ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ವಿನಿಮಯ- ಭಾಷೆ ಮೀರಿದ ಭಾವ

Last Updated 26 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀನಗರದ ಗುಟ್ಟೆ ಸರ್ಕಾರಿ ಶಾಲೆಯ ಅಂಗಳದಲ್ಲಿ ದಕ್ಷಿಣ ಕೊರಿಯಾ ಯುವ ಪ್ರತಿನಿಧಿಗಳಿಂದ `ನಮಸ್ಕಾರ~ ಪದ ಉಚ್ಛಾರಣೆಯ ತಾಲೀಮು!ರಾಜ್ಯದ ಭಾಷೆ, ಸಂಸ್ಕೃತಿ ಹಾಗೂ ಮಹಿಳಾ ಸಂಘಟನೆಯ ಕಾರ್ಯಚಟುವಟಿಗಳನ್ನು ಅರಿಯುವ ಸಲುವಾಗಿಯೇ ಕೇಂದ್ರದ ನೆಹರು ಯುವ ಕೇಂದ್ರದಿಂದ ನಿಯೋಜಿಸಲ್ಪಟ್ಟಿರುವ ದಕ್ಷಿಣ ಕೊರಿಯಾದ ಇಪ್ಪತ್ತಕ್ಕಿಂತಲೂ ಹೆಚ್ಚಿನ ಪ್ರತಿನಿಧಿಗಳು ಭಾಷೆಯ ತೊಡಕಿಲ್ಲದೇ ಮಕ್ಕಳು, ಸಂಘಟಕರೊಂದಿಗೆ ಬೆರೆತರು.

ಕೊರಿಯಾ ಭಾಷೆ ಗೊತ್ತಿರದ ಮಕ್ಕಳು ಮತ್ತು ಕನ್ನಡ ಭಾಷೆ ತಿಳಿಯದ ದಕ್ಷಿಣ ಕೊರಿಯಾ ಪ್ರತಿನಿಧಿಗಳು ಅರೆಬರೆ ಇಂಗ್ಲಿಷ್‌ನಲ್ಲೇ ಪರಸ್ಪರ ಪ್ರೀತಿ ಹಂಚಿಕೊಂಡರು. ಮಹಿಳಾ ಸಂಘಟನೆಯ ಕಾರ್ಯಚಟುವಟಿಕೆ ಅರಿಯಲು ಆಸಕ್ತರಾಗಿದ್ದ ಅವರು ಸಮಾಜ ಸೇವಾ ಸಮಿತಿ ಮಹಿಳಾ ಸಂಘಟನೆಯ ಕಾರ್ಯಚಟುವಟಿಕೆಗಳಿರುವ ಭಾವಚಿತ್ರಗಳ ಸರಮಾಲೆಯನ್ನು ಕ್ಯಾಮೆರಾ ಕಣ್ಣಿನಲ್ಲಿ ತುಂಬಿಸಿಕೊಳ್ಳುತ್ತಿದ್ದರು.

ಮಹಿಳಾ ಸಂಘಟನೆಯ ಸದಸ್ಯರು ಎಲ್ಲರಿಗೂ ಆರತಿ ಬೆಳಗಿ, ಕುಂಕುಮ ಹಚ್ಚುವ ಮೂಲಕ ಸ್ವಾಗತ ನೀಡಿದರು. ಈ ಮಧ್ಯೆ ಶಾಲಾ ಮಕ್ಕಳಿಂದ ರಂಗೋಲಿ , ಚಿತ್ರಕಲಾ ಸ್ಪರ್ಧೆ ನಡೆಯಿತು. `ಮಕ್ಕಳು ವಂದೇ ಮಾತರಂ~, `ಹಚ್ಚೇವು ಕನ್ನಡದ ದೀಪ~ ಗೀತೆಗೆ ನೃತ್ಯ ಪ್ರದರ್ಶನ ನೀಡಿದರು. ಜನಪದ ನೃತ್ಯಗಳಾದ ಕಂಸಾಳೆ, ಡೊಳ್ಳು ಕುಣಿತಕ್ಕೆ ಕೊರಿಯಾ ಪ್ರತಿನಿಧಿಗಳು ಮಕ್ಕಳೊಂದಿಗೆ ಹೆಜ್ಜೆ ಹಾಕಿದರು.

ದುಭಾಷಿಯೊಬ್ಬರ ಸಹಕಾರದಿಂದ ದಕ್ಷಿಣ ಕೊರಿಯಾ ಪ್ರತಿನಿಧಿಗಳೊಂದಿಗೆ `ಸಂವಾದ~ ನಡೆಸಿದ ರಾಜ್ಯ ಯುವಜನ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಆರ್. ಪೆರುಮಾಳ್, `ಗಡಿ, ಭಾಷೆ, ಸಂಸ್ಕೃತಿ ಯಾವುದೇ ತೊಡಕಿಲ್ಲದೇ ಎರಡು ದೇಶಗಳ ನಾಗರಿಕರು ಪರಸ್ಪರ ಸಂಸ್ಕೃತಿಯನ್ನು ಹಂಚಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ. ದೇಶದಿಂದಲೂ ಒಂದು ತಂಡವನ್ನು ದಕ್ಷಿಣ ಕೊರಿಯಾಕ್ಕೆ ಕಳುಹಿಸಲು ಕೇಂದ್ರ ಸರ್ಕಾರವು ಚಿಂತನೆ ನಡೆಸಿದೆ~ ಎಂದರು.

ದಕ್ಷಿಣ ಕೊರಿಯಾದ ಪ್ರತಿನಿಧಿ ಚಾನ್ ಸೂಕ್, `ಈ ದೇಶದ ಉಡುಗೆ ತೊಡುಗೆ ಬಹಳ ಇಷ್ಟವಾಯಿತು. ಜನರ ಮುಗ್ದತೆ ಮತ್ತು ಆತ್ಮೀಯತೆ ನಮ್ಮನ್ನು ಚಕಿತಗೊಳಿಸಿದೆ~ ಎಂದು ತಿಳಿಸಿದರು.ಕರ್ನಾಟಕ ರಾಜ್ಯ ಪರಿಸರ ಮಂಡಳಿಯ ಅಧ್ಯಕ್ಷ ಎ.ಎಸ್.ಸದಾಶಿಯ್ಯ, ನೆಲದ ಸಂಸ್ಕೃತಿಯಾಗಿ ಪರಿಸರ ಸಂರಕ್ಷಣೆಯನ್ನು ಗ್ರಹಿಸಿರುವ ಬಗ್ಗೆ ತಿಳಿಸಿದರು. ತುಳಸಿ ಗಿಡದ ಉಪಯೋಗ ಮತ್ತು ಅದಕ್ಕೆ ಭಾರತೀಯರು ನೀಡಿರುವ ದೈವೀ ಸ್ಥಾನದ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು. ಸಮಾಜ ಸೇವಾ ಸಮಿತಿಯ ಎಚ್.ಜಿ. ಶೋಭಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT