ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತವೇ ನನ್ನ ದೇವರು!

ನನ್ನ ಕಥೆ ನಂದಿತಾ
Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ಕರಿಯಾ ಐ ಲವ್ ಯು ಕರುನಾಡ ಮೇಲಾಣೆ...' , `ನೀನೆಂದರೆ ನನಗೆ ಇಷ್ಟಾ ಕಣೋ...', `ಮೊದಮೊದಲು ಭೂಮಿಗಿಳಿದ ಮಳೆ ಹನಿಯೂ ನೀನೇನಾ...'- ರಸ್ತೆಯಲ್ಲಿ ಯಾರೋ ಗುನುಗುವ ಹಾಡು ಕಿವಿಗೆ ಬಿದ್ದಾಗ ನನ್ನ ಶ್ರಮ ಸಾರ್ಥಕವಾಯಿತು ಎನಿಸುತ್ತದೆ.

ನಾನು ಹಾಡಿದ ಈ ಹಾಡುಗಳು ಸಿನಿಮಾದೊಳಗೆ ಮಾತ್ರವಲ್ಲ, ಅದರಿಂದಾಚೆಗೂ ಜನರನ್ನು ತಲುಪಿವೆ ಎಂದು ಖುಷಿಯಾಗುತ್ತದೆ. ಯಾಕೆಂದರೆ ಯಾವುದೇ ಹಾಡು ಜನರ ಬಾಯಲ್ಲಿ ಬಂದ ನಂತರ ಅಲ್ಲವೇ ಜೀವಂತವಾಗಿ ಉಳಿಯುವುದು? ನಾನು ಎಂಜಿನಿಯರಿಂಗ್ ಓದಿದ್ದರೂ ಸಂಗೀತವನ್ನೇ ಆರಾಧಿಸುತ್ತಿರುವವಳು. ಅದರಿಂದ ನನ್ನ ಹಾಡುಗಳು ಜನರ ಬಾಯಲ್ಲಿ ಬಂದಾಗ ಆಗುವ ಸಂತೋಷ ಎಲ್ಲಕ್ಕಿಂಥ ಹಿರಿದು.

ನನ್ನೂರು ಚನ್ನರಾಯಪಟ್ಟಣ. ತಂದೆ ಸುಬ್ಬಾರಾವ್. ತಾಯಿ ಜಾನಕಿ. ಅವರಿಬ್ಬರಿಗೂ ಸಂಗೀತ ಇಷ್ಟ. ನನ್ನ ತಾಯಿ ಮತ್ತು ಅಜ್ಜ ಇಬ್ಬರೂ ವೀಣಾ ವಾದಕರು. ಸಂಗೀತದ ಒಲವು ನನಗೂ ಸಹಜವಾಗಿಯೇ ಬಂದದ್ದು. ಬಳುವಳಿಯಾಗಿ ಬಂದ ವೀಣಾ ವಾದನ ಕಲೆಯ ಆಸಕ್ತಿ ಅಂಟಿಸಿಕೊಂಡವಳಿಗೆ ಗಾಯಕಿಯಾಗಿ ಹೆಸರು ಮಾಡುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ. ವೀಣೆಯ ತಂತಿಗಳನ್ನು ಮೀಟುತ್ತಲೇ ಅದ್ಹೇಗೋ ಹಾಡುವುದೂ ಅಭ್ಯಾಸವಾಗಿ ಹೋಗಿತ್ತು.

ಶಾಲೆಯಲ್ಲಿ ಯಾವ ಕಾರ್ಯಕ್ರಮವಾದರೂ ನನ್ನದೇ ಹಾಡು. ಹಾಡ್ತಾ ಹಾಡ್ತಾ ರಾಗ ಎನ್ನುವಂತೆ ಕಂಠ ಪಳಗಿತು.

ನನ್ನ ದನಿ ಮೆಚ್ಚಿದವರ ಪ್ರೋತ್ಸಾಹದ ಮಾತುಗಳನ್ನು ಕೇಳಿದಾಗ ಶಾಸ್ತ್ರೀಯ ಸಂಗೀತ ಕಲಿಯುವ ಬಯಕೆ ಚಿಗುರಿತು. ನನ್ನ ಕಂಠವನ್ನು ಸಾಣೆ ಹಿಡಿದು ಸಂಗೀತದ ಕಾಠಿಣ್ಯಕ್ಕೆ ತಕ್ಕಂತೆ ಹರಿತಗೊಳಿಸಿದವರು ವಿದ್ವಾನ್ ಆರ್.ಕೆ. ಸೂರ್ಯನಾರಾಯಣ. ಸಂಗೀತ ಕಲಿಕೆ ಅಷ್ಟು ಸುಗಮವಾಗಿರಲಿಲ್ಲ.

ಚನ್ನರಾಯಪಟ್ಟಣದಿಂದ ಪ್ರತಿ ಭಾನುವಾರ ಬೆಂಗಳೂರಿಗೆ ಬಂದು ಅವರಿಂದ ಸಂಗೀತ ಪಾಠ ಹೇಳಿಸಿಕೊಳ್ಳುತ್ತಿದ್ದೆ. ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಮಾತ್ರ ಕಟ್ಟುಬೀಳುವ ಮನಸ್ಸು ನನ್ನದಲ್ಲ.

ಸಿನಿಮಾ ಗೀತೆಗಳು ಮತ್ತು ಸುಗಮ ಸಂಗೀತವೂ ರೂಢಿಯಾದವು. ಮನೆಯಲ್ಲಿ ಸಂಗೀತ ಅಭ್ಯಾಸಕ್ಕೆ ಪ್ರೋತ್ಸಾಹವಿದ್ದರೂ ಓದಿನ ವಿಷಯದಲ್ಲಿ ಅಷ್ಟೇ ಕಟ್ಟುನಿಟ್ಟು. ಓದು ಪೂರ್ಣಗೊಳಿಸಬೇಕೆಂಬ ನಿಯಮ ಮಾತ್ರವಲ್ಲ, ನನಗೆ ಉನ್ನತ ಶಿಕ್ಷಣ ಕೊಡಿಸುವುದಕ್ಕಾಗಿಯೇ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿತು ಎಂದರೆ ಮನೆಯಲ್ಲಿ ಶಿಕ್ಷಣಕ್ಕೆ ನೀಡುತ್ತಿದ್ದ ಮಹತ್ವ ಊಹಿಸಿಕೊಳ್ಳಿ.

ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಕಲಿಕೆಯೊಟ್ಟಿಗೆ ಸಂಗೀತ ಕಲಿಕೆಯೂ ಸಾಗಿತು. ಓದುವಾಗಲೇ ಖ್ಯಾತ ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ್ ಅವರ `ಸಾಧನ' ಸಂಗೀತ ಶಾಲೆ ಸೇರಿದೆ. ಒಮ್ಮೆ ಅಲ್ಲಿಗೆ ಭೇಟಿ ನೀಡಿದ್ದ ಸಂಗೀತ ನಿರ್ದೇಶಕ ವಿ.ಮನೋಹರ್ ನನ್ನ ಕಂಠ ಮೆಚ್ಚಿಕೊಂಡು, ಭಕ್ತಿಗೀತೆಗಳ ಆಲ್ಬಂಗೆ ಹಾಡಲು ಅವಕಾಶ ನೀಡಿದರು.

ಅಲ್ಲಿಂದ ಶುರುವಾಗಿದ್ದು ನನ್ನ ಗಾಯನದ ಬದುಕು. ಬಳಿಕ ಸಂಗೀತ ನಿರ್ದೇಶಕ ಹಂಸಲೇಖ ಅವರ ಪರಿಚಯವಾಯಿತು. ಅವರು `ಹಬ್ಬ' ಸಿನಿಮಾಗೆ ಹಾಡಿಸಿದರು.

`ನವಿಲೇ ಪಂಚರಂಗಿ ನವಿಲೆ' (ಯಜಮಾನ), `ಮಿಸ್ಸಮ್ಮಾ ಓ ಮಿಸ್ಸಮ್ಮಾ...' (ಯುವರಾಜ), `ಎಲ್ಲಿಂದ ಆರಂಭವೋ' (ಅಪ್ಪು), `ಕರಿಯಾ ಐ ಲವ್ ಯೂ' (ದುನಿಯಾ), `ನೀನೆಂದರೆ ನನಗೆ ಇಷ್ಟಾ ಕಣೋ' (ರಾಮ್), `ಬಾರಾ ಸರಸಕ್ಕೂ ಬಾರಾ...' (ಆಪ್ತಮಿತ್ರ), `ಸಿಹಿಗಾಳಿ ಸಿಹಿಗಾಳಿ...' (ಆ ದಿನಗಳು), `ಹೂ ಕನಸ ಜೋಕಾಲಿ' (ಇಂತಿ ನಿನ್ನ ಪ್ರೀತಿಯ) ಹಾಡುಗಳು ಸಿನಿಮಾ ಸಂಗೀತದಲ್ಲಿ ನನಗೊಂದು ಸ್ಥಾನ ಕಲ್ಪಿಸಿದವು. ಹಂಸಲೇಖ, ವಿ.ಮನೋಹರ್, ಗುರುಕಿರಣ್ ಮುಂತಾದ ಸಂಗೀತ ನಿರ್ದೇಶಕರು ನನಗೆ ಅವಕಾಶ ನೀಡಿ ಬೆಳೆಸಿದರು.

ಹೆಸರಿನ ಜೊತೆ ಪ್ರಶಸ್ತಿಯ ಗರಿಗಳನ್ನೂ ಮುಡಿಗೇರಿಸಿಕೊಂಡಿದ್ದು ನನ್ನ ಪಾಲಿನ ಹೆಮ್ಮೆ. `ಗಂಧದ ಗೊಂಬೆ', `ಪ್ಯಾರಿಸ್ ಪ್ರಣಯ', `ಜೋಗುಳ', `ಬಾನಿಗೆ ಭಾಸ್ಕರ ಚೆಂದ' ಹಾಡುಗಳಿಂದ ನಾಲ್ಕು ಬಾರಿ ರಾಜ್ಯ ಪ್ರಶಸ್ತಿ ಒಲಿದರೆ, ಎರಡು ಫಿಲ್ಮ್‌ಫೇರ್ ಪ್ರಶಸ್ತಿ ಪಡೆದೆ. ಗಾಯನ ಜನಪ್ರಿಯತೆ ತಂದುಕೊಟ್ಟಿದ್ದರೂ ಸಣ್ಣಂದಿನಿಂದ ಕಲಿತ ವೀಣಾ ವಾದನ ಮನಸ್ಸಿಗೆ ಹೆಚ್ಚು ಹತ್ತಿರ. ಇತ್ತೀಚೆಗೆ ನನ್ನ ವೀಣಾವಾದನದ ಆಲ್ಬಂ ಅನ್ನು ಹೊರತಂದಿದ್ದೇನೆ.

ವೀಣಾ ವಾದನದ ಪ್ರತಿಭೆಯನ್ನು ತೋರಿಸುವ ಗುರಿ ನನ್ನದು. ಶ್ರೀ ಮಂಜುನಾಥ ಚಿತ್ರದ `ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ' ಮತ್ತು ಆಪ್ತಮಿತ್ರ ಚಿತ್ರದ `ರಾ ರಾ ಸರಸಕ್ಕೂ ರಾ ರಾ' ಹಾಡುಗಳಿಗೆ ವೀಣೆ ನುಡಿಸಿರುವೆ.

ಗಾಯನದಲ್ಲಿ ಅವಕಾಶಗಳಿವೆ, ಆದರೆ ವೀಣಾ ವಾದನದಲ್ಲಿ ಅದರಂತೆ ಅವಕಾಶಗಳು ತೆರೆದುಕೊಂಡಿಲ್ಲ. ಏಕೆಂದರೆ ನಾನು ವೀಣೆ ನುಡಿಸಬಲ್ಲೆ ಎಂಬುದೇ ಅನೇಕರಿಗೆ ತಿಳಿದಿಲ್ಲ. ಗಾಯನಕ್ಕೆ ಸಿಕ್ಕಂತೆ ವೀಣೆ ನುಡಿಸಲೂ ಅವಕಾಶ ಸಿಕ್ಕರೆ ನಾನು ಧನ್ಯೆ.

ಮದುವೆಗೂ ಮುನ್ನ ನಾನು ಸಂಗೀತಗಾರ್ತಿ ಎನ್ನುವುದೇ ಪತಿ ರಾಕೇಶ್‌ಗೆ ತಿಳಿದಿರಲಿಲ್ಲ. ವಿವಾಹದ ಬಳಿಕವೂ ನನ್ನ ವೃತ್ತಿ ಬದುಕಿನ ಪ್ರತಿ ನಡೆಗೂ ದೊರಕುತ್ತಿರುವ ಅವರ ಬೆಂಬಲ ನಾನು ಅದೃಷ್ಟವಂತೆ ಎಂಬುದನ್ನು ಪದೇ ಪದೇ ನೆನಪಿಸುತ್ತದೆ. ಅಪ್ಪ-ಅಮ್ಮನಂತೆಯೇ ಪ್ರೀತಿ ಹರಿಸುವ ಅತ್ತೆ-ಮಾವಂದಿರ ಪ್ರೋತ್ಸಾಹವೂ ನನ್ನ ಸಂಗೀತದ ಸಾಧನೆ ಹಿಂದಿದೆ.

ಪ್ರತಿ ದಿನವೂ ವೀಣೆಯ ತಂತಿಯ ಮೇಲೆ ಕೈಬೆರಳುಗಳು ಹರಿದಾಡಿದಾಗಲೇ ನೆಮ್ಮದಿ. ಆದರೂ ಕೆಲವೊಮ್ಮೆ ದೈನಂದಿನ ಜಂಜಾಟ ಅದನ್ನೂ ಮರೆಸುತ್ತದೆ. ಆದರೆ ಅದನ್ನು ನೆನಪಿಸುವುದನ್ನು ಪತಿ ರಾಕೇಶ್ ಮರೆಯುವುದಿಲ್ಲ. ಅವರಿಗೂ ನನ್ನ ವೀಣಾ ವಾದನ ಅಚ್ಚುಮೆಚ್ಚು. ಸಿನಿಮಾ, ಆಲ್ಬಂಗಳಿಗಷ್ಟೇ ಅಲ್ಲ, ಹಂಪಿ ಉತ್ಸವ, ಆನೆಗುಂದಿ ಉತ್ಸವ, ಕರಾವಳಿ ಉತ್ಸವ, ದಸರಾ ಉತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರೆದುರಿಗೆ ಹಾಡಿರುವೆ. ನಮ್ಮಂಥ ಸ್ಥಳೀಯ ಹಾಡುಗಾರರಿಗೆ ಇಂಥ ಕಾರ್ಯಕ್ರಮಗಳು ಬಹುದೊಡ್ಡ ವೇದಿಕೆ. 

ಇದುವರೆಗೂ ಸುಮಾರು ಎರಡೂವರೆ ಸಾವಿರ ಕನ್ನಡ ಹಾಡುಗಳನ್ನು ಹಾಡಿರುವೆ. ಇಲ್ಲಿನ ಹೆಸರು ನೆರೆ ಭಾಷಿಗರೂ ಗುರುತಿಸುವಂತೆ ಮಾಡಿದೆ. ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಿಗೂ ಹಾಡಿದ್ದೇನೆ. ಅನೇಕ ಭಕ್ತಿಗೀತೆಗಳ ಆಲ್ಬಂಗಳಿಗೂ ದನಿ ನೀಡಿದ್ದೇನೆ.

ಇಷ್ಟೇ ಅಲ್ಲದೇ ಸುಮಾರು ಎಂಟುನೂರು ಹಾಡುಗಳ ಟ್ರ್ಯಾಕ್ ಹಾಡಿರುವೆ. ಟ್ರ್ಯಾಕ್ ಹಾಡುವುದರಲ್ಲಿ ತಮ್ಮ ಪ್ರತಿಭೆ ಕಳೆದುಹೋಗುತ್ತದೆ ಎಂಬ ಅಭಿಪ್ರಾಯ ಹಲವರದು. ಅದು ತಪ್ಪು. ಅದು ಹಿನ್ನೆಲೆ ಗಾಯನವನ್ನು ಕಲಿಸುವ ವೇದಿಕೆ ಎನ್ನುವುದು ನನ್ನ ನಂಬಿಕೆ. ನನ್ನ ಟ್ರ್ಯಾಕ್ ಹಾಡುಗಳನ್ನು ಕೇಳಿ ಮೆಚ್ಚಿಕೊಂಡವರೂ ಇದ್ದಾರೆ. ಪ್ರಶಸ್ತಿಗಳನ್ನು ಪಡೆದೆ ಎಂದುಕೊಂಡು ಟ್ರ್ಯಾಕ್ ಹಾಡುವುದನ್ನು ನಿಲ್ಲಿಸಿಲ್ಲ. ಇಂದಿಗೂ ಟ್ರ್ಯಾಕ್ ಹಾಡುತ್ತೇನೆ. ಆಗ ನಾನಿನ್ನೂ ಕಲಿಯುತ್ತಲೇ ಇದ್ದೇನೆ ಎಂಬ ಭಾವನೆ ನನ್ನಲ್ಲಿರುತ್ತದೆ. ಅದರಿಂದಲೇ ನನ್ನ ಸಂಗೀತ ಸಾಮರ್ಥ್ಯ ಹೆಚ್ಚುತ್ತದೆ ಎಂದು ನಂಬಿದ್ದೇನೆ. ಒಂದೇ ದಿನದಲ್ಲಿ ನಾನು ಹದಿನಾರು ಹಾಡುಗಳ ರೆಕಾರ್ಡಿಂಗ್ ಮಾಡಿದ್ದು ಇಂಥ ನಂಬಿಕೆಯಿಂದಲೇ.

ಗಾಯನದಾಚೆ `ನನ್ನ ಪ್ರೀತಿಯ ಹುಡುಗಿ' ಮತ್ತು `ಪ್ಯಾರಿಸ್ ಪ್ರಣಯ' ಚಿತ್ರದ ನಾಯಕಿಯರಿಗೆ ಕಂಠದಾನವನ್ನೂ ಮಾಡಿದ್ದೇನೆ. ಗಾಯನ ಮತ್ತು ವೀಣಾ ವಾದನದಂತೆ ಯೋಗ ಮಾಡುವುದು ದಿನನಿತ್ಯದ ಅಭ್ಯಾಸ. ಇದರೊಂದಿಗೆ ಚಿತ್ರಕಲೆಯೂ ನನಗಿಷ್ಟ.    ಇಂದು ಹಿನ್ನೆಲೆ ಗಾಯಕರ ನಡುವೆ ಸ್ಪರ್ಧೆ ಹೆಚ್ಚಾಗಿದೆ. ಒಂದೇ ದಿನಕ್ಕೆ ಕೀರ್ತಿ ಸಂಪಾದನೆ ಮಾಡಲು ಯಾರಿಗೂ ಸಾಧ್ಯವಿಲ್ಲ. ನನ್ನಲ್ಲಿ ಸಹನೆ ಇದೆ. ಅದಕ್ಕೆ ತಕ್ಕಂತೆ ಕಲಿಯುವ ಉತ್ಸಾಹವೂ ಇದೆ.

ಅದು ಸಂಗೀತ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಲ್ಲಿಸಲಿದೆ ಎಂಬ ನಂಬಿಕೆ ನನ್ನದು.
                               

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT