ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸಾರಮುಖಿ ಸಿನಿಮಾಸುಖಿ

Last Updated 12 ಜನವರಿ 2013, 19:59 IST
ಅಕ್ಷರ ಗಾತ್ರ

ಒಮ್ಮೆಲೆಯೇ ಗೂಂಡಾಗಳ ಹಿಂಡನ್ನು ಹೊಡೆಯುವ ಸನ್ನಿವೇಶ. ಅಕ್ಷಯ್ ಕುಮಾರ್ ತಮ್ಮ ತಿದ್ದಿದಂಥ ದೇಹವನ್ನು ಇಷ್ಟಬಂದಂತೆ ಬಾಗಿಸಿ ಸಾಹಸ ಸನ್ನಿವೇಶದಲ್ಲಿ ಲೀಲಾಜಾಲವಾಗಿ ಅಭಿನಯಿಸುತ್ತಿದ್ದರು. ನಾಲ್ಕೈದು ಪತ್ರಕರ್ತರು ಅವರ ಸಂದರ್ಶನಕ್ಕೆ ಕಾದು ಅನತಿ ದೂರದಲ್ಲಿ ನಿಂತಿದ್ದರು. ಇನ್ನೊಂದು ರೀಮೇಕ್. ಚಿತ್ರದ ಹೆಸರು `ಬಾಸ್'. ಮಮ್ಮುಟ್ಟಿ ಅಭಿನಯಿಸಿದ್ದ ಮಲಯಾಳಂ ಚಿತ್ರ `ಪೋಕಿರಿ ರಾಜಾ' ಎತ್ತಿಕೊಂಡು, ನಿರ್ದೇಶಕ ಆಂಟನಿ ಡಿಸೋಜಾ ಇನ್ನಷ್ಟು ದೊಡ್ಡ ಬಜೆಟ್‌ನಲ್ಲಿ ತೆಗೆಯುತ್ತಿರುವ ಸಿನಿಮಾ.

`ಒಂದಾದ ಮೇಲೆ ಒಂದರಂತೆ ಆಕ್ಷನ್ ಚಿತ್ರಗಳನ್ನೇ ಎತ್ತಿಕೊಳ್ಳುತ್ತಿದ್ದೀರಲ್ಲ; ಬೇಜಾರಾಗುವುದಿಲ್ಲವೇ' ಎಂದು ಪ್ರಶ್ನೆ ಕೇಳಿದ ಸುದ್ದಿಮಿತ್ರರ ಕೈಗೆ ಒಂದಿಷ್ಟು ಬಾದಾಮಿಗಳನ್ನು ಕೊಟ್ಟ ಅಕ್ಷಯ್, `ಮೊದಲು ತಿನ್ನಿ' ಎಂದರು. ಅವರು ಒಂದೊಂದೇ ಬಾದಾಮಿಯನ್ನು ಬಾಯಿಗೆ ಹಾಕಿಕೊಳ್ಳುತ್ತಾ, ಜೊಲ್ಲು ಮಿಲಾಯಿಸುವ ಹೊತ್ತಿಗೆ ಅಕ್ಷಯ್ ಪಟಪಟನೆ ಮಾತನಾಡತೊಡಗಿದರು: `ನಾನು ಮನರಂಜನೆಯ ಸರಕು. ಚಿತ್ರ ಹೇಗೆ ಓಡುತ್ತದೆ ಎಂದು ಚಿತ್ರೀಕರಣಕ್ಕೆ ಮೊದಲು ತಲೆಕೆಡಿಸಿಕೊಳ್ಳುವುದಿಲ್ಲ. ವಸ್ತು ರಂಜಿಸಬೇಕು. ಅಂಥದ್ದು ಎಲ್ಲಿ ಸಿಕ್ಕಿದರೂ ಪಡೆದುಕೊಳ್ಳುತ್ತೇನೆ. ಚಿತ್ರರಂಗ ಕೊಟ್ಟ ಹಣವನ್ನು ಇಲ್ಲೇ ತೊಡಗಿಸುತ್ತೇನೆ. ಅದೃಷ್ಟವಶಾತ್ ಇತ್ತೀಚೆಗೆ ನಾನು ತೊಡಗಿಸಿದ ಹಣ ನಷ್ಟವಾಗಿಲ್ಲ; ದೊಡ್ಡ ಲಾಭವನ್ನೇ ತರುತ್ತಿದೆ. ಮುಂದೆ ನಷ್ಟವಾದರೂ ಅದನ್ನು ಎದುರಿಸಲು ಸಿದ್ಧನಿದ್ದೇನೆ'.

ಬಾದಾಮಿಗಳು ಮುಗಿದ ಮೇಲೆ, ಒಣದ್ರಾಕ್ಷಿಯ ಸರದಿ. ಸಣ್ಣ ಪ್ರಶ್ನೆಗೂ ಉದ್ದುದ್ದ ಉತ್ತರ ಕೊಟ್ಟ ಅಕ್ಷಯ್ ನಡುವೆ ಶಾಟ್ ಇದ್ದಾಗ, ಸೆಟ್‌ಗೆ ಹೋಗಿ ಬರುತ್ತಿದ್ದರು.1992ರಲ್ಲಿ `ಖಿಲಾಡಿ' ಹೆಸರಿನ ಚಿತ್ರದಲ್ಲಿ ನಟಿಸಿದ ಮೇಲೆ ಅಕ್ಷಯ್ ಕುಮಾರ್ ಅದೃಷ್ಟ ಖುಲಾಯಿಸಿತು. ಅಲ್ಲಿಂದಾಚೆಗೆ `ಮೈ ಖಿಲಾಡಿ ತೂ ಅನಾರಿ', `ಮಿಸ್ಟರ್ ಅಂಡ್ ಮಿಸಸ್ ಖಿಲಾಡಿ', `ಇಂಟರ್‌ನ್ಯಾಷನಲ್ ಖಿಲಾಡಿ', `ಖಿಲಾಡಿ 420', `ಖಿಲಾಡಿ 786' ಹೀಗೆ ಖಿಲಾಡಿ ಸರಣಿಯ ಚಿತ್ರಗಳು ಬಂದವು. ಅವುಗಳಲ್ಲಿ ಬಹುತೇಕ ಚಿತ್ರಗಳು ದೊಡ್ಡ ಯಶಸ್ಸು ಕಂಡಿರುವುದು ವಿಶೇಷ. ಅಕ್ಷಯ್ ಕುಮಾರ್ ಭವಿಷ್ಯಕಾರರನ್ನು ಕೇಳಿಕೊಂಡೇನೂ ಇಂಥ ಶೀರ್ಷಿಕೆಗಳನ್ನು ಇಟ್ಟಿಲ್ಲ. `ಅದು ಮಾರುಕಟ್ಟೆ ಹಾಗೂ ಸುತ್ತಲಿನವರ ಲೆಕ್ಕಾಚಾರದ ಮರ್ಮ. ಭವಿಷ್ಯಕಾರರು ಕೂಡ ಮುಂದಿನ ಎರಡು ವರ್ಷದಲ್ಲಿ ಏನಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಲಾರರು. ಜನರಿಗೆ ಅಂಥ ಶೀರ್ಷಿಕೆಗಳು ಇಷ್ಟವಾಗಿವೆ. ಹಾಗಂತ ಬರೀ ತಮಾಷೆಯಾಗಿ ಶೀರ್ಷಿಕೆ ಇಟ್ಟು ಸಿನಿಮಾದಲ್ಲಿ ಏನೂ ಇಲ್ಲದಿದ್ದರೆ ಯಶಸ್ಸು ಸಾಧ್ಯವಿಲ್ಲ' ಎಂಬುದು ಅವರು ಕೊಡುವ ಸ್ಪಷ್ಟನೆ.

ವೃತ್ತಿ, ಖಾಸಗಿ ಬದುಕು ಎರಡನ್ನೂ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿರುವುದರಿಂದಲೂ ಅಕ್ಷಯ್ ಸುದ್ದಿಯಾಗಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅವರ ಪತ್ನಿ ಟ್ವಿಂಕಲ್ ಖನ್ನಾ ಹೆಣ್ಣುಮಗುವಿಗೆ ಜನ್ಮ ನೀಡಿದರು. ಮಗ ಆರವ್ ಹುಟ್ಟಿದ ಒಂಬತ್ತು ವರ್ಷದ ನಂತರ ಪುತ್ರಿ ಉತ್ಸವ. ಮಾವ ರಾಜೇಶ್ ಖನ್ನಾ ಮೇಲಿನ ಪ್ರೀತಿಯಿಂದಾಗಿ ಮಗಳಿಗೆ ನಿತಾರಾ ಖನ್ನಾ ಭಾಟಿಯಾ ಎಂದು ನಾಮಕರಣ ಮಾಡಿದರು.
`ಖನ್ನಾ ಎಂಬ ಸರ್‌ನೇಮ್ ಕಿವಿಮೇಲೆ ಬಿದ್ದೊಡನೆ ನನ್ನ ಮಾವನವರೇ ಪ್ರೇಕ್ಷಕರಿಗೆ ನೆನಪಾಗುವುದು. ಅವರು ಭಾರತದ ಮೊದಲ ಸೂಪರ್‌ಸ್ಟಾರ್. ಸಣ್ಣ ಸಣ್ಣ ಖುಷಿಗೂ ಅವರು ಪಾರ್ಟಿ ಮಾಡುತ್ತಿದ್ದರು. ಸ್ನೇಹಿತನ ಹುಟ್ಟುಹಬ್ಬವನ್ನು ತಾವೇ ಆಚರಿಸಿ ನಗುವಷ್ಟು ಹೃದಯವಂತ. ಅವರು ಅಗಲಿದ ಮೇಲೆ ಕೆಲವರು ಈ ಸಲ ನಿಮ್ಮ ಮನೆಯಲ್ಲಿ ದೀಪಾವಳಿ ಇಲ್ಲವೇ ಎಂದು ಕೇಳಿದರು. ಮನೆಯಲ್ಲಿ ನಾವು ದೀಪಾವಳಿ ಆಚರಿಸಿದೆವು. ಸಂತೋಷ ಹತ್ತಿಕ್ಕಬಾರದು ಎಂದು ಪ್ರತಿಪಾದಿಸುತ್ತಿದ್ದ ಅವರು ಎಂದೂ ಸೂತಕದ ವಾತಾವರಣವನ್ನು ಇಷ್ಟಪಡುತ್ತಿರಲಿಲ್ಲ. ಹಾಗಾಗಿ ಅವರಿಗೆ ಗೌರವ ಸಲ್ಲಿಸಬೇಕಾದರೆ ಮನೆಮಂದಿಯನ್ನು ಸದಾ ಖುಷಿಯಾಗಿ ಇಡಬೇಕು'- ಇದು ಅಕ್ಷಯ್ ಪಾಲಿಸಿ.

`ದಿನಕ್ಕೆ ಎಂಟು ತಾಸು ಶೂಟಿಂಗ್. ಮೂರು ತಾಸಿಗೊಮ್ಮೆ ಸ್ವಾದಿಷ್ಟ ಆಹಾರ ಸೇವನೆ. ಎಂಟು ತಾಸು ನಿದ್ದೆ. ಒಂದೂವರೆ ಗಂಟೆ ವ್ಯಾಯಾಮ. ಉಳಿದ ಅವಧಿಯೆಲ್ಲಾ ಮಗಳಿಗೆ ಮೀಸಲು'- ಹೀಗೆ ತಮ್ಮ ದಿನಚರಿ ಒಪ್ಪಿಸುವ ಅಕ್ಷಯ್ ಅತ್ತೆ ಡಿಂಪಲ್ ಕಪಾಡಿಯಾ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಅವರ ಸೂಚನೆಯ ಮೇರೆಗೆ `ಆಶೀರ್ವಾದ್' ಎಂದಿದ್ದ ತಮ್ಮ ಬಂಗಲೆಯ ಹೆಸರನ್ನು `ವರದಾನ್ ಆಶೀರ್ವಾದ್' ಎಂದು ಬದಲಿಸಿದ್ದಾರೆ. ಯಾವ ನಾಯಕಿಯ ಜೊತೆಗೂ ಅಕ್ಷಯ್ ಹೆಸರು ತಳುಕು ಹಾಕಿಕೊಂಡಿಲ್ಲ. ಅದರ ಗುಟ್ಟೇನು ಎಂಬುದು ಕೊನೆಯಲ್ಲಿ ಎದುರಾದ ಪ್ರಶ್ನೆ. `ಅದರಲ್ಲಿ ಗುಟ್ಟೇನಿದ್ದೀತು' ಎಂದು ಇನ್ನೊಂದು ಪ್ರಶ್ನೆಯೇ ಉತ್ತರ ರೂಪದಲ್ಲಿ ಅವರಿಂದ ಹೊಮ್ಮಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT