ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಂಪತ್ತು ಹಸಿದ ಹೊಟ್ಟೆ ತುಂಬಿಸಲಿ'

Last Updated 24 ಏಪ್ರಿಲ್ 2013, 6:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ನಮ್ಮ ದುರಾಸೆ ಮತ್ತು ಸಂಪತ್ತಿನ ಅತಿ ಸಂಗ್ರಹ ಪ್ರವೃತ್ತಿಯಿಂದಾಗಿ ಸಮಾಜದಲ್ಲಿ ಅಸಮಾನತೆಗೆ ಕಾರಣವಾಗಿದೆ' ಎಂದು ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ ವಿಭಾಗದ ನಿವೃತ್ತ ಅಧ್ಯಕ್ಷ ಪ್ರೊ. ಶುಭಚಂದ್ರ ಜೈನ ಅಭಿಪ್ರಾಯಪಟ್ಟರು.

ಭಗವಾನ ಮಹಾವೀರ ಜಯಂತಿ ಅಂಗವಾಗಿ ನಗರದ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಅಗತ್ಯಕ್ಕಿಂತಲೂ ಹೆಚ್ಚು ಹೆಚ್ಚು ಧನ-ಸಂಪತ್ತನ್ನು ಕೂಡಿಟ್ಟುಕೊಳ್ಳುವ ಪರಿಗ್ರಹ ಮನೋಭಾವ ಹೊಂದಿರುವುದರಿಂದ ಸಮಾಜ, ದೇಶ ಅಭಿವೃದ್ಧಿಯಾಗುವುದಿಲ್ಲ. ಸಂಪತ್ತು ಸಂಗ್ರಹವಾಗಬಾರದು, ಅದು ಹಸಿದ ಹೊಟ್ಟೆಗಳನ್ನು ತುಂಬಿಸುವಂತಾಗಬೇಕು. ಇದಕ್ಕಾಗಿ ಮಹಾವೀರರು ಬೋಧಿಸಿದ ಅಪರಿಗ್ರಹ ವ್ರತ ಅಥವಾ ಪರಿಗ್ರಹ ಪ್ರಮಾಣವ್ರತ ನಮ್ಮೆಲ್ಲರಲ್ಲೂ ಜಾರಿಗೊಳ್ಳಬೇಕು. ಅಂದರೆ ಅವಶ್ಯಕತೆ ಮೀರಿದ ಸಂಪತ್ತನ್ನು ಸಮಾಜದ ಉಪಯೋಗಕ್ಕೆ ನೀಡಬೇಕು. ಆಗ ನಿಜವಾದ ಧರ್ಮ, ಮಾನವ ಧರ್ಮ ಪಾಲನೆಯಾಗುತ್ತದೆ' ಎಂದು ಅವರು ವಿವರಿಸಿದರು.

`ಶ್ರಮ ಮತ್ತು ತ್ಯಾಗ ಮಾಡುವುದನ್ನೇ ಮಹಾವೀರರು ಬೋಧಿಸಿದರು. ಸಕಲ ಜೀವರಾಶಿಯ ಕಲ್ಯಾಣ ದೃಷ್ಟಿಯಿಂದ ಅಹಿಂಸೆ, ಸತ್ಯ, ಅಪರಿಗ್ರಹ, ಬ್ರಹ್ಮಚರ್ಯ ಮೊದಲಾದವುಗಳನ್ನು ಅವರು ವಿಸ್ತೃತವಾಗಿ ಬೋಧಿಸಿದರು' ಎಂದು ಅವರು ಹೇಳಿದರು.

`ಜೀವನದ ಒಳಿತಿಗೆ ಏನನ್ನು ಮಾಡಬೇಕು? ಏನನ್ನು ಮಾಡಬಾರದು ಎಂದು ಪ್ರತಿಯೊಬ್ಬರಿಗೆ ಗೊತ್ತಿದ್ದರೂ ಪ್ರತಿಯೊಂದರಲ್ಲೂ ತಕ್ಷಣದ ಫಲ ಬಯಸುತ್ತಾನೆ. ಜೊತೆಗೆ ಒಳಿತಿಗಿಂತ ಕೆಟ್ಟದ್ದು ಮಾಡುವುದರಲ್ಲೇ ಮುಂದಾಗುತ್ತಾನೆ. ಇದೇ ದುಃಖಕ್ಕೆ ಕಾರಣವಾಗುತ್ತದೆ. ಇದಕ್ಕೆ ಪರಿಹಾರ ಎಂದರೆ, ಮಹಾವೀರರ ಪಂಚಶೀಲಗಳು' ಎಂದು ಮುಖ್ಯ ಅತಿಥಿಯಾದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ನಿರಂಜನಕುಮಾರ ಹೇಳಿದರು.

`ಕಣ್ಣು ಮುಚ್ಚಿ ಕುಳಿತರೆ ಮಹಾವೀರರಾಗುವುದಿಲ್ಲ. ಅದಕ್ಕೆ ಶ್ರಮ ಬೇಕು, ಸಾಧನೆ ಬೇಕು. ತನ್ನನ್ನು ತಾನು ಅರಿತು ತನ್ನ ಮೇಲೆ ವಿಜಯ ಸಾಧಿಸಿದರೆ ಮಾತ್ರ ಮಹಾವೀರನಾಗಬಹುದು' ಎಂದು ಇನ್ನೊಬ್ಬ ಮುಖ್ಯ ಅತಿಥಿಯಾದ ಪದ್ಮಲತಾ ನಿರಂಜನಕುಮಾರ ಹೇಳಿದರು. ದಿಗಂಬರ ಜೈನ ಸಮಾಜದ ಅಧ್ಯಕ್ಷ ಮಹಾವೀರ ಸೂಜಿ ಅಧ್ಯಕ್ಷತೆ ವಹಿಸಿದ್ದರು.

ನಯನಾ ತಾಳಿಕೋಟಿ ಪ್ರಾರ್ಥಿಸಿದರು. ಆರ್.ಟಿ. ತವನಪ್ಪನವರ ಸ್ವಾಗತಿಸಿದರು. ಶಾಂತಿನಾಥ ಹೋತಪೇಟಿ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ಬೆಳಿಗ್ಗೆ 6 ಗಂಟೆಗೆ ನಗರದ ಎಲ್ಲ ಬಸದಿಗಳಲ್ಲಿಯ ಜಿನಪ್ರತಿಮೆಗಳಿಗೆ ಜಲ, ಎಳನೀರು, ಕ್ಷೀರ, ಗಂಧ, ಚಂದನ, ಕೇಸರಿ ಅಭಿಷೇಕ ನಡೆಯಿತು. ಜೊತೆಗೆ ಪುಷ್ಪಾರ್ಪಣೆ ನಡೆಯಿತು. ನಂತರ ಜೈನ ಸಮಾಜ ಮತ್ತು ವಿವಿಧ ಮಹಿಳಾ ಮಂಡಳಗಳ ಸಹಯೋಗದಲ್ಲಿ ಮಹಾವೀರ ಸ್ತಬ್ಧಚಿತ್ರ ಹಾಗೂ ಭಾವಚಿತ್ರಗಳ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT