ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮನ ಹೊಸ ಭಕ್ತರು ಮತ್ತು ಹಳೆಯ ಅಪರಾಧಿಗಳು

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅಯೋಧ್ಯೆ: `ಎಲ್ಲರೂ ಸಾಲಾಗಿ ನಿಲ್ಲಿ, ಗಂಡಸರು ಆ ಕಡೆ, ಹೆಂಗಸರು ಈ ಕಡೆ. `ಪೋರ್ಸ್~ನವರು ಮಾತ್ರ ನನ್ನ ಹಿಂದೆ ಬನ್ನಿ~ ಎಂದು ಇನ್‌ಸ್ಪೆಕ್ಟರ್ ನಾರಾಯಣ್ ಹರಿಸಿಂಗ್ `ಶೋಲೆ~ ಚಿತ್ರದ ಜೈಲರ್ ಅಸ್ರಾನಿ ಶೈಲಿಯಲ್ಲಿ ಡೈಲಾಗ್ ಹೊಡೆದ. ಇನ್ನೇನು ಎದ್ದು ಒಳಗೆ ಹೊರಟಿದ್ದ `ರಾಮ ಭಕ್ತ~ರು ಈ ಆದೇಶ ಕೇಳಿ ಮತ್ತೆ ಕುಕ್ಕರಗಾಲಿನಲ್ಲಿ ಕುಳಿತುಬಿಟ್ಟರು. `ಕ್ಯಾಮೆರಾ,ಮೊಬೈಲ್,ಕೀ ಚೈನ್,ಬೆಲ್ಟ್ ಎಲ್ಲವನ್ನೂ ಇಲ್ಲಿಯೇ ಜಮಾ ಮಾಡಿ..~ ಎಂದ ಆತ ಸ್ವಲ್ಪ ತಡೆದು `ದುಡ್ಡು ಒಳಗೆ ಕೊಂಡುಹೋಗಬಹುದು~ ಎಂದು ಪ್ರತ್ಯೇಕವಾಗಿ ಒತ್ತುಕೊಟ್ಟು ಹೇಳಿದ.

ಅಷ್ಟರಲ್ಲಿ ಸುಮಾರು ಎರಡು ಗಂಟೆಗಳಿಂದ ಬಿಸಿಲಲ್ಲಿ ಕಾಯುತ್ತಿದ್ದ `ರಾಮಭಕ್ತ~ರಲ್ಲಿ ಗುಜುಗುಜು ಪ್ರಾರಂಭವಾಯಿತು. ಕೆಲವರು ತಮ್ಮ ಅಂಗಿಯ, ಮತ್ತೆ ಕೆಲವರು ಪಂಚೆಯೊಳಗಿನ ಚೆಡ್ಡಿಯ ಕಿಸೆಗಳಿಗೆ ಕೈಹಾಕಿ ಹುಡುಕಾಡಿ ಒಳಗಿದ್ದುದನ್ನು ಹೊರತೆಗೆಯತೊಡಗಿದ್ದರು. ಎಲ್ಲರ ಕಿಸೆಯಲ್ಲಿದ್ದದ್ದು ಒಂದಷ್ಟು ಚಿಲ್ಲರೆ ದುಡ್ಡು ಬಿಟ್ಟರೆ ಬಗೆಬಗೆಯ ಗುಟ್ಕಾ ಪ್ಯಾಕೇಟ್‌ಗಳು.ಹೂ,ಹಣ್ಣು, ಕುಂಕುಮ ಯಾವುದೂ ಇರಲಿಲ್ಲ. `ವುಸ್ಕೊ ಬಿ ನಹೀಂ ಲೆಕೇ ಜಾ ಸಕ್ತಾ~ ಎಂದು ಮತ್ತೆ ಹರಿಸಿಂಗ್ ಗುಡುಗಿದ. ಅದನ್ನು ಕೇಳಿ ಎಲ್ಲರೂ ಪ್ಯಾಕೇಟ್ ಒಡೆದು ಬಾಯಿಗೆ ಸುರುವಿಕೊಳ್ಳತೊಡಗಿದರು.

 ಗೋಂಡಾದಿಂದ `ರಾಮ್‌ಲಲ್ಲಾ~ನ ದರ್ಶನಕ್ಕೆಂದು ಬಂದು ಸಾಲಲ್ಲಿ ನಿಂತಿದ್ದ ಇವರಲ್ಲಿ ಹೆಚ್ಚಿನವರು ಆಗತಾನೆ ಹೊಲಗಳಿಂದ ನೇರವಾಗಿ ಹೊರಟು ಬಂದವರಂತಿದ್ದರು. ಮಾಸಿದ ಅಂಗಿ-ಪಂಚೆ, ಬರಿಗಾಲು,ಬಳಲಿದ ಮುಖ. ಮತದಾನದ ಹಿಂದಿನ ದಿನದ ಈ `ತೀರ್ಥಯಾತ್ರೆ~ ಬಗ್ಗೆ ಯಾಕೋ ಅನುಮಾನ ಬಂದು ಅವರೆಲ್ಲ ಯಾಕೆ ಬಂದರು ಎಂದು ಕೇಳಲು ಪ್ರಯತ್ನಪಟ್ಟಾಗೆಲ್ಲ ಅವರನ್ನು ಕರೆದುಕೊಂಡು ಬಂದಿದ್ದ `ಠೇಕೆದಾರ್~ ಪ್ರತ್ಯಕ್ಷವಾಗಿ ವಿವರಣೆ ಕೊಡುತ್ತಿದ್ದ. ಎರಡು ದಶಕಗಳ ಹಿಂದೆ ಭಾರತದ ರಾಜಕಾರಣಕ್ಕೆ ಹೊಸತಿರುವು ನೀಡಿದ ರಾಮಜನ್ಮಭೂಮಿ-ಬಾಬ್ರಿಮಸೀದಿ ವಿವಾದದ ಇಂದಿನ ಸ್ಥಿತಿಗೆ `ರಾಮಜನ್ಮಭೂಮಿ~ಯ ಪ್ರವೇಶದ್ವಾರದಲ್ಲಿ ಇಂದು ಮಧ್ಯಾಹ್ನ ಕಂಡ ದೃಶ್ಯ ರೂಪಕದಂತಿತ್ತು.

ಇಷ್ಟೆಲ್ಲ ಕಷ್ಟಪಟ್ಟು ನೋಡುವಂತಹದ್ದು ಕೂಡಾ ಒಳಗೆ ಏನೂ ಇಲ್ಲ. ಎರಡು ಕಡೆಗಳಲ್ಲಿನ ಕಬ್ಬಿಣದ ಸಲಾಕೆಗಳ ಬೇಲಿ ಮಧ್ಯದ ದಾರಿಯಲ್ಲಿ ಸುಮಾರು ಒಂದು ಕಿ.ಮೀ. ನಡೆದು ಹಲವು ಬಾರಿ ಪೊಲೀಸರ ತಪಾಸಣೆಗೊಳಗಾಗಿ ಹೋಗಿನೋಡಿದರೆ ಅಲ್ಲಿರುವುದು ಕಿತ್ತುಹೋದ ಡೇರೆಯೊಳಗಿನ `ರಾಮ್‌ಲಲ್ಲಾ~ನ ಸಣ್ಣಮೂರ್ತಿ. ಭಕ್ತರ ಮುಂದೆ ಆರತಿ, ಪೂಜೆ, ನೈವೇದ್ಯ ಕೂಡಾ ಇಲ್ಲ. ಸ್ವಲ್ಪ ದೂರದಲ್ಲಿರುವ ಕಬ್ಬಿಣದ ಗೇಟ್‌ನೊಳಗಿಂದಲೇ ಅರ್ಚಕರೊಬ್ಬರು ತೀರ್ಥ ನೀಡಿ ಹಣೆಗೆ ತಿಲಕ ಹಚ್ಚುತ್ತಾರೆ.

ಪಕ್ಕದಲ್ಲಿಯೇ ನೋಟುಗಳಿಂದ ಕೂಡಿದ ಹುಂಡಿ ಇದೆ. ಇಷ್ಟುಬಿಟ್ಟರೆ 2.77 ಎಕರೆ ವಿವಾದಾತ್ಮಕ ನಿವೇಶನವೂ ಸೇರಿದಂತೆ ಸುತ್ತಮುತ್ತ ಎಲ್ಲಿ ನೋಡಿದರೂ ಕಾಣುವುದು ಪೊಲೀಸ್ ಮತ್ತು ಕೇಂದ್ರ ಮೀಸಲು ಪಡೆಗೆ ಸೇರಿದ ಖಾಕಿಧಾರಿಗಳು. ಇವರನ್ನೇ ಪ್ರವೇಶದ್ವಾರದಲ್ಲಿ ಇನ್‌ಸ್ಪೆಕ್ಟರ್ ಹರಿಸಿಂಗ್ `ಪೋರ್ಸ್~ನವರೆಂದು ಹೇಳಿದ್ದು. ಕಳೆದ ಎರಡು ದಶಕಗಳಿಂದ `ರಾಮ್‌ಲಲ್ಲಾ~ ಅಯೋಧ್ಯೆಯ ಒಳಗಡೆ ಈ `ಫೋರ್ಸ್~ನವರ  `ಬಂಧನ~ದಲ್ಲಿದ್ದಾನೆ. ರಾಮಜನ್ಮಭೂಮಿ ವಿವಾದ ಈಗ `ಹಾಲು ಬತ್ತಿಹೋದ ಬರಡು ಹಸು~.ಅವನನ್ನು ರಾಜಕೀಯವಾಗಿ ಬಳಸಿಕೊಂಡ ಭಾರತೀಯ ಜನತಾ ಪಕ್ಷಕ್ಕೂ ಈಗ ಶ್ರೆರಾಮ ಬೇಡದ ಕೂಸು. ಎಂದೂ ಜಾರಿಗೊಳ್ಳದ ಪಕ್ಷದ ಪ್ರಣಾಳಿಕೆಯಲ್ಲಿನ ಒಂದು ಅಂಶ ಅಷ್ಟೇ.


 ಹೀಗಿದ್ದರೂ ಹಾಲುಬತ್ತಿಹೋಗಿರುವ ಹಸುವಿನ ಕೆಚ್ಚಲಿನಲ್ಲಿ ಇದ್ದಷ್ಟು ಹಾಲು ಕರೆಯಲು ಹೊರಟ ಆಸೆಬುರುಕರಂತೆ `ರಾಮಜನ್ಮಭೂಮಿ~ ವಿವಾದವನ್ನು ಜೀವಂತವಾಗಿಡುವ ಹತಾಶ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ವಾರದ ಹಿಂದೆ ಇಲ್ಲಿಗೆ ಬಂದಿದ್ದ ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿ ರಾಮಮಂದಿರ ನಿರ್ಮಿಸುವ ತಮ್ಮ ಪಕ್ಷದ ಸಂಕಲ್ಪವನ್ನು ಪುನರುಚ್ಚರಿಸಿಹೋಗಿದ್ದಾರೆ. 1997ರಿಂದ ಹೆಚ್ಚುಕಡಿಮೆ ಮುಚ್ಚಿದ್ದ ಸ್ಥಿತಿಯಲ್ಲಿದ್ದ `ಶ್ರೆರಾಮ ಜನ್ಮಭೂಮಿ ಕಾರ್ಯಶಾಲೆ~ಯಲ್ಲಿ ಚುನಾವಣೆ ಘೋಷಣೆಯಾದ ದಿನದಿಂದ ಚಟುವಟಿಕೆ ಪ್ರಾರಂಭವಾಗಿದೆ.

ಇತ್ತೀಚೆಗಷ್ಟೇ ಹೊಸ ಸ್ಟೋನ್‌ಕಟ್ಟಿಂಗ್ ಯಂತ್ರಗಳು ಬಂದಿವೆ. ಇತ್ತೀಚೆಗಷ್ಟೇ ಬಂದಿರುವ ಕುಶಲಕರ್ಮಿಗಳು ಕೆಲಸದಲ್ಲಿ ತೊಡಗಿದ್ದಾರೆ. ದೇವಸ್ಥಾನ ನಿರ್ಮಾಣ ತಜ್ಞ ಅಹ್ಮದಾಬಾದ್‌ನ ಚಂದ್ರಕಾಂತ್ ಭಾಯಿ ಸೋಮಪುರ ವಿನ್ಯಾಸಗೊಳಿಸಿ ಮರದಿಂದ ತಯಾರಿಸಿದ್ದ ರಾಮಮಂದಿರ ಮಾದರಿ ಪ್ರದರ್ಶನಕ್ಕಿಡಲಾಗಿದೆ. ಅಮೃತಶಿಲೆಯ ಇನ್ನೊಂದು ಮಾದರಿ ಸಮೀಪದ `ಕರಸೇವಕುಪುರ~ದಲ್ಲಿದೆ. ಹೈಕೋರ್ಟ್ ತೀರ್ಪಿಗೆ  ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿರುವಾಗ ಅವಸರದಲ್ಲಿ ಮಂದಿರ ನಿರ್ಮಾಣ ಕೆಲಸವನ್ನು ಮತ್ತೆ ಪ್ರಾರಂಭಿಸಲು ಏನು ಕಾರಣ ಎಂದು ಕೇಳಿದರೆ ಅಲ್ಲಿ ಯಾರಲ್ಲಿಯೂ ಉತ್ತರ ಇಲ್ಲ.

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿ ಇಡೀ ಅಯೋಧ್ಯೆಯನ್ನು ಧಾರ್ಮಿಕ ಪ್ರವಾಸಿ ಕೇಂದ್ರವಾಗಿ ಅಭಿವೃದ್ದಿ ಪಡಿಸಲು ಆಗಿನ ಪ್ರವಾಸೋದ್ಯಮ ಸಚಿವ ಜಗಮೋಹನ್ ರೂಪಿಸಿದ್ದ 182 ಕೋಟಿ ರೂಪಾಯಿ ಅಂದಾಜುವೆಚ್ಚದ `ಅಯೋಧ್ಯೆ ಪ್ಯಾಕೇಜ್~ ಏನಾಯಿತೆಂದು ಮತ್ತೆ ರಾಮಮಂದಿರ ನಿರ್ಮಾಣ ಮಾಡಲು ಹೊರಟವರಿಗೂ ಗೊತ್ತಿಲ್ಲ. 1991ರಿಂದ ಸತತ ಐದು ಬಾರಿ ಅಯೋಧ್ಯೆ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಲಾಲುಸಿಂಗ್ ಕೂಡಾ ಎಲ್ಲಿಯೂ ಈ ಬಗ್ಗೆ ಮಾತನಾಡಿಲ್ಲ.


ಶ್ರೆರಾಮನನ್ನು ರಾಜಕಾರಣಿಗಳು `ಅಪಹರಣ~ ಮಾಡದಿದ್ದಿದ್ದರೆ ಅಯೋಧ್ಯೆಯನ್ನು ದೇಶದ ಅಪರೂಪದ `ದೇವಾಲಯಗಳ ನಗರ~ವಾಗಿ ಪುನರ್‌ನಿರ್ಮಾಣ ಮಾಡುವ ಅವಕಾಶಗಳಿದ್ದವು. ಇತ್ತೀಚಿನ ಎಣಿಕೆ ಮುಗಿದಾಗ ಅಯೋಧ್ಯೆಯಲ್ಲಿರುವ ಒಟ್ಟು ದೇವಾಲಯಗಳ ಸಂಖ್ಯೆ 743. ಇವುಗಳಿಗೆ ಹೊಂದಿಕೊಂಡಂತೆ ಧರ್ಮಶಾಲೆಗಳು, ಪ್ರಸಾದನಿಲಯಗಳಿವೆ. ಎಲ್ಲವೂ ಪಾಳುಬಿದ್ದ ಸ್ಥಿತಿಯಲ್ಲಿವೆ. ಸರಯೂ ನದಿ ದಂಡೆಯಲ್ಲಿ ಸುಮಾರು 10 ಕಿ.ಮೀ ಉದ್ದಕ್ಕೂ ಇರುವ ಘಾಟ್‌ಗಳದ್ದು ಕೂಡಾ ಇದೆ ದುಸ್ಥಿತಿ.

`ವಿವಾದಾತ್ಮಕ ಬಾಬ್ರಿಮಸೀದಿ-ರಾಮಜನ್ಮಭೂಮಿ ನಿವೇಶನವನ್ನು ಹಗಲು ರಾತ್ರಿ ಕಾಯಲು ಖರ್ಚುಮಾಡಿದ ಹಣವನ್ನು ಎಲ್ಲ ದೇವಾಲಯಗಳ ಸುಧಾರಣೆಗೆ ಬಳಸಿದ್ದರೆ ಈ ಊರು ಪ್ರವಾಸಿಕೇಂದ್ರವಾಗಿ ಬೆಳೆ ಯುತ್ತಿತ್ತು. ನಿರುದ್ಯೋಗಿಗಳಿಗೆ ಒಂದಷ್ಟು ಉದ್ಯೋಗವಾದರೂ ಸಿಗುತ್ತಿತ್ತು~ ಎಂದ ಸರಯೂ ನದಿ ದಂಡೆಯಲ್ಲಿ ಚಹಾ ಮಾರುತ್ತಿದ್ದ ಕರಣ್ ಸೊಂಕರ್ ಹೇಳುತ್ತಿದ್ದ.

ಈ ಮಾತನ್ನು ಅಟೋರಿಕ್ಷಾ ಓಡಿಸುವ ಬಷೀರ್ ಅಹ್ಮದ್‌ನಿಂದ ಹಿಡಿದು ಬಡಾ ಅಖಾಡದ ರಾಮಭಕ್ತ ಕೈಲಾಸ್‌ದಾಸ್‌ವರೆಗೆ ಎಲ್ಲರೂ ಒಪ್ಪುತ್ತಾರೆ. ಆದರೆ ಕೇಳುವವರು ಯಾರು? `ಈ ಬಾರಿ ಜನರಿಗೆಲ್ಲ ಇವರ ಆಟ ಗೊತ್ತಾಗಿದೆ. ಮೊನ್ನೆ ಅಡ್ವಾಣಿ ಬಂದಿದ್ದಾಗಲು ಜನ ಸೇರಿಲ್ಲ~ಎನ್ನುತ್ತಾರೆ ಫೈಜಾಬಾದ್ ಸಮಾಜವಾದಿ ಘಟಕದ ಅಧ್ಯಕ್ಷ ರಾಮ್‌ಪಾಲ್‌ಸಿಂಗ್. ಬಿಜೆಪಿ ಅಭ್ಯರ್ಥಿ ವಿರುದ್ದ ಎಸ್‌ಪಿ ಪವನ್ ಪಾಂಡೆ ಎಂಬ ಬ್ರಾಹ್ಮಣ ಯುವಕನನ್ನು ಕಣಕ್ಕಿಳಿಸಿದೆ. ಜನ ಮಾತಿನಲ್ಲಿ ಬಯಸುವ ಬದಲಾವಣೆಯನ್ನು ಮತದಾನದ ಮೂಲಕ ತರಬಹುದೇ?

ಇವೆಲ್ಲದರ ನಡುವೆ ಬಾಬ್ರಿಮಸೀದಿ ಧ್ವಂಸದ ಪ್ರಮುಖ ಪಾತ್ರಧಾರಿಯಾಗಿದ್ದ ಆಗಿನ ಮುಖ್ಯಮಂತ್ರಿ ಕಲ್ಯಾಣ್‌ಸಿಂಗ್ ಅವರೇ  ಮೊನ್ನೆ ಇಲ್ಲಿಗೆ ಬಂದು ಬಿಜೆಪಿ ವಿರುದ್ದ ಕಿಡಿಕಾರಿಹೋಗಿದ್ದಾರೆ. 2004ರ ಲೋಕಸಭಾಚುನಾವಣೆ ಮತ್ತು 2007ರ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಪಕ್ಷ ಕಟ್ಟಿ ಬಿಜೆಪಿ ವಿರುದ್ದ ಸೆಣೆಸಿದ್ದ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿಪಕ್ಷ ಜತೆ ಕೂಡಿಕೊಂಡಿದ್ದ ಕಲ್ಯಾಣ್‌ಸಿಂಗ್ ಈಗ ಮತ್ತೆ ತನ್ನ ಸ್ವಂತ ಪಕ್ಷಕ್ಕೆ ಮರಳಿದ್ದಾರೆ.

`ಬಾಬ್ರಿ ಮಸೀದಿ ಧ್ವಂಸದ  ಘಟನೆಯಲ್ಲಿ ನನ್ನನ್ನುಬಲಿಪಶು ಮಾಡಲಾಯಿತು. ಅವರು ನನ್ನನ್ನು ಬಳಸಿಕೊಂಡು ಬೀದಿಯಲ್ಲಿ ಹಾಕಿದರು~ ಎನ್ನುವುದು ಅವರ ಪ್ರಚಾರ ಭಾಷಣದ ಮುಖ್ಯಾಂಶ. ಶ್ರಿರಾಮನೇನಾದರೂ ಅವತಾರ ಎತ್ತಿಬಂದರೆ ಇದನ್ನೇ ಹೇಳಬಹುದೇನೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT