ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ವಿದೇಶ ಸುದ್ದಿ

Last Updated 13 ಜುಲೈ 2013, 19:59 IST
ಅಕ್ಷರ ಗಾತ್ರ

ಮೈ ಕಾಣುವ ಉಡುಪು: ತಾಲಿಬಾನ್ ಫರ್ಮಾನು
ಪೆಶಾವರ (ಪಿಟಿಐ):
ಪವಿತ್ರ ರಂಜಾನ್ ಮಾಸದಲ್ಲಿ ಬಿಗಿ ಹಾಗೂ ಮೈ ಕಾಣುವಂಥ ಉಡುಪು ಧರಿಸುವ ಮತ್ತು ಉಪವಾಸ ಮಾಡದಿರುವವರ ವಿರುದ್ಧ ಕೆಂಗಣ್ಣು ಬೀರಿರುವ ತಾಲಿಬಾನಿಗಳು, ಅಂಥ ವ್ಯಕ್ತಿಗಳಿಗೆ ಶಿಕ್ಷೆ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.

ದಕ್ಷಿಣ ವಜಿರಿಸ್ತಾನದಲ್ಲಿನ ವಾನಾ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ತಾಲಿಬಾನ್ ಏಕಪಕ್ಷೀಯವಾಗಿ ಈ ನಿರ್ಧಾರ ತೆಗೆದುಕೊಂಡಿದ್ದು, ಶಿಕ್ಷೆಯ ವಿವರಗಳ ಕರಪತ್ರವೊಂದನ್ನು ಬಿಡುಗಡೆ ಮಾಡಿದೆ.

ಅರ್ಜಿ ಇತ್ಯರ್ಥ ವಿಳಂಬ: ಕಳವಳ
ಲಂಡನ್ (ಪಿಟಿಐ):
ಇಂಗ್ಲೆಂಡ್ ಭೇಟಿಗೆ ಅಗತ್ಯ ಅನುಮತಿ ಬಯಸಿ ಕಾಯುತ್ತಿರುವವರ ಸಂಖ್ಯೆ ತೀವ್ರ ಗತಿಯಲ್ಲಿ ಏರುತ್ತಿದೆ ಎಂದು ಭಾರತೀಯ ಮೂಲದ ಬ್ರಿಟನ್ ಸಂಸದ ಕೇತ್ ವಾಜ್ ಅಧ್ಯಕ್ಷತೆಯ ಸಂಸತ್ತಿನ ಸಮಿತಿ ಕಳವಳ ವ್ಯಕ್ತಪಡಿಸಿದೆ.

`ಹಲವು ದೇಶಗಳ ಜನರು ಇಂಗ್ಲಂಡ್‌ಗೆ ವಲಸೆ ಬರಲು ಅನುಮತಿಗೆಂದು ಸಲ್ಲಿಸಿದ ಅರ್ಜಿಗಳ ಸಂಖ್ಯೆ 2012ರ ಡಿಸೆಂಬರ್ ಹೊತ್ತಿಗೆ 5,02,000ರಷ್ಟು ತಲುಪಿದೆ. ಈ ಹಿಂದಿನ ಕೇವಲ ಮೂರು ತಿಂಗಳಲ್ಲಿ ಈ ಪ್ರಮಾಣ ಶೇ 56ರಷ್ಟು ಏರಿಕೆ ಕಂಡಿದೆ. ಈಗ ಅರ್ಜಿ ಇತ್ಯರ್ಥ ಮಾಡುವ ಪರಿ ಗಮನಿಸಿದರೆ, ಈ ಎಲ್ಲ ಅರ್ಜಿಗಳನ್ನು ಇತ್ಯರ್ಥಪಡಿಸಲು 2050ರವರೆಗೆ ಕಾಯಬೇಕಾಗಬಹುದು' ಎಂದು ಕೇತ್ ವಾಜ್ ಎಚ್ಚರಿಕೆ ನೀಡಿದ್ದಾರೆ.

ಚೀನಾ: ವಿಶ್ವದ ಬೃಹತ್ ಕಟ್ಟಡ ಬಳಕೆಗೆ
ಬೀಜಿಂಗ್ (ಎಎಫ್‌ಪಿ):
ಚೀನಾದ ಚೆಂಗ್ಡುನಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತ್ಯಂತ ಬೃಹತ್ ಕಟ್ಟಡ `ನ್ಯೂ ಸೆಂಚುರಿ ಗ್ಲೋಬಲ್ ಸೆಂಟರ್' ಅನ್ನು ಶನಿವಾರ ಬಳಕೆಗೆ ಮುಕ್ತಗೊಳಿಸಲಾಯಿತು.

ಆಧುನಿಕ ತಂತ್ರಜ್ಞಾನ ಬಳಸಿ ರೂಪಿಸಲಾಗಿರುವ ಕೃತಕ ಸೂರ್ಯ ಸೇರಿದಂತೆ ಅಮೆರಿಕದ ಪೆಂಟಗನ್ ಕಟ್ಟಡಕ್ಕಿಂತ ಮೂರು ಪಟ್ಟು ಅಂತಸ್ತುಗಳನ್ನು ಈ ಗೋಪುರಾಕೃತಿಯ ಕಟ್ಟಡ ಹೊಂದಿದೆ. 500 ಮೀಟರ್ ಉದ್ದ, 400 ಮೀಟರ್ ಅಗಲದ ಈ ಬೃಹತ್ ಕಟ್ಟಡವು 17 ಲಕ್ಷ (1.7 ಮಿಲಿಯನ್) ಚದರ ಮೀಟರ್ ವಿಸ್ತೀರ್ಣ ಹೊಂದಿದೆ.

  4 ಲಕ್ಷ ಚ.ಮೀ. ವಿಸ್ತೀರ್ಣದ ಶಾಪಿಂಗ್ ಸ್ಥಳ, ಕಚೇರಿ, ಎರಡು ವಾಣಿಜ್ಯ ಕೇಂದ್ರಗಳು, ಸಮಾವೇಶ ಕೊಠಡಿ, ವಿಶ್ವವಿದ್ಯಾಲಯ ಸಂಕಿರ್ಣ,  ಎರಡು ಪಂಚತಾರಾ ಹೋಟೆಲ್‌ಗಳು ಹಾಗೂ ಒಂದು ಐಮ್ಯಾಕ್ಸ್ ಸಿನಿಮಾ ಕೇಂದ್ರವನ್ನು ಈ ಕಟ್ಟಡ ಒಳಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೃತಕ ಸಮುದ್ರ, ನೀರಿನ ಬುಗ್ಗೆ, ವಿಸ್ತಾರವಾದ ವಾಟರ್ ಪಾರ್ಕ್, ಅಲೆಯಾಕಾರಾವಾಗಿ ಚಲಿಸುವಂತೆ ಕಾಣುವ ಮೇಲ್ಛಾವಣಿ ಸೇರಿದಂತೆ ಆರು ಸಾವಿರ ಜನರಿಗೆ ಸ್ಥಳಾವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿರುವ ಈ ಕಟ್ಟಡಕ್ಕೆ ಮೊದಲ ದಿನ ಭೇಟಿ ನೀಡಿದವರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT