ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಮೂರ್ತಿಗೆ ಗೌರವ

Last Updated 2 ಜನವರಿ 2012, 6:25 IST
ಅಕ್ಷರ ಗಾತ್ರ

ಜಾನಪದ ಜಾತ್ರೆ ಕರ್ನಾಟಕ ಸಾಂಸ್ಕೃತಿಕ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ ಕಾರ್ಯಕ್ರಮ. ಕರ್ನಾಟಕದ ಆಡಳಿತ ಚುಕ್ಕಾಣಿ ಹಿಡಿದ ವಿಧಾನಸೌಧದ ಪಾವಟಿಗೆಗಳ ಮೇಲೆ ನಮ್ಮ ನಾಡಿನ ಜಾನಪದ ಸಿರಿಯನ್ನು ಅನಾವರಣಗೊಳಿಸಿದ ಜಾನಪದ ಜಾತ್ರೆಯನ್ನು ರೂಪಿಸಿ ಅನುಷ್ಠಾನಗೊಳಿಸಿದವರಲ್ಲಿ ಐ.ಎಂ.ವಿಠ್ಠಲ್‌ಮೂರ್ತಿ ಅವರೂ ಒಬ್ಬರು.

ಸುವರ್ಣ ಕರ್ನಾಟಕ ವರ್ಷಾಚರಣೆ ಸಂದರ್ಭದಲ್ಲಿ ರೂಪುಗೊಂಡ ಹಲವು ಅರ್ಥಪೂರ್ಣ ಕಾರ್ಯಕ್ರಮಗಳಲ್ಲಿ ಜಾನಪದ ಕಲೆಗಳನ್ನು- ಕಲಾವಿದರನ್ನು ಹಳ್ಳಿಯಿಂದ ರಾಜಧಾನಿಗೆ ಬರುವಂತೆ ಮಾಡಿ ನಗರವಾಸಿಗಳಿಗೂ ಜನಪದ ಸೊಗಡಿನ ಪರಿಚಯ ಮಾಡಿಸುವಲ್ಲಿ ಅವರು ವಹಿಸಿದ ಪಾತ್ರ ಮುಖ್ಯ.

ನೆಲಮೂಲದ ಸಾಂಸ್ಕೃತಿಕ ಸೊಬಗನ್ನು ಓದುವ ಕಾಲದಿಂದಲೇ ಕಂಡಿದ್ದ ವಿಠ್ಠಲಮೂರ್ತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಚ್ಚುವರಿ ನಿರ್ದೇಶಕರಾಗಿ ಅಧಿಕಾರವಹಿಸಿಕೊಂಡಾಗಿನಿಂದ ಎರಡನೇ ವಿಶ್ವ ಕನ್ನಡ ಸಮ್ಮೇಳನ (ಬೆಳಗಾವಿ)ವರೆಗೂ ಕನ್ನಡ ನಾಡಿನ ಸಾಂಸ್ಕೃತಿಕ ವೈವಿಧ್ಯವನ್ನು ಹರಡಿ ಅದನ್ನು ಜೀವಂತವಾಗಿಡುವ ಕಾಳಜಿ ತೋರಿದರು.

ಮೈಸೂರು ವಿಶ್ವ ಕನ್ನಡ ಸಮ್ಮೇಳನಕ್ಕೆ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಟ್ಟಿದ್ದ ವಿಠ್ಠಲಮೂರ್ತಿ ಅದು ಕಾರಣಾಂತರಗಳಿಂದ ಮುಂದಕ್ಕೆ ಹೋದಾಗ ಬೇರೆ ಇಲಾಖೆಗೆ ವರ್ಗವಾಗಿ ಹೋದರು. ನಂತರ ತಾವು ಯಾವ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದರೂ ಅದರ ಮೂಲಕ ಕರ್ನಾಟಕ ಸಾಂಸ್ಕೃತಿಕ ಕಂಪನ್ನು ಪಸರಿಸುವ ಕೆಲಸ ನಿಲ್ಲಿಸಲಿಲ್ಲ.

ಸಾರಿಗೆ ಆಯುಕ್ತರಾಗಿದ್ದಾಗ ಸಾರಿಗೆ ಬಸ್‌ಗಳ ಹೊರ ಮೈನಲ್ಲಿ ಕಲೆಯನ್ನು ಅರಳಿಸಿದ್ದು ಇದಕ್ಕೊಂದು ಉದಾಹರಣೆ. ವ್ಯಾಪಾರಿ ಉದ್ದೇಶದ ಎಂ.ಎಸ್.ಐ.ಎಲ್ ಸಂಸ್ಥೆಯ ಎಂ.ಡಿ ಆಗಿದ್ದಾಗ ಕನ್ನಡ ಕಾವ್ಯ ಪರಂಪರೆಯನ್ನು ಯುವ ಜನತೆಯಲ್ಲಿ ಬೆಳೆಸಲು ಕಾರ್ಯಕ್ರಮ ಹಮ್ಮಿಕೊಂಡು ಕನ್ನಡ ಗೀತೆಗಳ ಗಾಯನ ಹಾಗೂ ಗೀತೆಗಳ ಧ್ವನಿ ಸುರುಳಿ ತಂದಿದ್ದು ಇನ್ನೊಂದು ಉಲ್ಲೇಖನಾರ್ಹ ಕೆಲಸ.

ರಾಜ್‌ಕುಮಾರ್ ಕಣ್ಮರೆಯಾದ ಸಂದರ್ಭದಲ್ಲಿ ಉಂಟಾಗಿದ್ದ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಹೋಗಲಾಡಿಸಲೋ ಎಂಬಂತೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಶ್ರದ್ಧಾಂಜಲಿ ಸಭೆಯನ್ನು ವಿನೂತನ ಕಾರ್ಯಕ್ರಮಗಳ ಮೂಲಕ ಹಮ್ಮಿಕೊಂಡಿದ್ದರಲ್ಲಿ ವಿಠ್ಠಲ್ ಮೂರ್ತಿ ಶ್ರಮವಿತ್ತು.

ವಾರ್ತಾ ಇಲಾಖೆಯಲ್ಲಿದ್ದಾಗ `ಅವಲೋಕನ~ದ ಮೂಲಕ ಕರ್ನಾಟಕದ ವಿವಿಧ ಸಾಂಸ್ಕೃತಿಕ ವೈವಿಧ್ಯವನ್ನು ಮನೆಯಂಗಳಕ್ಕೆ ತಂದಿತ್ತ ಮೂರ್ತಿ ಅವರು ಕುವೆಂಪು ಅವರು ಕಣ್ಮರೆಯಾದಾಗ ಸಿದ್ಧಪಡಿಸಿದ ಕುವೆಂಪು ಸ್ಮೃತಿ ಇಂದಿಗೂ ಅತ್ಯುತ್ತಮ ಸಾಕ್ಷ್ಯಚಿತ್ರ.

ರಾಜ್‌ಕುಮಾರ್ ಜೀವನ ಸಾಧನೆ ಕುರಿತ ಚಿತ್ರಕಲಾ ಶಿಬಿರವನ್ನು ವ್ಯವಸ್ಥೆಗೊಳಿಸಿ ನಾಡಿನ ಪ್ರಸಿದ್ಧ ಕಲಾವಿದರಿಂದ ರಾಜ್ ಚಿತ್ರಗಳನ್ನು ಅಣಿಗೊಳಿಸಿದ `ಐ.ಎಂ.ವಿ.ಎಂ~ ಕನ್ನಡದ ಐತಿಹಾಸಿಕ ತಾಣ ಹಂಪಿಯ ವಿಶಿಷ್ಟತೆಯನ್ನು ಪ್ರವಾಸೋದ್ಯಮ ನಿರ್ದೇಶಕರಾಗಿದ್ದಾಗ ಜಾಗತಿಕ ಮಟ್ಟಕ್ಕೆ ಕೊಂಡೊಯ್ದವರು.
 
ಕಲೆ, ಸಾಹಿತ್ಯ, ಸಿನಿಮಾಗಳಲ್ಲಿ ತೊಡಗಿಸಿಕೊಂಡು ಹಿರಿಯರು ಕಿರಿಯರೆನ್ನದೆ ಅನೇಕ ಕೃತಿಗಳನ್ನು ಹೊರತರುವಲ್ಲಿ ನೆರವಿನ ಹಸ್ತ ಚಾಚಿದ ಅವರು ಅನೇಕ ಕಲಾವಿದ ಸಾಹಿತಿಗಳೊಂದಿಗೆ ಒಡನಾಟ ಇಟ್ಟುಕೊಂಡಿದ್ದಾರೆ. ಕರ್ನಾಟಕ ಏಕೀಕರಣಕ್ಕೆ 50 ವರ್ಷ ತುಂಬಿದಾಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭೂತಪೂರ್ವ ಸಾಂಸ್ಕೃತಿಕ ವೈಭವವನ್ನು ಅದ್ಭುತವಾಗಿ ರೂಪಿಸಿ ಜನತೆಯ ಮುಂದಿಟ್ಟರು.

`ಶೋಮ್ಯೋನ್~ಎನ್ನಿಸಿಕೊಂಡ ವಿಠ್ಠಲಮೂರ್ತಿ ತಮಗೆ ವಹಿಸಿದ ಕೆಲಸ ಮುಗಿಸುವವರೆಗೂ ವಿಶ್ರಾಂತಿ ಪಡೆಯದೇ ದುಡಿದವರು. ಅನೇಕ ಬಾರಿ ಇಕ್ಕಟ್ಟುಗಳ ಸುಳಿಯಲ್ಲಿ ಸಿಕ್ಕಿದರೂ ಸಂಸ್ಕೃತಿ ಕಾಳಜಿಗಾಗಿ ತಾವು ಮಾಡಿದ ಕೆಲಸಗಳನ್ನು ಸಮರ್ಥಿಸಿಕೊಂಡು ಪ್ರಶ್ನೆ ಕೇಳಿದವರನ್ನು ನಿರುತ್ತರನ್ನಾಗಿಸಿದವರು.

ಐ.ಎಂ.ವಿಠ್ಠಲ ಮೂರ್ತಿ ಈಗ ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದಾರೆ. ಬೇಸಾಯದ ಬದುಕಿಗೆ ತೆರೆದುಕೊಂಡ ಅವರು ಮುಂದಿನ ಸಾಂಸ್ಕೃತಿಕ ಪಯಣದ ಬಗ್ಗೆ ನಕಾಶೆ ರಚಿಸುವ ಸಂದರ್ಭದಲ್ಲಿ ಅವರ ಅಭಿಮಾನಿಗಳು ವಿಶಿಷ್ಟ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಕಾರ್ಯಕ್ರಮಗಳ ಮೂಲಕ ಇಂದು (ಜನವರಿ 2) ಅವರಿಗೆ ಸಾಂಸ್ಕೃತಿಕ ಬಾಗೀನ ಅರ್ಪಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT