ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತಸ ತಂದ ದೀಪಾವಳಿ ಜಡಿಮಳೆ

Last Updated 30 ಅಕ್ಟೋಬರ್ 2011, 9:35 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ದೀಪಾವಳಿಯೊಂದಿಗೆ ಜಡಿಮಳೆಯೂ ಕಾಲಿಟ್ಟಿದೆ. ಇದರಿಂದ ಒಣಗಿದ್ದ ಬೆಳೆಗಳಿಗೆ ಹೆಚ್ಚಿನ ಪ್ರಯೋಜನವಾಗಿದೆ. ಮೂರು ದಿನಗಳಿಂದ ಆಗಾಗ ಸುರಿಯುತ್ತಿರುವ ಜಡಿಮಳೆಯಿಂದ ಬಾಡುತ್ತಿದ್ದ ಬೆಳೆಗಳಲ್ಲಿ ಹಸಿರು ಮೂಡಿದೆ. ಮಳೆ ಹಿನ್ನಡೆಯಿಂದ ಭರವಸೆ ಕಳೆದುಕೊಂಡಿದ್ದ ರೈತ ಸಮುದಾಯದಲ್ಲಿ ಸಂತಸದ ಅಲೆ ಎದ್ದಿದೆ.

ದೀಪಾವಳಿಗೆ ಜಡಿ ಮಳೆ ಸುರಿಯುವುದು ಹಿಂದೆ ಸಾಮಾನ್ಯ ನೈಸರ್ಗಿಕ ವಿದ್ಯಮಾನವಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಜಡಿಗೆ ಮೊದಲೇ ಒಲೆಗೆ ಸೌದೆ ಅಣಿಗೊಳಿಸಿಕೊಳ್ಳುತ್ತಿದ್ದರು. ಹಳ್ಳಿಗಳಲ್ಲಿ ಜನ ಮತ್ತು ದನಕರುಗಳು ಓಡಾಲೂ ಆಗದಷ್ಟು ಕೆಸರು ತುಂಬಿರುತ್ತಿತ್ತು. ಕಳೆದ ಕೆಲವು ವರ್ಷಗಳಿಂದ ದೀಪಾವಳಿ ಸಂದರ್ಭದಲ್ಲಿ ಮಳೆಯೇ ಇಲ್ಲದೆ ಈ ಸಾಮಾನ್ಯ ವಿದ್ಯಮಾನಕ್ಕೆ ತೆರೆ ಬಿದ್ದಿತ್ತು. ಆದರೆ ಈ ಸಲ ಮಾತ್ರ ದೀಪಾವಳಿಗೆ ಸರಿಯಾಗಿ ಜಡಿಮಳೆ ಪ್ರಾರಂಭವಾಗಿದೆ.

ತಾಲ್ಲೂಕಿನಲ್ಲಿ ರಾಗಿ ತೆನೆ ಹಾಲು ಕಟ್ಟುತ್ತಿದೆ. ತೊಗರಿ ಬೆಳೆ ಹೂ ಬಿಡುವ ಹಂತ ತಲುಪಿದೆ. ಅವರೆ ಗಿಡಗಳಲ್ಲಿ ಬಳ್ಳಿ ಬರುತ್ತಿದೆ. ನೆಲಗಡಲೆ ಬಲಿತಿದೆ. ಈ ಎಲ್ಲ ಬೆಳೆಗಳ ಉಳಿವಿಗೆ ಮಳೆಯ ಅಗತ್ಯವಿತ್ತು.
ನೆನೆಮಳೆಯಾದರೂ ಈ ಎಲ್ಲ ಬೆಳೆಗಳಿಗೆ ಲೇಸಾಗಿದೆ.

ತಾಲ್ಲೂಕಿನ ಉತ್ತರ ಭಾಗದ ರಾಯಲ್ಪಾಡ್, ಮುದಿಮಡಗು, ಗೌನಿಪಲ್ಲಿ, ಮರಸನಪಲ್ಲಿ ಮತ್ತಿತರೆಡೆ ಶೇಂಗಾ ಕೀಳುವ ಕಾರ್ಯ ಪ್ರಗತಿಯಲ್ಲಿದೆ. ಆದರೆ ಈಗ ತಾನೆ ಮಳೆಯಾಗಿರುವುದರಿಂದ ಎಲ್ಲರಿಗೂ ಒಂದೇ ಬಾರಿ ಕೆಲಸದ ಒತ್ತಡ ಹೆಚ್ಚಿದೆ. ಇದರಿಂದ ಕೃಷಿ ಕಾರ್ಮಿಕರ ಸಮಸ್ಯೆ ತಲೆದೋರಿದೆ.

 `ಇಷ್ಟು ಮಳೆ ಆದರೂ ಕೆರೆ ಕುಂಟೆಗಳಿಗೆ ನೀರು ಬಂದಿಲ್ಲ. ಕೆರೆ ಕುಂಟೆಗಳಲ್ಲಿ ಬಿಟ್ಟ ಬಿರುಕು ಬಿಟ್ಟಂತೆಯೇ ಇದೆ. ತೇವದಿಂದಾಗಿ ಹೊಲದ ಬೆಳೆಗಳಿಗೆ ಉಪಯೋಗವಾಗಿದೆ. ಈ ಮಳೆ ಬರದೆ ಹೋಗಿದ್ದರೆ ಯಾವುದೇ ಬೆಳೆ ಕೈಗೆ ಸಿಗುತ್ತಿರಲಿಲ್ಲ. ಈಗ ಹೇಗೋ ಪರವಾಗಿಲ್ಲ~ ಎಂದು ನಲ್ಲಪ್ಪಲ್ಲಿ ಗ್ರಾಮದ ಕೃಷಿಕ ಕೃಷ್ಣೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.

`ಈ ಮಳೆಯಿಂದ ದನಗಳಿಗೆ ಒಂದಷ್ಟು ಮೇವು ಸಿಗುವಂತಾಯಿತು. ದೇವರು ದೊಡ್ಡವನು. ದೀಪಾವಳಿ ಜಡಿ ಕಂಡು ಎಷ್ಟು ವರ್ಷಗಳಾಗಿತ್ತು~ ಎಂದು ಹಳೆಪೇಟೆಯ ಮುನಿಯಮ್ಮ ಆಶ್ಚರ್ಯ ವ್ಯಕ್ತಪಡಿಸಿದರು.

ಸತತ ಮೋಡ ಬಂದರೆ ರೇಷ್ಮೆ ಹುಳುವಿಗೆ ಸೊಪ್ಪನ್ನು ಹವಣಿಸುವುದು ಕಷ್ಟವಾಗುತ್ತದೆ. ಹುಳು ಹಣ್ಣಾಗಿದ್ದರೆ ಗೂಡು ಕಟ್ಟಲು ತೊಂದರೆಯಾಗುತ್ತದೆ. ವೈಜ್ಞಾನಿಕ ಚಂದ್ರಿಕೆ ಗೃಹ ನಿರ್ಮಿಸಿದ್ದಲ್ಲಿ ಹೆಚ್ಚಿನ ತೊಂದರೆ ಆಗುವುದಿಲ್ಲ.
ಆದರೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ರೈತರು ಸಾಂಪ್ರದಾಯಿ ವಿಧಾನ ಅನುಸರಿಸಿ ಗೂಡುಕಟ್ಟಿಸುತ್ತಿದ್ದಾರೆ.
ಈ ದೀಪಾವಳಿ ಕೃಷಿಕರಿಗೆ ಸಂತೋಷ ತಂದಿದೆ. ಕನಿಷ್ಠ ಇಟ್ಟ ಬೆಳೆ ಹಸಿರು ಮೂಡಿತಲ್ಲ. ಹಾಲು ಕಟ್ಟಿತಲ್ಲ. ದನಕರುಗಳಿಗೆ ಮೇವು ದಕ್ಕಿತಲ್ಲ ಎಂಬ ಸಮಾಧಾನದಲ್ಲಿ ರೈತರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT