ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಕ ಸಾಗರದ ಮಧ್ಯೆ ವೀರಯೋಧನ ಅಂತ್ಯಕ್ರಿಯೆ

Last Updated 4 ಜುಲೈ 2012, 7:00 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಇಡೀ ಗ್ರಾಮದಲ್ಲಿ ಮೌನ ವಾತಾವರಣ. ಮಡುಗಟ್ಟಿದ ದುಃಖ ಹಾಗೂ ದುಗುಡ ತುಂಬಿದ ನೂರಾರು ಜನರ ಮನಸ್ಸಿನಲ್ಲಿ ಏನೋ ಆತಂಕ ಕಸಿವಿಸಿ. ನಿಂತಲ್ಲಿ ನಿಲ್ಲಲಾರದೆ ಅತ್ತಿತ್ತ ಓಡಾಡುತ್ತಿದ್ದ ಜನ ಜಂಗುಳಿ. ಹೌದು. ಮಂಗಳವಾರ ಈ ದೃಶ್ಯ ಕಂಡು ಬಂದಿದ್ದು ಸಮೀಪದ ಗೊಜನೂರು ಗ್ರಾಮದಲ್ಲಿ.

ಹಿಮಪಾತಕ್ಕೆ ಸಿಕ್ಕು ವೀರ ಮರಣ ವನ್ನಪ್ಪಿದ ತಮ್ಮ ಗ್ರಾಮದ ಯೋಧನ ಪಾರ್ಥೀವ ಶರೀರದ ಆಗಮನಕ್ಕಾಗಿ ಜನರು ಕಾಯುತ್ತಿದ್ದರು. ಬೆಳಿಗ್ಗೆ 8-30ರ ಸುಮಾರಿಗೆ ಯೋಧನ ಶವ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಜನತೆ ಯಲ್ಲಿ ಮಿಂಚಿನ ಸಂಚಲನವಾಯಿತು. ದೇಶ ಕಾಯುವಾಗ ಸಾವನ್ನಪ್ಪಿದ ಯೋಧನ ಮೃತದೇಹ ದರ್ಶನ ಪಡೆ ಯಲು ಗ್ರಾಮದ ಮಕ್ಕಳು, ಮಹಿಳೆ ಯರು ಎನ್ನದೆ ಎಲ್ಲರೂ ಆಗಮಿಸಿದ್ದರು.

ಘಟನೆ ವಿವರ: ಗೊಜನೂರು ಗ್ರಾಮದ ರಾಜೇಸಾಬ್ ತಾಜುದ್ದೀನ್‌ಸಾಬ್ ಆನಿ ಗಡಿ ಭದ್ರತಾ ಪಡೆಯಲ್ಲಿ ಯೋಧನಾಗಿ ಜಮ್ಮು- ಕಾಶ್ಮೀರ ರಾಜ್ಯದ ಕುಪ್ವಾರ್ ಜಿಲ್ಲೆಯ ಹಿಮಾ ಲಯ ಪರ್ವತದಲ್ಲಿ ಸೇವೆ ಸಲ್ಲಿಸುತ್ತಿದ್ದರು. 2012ರ ಜ.24 ರಂದು ಸಂಭವಿಸಿದ ಹಿಮಪಾತದಲ್ಲಿ 7 ಜನ ಯೋಧರು ಕಣ್ಮರೆಯಾಗಿದ್ದು ಆ ಯೋಧರ ತಂಡದಲ್ಲಿ ರಾಜೇಸಾಬ್ ಅವರೂ ಕೂಡ ಒಬ್ಬರಾಗಿದ್ದರು. ಅಂದಿನಿಂದ ಅವರಿಗಾಗಿ ಸೇನೆ ಹುಡುಕಾಟ ನಡೆಸಿತ್ತು.

ಆದರೆ ಅವರು ಎಲ್ಲಿದ್ದಾರೆ ಎಂಬುದು ಮಾತ್ರ ತಿಳಿದಿ ರಲಿಲ್ಲ. ತಮ್ಮ ಮಗನಿದ್ದ ಯೋಧರ ತಂಡ ಹಿಮಪಾತಕ್ಕೆ ಸಿಲುಕಿರುವ ಬಗ್ಗೆ ಅವರ ಕುಟುಂಬಕ್ಕೆ ಮಾಹಿತಿ ಲಭ್ಯವಾ ಗಿತ್ತು. ಆವತ್ತಿನಿಂದ ಮಗನ ಮುಖ ನೋಡಲು ಯೋಧನ ತಂದೆ-ತಾಯಿ ಹಾಗೂ ಕುಟುಂಬ ವರ್ಗ ಕಾಯು ತ್ತಿದ್ದರು.

ಗ್ರಾಮದ ಜನರಲ್ಲಿಯೂ ಸಹ ತಮ್ಮೂರಿನ ಯೋಧ ಕಾಣೆಯಾಗಿರುವ ಬಗ್ಗೆ ಆತಂಕ ಉಂಟಾಗಿತ್ತು. ಆದರೆ ಯೋಧ ರಾಜೇಸಾಬ್ ಹಿಮಪಾತದಲ್ಲಿ ಸಿಕ್ಕು ಮೃತರಾಗಿದ್ದು ಅವರ ಮೃತದೇಹ ಜುಲೈ1ರಂದು ದೊರೆತ ಬಗ್ಗೆ ತಾಲ್ಲೂಕು ಆಡಳಿತಕ್ಕೆ ರವಿವಾರ ಮಾಹಿತಿ ಬಂದಿತ್ತು. ಆವಾಗಲೇ ಮಗ ವೀರಮರಣವನ್ನಪಿದ್ದಾನೆ ಎಂಬ ವಿಷಯ ಕುಟುಂಬ ವರ್ಗಕ್ಕೆ ಗೊತ್ತಾ ಗಿದ್ದು.

ಯೋಧ ರಾಜೇಸಾಬ್ ಹಿಮಪಾತಕ್ಕೆ ಸಿಕ್ಕು ಮರಣವನ್ನಪ್ಪಿದ್ದು ಅವರ ಶವ ಮಂಗಳವಾರ ಗ್ರಾಮಕ್ಕೆ ಬರಲಿದೆ ಎಂಬ ಸುದ್ದಿ ಇಡೀ ಗ್ರಾಮದಲ್ಲಿ ಹರಡು ತ್ತಿದ್ದಂತೆ ನೂರಾರು ಜನರು ತಮ್ಮೂರಿನ ವೀರಪುತ್ರನನ್ನು ನೋಡಲು ಜಮಾಯಿ ಸಿದರು.

ಲಕ್ಷ್ಮೇಶ್ವರ ಮೂಲಕ ಯೋಧನ ಶವ ಗ್ರಾಮಕ್ಕೆ ಆಗಮಿಸಿತು. ಆಗ ಸೇರಿದ್ದ ನೂರಾರು ಜನತೆಯ ಕಂಗಳು ಹನಿ ಗೂಡಿದ್ದವು. ಯೋಧನ ಮನೆಗೆ ಶವ ಬರುತ್ತಿದ್ದಂತೆ ಅವರ ತಂದೆ ತಾಜುದ್ದೀನ್‌ಸಾಬ್ ಬೋರಾಡಿ ಅತ್ತರೆ ತಾಯಿ ರಾಜ್‌ಬೀ ಮಾತ್ರ `ಆವೋ ಮೇರಾ ಭೇಟಾ. ಆವೋ ಮೇರಾ   ಶೇರ್~ ಎಂದು ಮಗನ ಶವವನ್ನು ಬರಮಾಡಿಕೊಂಡಿದ್ದು ಮಾತ್ರ ತಾಯಿಯ ಮಾನಸಿಕ ಧೈರ್ಯವನ್ನು ಎತ್ತಿ ತೋರಿಸುತ್ತಿತ್ತು.

ನಂತರ ಮುಸ್ಲಿಂ ಧರ್ಮದ ಪ್ರಕಾರ ವಿಧಿ ವಿಧಾನಗಳನ್ನು ಪೂರೈಸಿ ಯೋಧನ ಪಾರ್ಥೀವ ಶರೀರವನ್ನು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸ್ಮಶಾನಕ್ಕೆ ತರಲಾಯಿತು.ಅಲ್ಲಿನ ಈದಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ನಮಾಜ್ ಮಾಡಿ ಯೋಧನಿಗೆ ಪ್ರಾರ್ಥನೆ ಸಲ್ಲಿಸಿದರು.

ನಂತರ ಯೋಧರು ಮೂರು ಸುತ್ತು ಗುಂಡು ಹಾರಿಸಿ ಮೃತ ಯೋಧನಿಗೆ ಗೌರವ ಸಲ್ಲಿಸಿದರು. ನಂತರ ಅಂತ್ಯಕ್ರಿಯೆ ನಡೆಯಿತು.

ಗಣ್ಯರ ಭೇಟಿ: ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ ನಾಯಕ, ತಹಶೀಲ್ದಾರ ಆರ್.ಡಿ. ಉಪ್ಪಿನ, ಗೃಹ ರಕ್ಷಕ ದಳದ ಕಮಾಂಡರ್ ಸೂರ್ಯಕಾಂತ ಘೋರ್ಪಡೆ, ಶಾಸಕ ರಾಮಣ್ಣ ಲಮಾಣಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಕೆಎಂಎಫ್ ನಿರ್ದೇಶಕ ಎಸ್.ಪಿ. ಪಾಟೀಲ, ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ, ಗೊಜನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವನಗೌಡ ಪಾಟೀಲ, ತಾಲ್ಲೂಕು ಪಂಚಾಯ್ತಿ ಸದಸ್ಯ ಸಿ.ಎಸ್. ಜಗಲಿ, ಶಿಗ್ಲಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ರಾಮಣ್ಣ ಲಮಾಣಿ, ಪರಮೇಶ್ವರ ಲಮಾಣಿ ಸೇರಿದಂತೆ ಮತ್ತಿತರ ಗಣ್ಯರು ಯೋಧನ ಅಂತ್ಯಕ್ರಿಯೆಲ್ಲಿ ಪಾಲ್ಗೊಂಡಿದ್ದರು.

ಶಾಲೆಗೆ ರಜೆ: ಯೋಧ ರಾಜೇಸಾಬ್ ಅವರ  ಗೌರವಾರ್ಥವಾಗಿ ಗ್ರಾಮದ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT