ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೋಷ, ಸಂಕೋಚ: ಸಿಎನ್‌ಆರ್‌

‘ನೆರಳುಗಳ ಬೆನ್ನು ಹತ್ತಿ’ದವರನ್ನು ಪ್ರಶಸ್ತಿ ಬೆನ್ನು ಹತ್ತಿ ಬಂದಾಗ...
Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ದಿಗ್ಭ್ರಮೆ, ಸಂತೋಷ, ಸಂಕೋಚ, ಕೃತಜ್ಞತೆ... ಹೀಗೆ ಸಮ್ಮಿಶ್ರ ಭಾವಗಳು ಒಟ್ಟಾಗಿ ಸ್ಫುರಿಸುತ್ತಿರುವ ಕಾರಣ ಏನು ಹೇಳಬೇಕೆನ್ನುವುದೇ ಗೊತ್ತಾಗುತ್ತಿಲ್ಲ’

–‘ನೆರಳುಗಳ ಬೆನ್ನು ಹತ್ತಿ’ ಹೊರಟ ಹಿರಿಯ ವಿಮರ್ಶಕ ಪ್ರೊ.ಸಿ.ಎನ್‌. ರಾಮಚಂದ್ರನ್‌, ತಮ್ಮನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  ಬಂದ ಕ್ಷಣದಲ್ಲಿ ಬುಧವಾರ ‘ಪ್ರಜಾವಾಣಿ’ಗೆ ನೀಡಿದ ಪ್ರತಿಕ್ರಿಯೆ ಇದು.

‘ಈ ಸಂದರ್ಭದಲ್ಲಿ ನನ್ನ ಸಂತೋ ಷಕ್ಕೆ ಕಾರಣವಾದವರು ಅನೇಕರಿ ದ್ದಾರೆ; ಪ್ರೊ. ಎಲ್‌.ಎಸ್‌. ಶೇಷಗಿರಿ ರಾವ್‌, ಪ್ರೊ. ಜಿ.ಎಸ್‌. ಶಿವರುದ್ರಪ್ಪ ಮುಂತಾದ ಹಿರಿಯರು, ಪ್ರೊ. ವಿವೇಕ ರೈ, ಪ್ರೊ. ಗಿರಡ್ಡಿ ಗೋವಿಂದರಾಜ್‌, ಪ್ರೊ. ಎಂ.ಎಂ. ಕಲ್ಬುರ್ಗಿ, ಪ್ರೊ. ಟಿ.ಪಿ. ಅಶೋಕ ಅವರಂತಹ ಅನೇಕಾನೇಕ ಪ್ರಿಯ ಮಿತ್ರರು ಹಾಗೂ ನಲ್ಮೆಯ ಓದುಗರಿಗೆಲ್ಲ ಕೃತಜ್ಞತೆ ಅರ್ಪಿಸುತ್ತೇನೆ’ ಎಂದು ಭಾವುಕರಾಗಿ ಹೇಳಿದರು.

ಎರಡು ವರ್ಷಗಳ ಹಿಂದೆ 2011ರಲ್ಲಿ ಪ್ರಕಟವಾದ ಪ್ರೊ. ಸಿಎನ್‌ಆರ್‌ ಪ್ರಬಂಧಗಳ ಸಂಕಲನ ‘ಆಖ್ಯಾನ–ವ್ಯಾಖ್ಯಾನ’. ಭಗವದ್ಗೀತೆ ಯಿಂದ ಹಿಡಿದು ಭಕ್ತಿ ಚಳವಳಿವರೆಗೆ ಎಲ್ಲ ಪ್ರಾಚೀನ ಹಾಗೂ ಮಹಾ ಕಾವ್ಯಗಳ ಕುರಿತು ಸಂಶೋಧ ನಾತ್ಮಕ ಪ್ರಬಂಧಗಳು ಈ ಸಂಕಲನದಲ್ಲಿವೆ. ಕನ್ನಡ ಸಾಹಿತ್ಯದ ಇತ್ತೀಚಿನ ಒಲವುಗಳ ಬಗೆಗೂ ಮುಕ್ತವಾಗಿ ಚರ್ಚಿಸಿದ್ದಾರೆ. ಮರು ಚಿಂತನೆಗೆ ಒಡ್ಡುವಂತಹ ಬರಹಗಳಿಂದ ಈ ಕೃತಿ ಗಮನಸೆಳೆದಿದೆ.

‘ಆಖ್ಯಾನ–ವ್ಯಾಖ್ಯಾನ’ ನನ್ನ ಬಲು ಪ್ರೀತಿಯ ಕೃತಿ. ನನ್ನ ಆಳ ಸಂಶೋಧನೆ ಮತ್ತು ಅಧ್ಯಯನದ ಫಲ ಅದು. ಆ ಕೃತಿಗೆ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ’ ಎಂದು ಸಿಎನ್‌ ಆರ್‌ ಸಂಕೋಚದಿಂದಲೇ ತಿಳಿಸಿದರು.

ಅನುವಾದ, ವಿಮರ್ಶೆ, ಪ್ರಬಂಧ, ಜನಪದ... ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಸಿಎನ್‌ಆರ್‌ ಅವರಿಗೆ ವಿಮರ್ಶೆಯೇ ಪ್ರಿಯವಾದ ಕ್ಷೇತ್ರವಂತೆ.

‘ವಿಮರ್ಶೆ ಮೇಲೆ ಅಷ್ಟೇಕೆ ಒಲವು’ ಎಂದು ಕೇಳಿದರೆ, ‘ವಿಮರ್ಶಾ ಕ್ಷೇತ್ರದಲ್ಲಿ ತೊಡಗಿಸಿ ಕೊಳ್ಳದಿದ್ದರೆ ಕನ್ನಡದ ಶ್ರೀಮಂತ ಸಾಹಿತ್ಯವನ್ನು, ಗಂಭೀರ ಕೃತಿಗಳನ್ನು ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಓದಲು ಆಗುತ್ತಿರಲಿಲ್ಲ. ಆಗ ನನ್ನ ಅರಿವು ಸಹ ವಿಸ್ತಾರ ಆಗುತ್ತಿರಲಿಲ್ಲ. ಪಂಪನ ಆದಿಪು ರಾಣದಿಂದ ಆಧುನಿಕ ಸಾಹಿತ್ಯದ ಕೃತಿಗಳವರೆಗೆ ಪುಸ್ತಕಗಳ ಓದು ನನಗೆ ಕೊಟ್ಟ ಕೊಡುಗೆ ದೊಡ್ಡದು. ಆದ್ದರಿಂದಲೇ ಅದಕ್ಕೆ ಅವಕಾಶ ಕಲ್ಪಿಸಿದ ವಿಮರ್ಶೆ ನನಗೆ ಪ್ರಿಯವಾದ ಕ್ಷೇತ್ರ’ ಎಂದು ವಿವರಿಸಿದರು.

‘ಕನ್ನಡದಲ್ಲಿ ಪ್ರತಿವರ್ಷ ಸಾವಿರಾರು ಕೃತಿಗಳು ಮುದ್ರಣವಾಗುತ್ತಿವೆ. ಒಬ್ಬ ವಿಮರ್ಶಕರಾಗಿ ಅವುಗಳ ಗುಣ ಮಟ್ಟದ ಕುರಿತು ನಿಮ್ಮ ಅಭಿಪ್ರಾಯ ಏನು’ ಎಂದು ಪ್ರಶ್ನಿಸಿದರೆ, ‘ಮೌಲಿಕ, ಶ್ರೇಷ್ಠ ಎನ್ನುವುದು ಮೂರ್ತ ಸ್ವರೂಪದ ತೀರ್ಮಾನವಲ್ಲ. ಓದುಗರು ಪುಸ್ತಕ ಕೊಂಡು ಓದದಿದ್ದರೆ ಅಷ್ಟೊಂದು ಏಕೆ ಮುದ್ರಣ ಆಗುತ್ತವೆ ಹೇಳಿ? ಹೊಸ ಕೃತಿಗಳು ಬಂದಷ್ಟೂ ಕನ್ನಡ ಸಾಹಿತ್ಯ ಶ್ರೀಮಂತವಾಗುತ್ತಿದೆ. ಹೆಚ್ಚಿನ ಪುಸ್ತಕಗಳು ಮುದ್ರಣವಾದರೆ ಯಾರೂ ಮೂಗು ಮುರಿಯುವ ಅಗತ್ಯವಿಲ್ಲ’ ಎಂದು ಖಡಕ್‌ ಅಭಿಪ್ರಾಯ ವ್ಯಕ್ತಪಡಿಸಿದರು.

‘ಸಾಹಿತ್ಯ ಸಮ್ಮೇಳನವು ಉತ್ಸವ, ಹಬ್ಬ, ಜಾತ್ರೆ, ಗಂಭೀರ... ಹೀಗೆ ಎಲ್ಲ ಸ್ವರೂಪದಲ್ಲೂ ನಡೆಯಬೇಕು. ಗಂಭೀರ ಚರ್ಚೆಗಳಷ್ಟೇ ಅಲ್ಲಿ ನಡೆಯಬೇಕೆಂದರೆ ತಪ್ಪಾಗುತ್ತದೆ. ನುಡಿಸಿರಿ ಮತ್ತು ಧಾರವಾಡದ ಸಾಹಿತ್ಯೋತ್ಸವಗಳಲ್ಲಿ ಎಲ್ಲವನ್ನೂ ಒಳಗೊಂಡಂತೆ ಕಾರ್ಯಕ್ರಮ ರೂಪಿಸಲು ಯತ್ನಿಸಲಾಗುತ್ತದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸಹ ಎಲ್ಲವನ್ನೂ ಒಟ್ಟಿಗೆ ತರಲು ಯತ್ನಿಸಬೇಕು ಎನ್ನುವ ಅಪೇಕ್ಷೆ ನನ್ನದು’ ಎಂದು ಹೇಳಿದರು.

‘ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಿರಿ–ಕಿರಿಯ ಸಾಹಿತಿಗಳು ಯಾರೂ ದೂರವಾಗಿಲ್ಲ. ಎಲ್ಲರೂ ಅದ ರೊಂದಿಗೆ ಇದ್ದಾರೆ. ಕನ್ನಡಿಗರ ಪ್ರಾತಿ ನಿಧಿಕ ಸಂಸ್ಥೆಯಾದ ಕಸಾಪ ವಿಷಯಗಳಿಗೆ ಸರ್ಕಾರದ ಮಟ್ಟದಲ್ಲೂ ಆದ್ಯತೆ ಸಿಗಬೇಕು’ ಎಂದು ಸೂಚ್ಯವಾಗಿ ತಿಳಿಸಿದರು.
ಪರಿಚಯ: ಮೈಸೂರು ಜಿಲ್ಲೆಯ ಚಿಲ್ಕುಂದದಲ್ಲಿ 1936ರಲ್ಲಿ ಜನಿಸಿದ ಸಿಎನ್‌ಆರ್‌, ಮೈಸೂರು ವಿ.ವಿಯಿಂದ ಬಿ.ಎ. ಆನರ್ಸ್‌ ಮತ್ತು ಎಂ.ಎ. ಪದವಿ ಪಡೆ­ದವರು. ಅಮೆರಿಕ ಮಯಾಮಿ ವಿ.ವಿಯಿಂದ ಪಿ.ಎಚ್‌ಡಿ ಪದವಿ ಪೂರೈಸಿದವರು.

ದೇಶ–ವಿದೇಶಗಳ ಹಲವು ವಿ.ವಿ ಮತ್ತು ಕಾಲೇಜು­ಗಳಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅವರು, ಸಾಹಿತ್ಯ ಕೃಷಿಯನ್ನೂ ಅಷ್ಟೇ ಪ್ರೀತಿಯಿಂದ ಮಾಡಿದವರು.

ಬಿರ್ಲಾ ಫೆಲೊಷಿಪ್‌, ಗೌರೀಶ್‌ ಕಾಯ್ಕಿಣಿ, ರಾಜ್ಯ ಸಾಹಿತ್ಯ ಅಕಾಡೆಮಿ, ಮಾಸ್ತಿ, ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

ಶೋಧ (ಕಾದಂಬರಿ), ಕಸಾಂದ್ರ (ಸಣ್ಣಕಥೆ), ಹುಲಿ ಬಂತು ಹುಲಿ (ರೇಡಿಯೊ ನಾಟಕ), ಶಿಲ್ಪ ವಿನ್ಯಾಸ, ಸ್ವರೂಪ, ತ್ರಿವೇಣಿ, ಬಯಲು ರೂಪ ಸೇರಿ­ದಂತೆ 18 ವಿಮರ್ಶೆ ಮತ್ತು ಪ್ರಬಂಧ­ಗಳ ಸಂಕಲ­ನಗಳನ್ನು ರಚಿಸಿರುವ ಅವರು, ಕನ್ನಡದ ಶ್ರೇಷ್ಠ ಕೃತಿಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ.

ಜನಪದ ಮಹಾಕಾವ್ಯಗಳ ಮೇಲೆ ವಿಶೇಷ ಆಸಕ್ತಿ ಬೆಳೆಸಿಕೊಂಡಿರುವ ಸಿಎನ್‌ಆರ್‌ ‘ಹೊಸಮಡಿಯ ಮೇಲೆ ಚದುರಂಗ’ ಎಂಬ ಪ್ರಬಂಧಗಳ ಸಂಕಲನ ತಂದಿ­ದ್ದಾರೆ. ಮಲೆ ಮಾದೇಶ್ವರ, ಮಂಟೇಸ್ವಾಮಿ, ಹಾಲು ಮತ ಮಹಾಕಾವ್ಯ, ಜುಂಜಪ್ಪ, ಕುಮಾರರಾಮ, ಕೃಷ್ಣಗೊಲ್ಲರ ಕಾವ್ಯ, ತುಳುವಿನ  ಸಿರಿ, ತೆಲುಗಿನ ಪಲ್ನಾಟಿ ವೀರುಲ ಕಥಾ, ತಮಿಳಿನ ಅಣ್ಣನ್ ಮಾರ್ ಕತೈ, ರಾಜಾಸ್ತಾನದ ಪಾಬೂಜಿ ಸೇರಿದಂತೆ ಹಲವು ಮಹಾ ಕಾವ್ಯಗಳ ಅಧ್ಯಯನ ಫಲ ಅದಾಗಿದೆ. ‘ನೆರಳುಗಳ ಬೆನ್ನು ಹತ್ತಿ’ ಕೃತಿ ಅವರ ಆತ್ಮಕಥನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT