ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಗೆ ಹಣದುಬ್ಬರ ಭೀತಿ

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸೆಪ್ಟೆಂಬರ್‌ನಲ್ಲಿನ ಹಣದುಬ್ಬರ ಅಂಕಿ-ಅಂಶ ಹೊರಬೀಳಲಿರುವುದು, ರಿಲಯನ್ಸ್ ಇಂಡಸ್ಟ್ರೀಸ್ ಸೇರಿದಂತೆ ಕೆಲವು ಪ್ರಮುಖ ಕಂಪೆನಿಗಳು 2ನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ಈ ವಾರ ಷೇರುಪೇಟೆಯಲ್ಲಿ ಹಠಾತ್ ದಿಕ್ಕುಬದಲಿಸುವಂತಹ ವಹಿವಾಟು ನಡೆಯುವುದು ನಿರೀಕ್ಷಿತ ಎಂದು ಷೇರುಪೇಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.

`ಹಣದುಬ್ಬರ ದರ ಸೋಮವಾರ ಪ್ರಕಟಗೊಳ್ಳಲಿದೆ. ಈ ವಿಚಾರದತ್ತಲೇ ಹೂಡಿಕೆದಾರರ ಕಣ್ಣು ನೆಟ್ಟಿದ್ದು, ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿನ ಹಣದುಬ್ಬರ ಹಿಂದಿನ ತಿಂಗಳಿಗಿಂತ ಹೆಚ್ಚೇ ಇರಲಿದೆ ಎಂಬ ಅಂದಾಜೂ ಇದೆ. ಈ  ಕಳವಳಕಾರಿ ಅಂಕಿ-ಅಂಶವೂ ಅಕ್ಟೋಬರ್ 30ರಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಲಿರುವ `2ನೇ ತ್ರೈಮಾಸಿಕ ಹಣಕಾಸು ನಿಯಂತ್ರಣ ನೀತಿಯ ಪರಾಮರ್ಶೆ~ ಮೇಲೆಯೂ ಪರಿಣಾಮ ಬೀರಲಿದೆ.

ಜತೆಗೆ ಹಲವು ಕಂಪೆನಿಗಳು 2ನೇ ತ್ರೈಮಾಸಿಕ ಲೆಕ್ಕಪತ್ರವನ್ನೂ ಇದೇ ವಾರ ಪ್ರಕಟಿಸಲಿವೆ. ಇದೆಲ್ಲವೂ ಕಂಡಿತಾ ಷೇರುಪೇಟೆಯ ವಹಿವಾಟು ದಿಕ್ಕನ್ನು ನಿರ್ಧರಿಸಲಿದೆ~ ಎನ್ನುತ್ತಾರೆ ಷೇರುಪೇಟೆ ತಜ್ಞ, `ಬೊನಾಂಜಾ ಪೋರ್ಟ್‌ಫೋಲಿಯೊ~ದ ಉಪಾಧ್ಯಕ್ಷ ರಾಕೇಶ್ ಗೋಯಲ್.

`ಸಗಟು ಧಾರಣೆ ಸೂಚ್ಯಂಕ~ ಆಗಸ್ಟ್‌ನಲ್ಲಿ ಶೇ 7.55ರಷ್ಟಿದ್ದಿತು. ಸೆಪ್ಟೆಂಬರ್‌ನದು ಏನಿದ್ದರೂ ಶೇ 7.87ಕ್ಕೆ ಏರಿರುತ್ತದೆ~ ಎಂದು `ನಮುರಾ ಇಂಡಿಯಾ~ ಸಂಸ್ಥೆ ಅಂದಾಜು ಮಾಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ 2ನೇ ತ್ರೈಮಾಸಿಕ ಲೆಕ್ಕಪತ್ರವನ್ನು ಸೋಮವಾರ ಪ್ರಕಟಿಸಲಿದೆ. ಇದು ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಪ್ರಮುಖ 30 ಷೇರುಗಳ ಸಂವೇದಿ ಸೂಚ್ಯಂಕದ ಮೇಲೆ ಕಂಡಿತಾ ಪರಿಣಾಮ ಬೀರುತ್ತದೆ. ಜತೆಗೆ ಆಕ್ಸಿಸ್ ಬ್ಯಾಂಕ್(ಅ. 15), ಎಚ್‌ಸಿಎಲ್ ಟೆಕ್ನಾಲಜೀಸ್(ಅ. 17), ಎಸಿಸಿ, ಅಂಬುಜಾ ಸಿಮೆಂಟ್(ಅ. 18), ಐಟಿಸಿ, ಟಿಸಿಎಸ್(ಅ. 19), ಬಜಾಜ್ ಆಟೊ, ಅಲ್ಟ್ರಾಟೆಕ್ ಸಿಮೆಂಟ್(ಅ. 20) ಸಹ ಫಲಿತಾಂಶ ಪ್ರಕಟಿಸಲಿವೆ. ಇದೆಲ್ಲವೂ ಈ ವಾರದ ಷೇರುಪೇಟೆ ಸಾಗಲಿರುವ ದಿಕ್ಕನ್ನು ಬದಲಿಸಲಿವೆ ಎಂದೂ ತಜ್ಞರು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT