ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ನಿಯಮ ಉಲ್ಲಂಘನೆ: ಕಠಿಣ ಕ್ರಮ

Last Updated 5 ನವೆಂಬರ್ 2011, 19:40 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸರು ಪದೇ ಪದೇ ನಿಯಮ ಉಲ್ಲಂಘಿಸುವ ವಾಹನ ಸವಾರರ ಚಾಲನಾ ಪರವಾನಗಿಯನ್ನು (ಡಿ.ಎಲ್) ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಿದ್ದಾರೆ.

ನಗರದೆಲ್ಲೆಡೆ ಭಾನುವಾರದಿಂದಲೇ (ನ.6) ಈ ಕ್ರಮ ಜಾರಿಯಾಗಲಿದ್ದು, ಎರಡನೇ ಬಾರಿಗೆ ನಿಯಮ ಉಲ್ಲಂಘಿಸುವವರ ಡಿ.ಎಲ್ ಅನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಳ್ಳಲಿದ್ದಾರೆ. ಪಾನಮತ್ತ ಚಾಲನೆ, ಡ್ರಾಗ್ ರೇಸ್, ವ್ಹೀಲಿಂಗ್, ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ ಹಾಗೂ ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವವರ ವಿರುದ್ಧ ಈ ಕ್ರಮ ಜರುಗಿಸಲು ಪೊಲೀಸರು ನಿರ್ಧರಿಸಿದ್ದಾರೆ.

`ಒಮ್ಮೆ ಸಂಚಾರ ನಿಯಮ ಉಲ್ಲಂಘಿಸಿದ ವ್ಯಕ್ತಿಗಳೇ ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣಗಳು ಸಾಕಷ್ಟು ವರದಿಯಾಗುತ್ತಿವೆ. ದಂಡದ ಮೊತ್ತ ಕಡಿಮೆ ಇರುವುದರಿಂದ ವಾಹನ ಸವಾರರು ಈ ರೀತಿ ನಿಯಮಗಳನ್ನು ಲೆಕ್ಕಿಸದೆ ಉಲ್ಲಂಘನೆ ಮಾಡುತ್ತಿದ್ದಾರೆ. ಇದರಿಂದ ಅಪಘಾತಗಳು ಸಂಭವಿಸಿ ಸಾವು ನೋವು ಪ್ರಮಾಣ ಹೆಚ್ಚಾಗುತ್ತಿದೆ. ಅಲ್ಲದೇ ಇತರೆ ವಾಹನ ಸವಾರರಿಗೂ ತೊಂದರೆಯಾಗುತ್ತಿದೆ. ಆದ್ದರಿಂದ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ಚಾಲನಾ ಪರವಾನಗಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಲಾಗಿದೆ~ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ.ಸಲೀಂ `ಪ್ರಜಾವಾಣಿ~ಗೆ ತಿಳಿಸಿದರು.

ಅಪಘಾತ ಪ್ರಮಾಣವನ್ನು ತಗ್ಗಿಸಲು ಮತ್ತು ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ನಗರದ ಎಲ್ಲ ಠಾಣೆಗಳ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದ್ದು, ಭಾನುವಾರದಿಂದಲೇ ಈ ಕ್ರಮ ಜಾರಿಯಾಗಲಿದೆ. ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವವರು ಹಾಗೂ ಸಿಗ್ನಲ್ ನಿಯಮ ಉಲ್ಲಂಘಿಸುವವರ ಡಿ.ಎಲ್‌ಗಳನ್ನು ಸಹ ಮುಂದಿನ ದಿನಗಳಲ್ಲಿ ಮುಟ್ಟುಗೋಲು   ಹಾಕಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ನಿಯಮ ಉಲ್ಲಂಘಿಸಿದ ವಾಹನ ಸವಾರನ ವಿರುದ್ಧ ಈ ಹಿಂದೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಯಾವುದಾದರೂ ಪ್ರಕರಣ ದಾಖಲಾಗಿತ್ತೇ ಎಂಬ ಬಗ್ಗೆ ಅಧಿಕಾರಿಗಳು ಸ್ಥಳದಲ್ಲೇ ಬ್ಲಾಕ್ ಬೆರ‌್ರಿ ಸಾಧನದ ಮೂಲಕ ತಪಾಸಣೆ ನಡೆಸುತ್ತಾರೆ. ಯಾವುದಾದರೂ ಪ್ರಕರಣ ದಾಖಲಾಗಿದ್ದರೆ ಅಂತಹ ವಾಹನ ಸವಾರನ ಡಿ.ಎಲ್ ಅನ್ನು ಸಿಬ್ಬಂದಿ ಮುಟ್ಟುಗೋಲು ಹಾಕಿಕೊಂಡು, ನ್ಯಾಯಾಲಯಕ್ಕೆ ಅಥವಾ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ (ಆರ್‌ಟಿಓ) ಕಳುಹಿಸಿಕೊಡುತ್ತಾರೆ. ಅಲ್ಲದೇ ಮೂರರಿಂದ ಆರು ತಿಂಗಳವರೆಗೆ ಆ ವಾಹನ ಸವಾರನ ಡಿ.ಎಲ್ ಅನ್ನು ರದ್ದುಪಡಿಸುವಂತೆ ಆರ್‌ಟಿಓಗಳಿಗೆ ಸೂಚಿಸುತ್ತಾರೆ ಎಂದು ಸಲೀಂ ಮಾಹಿತಿ ನೀಡಿದರು.

ಮೊಬೈಲ್‌ನಲ್ಲಿ ಸಂಭಾಷಿಸಿ ಮೂರನೇ ಬಾರಿಗೆ ಸಿಕ್ಕಿ ಬಿದ್ದರೆ, ಪಾನಮತ್ತ ಚಾಲಕರಿಗೆ ಎರಡನೇ ಬಾರಿಗೆ, ಪಾದಚಾರಿ ಮಾರ್ಗದಲ್ಲಿ ಚಾಲನೆ, ಡ್ರಾಗ್ ರೇಸ್ ಮತ್ತು ವ್ಹೀಲಿಂಗ್ ಮಾಡುವವರ ಮೇಲೆ ಮೊದಲನೇ ಬಾರಿಯೇ ಈ ಕ್ರಮ ಕೈಗೊಳ್ಳಲಾಗುತ್ತದೆ. ಅವರ ಡಿ.ಎಲ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

ಬಿಎಂಟಿಸಿ ಚಾಲಕರಿಗೆ ಎಚ್ಚರಿಕೆ: ಬಿಎಂಟಿಸಿ ಚಾಲಕರಿಗೂ ಈ ನಿಯಮ ಅನ್ವಯವಾಗಲಿದೆ. ಬಿಎಂಟಿಸಿ ಚಾಲಕರು ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಅವರ ಚಾಲನಾ ಪರವಾನಗಿಯನ್ನು ಸಹ ರದ್ದುಪಡಿಸಲಾಗುತ್ತದೆ ಎಂದು ಸಲೀಂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT