ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ಕ್ರೀಡಾ ಸುದ್ದಿಗಳು

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಅಂಗವಿಕಲರ ರಾಷ್ಟ್ರೀಯ ವಾಲಿಬಾಲ್
ಬೆಳಗಾವಿ: 
ಭಾರತೀಯ ಪ್ಯಾರಾಲಿಂಪಿಕ್ ವಾಲಿಬಾಲ್ ಒಕ್ಕೂಟದ ವತಿಯಿಂದ ಅಂಗವಿಕಲರ ಮೂರು ದಿನಗಳ ರಾಷ್ಟ್ರೀಯ ಸ್ಟ್ಯಾಂಡಿಂಗ್ ವಾಲಿಬಾಲ್ ಚಾಂಪಿಯನ್‌ಷಿಪ್ ಇದೇ  19ರಿಂದ ಇಲ್ಲಿನ ಸಿಪಿಇಡಿ ಮೈದಾನದಲ್ಲಿ ನಡೆಯಲಿದೆ. ಕಾಂಬೋಡಿಯಾದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ `ವಿಶ್ವ ಚಾಂಪಿಯನ್‌ಷಿಪ್~ನಲ್ಲಿ ಭಾಗವಹಿಸುವ ಭಾರತ ತಂಡಕ್ಕೆ ಈ ಟೂರ್ನಿಯಲ್ಲಿ ಉತ್ತಮವಾಗಿ ಆಡಿದವರನ್ನು ಆಯ್ಕೆ ನಡೆಸಲಾಗುವುದು.

ಟೆನಿಸ್: ಸೋಮದೇವ್‌ಗೆ ಸೋಲು
ವಿಯೆನ್ನಾ (ಪಿಟಿಐ):
ಭಾರತದ ಸೋಮದೇವ್ ದೇವವರ್ಮನ್ ಅವರ ಕಳಪೆ ಪ್ರದರ್ಶನ ಮುಂದುವರಿದಿದೆ. ಇಲ್ಲಿ ನಡೆಯುತ್ತಿರುವ ಎಸ್ಟ್ ಬ್ಯಾಂಕ್ ಎಟಿಪಿ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ಅವರು ಸೋಲು ಅನುಭವಿಸಿದರು.

ಗುರುವಾರ ನಡೆದ ಪಂದ್ಯದಲ್ಲಿ ಸೋಮ್ 6-7, 3-6 ರಲ್ಲಿ ಲಾಟ್ವಿಯದ ಅರ್ನೆಸ್ಟ್ ಗಲ್ಬಿಸ್ ಎದುರು ಪರಾಭವಗೊಂಡರು. ಗಾಯದಿಂದ ಚೇತರಿಸಿಕೊಂಡು ಸ್ಪರ್ಧಾ ಕಣಕ್ಕೆ ಮರಳಿದ ಬಳಿಕ ಭಾರತದ ಆಟಗಾರ ಸತತ ಆರು ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿದ್ದಾರೆ.

ಟೆನಿಸ್: ಸೆಮಿಫೈನಲ್‌ಗೆ ಕರ್ನಾಟಕದ ನಿಕ್ಷೇಪ್
ನವದೆಹಲಿ:
ಕರ್ನಾಟಕದ ಬಿ.ಆರ್. ನಿಕ್ಷೇಪ್ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನ 14 ವರ್ಷದೊಳಗಿನವರ ಬಾಲಕರ ವಿಭಾಗದ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಅಗ್ರ ಶ್ರೇಯಾಂಕದ ನಿಕ್ಷೇಪ್ 6-2, 3-6, 6-2ರಲ್ಲಿ ಉದಯನ್ ಎದುರು ಗೆಲುವು ಸಾಧಿಸಿದರು.

ನ. 2 ರಿಂದ ಅಂತರ ಜಿಲ್ಲಾ ವಾಲಿಬಾಲ್
ಬೆಂಗಳೂರು:
ಕರ್ನಾಟಕ ವಾಲಿಬಾಲ್ ಸಂಸ್ಥೆ  ಆಶ್ರಯದಲ್ಲಿ ನವೆಂಬರ್ 2ರಿಂದ 4ರ ವರೆಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ರಾಜ್ಯ ಮಟ್ಟದ ಸಬ್ ಜೂನಿಯರ್ ಹಾಗೂ ಜೂನಿಯರ್ ಅಂತರ ಜಿಲ್ಲಾ ವಾಲಿಬಾಲ್ ಟೂರ್ನಿ ನಡೆಯಲಿದೆ. ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪಂದ್ಯಗಳು ಜರುಗಲಿವೆ. 

ಕ್ರಿಕೆಟ್: ಇಂದಿನಿಂದ ನಾಯ್ಡು ಟ್ರೋಫಿ ಟೂರ್ನಿ
ಬೆಂಗಳೂರು:
ಕರ್ನಾಟಕ ಹಾಗೂ ಗುಜರಾತ್ ತಂಡಗಳು ಇಲ್ಲಿ ಶುಕ್ರವಾರ ಆರಂಭವಾಗಲಿರುವ ಸಿ.ಕೆ. ನಾಯ್ಡು ಟ್ರೋಫಿ (25 ವರ್ಷದೊಳಗಿನವರು) ಕ್ರಿಕೆಟ್ ಪಂದ್ಯದ ಎಲೈಟ್ `ಎ~ ಗುಂಪಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಶಾಲೆಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ನಾಲ್ಕು ದಿನಗಳ ಈ ಪಂದ್ಯದಲ್ಲಿ ಆತಿಥೇಯ ತಂಡವನ್ನು ಗಣೇಶ್ ಸತೀಶ್ ಮುನ್ನಡೆಸಲಿದ್ದಾರೆ. ಪ್ರತಿಮೇಶ್ ಪಾರ್ಮರ್ ಗುಜರಾತ್ ತಂಡದ ಸಾರಥ್ಯ ವಹಿಸಿದ್ದಾರೆ.
ಪಂದ್ಯ ಆರಂಭ: ಬೆಳಿಗ್ಗೆ 9.30ಕ್ಕೆ.

`ಪ್ರತಿಯೊಬ್ಬರ ಬಗ್ಗೆಯೂ ಅನುಮಾನ~
ಲಂಡನ್ (ಪಿಟಿಐ):
`ಜಗತ್ತಿನ ಕ್ರಿಕೆಟ್ ಮಂಡಳಿಗಳನ್ನು ಕಾಡುತ್ತಿರುವ ಭ್ರಷ್ಟಾಚಾರದ ಕರಿನೆರಳು ಪ್ರತಿಯೊಬ್ಬರಲ್ಲೂ ಇರುವ ಬಗ್ಗೆ ಅನುಮಾನವಿದೆ~ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡೇವ್ ರಿಚರ್ಡ್‌ಸನ್ ಸಂಶಯ ವ್ಯಕ್ತಪಡಿಸಿದ್ದಾರೆ.

ಅಂಪೈರ್‌ಗಳು ಮೋಸದಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಭಾರತದ ಮಾಧ್ಯಮಗಳು ಮಾರುವೇಷದ ಕಾರ್ಯಚರಣೆಯ ಮೂಲಕ ಬಹಿರಂಗಗೊಳಿಸಿದ್ದವು. ಈ ಹಿನ್ನೆಲೆಯಲ್ಲಿ ಅವರು ಈ ಅನುಮಾನ ವ್ಯಕ್ತಪಡಿಸಿದ್ದಾರೆ.

`ಕ್ಯೂರೇಟರ್, ಕ್ರೀಡಾಂಗಣದ ಸಿಬ್ಬಂದಿ ಮೂಲಕವೂ ಮೋಸದಾಟ ನಡೆಯುವ ಬಗ್ಗೆ ಅನುಮಾನವಿದೆ. ಅನಿರೀಕ್ಷಿತವೆಂಬುದು ಈಗ ಯಾವುದೂ ಇಲ್ಲ. ಆದ್ದರಿಂದ ದೇಶಿಯ ಹಾಗೂ ಅಂತರರಾಷ್ಟ್ರೀಯ ಆಟಗಾರರಿಗೆ ಹೆಚ್ಚಿನ ತಿಳಿವಳಿಕೆ ನೀಡುವುದು ಅಗತ್ಯವಿದೆ~ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಡಿವೈಎಸ್‌ಎಸ್‌ಗೆ ಸೋಲು
ಬೆಂಗಳೂರು:
ಡಿವೈಎಸ್‌ಎಸ್ ತಂಡದ ಕುಶ್ ಗಳಿಸಿದ ಒಂದು ಗೋಲಿನ ನೆರವಿನಿಂದ ಡಿವೈಎಸ್‌ಎಸ್ ತಂಡ ತಿರುವಾಂಕೂರ ಕಪ್ ಹಾಕಿ ಟೂರ್ನಿಯ ಗುರುವಾರದ ಪಂದ್ಯದಲ್ಲಿ 1-0ಗೋಲಿನಿಂದ ಪೋಸ್ಟಲ್‌ಗೆ ಸೋಲುಣಿಸಿತು.

ಅಕ್ಕಿ ತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 37ನೇ ನಿಮಿಷದಲ್ಲಿ ಗೋಲು ಗಳಿಸಿದ ಕುಶ್ ಗೆಲುವಿನ ರೂವಾರಿ ಎನಿಸಿದರು. ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) 6-0ಗೋಲುಗಳಿಂದ ಆರ್‌ಡಬ್ಲ್ಯುಎಫ್ ವಿರುದ್ಧ ಗೆಲುವು ಸಾಧಿಸಿತು.
 
ವಿಜಯಿ ತಂಡದ ಬಿದ್ದಪ್ಪ (11 ಹಾಗೂ 58ನೇ ನಿ.), ಬಿಜ್ಜು (18ನೇ ನಿ.), ದೀಪಕ್ (20ನೇ ನಿ.), ಉಮೇಶ್ (29 ಹಾಗೂ 59ನೇ ನಿ.) ಗೋಲು ಕಲೆ ಹಾಕಿದರು. ಸೆಂಟ್ರಲ್ ಎಕ್ಸೈಜ್ 4-3ಗೋಲುಗಳಿಂದ ಬಿಇಎಂಎಲ್ ಬೆಂಗಳೂರು ಎದುರು ಜಯ ಪಡೆಯಿತು.

ಇಂಗ್ಲೆಂಡ್ ತಂಡದಲ್ಲಿ ಪೀಟರ್‌ಸನ್‌ಗೆ ಸ್ಥಾನ
ಲಂಡನ್ (ಪಿಟಿಐ):
ಕೆವಿನ್ ಪೀಟರ್‌ಸನ್ ಅವರನ್ನು ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುವ ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಕಳೆದ ತಿಂಗಳು ಪ್ರಕಟಿಸಿದ್ದ ತಂಡದಲ್ಲಿ ಪೀಟರ್‌ಸನ್ ಹೆಸರು ಇರಲಿಲ್ಲ. ಆದರೆ ಇಸಿಬಿ ಆಯ್ಕೆ ಸಮಿತಿ ಗುರುವಾರ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಪೀಟರ್‌ಸನ್ ಅವರಿಗೆ ಇಸಿಬಿ ಹಾಗೂ ಇತರ ಆಟಗಾರರ ಜೊತೆ ವೈಮನಸ್ಸು ಉಂಟಾಗಿತ್ತು. ಹಾಗಾಗಿ ಟ್ವೆಂಟಿ-20 ವಿಶ್ವಕಪ್‌ಗೆ ಅವರನ್ನು ಕಡೆಗಣಿಸಲಾಗಿತ್ತು. ಇದೀಗ ಮಾತುಕತೆ ಮೂಲಕ ಭಿನ್ನಾಭಿಪ್ರಾಯ ಬಗೆಹರಿದಿದೆ.

ಇಂಗ್ಲೆಂಡ್ ತಂಡ ಹೀಗಿದೆ: ಅಲಸ್ಟೈರ್ ಕುಕ್ (ನಾಯಕ), ಜೇಮ್ಸ ಆ್ಯಂಡರ್‌ಸನ್, ಜಾನಿ ಬೈಸ್ಟೋವ್, ಇಯಾನ್ ಬೆಲ್, ಟಿಮ್ ಬ್ರೆಸ್ನನ್, ಸ್ಟುವರ್ಟ್ ಬ್ರಾಡ್, ಕೆವಿನ್ ಪೀಟರ್‌ಸನ್, ನಿಕ್ ಕಾಂಪ್ಟನ್, ಸ್ಟೀವನ್ ಫಿನ್, ಗ್ರಹಾಂ ಆನಿಯನ್ಸ್, ಮಾಂಟಿ ಪನೇಸರ್, ಸಮಿತ್ ಪಟೇಲ್, ಮ್ಯಾಟ್ ಪ್ರಯರ್, ಜೋ ರೂಟ್, ಗ್ರೇಮ್ ಸ್ವಾನ್, ಜೊನಾಥನ್ ಟ್ರಾಟ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT