ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತಿನ ಸಾರ್ವಭೌಮತ್ವ ಪ್ರಶ್ನೆಗೆ ಟೀಕೆ

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ದೇಶದ ಸಂಸತ್ತಿಗಿಂತ ಯಾವ ವ್ಯಕ್ತಿಯೂ ದೊಡ್ಡವರಲ್ಲ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನರೇ ಎಲ್ಲರಿಗಿಂತ ದೊಡ್ಡವರು. ಆದರೆ ಇಂದು ಸಂಸತ್ತಿನ ಸಾರ್ವಭೌಮತ್ವವನ್ನು ಪ್ರಶ್ನಿಸುವ ಮಟ್ಟಕ್ಕೆ ವ್ಯಕ್ತಿಗಳು ಬೆಳೆದಿರುವುದು ಅಪಾಯಕಾರಿ ಬೆಳವಣಿಗೆ~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ತಂಡದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಇನ್ಸ್‌ಟಿಟ್ಯೂಟ್ ಆಫ್ ಅಬ್ಜೆಕ್ಟೀವ್ ಸ್ಟಡೀಸ್ (ಐಓಎಸ್) ತನ್ನ ಬೆಳ್ಳಿ ಹಬ್ಬ ಪ್ರಯುಕ್ತ ಶುಕ್ರವಾರ ಪುರಭವನದಲ್ಲಿ ಹಮ್ಮಿಕೊಂಡಿದ್ದ `ಜಾಗತೀಕರಣದ ಪ್ರಪಂಚದಲ್ಲಿ ಮಾಧ್ಯಮಗಳ ಶಕ್ತಿ~ ಕುರಿತ ಮೂರು ದಿನಗಳ ಅಂತರರಾಷ್ಟ್ರೀಯ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ಅಣ್ಣಾ ಹಜಾರೆ ಸಂಸತ್ತಿಗಿಂತ ದೊಡ್ಡವರು ಎಂದು ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ನೀಡಿರುವ ಹೇಳಿಕೆಯನ್ನು ಯಾರ ಹೆಸರನ್ನೂ ಹೇಳದೆ ಪ್ರಸ್ತಾಪಿಸಿದ ರಾಜ್ಯಪಾಲರು, `ಇಂತಹ ಹೇಳಿಕೆಗಳಿಂದ ನಿಜಕ್ಕೂ ಬೇಸರವಾಯಿತು. ನಾವೆಲ್ಲರೂ ಸಂಸತ್ತನ್ನು ಒಪ್ಪಿಕೊಂಡ ಮೇಲೆ ಯಾವುದೇ ರೀತಿಯ ಬದಲಾವಣೆಗಳಾಗಬೇಕಿದ್ದಲ್ಲಿ ಅಲ್ಲೇ ಆಗಬೇಕು. ಅದು ಬಿಟ್ಟು ಸಂಸತ್ತಿಗಿಂತ ನಮ್ಮ ಮಾತನ್ನು ಕೇಳಿ ಅನ್ನುವಷ್ಟರ ಮಟ್ಟಿಗೆ ವ್ಯಕ್ತಿಗಳು ಬೆಳೆದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ನಾವು ಗಾಂಧಿ ಅನುಯಾಯಿಗಳೇ ಹೊರತು ಗೋಡ್ಸೆ ಅನುಯಾಯಿಗಳಲ್ಲ~ ಎಂದು ಟೀಕಿಸಿದರು.

ರಾಜ್ಯಸಭೆ ಉಪ ಸಭಾಪತಿ ಡಾ.ಕೆ. ರೆಹಮಾನ್‌ಖಾನ್, `ಇಂದಿನ ಜಾಗತೀಕರಣದ ಯುಗದಲ್ಲಿ ಮಾಧ್ಯಮಗಳು ಅತ್ಯಂತ ಪ್ರಭಾವಶಾಲಿಯಾದವು. ಮಾಧ್ಯಮಗಳು ಹೇಳಿದ್ದನ್ನೆಲ್ಲಾ ಜನತೆ ನಂಬುತ್ತಾರೆ. ಇಂತಹ ಸನ್ನಿವೇಶದಲ್ಲಿ ಮಾಧ್ಯಮಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು~ ಎಂದರು.

`ಮಾಧ್ಯಮಗಳು ಜನತೆಗೆ ಸತ್ಯಾಂಶವನ್ನು ತಿಳಿಸಬೇಕು. ಆದರೆ, ನೈಜ ಸುದ್ದಿಯನ್ನು ಜನರಿಗೆ ತಿಳಿಸುವ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ಹೇರಬಾರದು. ಒಂದು ರಾಷ್ಟ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಅಥವಾ ಅಧೋಗತಿಗೆ ಇಳಿಸುವ ಶಕ್ತಿ ಮಾಧ್ಯಮಗಳಿಗಿದೆ. ಹೀಗಾಗಿ, ನೈತಿಕತೆಯಿಂದ ಮಾಧ್ಯಮಗಳು ಕಾರ್ಯನಿರ್ವಹಿಸಬೇಕು~ ಎಂದು ಸಲಹೆ ಮಾಡಿದರು.

ಇದೇ ಸಂದರ್ಭದಲ್ಲಿ ಮಂಗಳೂರು ಹಾಗೂ ಗೋವಾ ವಿಶ್ವವಿದ್ಯಾಲಯಗಳ ನಿವೃತ್ತ ಕುಲಪತಿ ಡಾ.ಬಿ. ಶೇಕ್ ಅಲಿ ಅವರಿಗೆ `ಐಓಎಸ್ ಜೀವಮಾನದ ಸಾಧನೆ ಪ್ರಶಸ್ತಿ~ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

ಐಐಎಂ ಸ್ಥಾಪಕ ನಿರ್ದೇಶಕ ಪ್ರೊ. ವಿನಯ್‌ಶೀಲ್ ಗೌತಮ್ ಮಾತನಾಡಿದರು. ಮಾಜಿ ಸಂಸದ ಸಿ.ಕೆ. ಜಾಫರ್ ಷರೀಫ್, ಶಾಸಕ ಆರ್.ರೋಷನ್‌ಬೇಗ್, ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಅಜೀಂ, ನಜೀರ್ ಅಹಮದ್, ಐಓಎಸ್ ಅಧ್ಯಕ್ಷ ಡಾ.ಎಂ. ಮಂಜೂರ್ ಅಲಮ್, ಪ್ರಧಾನ ಕಾರ್ಯದರ್ಶಿ ಪ್ರೊ.ಜೆಡ್.ಎಂ. ಖಾನ್, ಸಂಚಾಲಕ ಮಹಮದ್ ಒಬೇದುಲ್ಲಾ ಷರೀಫ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT