ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಿರಣದಲ್ಲಿ ಮೆರೆದ ನಾಯಕಿ ನಾಯಕರು

Last Updated 31 ಜುಲೈ 2012, 19:30 IST
ಅಕ್ಷರ ಗಾತ್ರ

ಕಳೆದ ಭಾನುವಾರ ಮಧ್ಯಾಹ್ನ ಎಡಿಎ ರಂಗಮಂದಿರದಲ್ಲಿ ನಡೆದ ಚಿತ್ತಾಕರ್ಷಕ ಹಾಗೂ ಜ್ಞಾನವರ್ಧಕ ವಿಚಾರ ಸಂಕಿರಣ-ಪ್ರಾತ್ಯಕ್ಷಿಕೆಗಳಲ್ಲಿ ಅಷ್ಟ ನಾಯಕಿಯರು ಮತ್ತು ಚತುರ್‌ನಾಯಕರು ಜೀವಂತಗೊಂಡು ನೃತ್ಯ ಪ್ರೇಮಿಗಳನ್ನು ಮೋಹಿಸಿದರು.

ಕೇಶವ ಸಂಗೀತ ಮತ್ತು ನೃತ್ಯ ಕಾಲೇಜು ಮತ್ತು ಕೇಶವ ನೃತ್ಯಶಾಲೆಯ ಜಂಟಿ ಆಯೋಜನೆಯಲ್ಲಿ ನಾಟ್ಯಾಚಾರ್ಯರಾಗಿದ್ದ ಎಚ್.ಆರ್. ಕೇಶವಮೂರ್ತಿಗಳ ಸ್ಮರಣಾರ್ಥ ನಡೆದ ಸಂಕೀರ್ಣದಲ್ಲಿ ನಾಡಿನ ಹಿರಿಯ ನೃತ್ಯ ಗುರುಗಳು ಭಾಗವಹಿಸಿದ್ದರು. ಶಾಸ್ತ್ರೀಯ ನೃತ್ಯ ಪ್ರಕಾರಗಳ ಬಹು ಮುಖ್ಯವಾದ ಅಂಗವಾಗಿರುವ ನಾಯಕಿ-ನಾಯಕ ಭೇದದ ಮೇಲೆ ಬೆಳಕು ಬೀರಿದರು.

ಶಾಸ್ತ್ರೀಯ ನೃತ್ಯಕ್ಕೆ ಸಂಬಂಧಿಸಿದ ಆಕರ ಗ್ರಂಥಗಳ ಪ್ರಕಾರ ಅಷ್ಟ ನಾಯಕಿಯರು ಮತ್ತು ನಾಯಕರ ವೈವಿಧ್ಯವು ಅವರ ಧೋರಣೆಗಳು, ಮಾನಸಿಕ ಪ್ರಕೃತಿಗಳು, ಅಭ್ಯಾಸಗಳು, ವರ್ತನೆ ಹಾಗೂ ಸ್ಥಿತಿಗತಿಗಳಿಗೆ ಅನುಸಾರವಾಗಿ ಮೂಡಿದೆ. ಕಲಾ ಬಂಧಗಳ ಪ್ರಕಾರಗಳಲ್ಲಿ ಪ್ರಮುಖವಾಗಿರುವ ಪದ ಮತ್ತು ಜಾವಳಿಗಳು ನಾಯಕಿ ಮತ್ತು ನಾಯಕ ವಸ್ತುವಿನ ವಾಹಕಗಳಾಗಿವೆ.

ಅಧ್ಯಾತ್ಮ, ಭಕ್ತಿ ಮತ್ತು ಕಲಾತ್ಮಕ ದೃಷ್ಟಿಕೋನಗಳಿಂದಲೂ ಸಹ ಮಹತ್ವಪೂರ್ಣವಾಗಿವೆ. ಕುಳಿತು ಅಭಿನಯ ಮಾಡುವುದು ಮೈಸೂರು ಶೈಲಿಯ ಭರತನಾಟ್ಯದ ವೈಶಿಷ್ಟ್ಯಗಳಲ್ಲಿ ಒಂದು. ನೃತ್ಯ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ತಂತ್ರಾತ್ಮಕವಾದ ನೃತ್ತಕ್ಕೇ ಹೆಚ್ಚಿನ ಪ್ರಾಶಸ್ತ್ಯ ದೊರಕುತ್ತಿದೆಯೇನೋ ಎಂಬ ಆತಂಕ ಕಾಡುತ್ತಿರುವ ಸಂದರ್ಭದಲ್ಲಿ ಪದ ಮತ್ತು ಜಾವಳಿಗಳ ಮಹತ್ವವನ್ನು ಜಾಹೀರುಗೊಳಿಸುವುದಕ್ಕಾಗಿ ನಡೆದ ಸಂಕಿರಣ ಇದಾಗಿತ್ತು. ಹಿರಿಯ ಗಾಯಕಿ ಡಾ. ಸುಕನ್ಯಾ ಪ್ರಭಾಕರ್ ಅವರ ಸೋದಾಹರಣ ಗಾಯನದೊಂದಿಗೆ ಆರಂಭವಾಯಿತು.

ಮಾಹಿತಿಪೂರ್ಣ ಭಾಷಣ
ಹಿಂದಿನ ಮೈಸೂರು ಸಂಸ್ಥಾನದ ಪದ ಮತ್ತು ಜಾವಳಿಗಳ ರಚನಾಕಾರರ ಕೊಡುಗೆಯನ್ನು ಅವರು ದಾಖಲಿಸಿದರು. ಅಂದಿನ ಮಹಾರಾಜರುಗಳೂ ಸಹ ಉತ್ಕೃಷ್ಟ ವಾಗ್ಗೇಯಕಾರರಾಗಿ ಮೆರೆದಿರುವುದು ಗಮನಾರ್ಹ. ಹರಿದಾಸ ಸಾಹಿತ್ಯ ಮತ್ತು ಶರಣ ಸಾಹಿತ್ಯವನ್ನು ಪದ ಮತ್ತು ಜಾವಳಿಗಳ ಪ್ರೇರಣಾ ಸ್ರೋತವೆಂದು ಅವರು ತಿಳಿಸಿದರು. ಕನ್ನಡದಲ್ಲಿ 200ಕ್ಕೂ ಹೆಚ್ಚಿನ ಜಾವಳಿಗಳು ಇವೆ.

ವೆಂಕಟರಾಮಯ್ಯ, ರಾಮಣ್ಣ ಮುಂತಾದವರ ಹೆಸರುಗಳನ್ನು ಪ್ರಸ್ತಾಪಿಸಿ ವಿವಿಧ ದಾಸರ ರಚನೆಗಳನ್ನು ಹಾಡಿ ತೋರಿಸಿದರು. ಸದ್ದು ಮಾಡಬೇಡವೋ (ಶ್ರೀಪಾದದಾಸರು), ಕಾಣದೆ ನಿಲ್ಲಲಾರೆ (ವ್ಯಾಸರು), ರಂಗಬಾರನೇ (ವಾದಿರಾಜರು) ಇತ್ಯಾದಿಗಳ ಗಾಯನ ಹೃದಯಂಗಮವಾಗಿತ್ತು.
 
ಇದೇ ನಿಟ್ಟಿನಲ್ಲಿ ಚಿಕ್ಕ ವೀರರಾಜೇಂದ್ರ (ಭಾವವೆಂದ), ಕಂಠೀರವ ನರಸಿಂಹರಾಜ ಒಡೆರ್ (ಏನೇ ಭಾಮಿನಿ), ಮುಮ್ಮಡಿ ಕಷ್ಣರಾಜ ಒಡೆಯರ್ (ಮುನಿಸೇತಕೆ ಬೇಗ ಬಾರೆ), ಅಳಿಯ ಲಿಂಗರಾಜ ಅರಸ್ (ಸೈರಿಸು ಸೈರಿಸು ರಮಣಿ) ಮುಂತಾದ ಆಳರಸರ ರಚನಾ ಕೌಶಲ್ಯವನ್ನು ಅವರು ಬಣ್ಣಿಸಿದರು. ಒಂದು ಕನ್ನಡ ಮತ್ತು ಮೂರು ತೆಲುಗು ಜಾವಳಿಗಳನ್ನು ರಚಿಸಿರುವ ವೀಣಾ ಪದ್ಮನಾಭಯ್ಯನವರ ವಿಶೇಷತೆಯನ್ನು ವರ್ಣಿಸಿ ಸುರುಟಿ ರಾಗದ ವಿಪುಲ ಸಂಚಾರಗಳನ್ನು ಹೊಂದಿರುವ ವದ್ದಂಟೆ ಕೋಪಮಾ ಮುತ್ತು ಜಾವಳಿಯನ್ನು ಅವರು ಹಾಡಿದ ಪರಿ ರೋಮಾಂಚಕವಾಗಿತ್ತು.

ಜೀವಂತಗೊಂಡ ನಾಯಕಿಯರು
ಕೂಚಿಪುಡಿ ವಿದ್ವಾಂಸರೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರೂ ಆದ ವೈಜಯಂತಿಕಾಶಿ ಅವರು ಸ್ವಾಧೀನಪತಿತ ನಾಯಕಿಯನ್ನು ಧರ್ಮಪುರಿಯವರ ಸ್ಮರಸುಂದರಾಂಗ ಪದದ ಮೂಲಕ ಚಿತ್ರಿಸಿದರು. ಮಗಳು ಪ್ರತೀಕ್ಷಾ ಕಾಶಿ (ನಟುವಾಂಗ) ಮತ್ತು ಅಕ್ಷತಾ (ಗಾಯನ) ಸಹಕಾರವಿತ್ತರು. ಅವರ ಸಾತ್ವಿಕಾಭಿನಯ ಮತ್ತು ವಾಚಿಕಾಭಿನಯದ ಪ್ರಚುರತೆ ಅರ್ಥಪೂರ್ಣವಾಗಿತ್ತು.

ಹಿರಿಯ ನರ್ತಕಿ ಹಾಗೂ ಬೋಧಕಿ  ಶೀಲಾ ಚಂದ್ರಶೇಖರ್, ತನ್ನ ನಾಯಕನೊಡನೆ ಜಗಳವಾಡಿ ನಂತರ ಪಶ್ಚಾತ್ತಾಪಪಡುವ ನಾಯಕಿಯ ಪ್ರಬುದ್ಧ ಚಿತ್ರಣವನ್ನು ಪ್ರಸ್ತುತಪಡಿಸಿದರು. ಸುಬ್ಬರಾಮಯ್ಯರ್ ಅವರ ತೋಡಿ ಎನ್‌ತೋಡಿ (ಕಾಮವರ್ಧಿನಿ) ರಚನೆಯನ್ನು ಆಧರಿಸಿ ಮಾಡಿದ ಅವರ ಅಭಿನಯ ಇಷ್ಟವಾಯಿತು.
 
ತನ್ನ ಪ್ರಿಯಕರನಿಗಾಗಿ ಅಲಂಕೃತಗೊಂಡು ಸಿದ್ಧಳಾಗುವ ವಾಸಕಸಜ್ಜಿಕಾ ನಾಯಕಿಯನ್ನು ತಮ್ಮ ನಟನೆಯಲ್ಲಿ ಗುರು ರೇವತೀ ನರಸಿಂಹನ್ ಅವರ ಶಿಷ್ಯೆ ವನಿತಾ ಅವರು ಸೊಗಸಾಗಿ ಹಿಡಿದಿಟ್ಟರು. ದ್ವಾರಕೀ ಕೃಷ್ಣಸ್ವಾಮಿ ಅವರ ಕನ್ನಡ ಜಾವಳಿ `ಮರುಳಾಗಿದೆ ನಾನು~ (ಕಲ್ಯಾಣಿ)ಯ ಸಾರವನ್ನು ಅವರು ನಿರೂಪಿಸಿದರು. ಮಗಳು ರಾಜಲಕ್ಮ್ಮಿ (ನಟುವಾಂಗ), ಶ್ರೀವತ್ಸ (ಗಾಯನ) ಮತ್ತು ನಾರಾಯಣಸ್ವಾಮಿ (ಮೃದಂಗ) ಅವರ ಪಕ್ಕವಾದ್ಯ ಸಹಕಾರವಿತ್ತು.

ವಿಚಾರ ಸಂಕಿರಣದ ರೂವಾರಿ ಗುರು ಬಿ.ಕೆ. ಶಾಂಪ್ರಕಾಶ್ ತಮ್ಮ ಶಿಷ್ಯೆ ಪದ್ಮಜಾ ಅವರ ಮುಖಾಂತರ ವಿರಹೋತ್ಕಂಠಿತ ನಾಯಕಿಯ ಗುಣವಿಶೇಷಗಳನ್ನು ಪ್ರಕಟಗೊಳಿಸಿದರು. ಯದುಕುಲಕಾಂಭೋಜಿ ರಾಗದ ತಾಮರಸಾಕ್ಷ ಪದಾಭಿನಯದಲ್ಲಿ ಪದ್ಮಜಾ ಅವರಿಗೆ ಪೂರ್ಣಾಂಕಗಳು ಸಂದವು. ಹಿರಿಯ ಗುರು ಭವಾನಿ ರಾಮನಾಥ್ ಅವರು ಮಧುವಂತಿ ರಾಗದ ಮಾರ ಚೆಲುವನು ಮನೆಗೆ ಬಾರನೋ ರಚನೆಯನ್ನು ಆಯ್ದುಕೊಂಡು ತಮ್ಮ ಮಗಳು, ಅಭಿನೇತ್ರಿ ಅಕ್ಷತಾ ರಾಮನಾಥ್ ಅವರ ಅಭಿನಯದಲ್ಲಿ ವಿಪ್ರಲಬ್ಧ ನಾಯಕಿಯ ಲಕ್ಷಣಗಳನ್ನು ತೆರೆದಿಟ್ಟರು.

ಗುರು ಬಿ.ಕೆ. ವಸಂತಲಕ್ಷ್ಮಿ ಅವರ ನೃತ್ಯ ಸಂಯೋಜನೆಯಲ್ಲಿ ಅವರ ಮಗಳು ವಿದ್ಯಾ ವೆಂಕಟರಾಂ ನಾಯಕಿಯೇ ಆಗಿ ವರ್ತಿಸಿದರು. ಇಂದೆಂದು ವಚ್ಚಿತಿವಿರಾ (ಸುರುಟಿ)ದ ಆಶಯವನ್ನು ಸಂವಹಿಸಿದ್ದು ಪರಿಣಾಮಕಾರಿಯಾಗಿತ್ತು.

ಕಲಾತ್ಮಕ ಅಭಿನಯದಲ್ಲಿ ಗುರು ಲಲಿತಾ ಶ್ರೀನಿವಾಸನ್ ಅವರ ಶಿಷ್ಯೆ ಸುನೀತಾ ಶಾಸ್ತ್ರಿ ಪ್ರೋಷಿತ್‌ಪತಿತ ನಾಯಕಿವನ್ನು ದರ್ಶಿಸಿದರು. ಅಮರು ಶತಕದ ಶ್ಲೋಕದ ಹಿನ್ನುಡಿಯ ಸಾವೇರಿ ರಾಗದ ಏಮೋ ತೆಲಿಯದು ಪದಾಭಿನಯ ಗುರು-ಶಿಷ್ಯೆಯರಿಬ್ಬರ ಕಲಾವಂತಿಕೆಯನ್ನು ಬಿಂಬಿಸಿತು. ಗುರು ಡಾ. ಪದ್ಮಜಾ ಸುರೇಶ್ ಅವರ ಅಭಿಸಾರಿಕಾ ನಾಯಕಿಯ ಅನುವರ್ತನೆ ಸಹಜವಾಗಿತ್ತು. ತಮಿಳು ಪದ (ಯಾರಿಕಾಗುಂ ಭಯಮಾ, ಬೇಗಡೆ ರಾಗ)ದ ಅಂತರ್ಗತವಾದ ಭಾವದ ಅಭಿವ್ಯಕ್ತಿಯಲ್ಲಿ ಅವರ ಅಭಿನಯ ಕಂಗೊಳಿಸಿತು.

ಮಿಂಚಿದ ನಾಯಕರು
ಹಿರಿಯ ಭರತನಾಟ್ಯ ಪಟು ಸತ್ಯನಾರಾಯಣ ರಾಜು ಅವರು ಧೀರೋದಾತ್ತ ನಾಯಕನಿಗೆ ಉತ್ತಮ ಉದಾಹರಣೆಯಾಗಿರುವ ಶ್ರೀರಾಮನ ವೈಶಿಷ್ಟ್ಯವನ್ನು `ಯಾರೋ ಇವನ್ಯಾರೋ~ (ಭೈರವಿ) ಪದದ ಮೂಲಕ ಅನಾವರಣಗೊಳಿಸಿದರು. ಅವರ ಅಭಿನಯ ತತ್ಪರತೆ ಭಾವಗಳನ್ನು ನೇರವಾಗಿ ಪ್ರತಿಫಲಿಸಿತು.
 
ಚಿತ್ರಗೀತೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದು ಮಿಶ್ರಫಲದಾಯಕವಾಗಿದ್ದರೂ ಸುಧೀರ್‌ಕುಮಾರ್ ಅವರ ಧೀರಲಲಿತ ನಾಯಕನ ಪ್ರಕಟಣೆಯ ಪ್ರಯತ್ನ ಪ್ರಶಂಸಾರ್ಹವಾಗಿತ್ತು. ಎಸ್. ರಘುನಂದನ್ ಮತ್ತು ಜಿ.ಎಸ್. ನಾಗೇಶ್ ಅವರು ಸ್ವಂತ ರಚನೆಗಳ ಮೂಲಕ ಕ್ರಮವಾಗಿ ಧೀರೋದ್ಧಟ (ಕಮಲಾಕ್ಷ ನೀ ಎನ್ನ, ಬೇಗಡೆ) ಮತ್ತು ಧೀರಶಾಂತ (ಶಾಂತನು ಧೀರಶಾಂತನು) ನಾಯಕರ ಪಾತ್ರ ವಿಕಾಸವನ್ನು ಕೈಗೊಂಡರು.

ಪ್ರಕಾಶಿಸಿದ ನೃತ್ಯ ನಾಟಕ
ಅಂದಿನ ಕಾರ್ಯಕ್ರಮವು ಆದಿಕವಿ ಪಂಪನ ಮಹಾಕಾವ್ಯವನ್ನಾಧರಿಸಿದ  ಭರತ ಬಾಹುಬಲಿ ಭರತನಾಟ್ಯ ಪ್ರಧಾನ ನೃತ್ಯ ನಾಟಕದೊಂದಿಗೆ ಮುಗಿಯಿತು.  ಬಾಹುಬಲಿಯ ಹಿರಿಮೆ ಗರಿಮೆಗಳನ್ನು ಪ್ರಕಾಶಗೊಳಿಸುವ ಕಥಾವಸ್ತುವನ್ನು ವರ್ಣಮಯ ಸಾಂಪ್ರದಾಯಕ ಉಡುಗೆ-ತೊಡುಗೆಗಳು, ವಿಸ್ತೃತವಾದ ರಂಗಪರಿಕರಗಳು ಮತ್ತು ಶ್ರೀಮಂತ ಸಂಗೀತ ಸಹಕಾರದೊಂದಿಗೆ ವಿಶದಪಡಿಸಲಾಯಿತು.
 
ಗುರು ಬಿ.ಕೆ. ಶಾಂಪ್ರಕಾಶ್ ನಿರ್ದೇಶನದಲ್ಲಿ, ಪಾತ್ರಧಾರಿಗಳಾಗಿದ್ದ ರಘುನಂದನ್ (ಬಾಹುಬಲಿ), ಸುಧೀರ್‌ಕುಮಾರ್(ಭರತ), ನಾಗೇಶ್ (ಮಂತ್ರಿ), ಮಾನಸಿ (ನರ್ತಕಿ), ಅನಿಲ್‌ಕುಮಾರ್ (ಕರಗ) ಮುಂತಾದವರು ವಿಜೃಂಭಿಸಿದರು. ನಂದಿಕೋಲು, ಕರಗ, ಕೋಲಾಟ ಮುಂತಾದ ಜಾನಪದ ನೃತ್ಯಗಳನ್ನೂ ನೃತ್ಯ ನಾಟಕದಲ್ಲಿ ಅಳವಡಿಸಿಕೊಂಡಿದ್ದುದು ಸ್ವಾಗತಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT