ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ವಿಸ್ತರಣೆ ತಡ- ಸದಾನಂದಗೌಡ

Last Updated 15 ಜನವರಿ 2012, 19:55 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಇನ್ನೂ ಎರಡು ತಿಂಗಳ ಕಾಲ ವಿಳಂಬವಾಗಲಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡು ಫಲಿತಾಂಶ ಪ್ರಕಟವಾಗುವವರೆಗೂ ಈ ಬಗ್ಗೆ ವರಿಷ್ಠರು ಗಮನ ಹರಿಸುವ ಸಾಧ್ಯತೆ ಇಲ್ಲ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಸಂಪುಟ ವಿಸ್ತರಣೆ ವಿಳಂಬವಾಗುವ ಸ್ಪಷ್ಟ ಸೂಚನೆ ನೀಡಿದ್ದಾರೆ.

ನಗರದಲ್ಲಿ ಭಾನುವಾರ ನಡೆದ ಎರಡು ಕಾರ್ಯಕ್ರಮಗಳ ಬಳಿಕ ಮಾಧ್ಯಮಗಳಿಗೆ ವಿಭಿನ್ನ ಪ್ರತಿಕ್ರಿಯೆ ನೀಡಿದ ಅವರು, `ಸಂಪುಟ ವಿಸ್ತರಣೆ ಕುರಿತು ವರಿಷ್ಠರ ಜೊತೆ ಈಗಾಗಲೇ ಮೊದಲ ಸುತ್ತಿನ ಮಾತುಕತೆ ನಡೆದಿದೆ. ಆದರೆ, ಮತ್ತೆ ಚರ್ಚೆ ನಡೆಸಲು ಐದು ರಾಜ್ಯಗಳ ಚುನಾವಣೆ ಮುಗಿಯುವವರೆಗೂ ಕಾಯಬೇಕಿದೆ~ ಎಂದರು.

`ಸಂಪುಟ ವಿಸ್ತರಣೆ ಕುರಿತು ಪಕ್ಷದ ವರಿಷ್ಠರೇ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ. ಅವರ ಒಪ್ಪಿಗೆ ನಂತರವೇ ಈ ಪ್ರಕ್ರಿಯೆಯಲ್ಲಿ ತೊಡಗುತ್ತೇವೆ. ಈಗ ವರಿಷ್ಠರು ಐದು ರಾಜ್ಯಗಳ ಚುನಾವಣೆಯಲ್ಲಿ ಸಕ್ರಿಯರಾಗಿದ್ದಾರೆ. ಅವರ ಭೇಟಿಗೆ ಸಮಯಾವಕಾಶ ಸಿಗುತ್ತಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಸಂಪುಟ ವಿಸ್ತರಣೆಗೆ ಎರಡು ತಿಂಗಳು ಕಾಯಬೇಕಾಗಿರುವುದು ಅನಿವಾರ್ಯ~ ಎಂದು ಈ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದರು.

ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಈಗಾಗಲೇ ಸಿದ್ಧತೆ ಆರಂಭಿಸಿದೆ. ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂಬಂಧ ಪರಿಶೀಲನೆ ಆರಂಭವಾಗಿದೆ. ವಾರದೊಳಗೆ ಪಕ್ಷದ ವರಿಷ್ಠರೇ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸುತ್ತಾರೆ. ಬಿಜೆಪಿಯ ಎಲ್ಲ ಮುಖಂಡರೂ ಒಟ್ಟಾಗಿ ಚುನಾವಣಾ ಸಿದ್ಧತೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಒಗ್ಗಟ್ಟಿನಿಂದ ಹೋರಾಟ ನಡೆಸಲಾಗುವುದು ಎಂದರು.

`ಆರೋಪ ತೊಲಗಿಸುವೆ~: ಇದಕ್ಕೂ ಮುನ್ನ ಹೆಗಡೆ ನಗರದ ಕೋಗಿಲು ರಸ್ತೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಹಜ್ ಯಾತ್ರಾರ್ಥಿಗಳಿಗೆ ಸೌಲಭ್ಯ ಕಲ್ಪಿಸುವುದಕ್ಕಾಗಿ ನಿರ್ಮಿಸುತ್ತಿರುವ `ಹಜ್ ಘರ್~ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸದಾನಂದ ಗೌಡ ಅವರು, `ಬಿಜೆಪಿ ಸರ್ಕಾರ ಕೇವಲ ಮಠ-ಮಂದಿರಗಳಿಗೆ ಹಣ ಕೊಡುವ ಕೆಲಸ ಮಾಡುತ್ತದೆ ಎಂಬ ಆರೋಪ ತೊಲಗುವಂತೆ ಕೆಲಸ ಮಾಡುತ್ತೇನೆ. ಸರ್ವೇ ಜನಾ ಸುಖಿನೋ ಭವಂತು ಎಂಬ ಮಾತಿನಂತೆ ನಡೆಯುತ್ತೇನೆ~ ಎಂದು ವಾಗ್ದಾನ ನೀಡಿದರು.

`ಈ ಹುದ್ದೆಯಲ್ಲಿ ಇದ್ದಷ್ಟೂ ದಿನ ರಾಜ್ಯದ ಎಲ್ಲ ಜನರನ್ನೂ ಸಮಾನವಾಗಿ ಕಾಣುತ್ತೇನೆ. ಕೊಟ್ಟ ಮಾತಿನಂತೆ ನಡೆಯುತ್ತೇನೆ~ ಎಂದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸರ್ಕಾರದ ವತಿಯಿಂದ ಆಯ್ದ ಮಠ-ಮಂದಿರಗಳಿಗೆ ಹಣ ನೀಡುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಮಾಡಲಾಗುತ್ತಿತ್ತು. ಆದರೆ, ತಮ್ಮ ಸರ್ಕಾರ ಎಲ್ಲ ವರ್ಗದ ಜನರ ಭಾವನೆಗಳನ್ನೂ ಗೌರವಿಸುತ್ತದೆ. ಈಗ 40 ಕೋಟಿ ರೂಪಾಯಿ ವೆಚ್ಚದಲ್ಲಿ `ಹಜ್ ಘರ್~ ನಿರ್ಮಾಣಕ್ಕೆ ಚಾಲನೆ ನೀಡಿರುವುದರಿಂದ ಇಂತಹ ಆರೋಪಗಳಿಗೆ ಉತ್ತರ ದೊರೆತಿದೆ. ಮತ್ತೆ ಇಂತಹ ಆರೋಪ ಬರದಂತೆ ಸರ್ಕಾರ ಕೆಲಸ ಮಾಡುತ್ತದೆ ಎಂದರು.

`ಅಹಂ ಇಲ್ಲ~: `ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದು ಎಲ್ಲವನ್ನೂ ಮಾಡುತ್ತೇನೆ ಎಂಬ ಹುಚ್ಚು ನನ್ನಲ್ಲಿಲ್ಲ. ಆದರೆ, ಮಾಡಲು ಸಾಧ್ಯವಾಗುವ ಎಲ್ಲ ಕೆಲಸಗಳನ್ನೂ ಮಾಡಿಯೇ ತೀರುತ್ತೇನೆ. ನಾನೊಬ್ಬನೇ ಎಲ್ಲವನ್ನೂ ಮಾಡಬೇಕು ಎಂಬ ಕಿಂಚಿತ್ತೂ ಅಹಂಕಾರ ನನಗಿಲ್ಲ. ಇಲ್ಲಿ ಇರುವಾಗ ಒಳ್ಳೆಯ ಕೆಲಸ ಮಾಡಬೇಕು ಎಂಬುದು ನನ್ನ ಬಯಕೆ~ ಎಂದು ಅವರು ಹೇಳಿದರು.

ಯಾರಿಗೂ ವೇದಿಕೆಯಿಂದ ತಾವು ಭರವಸೆ ನೀಡುವುದಿಲ್ಲ. ಜನರ ಅಹವಾಲು, ಮನವಿ ಆಲಿಸಿ, ಅವುಗಳ ಈಡೇರಿಕೆಗೆ ಇರುವ ಅವಕಾಶಗಳ ಬಗ್ಗೆ ಸಂಬಂಧಿಸಿದವರ ಜೊತೆ ಚರ್ಚಿಸಿದ ನಂತರ ತೀರ್ಮಾನಕ್ಕೆ ಬರಲಾಗುವುದು. ತಮ್ಮನ್ನು ಯಾರು ಬೇಕಾದರೂ ಸಂಪರ್ಕಿಸಬಹುದು. ಮುಖ್ಯಮಂತ್ರಿಯಾದ ಐದೂವರೆ ತಿಂಗಳ ಅವಧಿಯಲ್ಲಿ ತಮ್ಮ ಬಳಿ ಬಂದ ಬಹುತೇಕ ಜನರ ಸಮಸ್ಯೆಗಳು ಪರಿಹಾರವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT