ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ವಿದೇಶಿ ಸುದ್ದಿಗಳು

Last Updated 17 ಜುಲೈ 2013, 19:45 IST
ಅಕ್ಷರ ಗಾತ್ರ

ಸ್ನೊಡೆನ್‌ಗಿಂತ ಅಮೆರಿಕ ಮುಖ್ಯ:ಪುಟಿನ್
ಮಾಸ್ಕೊ (ಎಪಿಎಫ್)
: `ಮಾಹಿತಿ ಸೋರಿಕೆ ಆರೋಪ ಎದುರಿಸುತ್ತಿರುವ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‌ಎಸ್‌ಎ)ಯ ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೊಡೆನ್ ಅವರಿಗೆ ಆಶ್ರಯ ನೀಡುವುದಕ್ಕಿಂತ ಅಮೆರಿಕ ಮತ್ತು ರಷ್ಯಾ ನಡುವಿನ ಬಾಂಧವ್ಯ ಬಹಳ ಮುಖ್ಯ' ಎಂದು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಬುಧವಾರ ತಿಳಿಸಿದ್ದಾರೆ.

ಸ್ನೊಡೆನ್ ಅವರಿಗೆ ರಷ್ಯಾ ಆಶ್ರಯ ನೀಡುವುದನ್ನು ಅಮೆರಿಕ ಬೇಹುಗಾರಿಕೆ ಸಂಸ್ಥೆ ವಿರೋಧ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಪುಟಿನ್ ಹೇಳಿಕೆ ಹೊರಬಿದ್ದಿದೆ. ಮುಂದೆ ಇನ್ನಷ್ಟು ರಹಸ್ಯ ಬಹಿರಂಗಪಡಿಸದೆ ಇದ್ದಲ್ಲಿ ಸ್ನೊಡೆನ್‌ಗೆ ಆಶ್ರಯ ಕಲ್ಪಿ ಸುವ ಬಗ್ಗೆ ಯೋಚಿಸಬಹುದು ಎಂದು ಪುನರುಚ್ಚರಿಸಿದ್ದಾರೆ.

ಸಲಿಂಗ ವಿವಾಹ ಮಸೂದೆಗೆ ರಾಣಿ ಅಂಕಿತ
ಲಂಡನ್ (ಪಿಟಿಐ):
ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಮಸೂದೆಗೆ ರಾಣಿ ಎರಡನೇ ಎಲಿಜಬೆತ್ ಅವರು ಅನುಮೋದನೆ ನೀಡಿದ್ದಾರೆ. 2014ರ ಮಧ್ಯಾವಧಿಯಲ್ಲಿ ಮೊದಲ ಸಲಿಂಗ ವಿವಾಹ ನಡೆಯಲಿದೆ.

ನಕಲಿ ದಾಖಲೆ: ಮೂವರಿಗೆ ಶಿಕ್ಷೆ
ಸಿಂಗಪುರ (ಪಿಟಿಐ):
ಕೆಲಸಕ್ಕೆ ಅನುಮತಿ ಪತ್ರ ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿದ್ದ ಆರೋಪದ ಮೇರೆಗೆ ಭಾರತ ಮೂಲದ ಮೂವರು ಸೇರಿದಂತೆ ಒಟ್ಟು 25 ವಿದೇಶಿಯರಿಗೆ ನಾಲ್ಕು ವಾರ ಜೈಲು ಶಿಕ್ಷೆ ವಿಧಿಸಿ ಸಿಂಗಪುರದ ನ್ಯಾಯಾಲಯ ಬುಧವಾರ ಆದೇಶ ನೀಡಿದೆ.

`ಆರೋಪಿಗಳು ನಕಲಿ ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದರು' ಎಂದು ಮಾನವ ಸಂಪನ್ಮೂಲ ಸಚಿವಾಲಯ ತಿಳಿಸಿದೆ. 25 ಮಂದಿ ಪೈಕಿ ಐವರು 5,000 ರೂಪಾಯಿ ಸಿಂಗಪುರ ಡಾಲರ್ ದಂಡ ನೀಡಲು ಅಸಹಾಯಕತೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರಿಗೆ 20 ದಿನ ಹೆಚ್ಚುವರಿ ಕಾರಾಗೃಹ ಶಿಕ್ಷೆ ನೀಡಲಾಗಿದೆ.

ಜೈಲಿನಿಂದ 12 ಕೈದಿಗಳು ಪರಾರಿ
ಬಾತಂ(ಎಪಿ):
ಇಂಡೋನೇಷ್ಯಾದ ಬಾತಂ ದ್ವೀಪದಲ್ಲಿರುವ ಜೈಲಿನಿಂದ 12 ಕೈದಿಗಳು ಪರಾರಿಯಾಗಿದ್ದಾರೆ. ಒಂದು ವಾರದ ಅಂತರದಲ್ಲಿ ದೇಶದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ.

ಕಬ್ಬಿಣದ ಸಲಾಕೆಗಳಿಂದ ಕಿಟಕಿ ಮುರಿದು ಕೈದಿಗಳು ಪರಾರಿಯಾಗಿದ್ದಾರೆ. ಮಾದಕ ವಸ್ತು ಪ್ರಕರಣದಲ್ಲಿ ಇವರನ್ನು ಬಂಧಿಸಲಾಗಿತ್ತು.  ಒಬ್ಬ ಕೈದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರೆ.

250 ಕೈದಿಗಳನ್ನು ಮಾತ್ರ ಇಡುವ ಜೈಲಿನಲ್ಲಿ 400 ಕೈದಿಗಳನ್ನು ಇಡಲಾಗಿದೆ. ಗುರುವಾರ ಸುಮಾತ್ರಾದ ಮೆದಾನ್ ಕಾರಾಗೃಹದಿಂದ ಒಂಬತ್ತು ಕೈದಿಗಳು ಸೇರಿದಂತೆ 212 ಮಂದಿ ಪರಾರಿಯಾಗಿದ್ದರು. ಬಳಿಕ 103 ಕೈದಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ಮೂತ್ರದಿಂದ ಮೊಬೈಲ್ ಚಾರ್ಜ್!
ಲಂಡನ್ (ಪಿಟಿಐ):
ಮಾನವನ ಮೂತ್ರದಿಂದ ಮೊಬೈಲ್ ಫೋನ್ ಬ್ಯಾಟರಿಗಳನ್ನು ಚಾರ್ಜ್ ಮಾಡುವ ಅಪರೂಪದ  ವಿಧಾನವನ್ನು ಅಭಿವೃದ್ಧಿಪಡಿಸಿರುವುದಾಗಿ ಬ್ರಿಟನ್ ಸಂಶೋಧಕರು ಹೇಳಿಕೊಂಡಿದ್ದಾರೆ.

`ವಿಶ್ವದ ಮೊದಲ ಪ್ರಯತ್ನ ಇದಾಗಿದೆ' ಎಂದು ಬ್ರಿಸ್ಟಾಲ್ ರೊಬೊಟಿಕ್ಸ್ ಪ್ರಯೋಗಾಲಯದ ಸಂಶೋಧಕರು ಹೇಳಿಕೊಂಡಿದ್ದಾರೆ.`ಸೂಕ್ಷಾಣು ಇಂಧನಕೋಶ' ಎಂಬ ಸಾಧನದ ಮೂಲಕ ಹಾಯ್ದು ಹೋಗುವ (ಮೈಕ್ರೋಬಯಲ್ ಫ್ಯೂಯಲ್   ಸೆಲ್ಸ್) ಮಾನವನ ಮೂತ್ರದಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ.

ಆಕ್ಷೇಪಾರ್ಹ ಮಾಹಿತಿಗೆ ತಡೆ
ಬೀಜಿಂಗ್ (ಐಎಎನ್‌ಎಸ್):
ಅಂತರ್ಜಾಲದಲ್ಲಿ ಅಶ್ಲೀಲ ಮತ್ತು ಆಕ್ಷೇಪಾರ್ಹ ಮಾಹಿತಿ ಹರಿಬಿಡುವುದರ ವಿರುದ್ಧ ಚೀನಾದಲ್ಲಿ ಅಧಿಕಾರಿಗಳು ಸಮರ ಸಾರಿದ್ದಾರೆ.

ಅಶ್ಲೀಲ ದೃಶ್ಯಾವಳಿ ಒಳಗೊಂಡ ವೆಬ್‌ಸೈಟ್, ಆನ್‌ಲೈನ್ ಆಟ, ಆನ್‌ಲೈನ್ ಜಾಹೀರಾತು, ವೆಬ್ ಪುಟ, ಅಂಕಣ, ಬ್ಲಾಗ್, ಮೈಕ್ರೊಬ್ಲಾಗ್ ಮತ್ತು ಸಾಮಾಜಿಕ ಜಾಲತಾಣಗಳ ಮೇಲೆ ವಿಶೇಷ ಕಣ್ಣಿಡಲು ಚೀನಾ ನಿರ್ಧರಿಸಿದೆ.

`ಜುಲೈನಿಂದ ಆಗಸ್ಟ್ ಅಂತ್ಯದವರೆಗೆ ಚೀನಾದಲ್ಲಿ ರಜಾ ದಿನಗಳು ಇರುತ್ತವೆ. ಆಗ ಯುವಕರು ಹೆಚ್ಚಾಗಿ ಆನ್‌ಲೈನ್ ಮೊರೆ ಹೋಗುತ್ತಾರೆ. ಅವರ ಮೇಲೆ ಕೆಟ್ಟ ಪರಿಣಾಮ ಬೀರದಂತೆ ತಡೆಯಲು ಆನ್‌ಲೈನ್‌ನಲ್ಲಿ ಯಾವುದೇ ರೀತಿಯ ಅಶ್ಲೀಲ ಮತ್ತು ಆಕ್ಷೇಪಾರ್ಹ ಮಾಹಿತಿ ಬರದಂತೆ ನಿಗಾ ವಹಿಸಲು ನಿರ್ಧರಿಸಲಾಗಿದೆ' ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT