ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಶೂದ್ರ'ಗೆ ಕಿ.ರಂ. ಪ್ರಶಸ್ತಿ

Last Updated 17 ಜನವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಸಾಹಿತ್ಯ ಕ್ಷೇತ್ರ ಹೊರತುಪಡಿಸಿ ರಾಜಕೀಯ ಸೇರಿದಂತೆ ಬಹುತೇಕ ಕ್ಷೇತ್ರಗಳ ಸ್ಥಿತಿ ಹದಗೆಟ್ಟಿದೆ. ಆದರೆ, ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯ ಸಾಹಿತಿಗಳ ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ಯುವ ಪ್ರತಿಭೆಗಳು ಸಾಹಿತ್ಯ ರಚನೆಯಲ್ಲಿ ತೊಡಗಿರುವುದು ಉತ್ತಮ ಬೆಳವಣಿಗೆ' ಎಂದು ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಶ್ಲಾಘಿಸಿದರು. 

ನಗರದ ಪ್ರಜಾ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಂಸ್ಕೃತಿ ಚಿಂತಕ ಶೂದ್ರ ಶ್ರೀನಿವಾಸ್ ಅವರಿಗೆ `ಪ್ರೊ. ಕಿ.ರಂ.ನಾಗರಾಜ ಸಂಸ್ಕೃತಿ ಪ್ರಶಸ್ತಿ' ಪ್ರದಾನ ಮಾಡಿ ಅವರು ಮಾತನಾಡಿದರು.

`ಸಾಹಿತಿ ಅತ್ಯುತ್ತಮ ವಸ್ತುವನ್ನು ತನ್ನ ಸಾಹಿತ್ಯದ ಮೂಲಕ ನೀಡುತ್ತಾನೆ. ಸಾಹಿತಿಗಳ ಮೂಲಕ ಕನ್ನಡ ಭಾಷೆ ಪುನರ್ ನಿರ್ಮಾಣವಾಗುತ್ತಿದೆ. ಕಿ.ರಂ. ನಾಗರಾಜ್ ಅವರಿಗೆ ಪುನರ್‌ನಿರ್ಮಾಣದ ಕಲೆ ಚೆನ್ನಾಗಿ ಕರಗತವಾಗಿತ್ತು' ಎಂದರು.

`ಕಿ.ರಂ.ಅವರು ಕನ್ನಡನಾಡಿನ ವಚನಕಾರರ ಪರಂಪರೆಯ ಕೊನೆಯ ಕೊಂಡಿ. ಅವರೊಬ್ಬ ಅವಧೂತ. ಹೊಸ ತಲೆಮಾರಿನ ಲೇಖಕರನ್ನು ಕೂಡಲೇ ಗುರುತಿಸುತ್ತಿದ್ದರು. ಅವರಂತಹ ಕನ್ನಡ ಸಾಹಿತ್ಯ ಪ್ರೇಮಿ ಮತ್ತೊಬ್ಬರಿಲ್ಲ' ಎಂದು ಅವರು ತಿಳಿಸಿದರು.

ಹಿರಿಯ ವಿಮರ್ಶಕ ಡಾ.ಕೆ.ಮರುಳಸಿದ್ದಪ್ಪ ಕಾರ್ಯಕ್ರಮ ಉದ್ಘಾಟಿಸಿ, `ನನ್ನನ್ನು ರೂಪಿಸಿದವರು ನನ್ನ ವಿದ್ಯಾರ್ಥಿಗಳು. ಅಂತಹ ಅಸಾಧಾರಣ ವಿದ್ಯಾರ್ಥಿಗಳಲ್ಲಿ ಕಿ.ರಂ. ಒಬ್ಬರು. ಅವರು ಸಾಹಿತ್ಯ ಪರಿಚಾರಕ. ಕಿ.ರಂ. ಅವರ ಮೇಲೆ ಯುವಜನರಿಗೆ ಈಗಲೂ ಆರಾಧನಾ ಮನೋಭಾವ ಇದೆ' ಎಂದರು.

ಪ್ರಶಸ್ತಿ ಸ್ವೀಕರಿಸಿದ ಶೂದ್ರ ಶ್ರೀನಿವಾಸ್, ಸಂಸ್ಥೆಯ ಮೂಲಕ ರಾಜ್ಯ ಮಟ್ಟದ ಕಿ.ರಂ. ನಾಗರಾಜ್ ಉತ್ಸವ ನಡೆಸಬೇಕು. ಉತ್ಸವ ಆಚರಿಸಲು ಈ ಪ್ರಶಸ್ತಿ ಮೊತ್ತವನ್ನು ಸಂಘಟಕರಿಗೆ ನೀಡಲಾಗುವುದು. ಉತ್ಸವಕ್ಕೆ ಮತ್ತಷ್ಟು ಹಣವನ್ನು ಸಂಗ್ರಹಿಸಿ ನೀಡಲಾಗುವುದು ಎಂದರು.

ಕಿ.ರಂ. ಅವರು ನಮ್ಮ ಕಾಲದ ಸಾಂಸ್ಕೃತಿಕ ನಾಯಕ. ಕನ್ನಡ ಸಾಹಿತ್ಯ ಲೋಕದಲ್ಲಿ ಮತ್ತೆ ಅಂತಹ ಅವಧೂತರು ಹುಟ್ಟಿ ಬರುವುದು ಕಷ್ಟ. ನನ್ನ ಗ್ರಹಿಕೆಗಳನ್ನು ಅವರು ವಿಸ್ತರಿಸಿದರು ಎಂದು ಅವರು ನೆನಪಿಸಿಕೊಂಡರು. ವೇದಿಕೆಯ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT