ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕಾಂತ್, ಜಯರಾಮ್ ಎಂಟರ ಘಟ್ಟಕ್ಕೆ

ಬ್ಯಾಡ್ಮಿಂಟನ್: ಸಿಂಧುಗೆ ಸೋಲು
Last Updated 19 ಸೆಪ್ಟೆಂಬರ್ 2013, 11:23 IST
ಅಕ್ಷರ ಗಾತ್ರ

ಟೋಕಿಯೊ (ಐಎಎನ್‌ಎಸ್/ಪಿಟಿಐ): ಉತ್ತಮ ಪ್ರದರ್ಶನ ತೋರುತ್ತಿರುವ ಎಚ್.ಎಸ್. ಪ್ರಣೋಯ್, ಕೆ.ಶ್ರೀಕಾಂತ್ ಹಾಗೂ ಅಜಯ್ ಜಯರಾಮ್ ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್‌ಬ್ಯಾಡ್ಮಿಂಟನ್ ಸೂಪರ್ ಸರಣಿಯಲ್ಲಿ ಗುರುವಾರ ಕ್ವಾರ್ಟರ್ ಫೈನಲ್ ಸುತ್ತು ಪ್ರವೇಶಿಸಿದ್ದಾರೆ. ಆದರೆ ಉದಯೋನ್ಮುಖ ಆಟಗಾರ್ತಿ ಪಿ ವಿ ಸಿಂಧು, ಎರಡನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿ ಟೂರ್ನಿಯಿಂದ ಹೊರ ನಡೆದಿದ್ದಾರೆ.

   ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಜಯರಾಮ್, 21-13, 11-21, 21-18ರಲ್ಲಿ ಸ್ಥಳೀಯ ಆಟಗಾರ ಯುಚಿ ಇಕೆದಾ ವಿರುದ್ಧ ಪ್ರಯಾಸದ ಗೆಲುವು ಪಡೆದರು. ಇದಕ್ಕಾಗಿ ಜಯರಾಮ್ 55 ನಿಮಿಷಗಳ ಹೋರಾಟ ನಡೆಸಿದರು.

ಥಾಯ್ಲೆಂಡ್ ಓಪನ್ ಟೂರ್ನಿಯ ಚಾಂಪಿಯನ್ ಕೆ. ಶ್ರೀಕಾಂತ್ 21-12, 21-16ರಲ್ಲಿ ಸ್ಥಳೀಯ ಕಜುತೆರಾ ಕೊಜೈ ಅವರನ್ನು ನೇರ ಸೆಟ್‌ಗಳಿಂದ ಮಣಿಸಿ ಎಂಟರ ಘಟ್ಟ ಪ್ರವೇಶಿಸಿದರು. ಈ ಪಂದ್ಯ ಗೆಲ್ಲಲು ಶ್ರೀಕಾಂತ್ ಕೇವಲ 32 ನಿಮಿಷಗಳನ್ನು ತೆಗೆದುಕೊಂಡರು.

ಕ್ವಾರ್ಟರ್ ಫೈನಲ್‌ನಲ್ಲಿ ಶ್ರೀಕಾಂತ್,  ವಿಶ್ವ ಐದನೇ  ರ‍್ಯಾಂಕಿಂಗ್‌ನಲ್ಲಿರುವ ಹಾಗೂ ಟೂರ್ನಿಯಲ್ಲಿ ಏಳನೇ ಶ್ರೇಯಾಂಕ ಪಡೆದಿರುವ ಜಪಾನ್‌ನ ಕೆನಿಚಿ ಟಾಗೊ ಅವರನ್ನು ಎದುರಿಸುವರು.

ಇನ್ನು, ಯುವ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತ ಪ್ರಣೋಯ್ ಅವರು ವಿಶ್ವದ  ಆರನೇ ರ‍್ಯಾಂಕಿಂಗ್‌ನಲ್ಲಿರುವ ಡೆನ್ಮಾರ್ಕ್ ನ ಜಾನ್ ಒ ಜೊರ್ಗೆನ್‌ಸನ್ ಎದುರು ಪ್ರಯಾಸದ ಗೆಲುವು ಪಡೆದರು. 53 ನಿಮಿಷಗಳ ಹೋರಾಟದಲ್ಲಿ  ಕೇರಳದ ಈ ಆಟಗಾರ 21-14, 13-21, 21-17ರಲ್ಲಿ ಜಾನ್ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಸಿಂಧುಗೆ ಸೋಲು:
ಟೋಕಿಯೊ ಮೆಟ್ರೊಪಾಲಿಟನ್ ಜಿಮ್ನಾಸಿಯಂನಲ್ಲಿ ನಡೆದ ಪಂದ್ಯದಲ್ಲಿ  ಸಿಂಧು, ಕೇವಲ 32 ನಿಮಿಷಗಳಲ್ಲಿ ಜಪಾನ್‌ನ ಅಕಾನೆ ಯಮಗುಚಿ ಎದುರು ಸೋಲೊಪ್ಪಿಕೊಂಡರು. ವಿಶ್ವ 145ನೇ ರ‌್ಯಾಂಕಿಂಗ್‌ನಲ್ಲಿರುವ ಅಕಾನೆ 21-6, 21-17ರಲ್ಲಿ ಸಿಂಧು ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟರು.

ಡಬಲ್ಸ್ ಹೋರಾಟ ಅಂತ್ಯ:
ಇನ್ನು, ಮನು ಅತ್ರಿ ಹಾಗೂ ಬಿ.ಸುಮೀತ್ ರೆಡ್ಡಿ ಅವರು 21-17,  21-16ರಲ್ಲಿ ಚೀನಾದ ಕ್ಸಿಯೊಲಾಂಗ್ ಲಿಯು-ಜಿಹಾನ್ ಕ್ವಿ ಜೋಡಿ ಎದುರು ಸೋಲು ಕಂಡಿದ್ದು, ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಹೋರಾಟಕ್ಕೆ ತೆರೆ ಬಿದ್ದಿದೆ.

36 ನಿಮಿಷಗಳ ಹೋರಾಟದಲ್ಲಿ ಭಾರತದ ಜೋಡಿಯಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT