ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ನವೋತ್ಸಾಹ

Last Updated 26 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಮುಂಬೈ ಷೇರುಪೇಟೆಯಲ್ಲಿ ಇತ್ತೀಚಿನ  ದಿನಗಳಲ್ಲಿನ ವಹಿವಾಟು ದಿನಕ್ಕೊಂದು ಹೊಸ ದಾಖಲೆ ಬರೆಯುವ ಮೂಲಕ ಅಚ್ಚರಿ ಮೂಡಿಸಿದೆ. ಬುಧವಾರವೂ ಸಂವೇದಿ ಸೂಚ್ಯಂಕವು ಇದುವರೆಗಿನ ದಾಖಲೆಗಳನ್ನೆಲ್ಲ ಅಳಿಸಿ ಹಾಕಿ ಹೊಸ ಇತಿಹಾಸ ಬರೆದಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಪೇಟೆ­ಯಲ್ಲಿ ನಿರಂತರವಾಗಿ ಹಣ ತಂದು ಸುರಿಯುತ್ತಿರುವುದರಿಂದ ಸೂಚ್ಯಂಕ ಜಿಗಿತ ಕಾಣುತ್ತಿದೆ.

 ದೇಶಿ ಅರ್ಥ ವ್ಯವಸ್ಥೆಯ ನಾಡಿಮಿಡಿತ ಎಂದೇ ಪರಿಗಣಿಸಲಾಗುವ ಷೇರು ವಹಿವಾಟು ಈಗ ಓಡುಗತಿಯಲ್ಲಿ ಇದೆ. ಜಾಗತಿಕ ಹಣಕಾಸು ಮಾರುಕಟ್ಟೆ­ಯಲ್ಲಿನ ಸಕಾ­ರಾತ್ಮಕ ಬೆಳವಣಿಗೆಗಳು, ಸ್ಥಳೀಯವಾಗಿ ಹಣದುಬ್ಬರ ಪರಿಸ್ಥಿತಿ ತಿಳಿಗೊಳ್ಳುತ್ತಿ­ರುವುದು ಮತ್ತು ದೇಶಿ ಅರ್ಥ ವ್ಯವಸ್ಥೆಯು ಶೀಘ್ರದಲ್ಲಿಯೇ ಇನ್ನಷ್ಟು ಚೇತರಿಕೆಯ ಹಾದಿಗೆ ಮರಳುವುದಕ್ಕೆ ಸಂಬಂಧಿಸಿದ ಆಶಾವಾದವು  ಷೇರುಗಳ ಖರೀದಿ ಭರಾಟೆಗೆ ಇನ್ನಿಲ್ಲದ ಉತ್ತೇಜನ ನೀಡುತ್ತಿದೆ.

ಸ್ಥಳೀಯ ಮತ್ತು ಬಾಹ್ಯ ಆರ್ಥಿಕ ವಿದ್ಯಮಾನಗಳ ಫಲವಾಗಿ ಪೇಟೆಯಲ್ಲಿ ದೇಶಿ – ವಿದೇಶಿ  ಹೂಡಿಕೆದಾರರ ವಿಶ್ವಾಸ ಹೆಚ್ಚಿರುವುದು ಇದರಿಂದ ಸ್ಪಷ್ಟಗೊಳ್ಳು­ತ್ತದೆ. ಮಾರ್ಚ್ ತಿಂಗಳಿನಿಂದೀಚೆಗೆ ಸಾಗರೋತ್ತರ ಹೂಡಿಕೆದಾರರು 3.5 ಶತಕೋಟಿ ಡಾಲರ್‌ಗಳಷ್ಟು (ಅಂದಾಜು ₨ 21 ಸಾವಿರ ಕೋಟಿ) ಬಂಡವಾಳವನ್ನು ಸ್ಥಳೀಯ ಷೇರುಗಳ ಖರೀದಿಯಲ್ಲಿ ತೊಡಗಿಸಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಪೇಟೆಯಿಂದ ಭಾರಿ ಪ್ರಮಾಣದಲ್ಲಿ ಬಂಡವಾಳ ವಾಪಸ್‌ ಪಡೆದುಕೊಂಡಿದ್ದ  ‘ಎಫ್‌ಐಐ’ಗಳ ಪಾಲಿಗೆ ಭಾರತ ಮತ್ತೆ ಅಚ್ಚುಮೆಚ್ಚಿನ ಹೂಡಿಕೆ ತಾಣವಾಗಿರುವುದು ಆಸಕ್ತಿದಾಯಕ ಬೆಳವಣಿಗೆಯಾಗಿದೆ.

ಚೇತೋಹಾರಿಯಾದ ವಿದೇಶಿ ವಿನಿಮಯ ಪರಿಸ್ಥಿತಿ, ಸ್ಥಿರಗೊಂಡ ರೂಪಾಯಿ ಮೌಲ್ಯ, ನಾಟಕೀಯವಾಗಿ ಸುಧಾರಿಸಿದ ಚಾಲ್ತಿ ಖಾತೆ ಪರಿಸ್ಥಿತಿ ಅಂತರ­ರಾಷ್ಟ್ರೀಯ ನಿಧಿಗಳು ದೇಶಿ ಅರ್ಥ ವ್ಯವಸ್ಥೆ ಬಗ್ಗೆ ತಳೆದಿರುವ  ಸಕಾರಾತ್ಮಕ ನಿಲುವು ಮತ್ತಿತರ ಕಾರಣಗಳಿಗೆ ಷೇರುಪೇಟೆಗೆ ವಿದೇಶಿ ಬಂಡವಾಳ ಗಮನಾರ್ಹವಾಗಿ ಹರಿದು ಬರುತ್ತಿದೆ. ಸಾರ್ವತ್ರಿಕ ಚುನಾವಣೆ ಹೊತ್ತಿನಲ್ಲಿ ಷೇರುಪೇಟೆ­ಯಲ್ಲಿನ ಈ  ಅಕಾಲಿಕ ‘ದೀಪಾವಳಿ’ ಸಂಭ್ರಮಕ್ಕೆ ರಾಜಕೀಯ ಬಣ್ಣ ಬೆಸೆದುಕೊಂಡಿದೆ ಎಂಬುದು ನಿಜ. ಚುನಾವಣೆ ಪೂರ್ವದಲ್ಲಿ ಇಂತಹ ಏರಿಕೆ ಹೊಸತೇನೂ ಅಲ್ಲ.

‘ಉದ್ಯಮಿ ಸ್ನೇಹಿ’ ಎಂದೇ ಮಾಧ್ಯಮಗಳಲ್ಲಿ ಬಿಂಬಿತ­ರಾಗಿರುವ  ನರೇಂದ್ರ ಮೋದಿ ಅವರು, ಕೇಂದ್ರ­ದಲ್ಲಿ ಹೊಸ ಸರ್ಕಾರ ರಚಿಸಲಿದ್ದಾರೆ ಎನ್ನುವ ಆಶಾವಾದ ಪೇಟೆ­ಯಲ್ಲಿನ  ಗೂಳಿಯ ನಾಗಾ­ಲೋಟಕ್ಕೆ ಕಾರಣ­ವಾಗಿದೆ. ಪೇಟೆಯ ಮೇಲೆ ರಾಜಕೀಯ ಸ್ಥಿರತೆ, ಸರ್ಕಾರವೊಂದರ ಆರ್ಥಿಕ ನೀತಿಗಳು ಪ್ರಭಾವ ಬೀರುವುದು ನಿಜವಾದರೂ ಅರ್ಥ ವ್ಯವಸ್ಥೆಯೊಂದರ ಮೂಲಾಧಾರಗಳನ್ನೆಲ್ಲ ಆಧರಿಸಿದ ಪೇಟೆಯ ವಹಿವಾಟು ಬರೀ ‘ನಮೋ ಮಂತ್ರ’ ಜಪಿಸುತ್ತಿದ್ದಕ್ಕೆ ಈ ಪರಿ ಸಂಭ್ರಮಿಸುತ್ತಿದೆ ಎಂದೂ ಅನೇಕರು ಭಾವಿಸಿದ್ದಾರೆ. ಷೇರು ವಹಿವಾಟು ಯಾವಾಗಲೂ ತೀವ್ರ ಏರಿಳಿತದಿಂದ ಕೂಡಿರುತ್ತದೆ. 

ಇಂತಹ ಸಂದರ್ಭದಲ್ಲಿ ಹೂಡಿಕೆದಾರರು ಎಚ್ಚರದಿಂದ ಇರಲು ಮರೆಯಬಾರದು. ಸದ್ಯಕ್ಕೆ ಕೈಯಲ್ಲಿನ ಕೆಲ ಷೇರುಗಳನ್ನು ಮಾರಿ ಸಾಕಷ್ಟು ಲಾಭ ಮಾಡಿಕೊಂಡು, ವಹಿವಾಟು ಸ್ಥಿರಗೊಂಡಾಗ ಖರೀದಿಸಲೂಬಹುದು. ಚುನಾವಣಾ ಫಲಿತಾಂಶ ಏನಾದರೂ ಆಗಬಹುದು. ಅನಿಶ್ಚಿತ ಫಲಿತಾಂಶ ಬದಲಿಗೆ ನಿರ್ದಿಷ್ಟ ಮೈತ್ರಿಕೂಟಕ್ಕೆ ಸ್ಪಷ್ಟ ಜನಾದೇಶ ಬಂದರೆ ಷೇರುಪೇಟೆಯಲ್ಲಿ ಇನ್ನಷ್ಟು ಉತ್ಸಾಹ ಕಂಡು ಬರಬಹುದು. ಅತಂತ್ರ ಸಂಸತ್ತು  ನಿರ್ಮಾಣವಾದರೆ ರಾಜಕೀಯ ಅನಿಶ್ಚಿತತೆ ತಲೆದೋರಿ ಪೇಟೆಯ ವಹಿವಾಟು ಜರ್ರನೆ ಇಳಿಯ­ಲೂಬಹುದು. ಅಂತಹ ಸಾಧ್ಯತೆಗಳನ್ನೆಲ್ಲ ಪರಿಗಣಿಸಿಯೇ ಸಾಮಾನ್ಯ ಹೂಡಿಕೆದಾರರು ವಹಿವಾಟು ನಡೆಸಿದರೆ ಕೈಸುಟ್ಟುಕೊಳ್ಳುವ ಅಪಾಯದಿಂದ ಪಾರಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT