ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಷ್ಠ ಶಿಕ್ಷಣವೇ ಯಶಸ್ಸಿನ ಪಾಸ್‌ಪೋರ್ಟ್

Last Updated 16 ಜನವರಿ 2012, 5:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಜಾಗತೀಕರಣ ವ್ಯವಸ್ಥೆ ಯಿಂದ ಎಲ್ಲ ದೇಶಗಳ ಯುವಕರೂ ಸಮಾನ ಅವಕಾಶ ಗಿಟ್ಟಿಸಿದ್ದು, ಭಾರತೀಯ ಯುವ ಪೀಳಿಗೆಗೆ ಇಂತಹ ಜಾಗತಿಕ ಸವಾಲನ್ನು ಮೆಟ್ಟಿ ನಿಲ್ಲಲು ಶ್ರೇಷ್ಠ ಗುಣಮಟ್ಟದ ಶಿಕ್ಷಣವೊಂದೇ ಪಾಸ್ ಪೋರ್ಟ್ ಆಗಿದೆ~ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅಭಿಪ್ರಾಯ ಪಟ್ಟರು.

ದೇಶಪಾಂಡೆ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಯುವ ಸಮ್ಮೇಳನದಲ್ಲಿ `ಲೀಡ್~ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. `ಜಗತ್ತಿನಲ್ಲಿ ಅಗ್ಗವಾದ ಮೂಲಗಳಿಂದ ಬಂಡಾವಳ ಕ್ರೋಢೀಕರಿಸಿ, ಅತ್ಯುತ್ತಮ ಪ್ರತಿಭೆಗಳ ಸಹಾಯ ಪಡೆದು, ಯೋಗ್ಯವಾದ ವೆಚ್ಚದಲ್ಲಿ ಸರಕು ಉತ್ಪಾದನೆ ಮಾಡಿ, ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಗೆ ಮಾರಾಟ ಮಾಡುವುದೇ ಜಾಗತೀಕರಣ~ ಎಂದು ಅವರು ವ್ಯಾಖ್ಯಾನಿಸಿದರು.

`ಜಾಗತೀಕರಣದ ಲಾಭ ಪಡೆದ ಭಾರತ ಮತ್ತು ಚೀನಾ ದೇಶಗಳು ನಾಳೆಯೇ ಇಲ್ಲವೇನೋ ಎಂಬ ಆತುರದಲ್ಲಿ ಉನ್ನತ ಶಿಕ್ಷಣಕ್ಕೆ ಒತ್ತು ನೀಡಿ ಬೆಳೆಸಿವೆ. ಅದರ ಪರಿಣಾಮವೇ ಚೀನಾ ಪ್ರಪಂಚದ ಫ್ಯಾಕ್ಟರಿಯಾಗಿ ಮಾರ್ಪಟ್ಟರೆ, ಭಾರತ ಜಗತ್ತಿನ ಸಾಫ್ಟ್‌ವೇರ್ ಹಬ್ ಎನಿಸಿದೆ~ ಎಂದು ಅವರು ತಿಳಿಸಿದರು.

`ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವ, ಪಾರದರ್ಶಕ ವ್ಯಕ್ತಿತ್ವ, ಅಚಲ ಆತ್ಮವಿಶ್ವಾಸ ಯಶಸ್ಸಿನ ಕೀಲಿಕೈಗಳಾಗಿವೆ~ ಎಂದ ಅವರು, `ಜಾಗತಿಕ ಅಗತ್ಯಕ್ಕೆ ಸ್ಪಂದಿಸುವ ಗುಣ ಬೆಳೆಸಿಕೊಂಡರೆ ಗೆಲುವು ಸುಲಭ~ ಎಂದು ವಿಶ್ಲೇಷಿಸಿದರು.

`ಪ್ರಪಂಚದಲ್ಲಿ ಧರ್ಮ-ಧರ್ಮಗಳ ಮಧ್ಯೆ ಕಂದರ ಹೆಚ್ಚಿಸುವ ಪ್ರಯತ್ನಗಳು ನಡೆದಿದ್ದು, ಒಬ್ಬರ ಮೇಲೆ ಇನ್ನೊಬ್ಬರಿಗೆ ನಂಬಿಕೆಯೇ ಇಲ್ಲವಾಗಿದೆ. ಕೋಮು ದ್ವೇಷದಿಂದ ಎಂದಿಗೂ ಬೆಳವಣಿಗೆ ಸಾಧ್ಯವಿಲ್ಲ. ಯುವ ಪೀಳಿಗೆ ನೈಜ ಜಾತ್ಯತೀತ ಮನೋಭಾವ ತಾಳಬೇಕು. ಜಗತ್ತಿನ ಎಲ್ಲ ದೇಶ ಹಾಗೂ ಸಮುದಾಯಗಳ ಜನರನ್ನು ಪ್ರೀತಿ-ಗೌರವದಿಂದ ಕಾಣಬೇಕು. ಸಮಾಜದೊಂದಿಗೆ ಒಟ್ಟಾಗಿ ಬೆಳೆಯಬೇಕು~ ಎಂದು ಅವರು ಸಲಹೆ ನೀಡಿದರು.

`ಹೆಚ್ಚುತ್ತಿರುವ ತಾಪಮಾನ ಹಾಗೂ ಹವಾಮಾನ ವೈಪರೀತ್ಯ ಜಗತ್ತು ಎದುರಿಸುತ್ತಿರುವ ಅತ್ಯಂತ ಕ್ಲಿಷ್ಟವಾದ ಸಮಸ್ಯೆಯಾಗಿದ್ದು, ಮಾನವ ಕುಲಕ್ಕೆ ಇರುವುದೊಂದೇ ಭೂಮಿ ಎಂಬುದನ್ನು ಯಾರೂ ಮರೆಯಬಾರದು~ ಎಂದು  ಅವರು ತಿಳಿಸಿದರು. `ವಾತಾವರಣಕ್ಕೆ ಇಂಗಾಲ ಸೇರ್ಪಡೆ ಆಗದಂತೆ ನಮ್ಮಿಂದ ಸಾಧ್ಯವಾದ ಮಟ್ಟಿಗೆ ಪ್ರಯತ್ನ ಮಾಡಬೇಕು~ ಎಂದು ನಾರಾಯಣಮೂರ್ತಿ ಕಿವಿಮಾತು ಹೇಳಿದರು.

`ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಮ್ಮ ದೇಶ, ಒಂದೆಡೆ ಪ್ರಕಾಶಿಸುತ್ತಿದ್ದರೆ, ಇನ್ನೊಂದೆಡೆ ತೀರಾ ಶೋಚನೀಯ ಸ್ಥಿತಿಯಲ್ಲಿದೆ. ಇಂತಹ ಭಾರತ ಯಾರಿಗೂ ಕಡಿಮೆ ಅಲ್ಲ ಎನ್ನುವಂತೆ ಬೆಳೆಯಲು ಯುವಕರ ಪರಿಶ್ರಮವೇ ಮುಖ್ಯವಾಗಿದೆ~ ಎಂದು ಅವರು ತಿಳಿಸಿದರು.

ಅತಿಥಿಯಾಗಿದ್ದ ಬ್ರುನ್ಸ್‌ವಿಕ್ ವಿಶ್ವವಿದ್ಯಾಲಯದ ಅಧ್ಯಕ್ಷ ಡಾ. ಎಡಿ ಕ್ಯಾಂಬೆಲ್ ಮಾತನಾಡಿ, `ನಮ್ಮ ವಿವಿಯಲ್ಲಿ ದೇಶಪಾಂಡೆ ಪ್ರತಿಷ್ಠಾನದ ಕೇಂದ್ರ ತೆರೆಯಲಾಗುವುದು~ ಎಂದು ಹೇಳಿದರು.

ಅರಿಜೋನಾ ವಿಶ್ವವಿದ್ಯಾಲಯದ ಕಿಂಬರ್ಲಿ, ಗುರುರಾಜ ದೇಶಪಾಂಡೆ, ಜಯಶ್ರೀ ದೇಶಪಾಂಡೆ ಮತ್ತು ನವೀನ್ ಝಾ ವೇದಿಕೆ ಮೇಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT