಣೆಯ, ಸವಲತ್ತಿನ ಹಕ್ಕು ಪ್ರತಿಪಾದಿಸಲು ಹಾಗೂ ಕುಂದುಕೊರತೆಗಳನ್ನು ಹೇಳಿ­ಕೊಳ್ಳುವ ವೇದಿಕೆ ಒದಗಿಸುತ್ತದೆ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಇದುವರೆಗೆ ಒಂದೇ ಒಂದು ಮಕ್ಕಳ ಗ್ರಾಮಸಭೆ ನಡೆದಿಲ್ಲ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿ ವರ್ಷ ನವೆಂಬರ್‌ ತಿಂಗಳಲ್ಲಿ ಮಕ್ಕಳ ಹಕ್ಕುಗಳ ಮಾಸಾಚರಣೆ ಹಮ್ಮಿ­ಕೊಳ್ಳಬೇಕು. ಈ ತಿಂಗಳಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿ­ಯಲ್ಲಿ ಮಕ್ಕಳ ಗ್ರಾಮಸಭೆ ನಡೆಸುವಂತೆ 2006 ರಲ್ಲಿಯೇ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜೊತೆಗೆ ಈ ಗ್ರಾಮಸಭೆಗಳ ರೂಪುರೇಷೆ, ಅವು­ಗಳಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆಯೂ ಮಾರ್ಗಸೂಚಿ ನೀಡಿದೆ. ಆದರೆ ಜಿಲ್ಲೆಯಲ್ಲಿ ಇದುವರೆಗೂ ಮಕ್ಕಳ ಗ್ರಾಮಸಭೆ­ಗಳ ಬಗ್ಗೆ ಬಹುತೇಕ ಜನರಿಗೆ ತಿಳಿದೇ ಇಲ್ಲ.

ಸಭೆಯ ಉದ್ದೇಶ: ಮಕ್ಕಳ ಗ್ರಾಮಸಭೆಯ ಮೂಲಕ ಮಕ್ಕಳ ಸಮಸ್ಯೆಗಳು ಮತ್ತು ಅವುಗಳ ಪರಿಹಾರದ ಬಗ್ಗೆ ಚರ್ಚಿಸಲಾಗುತ್ತದೆ. ಮಕ್ಕಳಿಗೆ ಸಂಬಂಧಪಟ್ಟ ಮಾಹಿತಿ, ಸಮಸ್ಯೆಗಳನ್ನು ಮಕ್ಕಳಿಂದಲೇ ತಿಳಿದು­ಕೊಳ್ಳುವುದು ಗ್ರಾಮ­ಸಭೆಯ ಉದ್ದೇಶ.

ಸರ್ಕಾರದ ವಿವಿಧ ಇಲಾಖೆಗಳು ಮಕ್ಕಳ ಬಗ್ಗೆ ಅನುಷ್ಠಾನಗೊಳಿಸುವ ವಿವಿಧ ಕಾರ್ಯಕ್ರಮ­ಗಳನ್ನು ಮಕ್ಕಳಿಗೆ ಪರಿಚಯಿಸುವುದು, ಮಕ್ಕಳು ಸಂಘಟಿತ­ರಾಗಿ ತಮ್ಮ ಹಕ್ಕುಗಳ ಬಗ್ಗೆ ತಿಳಿದು­ಕೊಂಡು, ಎಲ್ಲ ಹಕ್ಕುಗಳನ್ನು ಬಳಸಿಕೊಳ್ಳಲು ಜಾಗೃತಿ ಉಂಟು ಮಾಡುವುದು, ಸಮಸ್ಯೆಗಳ ಬಗ್ಗೆ ಗ್ರಾಮ ಪಂಚಾಯಿತಿಯ ಹಿರಿಯ­ರೊಂದಿಗೆ ಹಂಚಿಕೊಳ್ಳಲು ಹಾಗೂ ಚರ್ಚೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು, ವಯಸ್ಕ­ರಾದಾಗ ಗ್ರಾಮಸಭೆಗಳಲ್ಲಿ ಸಕ್ರಿಯ­ವಾಗಿ ಭಾಗವಹಿಸಲು ಬಾಲ್ಯ­ದಿಂದಲೇ ತಯಾರಿ ಮಾಡುವುದು ಮಕ್ಕಳ ಗ್ರಾಮಸಭೆಯ ಉದ್ದೇಶ­ಗಳಾಗಿವೆ.

ಪ್ರತಿಯೊಂದು ಗ್ರಾಮ ಪಂಚಾಯಿತಿ­ಯಲ್ಲಿ ಮಕ್ಕಳ ಗ್ರಾಮಸಭೆಗಳನ್ನು ಕಡ್ಡಾಯವಾಗಿ ನಡೆಸಬೇಕು. ಸಭೆ ನಿಗದಿಗೊಳಿಸುವ ಮೊದಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳ ಮುಖ್ಯಾಧ್ಯಾಪಕರ ಮೂಲಕ ಒಬ್ಬ ಶಿಕ್ಷಕರನ್ನು ಸಮನ್ವಯಾಧಿಕಾರಿಯಾಗಿ ನೇಮಕ ಮಾಡಬೇಕು. ಈ ಅಧಿಕಾರಿಯು ಮಕ್ಕಳ ಜೊತೆ ಪೂರ್ವ­ಭಾವಿ ಚರ್ಚೆ ನಡೆಸಿ, ಗ್ರಾಮಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಮಾಹಿತಿಯನ್ನು ಗ್ರಾಮ ಪಂಚಾಯಿತಿಗೆ ನೀಡಬೇಕು.

ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕಾರ್ಯದರ್ಶಿಗಳು, ನೋಡಲ್‌ ಅಧಿಕಾರಿಗಳು ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಕಾರ್ಯಸೂಚಿ ಸಿದ್ಧಪಡಿಸಿ, ಎಲ್ಲ ಶಾಲೆಗಳಿಗೆ ಹಾಗೂ ಮಕ್ಕಳ ಒಳಿತಿಗಾಗಿ ಕಾರ್ಯ­ನಿರ್ವಹಿಸುತ್ತಿರುವ ಸಂಘ–ಸಂಸ್ಥೆಗಳಿಗೆ ಕಳುಹಿಸ­ಬೇಕು.

ಮಕ್ಕಳ ಗ್ರಾಮಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಕುರಿತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ನೋಡಲ್‌ ಅಧಿಕಾರಿ­ಗಳು ಒಂದು ವಾರದೊಳಗಾಗಿ ಕ್ರಮ ಕೈಗೊಳ್ಳಬೇಕು. ನಂತರ ಮತ್ತೊಮ್ಮೆ ಮಕ್ಕಳ ಗ್ರಾಮಸಭೆ ನಡೆಸಿ, ಅನುಪಾಲನಾ ವರದಿ ಮಂಡಿಸಬೇಕು ಎಂದು ಸರ್ಕಾರದ ಮಾರ್ಗ­ಸೂಚಿಯಲ್ಲಿ ಹೇಳಲಾಗಿದೆ.

ಶುರುವಾಗಿಯೇ ಇಲ್ಲ: ಮಕ್ಕಳ ಗ್ರಾಮ­ಸಭೆಗಳನ್ನು ನಡೆಸಲು ಸಾಕಷ್ಟು ಪೂರ್ವ ತಯಾರಿ ನಡೆಸುವುದು ಅವಶ್ಯಕ­ವಾಗಿದೆ. ನವೆಂಬರ್‌ ಮತ್ತು ಡಿಸೆಂಬರ್‌ ಒಳಗಾಗಿ ಈ ಗ್ರಾಮ ಸಭೆಗಳನ್ನು ಪೂರ್ಣ­ಗೊಳಿಸಬೇಕು. ಆದರೆ ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಮಕ್ಕಳ ಗ್ರಾಮಸಭೆಗಳು ಇನ್ನೂ ಆರಂಭವಾಗಿಯೇ ಇಲ್ಲ. ಡಿಸೆಂಬರ್‌ ತಿಂಗಳು ಆರಂಭಗೊಂಡಿದ್ದರೂ, ಜಿಲ್ಲೆಯ ಯಾವ ಪಂಚಾಯಿತಿಯಲ್ಲೂ ಮಕ್ಕಳ ಗ್ರಾಮಸಭೆ ಇನ್ನೂ ನಡೆದೇ ಇಲ್ಲ.

ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ತಿಳಿದು­ಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯ­ದಿಂದಾಗಿ ಮಕ್ಕಳ ಗ್ರಾಮಸಭೆಗಳು ನಡೆಯುತ್ತಿಲ್ಲ. ಜಿಲ್ಲೆಯಲ್ಲಿ 117 ಗ್ರಾಮ ಪಂಚಾಯಿತಿಗಳಿದ್ದು, ಒಂದು ದಿನಕ್ಕೆ ಎರಡು ಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮಸಭೆ ನಡೆಸಿದರೂ, ಡಿಸೆಂಬರ್‌ ಅಂತ್ಯ­ದೊಳಗೆ ಎಲ್ಲ ಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮ­ಸಭೆಗಳು ಪೂರ್ಣವಾಗುವುದಿಲ್ಲ. ಇದ­ರಿಂದಾಗಿ ಮಕ್ಕಳಿಗಾಗಿಯೇ ಇರುವ ಗ್ರಾಮಸಭೆಗಳಿಂದ ಮಕ್ಕಳು ವಂಚಿತ­ರಾಗುತ್ತಾರೆ ಎಂದು ಕಿರಣ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಿದ್ದಪ್ಪ ಲಿಂಗೇರಿ ಹೇಳುತ್ತಾರೆ.

ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯನ್ನು ನವೆಂಬರ್‌ ತಿಂಗಳಲ್ಲಿ  ಕಡ್ಡಾಯವಾಗಿ ನಡೆಸ­ಬೇಕು ಎಂಬ ಆದೇಶವಿದ್ದರೂ ಸಂಬಂಧಪಟ್ಟ ಅಧಿಕಾರಿ­ಗಳು ಈ ಸಭೆಗಳನ್ನು ನಡೆಸುತ್ತಿಲ್ಲ.

ಇದರಿಂದ ಅನೇಕ ಮಕ್ಕಳು ತಮ್ಮ ಹಕ್ಕುಗಳಿಂದ ವಂಚಿತರಾಗಿ, ಶಾಲೆ ಬಿಟ್ಟು, ಬಾಲಕಾರ್ಮಿಕ ಪದ್ಧತಿ, ಜೀತ ಪದ್ಧತಿಗಳಿಗೆ ಬಲಿಯಾಗುತ್ತಿದ್ದಾರೆ ಎಂದು  ಅವರು ಕಳವಳ ವ್ಯಕ್ತಪಡಿಸುತ್ತಾರೆ.

‘ಮಕ್ಕಳ ಗ್ರಾಮಸಭೆ: ಅಧಿಕಾರಿಗಳಿಗೆ ಸೂಚನೆ’
ಪ್ರತಿ ವರ್ಷ ನವೆಂಬರ್‌–ಡಿಸೆಂಬರ್‌ನಲ್ಲಿ ಮಕ್ಕಳ ಗ್ರಾಮಸಭೆಗಳನ್ನು ನಡೆಸಬೇಕು. ಈ ಬಗ್ಗೆ ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಲಾಗಿದೆ.

ಮಕ್ಕಳ ಗ್ರಾಮಸಭೆಗಳನ್ನು ನಡೆಸಲು ಈ ಎಲ್ಲ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಸದ್ಯಕ್ಕೆ ಗ್ರಾಮೀಣ ಉದ್ಯೋಗ ಖಾತರಿ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಗ್ರಾಮಸಭೆಗಳು ನಡೆಯುತ್ತಿದ್ದು, ಈ ಸಭೆಗಳ ಜೊತೆಯಲ್ಲಿ ಮಕ್ಕಳ ಗ್ರಾಮ ಸಭೆಗಳನ್ನೂ ನಡೆಸಲು ತಿಳಿಸಲಾಗಿದೆ.
– ಮಹ್ಮದ್‌ ಯುಸೂಫ್‌, ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT