ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ಇಲ್ಲದಿದ್ದರೆ ಹೆಣ್ಣು ಕೊಡಬೇಡಿ

Last Updated 19 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶೌಚಾಲಯ ಇಲ್ಲದ ಮನೆಗೆ ಹೆಣ್ಣು ಕೊಡಬೇಡಿ...- ಇದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ ಶೆಟ್ಟರ್ ಅವರ ಪ್ರಸ್ತಾವ. ಶನಿವಾರ ವಿಧಾನಸೌಧದಲ್ಲಿ ನಡೆದ ರಾಜ್ಯ ನೈರ್ಮಲ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಹೀಗೆ ಹೇಳಿದರು.

ಹರಿಯಾಣದಲ್ಲಿ ಇದೇ ರೀತಿಯ ಪದ್ಧತಿ ರೂಢಿಯಲ್ಲಿ ಇರುವ ಕುರಿತು ‘ಡೆಕ್ಕನ್ ಹೆರಾಲ್ಡ್’ನಲ್ಲಿ ಬಂದ ವರದಿಯನ್ನು ಉಲ್ಲೇಖಿಸಿದ ಅವರು, ಇಲ್ಲಿಯೂ ಇದೇ ಪದ್ಧತಿ ಅನುಸರಿಸಿದರೆ ಒಳಿತು ಎಂದು ಅಭಿಪ್ರಾಯಪಟ್ಟರು.

‘ಮೊಬೈಲ್ ದೂರವಾಣಿ ಖರೀದಿಗೆ ಹಣ ಇದೆ, ಶೌಚಾಲಯಕ್ಕೆ ಹಣ ಇಲ್ಲ ಎನ್ನುವ ಮನಸ್ಥಿತಿಗೆ ನಮ್ಮ ಗ್ರಾಮೀಣ ಜನತೆ ತಲುಪಿದ್ದಾರೆ. ಇದನ್ನು ಹೋಗಲಾಡಿಸುವ ಅಗತ್ಯವಿದೆ. ರಾಜ್ಯದಲ್ಲಿ 20ಸಾವಿರಕ್ಕೂ ಅಧಿಕ ಗ್ರಾಮಗಳಿದ್ದು, ಎಲ್ಲ ಗ್ರಾಮಗಳಲ್ಲೂ ಶೌಚಾಲಯ ಅಗತ್ಯವಿದೆ. ಇದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸಂಪ್ರದಾಯವನ್ನು ರೂಢಿಗೊಳಿಸುವುದು ಅಗತ್ಯವಾಗಿದೆ’ ಎಂದರು.

ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿ, ‘ಹಾಗಿದ್ರೆ ಈಗ ಮದುವೆ ಆದವರೆಲ್ಲ ಶೌಚಾಲಯ ಇಲ್ಲದಿದ್ದರೆ ತವರಿಗೆ ವಾಪಸಾಗಬೇಕೆ..’ ಎಂದು ಚಟಾಕಿ ಹಾರಿಸಿದರು.ಸರ್ಕಾರದ ವತಿಯಿಂದ ಈಗಾಗಲೇ 39 ಲಕ್ಷ ಶೌಚಾಲಯಗಳನ್ನು ನಿರ್ಮಿಸಿಕೊಡಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಇನ್ನೂ 20 ಲಕ್ಷ ಶೌಚಾಲಯಗಳ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ಶೆಟ್ಟರ್ ನುಡಿದರು.

ಉತ್ತರ ಕರ್ನಾಟಕ ಭಾಗದಲ್ಲಿ ನೈರ್ಮಲ್ಯದ ಕೊರತೆ ಇದೆ. ಮಠಾಧೀಶರು ಧಾರ್ಮಿಕ ಕಾರ್ಯಕ್ರಮವನ್ನು ಬದಿಗಿಟ್ಟು, ಶೌಚಾಲಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಬೇಕು ಎಂದು ಅವರು ಹೇಳಿದರು.

ಯಡಿಯೂರಪ್ಪ ಮಾತನಾಡಿ, ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸ್ಥಳಗಳನ್ನು ನಿರ್ಮಲವಾಗಿ ಇರಿಸಿಕೊಂಡವರಿಗೆ  ಒಟ್ಟು 10ಕೋಟಿ ರೂಪಾಯಿಗಳ ಪ್ರಶಸ್ತಿಯನ್ನು ಈ ಬಾರಿ ನೀಡಲಾಗಿದೆ. ಇದರ ಜೊತೆಗೆ ಪದಕವನ್ನೂ ಪ್ರದಾನ ಮಾಡಲಾಗಿದೆ. ಬರುವ ವರ್ಷಗಳಲ್ಲೂ ಇದನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದರು.

‘ನಿರ್ಮಲ ಗ್ರಾಮ ಪುರಸ್ಕಾರ’ವನ್ನು 2004ರಿಂದ ಜಾರಿಗೆ ತರಲಾಗಿದ್ದು, ಇಲ್ಲಿಯವರೆಗೆ ಒಟ್ಟು 966 ಗ್ರಾಮ ಪಂಚಾಯಿತಿಗಳು ಈ ಪ್ರಶಸ್ತಿಗೆ ಭಾಜನವಾಗಿವೆ. ಇದರ ಹೊರತಾಗಿ ಜಿಲ್ಲಾ ಮಟ್ಟದ ನೈರ್ಮಲ್ಯ ಪ್ರಶಸ್ತಿಗೆ 79 ಪಂಚಾಯಿತಿಗಳು ಹಾಗೂ ತಾಲ್ಲೂಕು ಮಟ್ಟದ ನೈರ್ಮಲ್ಯ ಪ್ರಶಸ್ತಿಗೆ 125 ಗ್ರಾಪಂಗಳು ಆಯ್ಕೆಯಾಗಿವೆ. ಈ ಪ್ರಶಸ್ತಿಗಳನ್ನು ಸ್ಥಳೀಯವಾಗಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಪ್ರದಾನ ಮಾಡಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಚಿವ ಉಮೇಶ್ ಕತ್ತಿ, ಶಾಸಕ ಎಚ್. ಹಾಲಪ್ಪ, ಸಂಸದ ಆಯನೂರು ಮಂಜುನಾಥ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ಪಿ.ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT