ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸುರೇಶ್ ರಾಜೀನಾಮೆ

Last Updated 23 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸುಳ್ಳು ಪ್ರಮಾಣ ಪತ್ರ ನೀಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ನಿವೇಶನ ಪಡೆದ ಆರೋಪಕ್ಕೆ ಒಳಗಾಗಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್‌ಕುಮಾರ್ ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

`ತಾಯಿ ಮತ್ತು ಪುತ್ರಿ ಹೆಸರಿನಲ್ಲಿ ನೆಲಮಂಗಲದಲ್ಲಿ ಎರಡು ನಿವೇಶನ, ಬೆಂಗಳೂರಿನಲ್ಲಿ ಸ್ವಂತ ಮನೆ ಇದ್ದರೂ ಸುರೇಶ್‌ಕುಮಾರ್ ಬಿಡಿಎ ನಿವೇಶನ ಪಡೆದಿದ್ದಾರೆ~ ಎಂಬ ವರದಿ ಶನಿವಾರ ಆಂಗ್ಲ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಇದರಿಂದ ಮನನೊಂದ ಅವರು ಬೆಳಿಗ್ಗೆ 8.30ಕ್ಕೆ ತಮ್ಮ ಖಾಸಗಿ ಕಾರಿನಲ್ಲಿ `ಅನುಗ್ರಹ~ಕ್ಕೆ ತೆರಳಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.

ಆದರೆ, ಅವರ ರಾಜೀನಾಮೆ ಪತ್ರವನ್ನು ಅಂಗೀಕರಿಸುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. `ಪಕ್ಷದ ವರಿಷ್ಠರೊಂದಿಗೆ ಈ ಬಗ್ಗೆ ಸಮಾಲೋಚಿಸಲಾಗುವುದು. ಅವರ ಮೇಲಿನ ಆರೋಪದಲ್ಲಿ ಸತ್ಯಾಂಶವಿಲ್ಲ. ಆದರೂ ಈ ಕುರಿತು ಪರಾಮರ್ಶಿಸಿ ದೋಷಿ ಎಂದು ಕಂಡುಬಂದರೆ ಮಾತ್ರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು~ ಎಂದು ಸುದ್ದಿಗಾರರಿಗೆ ತಿಳಿಸಿದರು.

`ನಿವೇಶನ ವಿವಾದಕ್ಕೆ ಸಂಬಂಧಿಸಿದ ವರದಿಯಿಂದ ಅವರಿಗೆ ನೋವಾಗಿದೆ. ಸಂಶಯ ಬಂದ ನಂತರ ಸಾರ್ವಜನಿಕ ಜೀವನದಲ್ಲಿ ಮುಂದುವರಿಯವುದು ಸೂಕ್ತ ಅಲ್ಲ ಎಂದು ಭಾವಿಸಿ ರಾಜೀನಾಮೆ ನೀಡಿದ್ದಾರೆ.

ಭಾವನೆಗಳನ್ನು ನನ್ನೊಂದಿಗೂ ಹಂಚಿಕೊಂಡಿದ್ದಾರೆ. ನನಗೆ ಅವರ ಹಿನ್ನೆಲೆ ಗೊತ್ತಿದೆ. ಅವರು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಅವರ ರಾಜೀನಾಮೆ  ಅಂಗೀಕರಿಸುವುದಿಲ್ಲ. ಸಚಿವ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಸಚ್ಚಾರಿತ್ರ್ಯ ಹೊಂದಿರುವವರ ವಿರುದ್ಧ ಕೇಳಿ ಬಂದಿರುವ ಈ ರೀತಿಯ ಆರೋಪಗಳಿಗೆ ಇಂಬು ನೀಡುವ ಅಗತ್ಯವಿಲ್ಲ~ ಎಂದು ಅವರು ಸಮರ್ಥಿಸಿಕೊಂಡರು.

`ಶಾಸಕನಾಗಿ ಹತ್ತು ವರ್ಷ ಅವರೊಂದಿಗೆ ಕೆಲಸ ಮಾಡಿರುವ ನನಗೆ, ಅವರ ಬಗ್ಗೆ ಚೆನ್ನಾಗಿ ಗೊತ್ತಿದೆ. ಹಿಂಬಾಗಿಲಿನಿಂದ ರಾಜಕೀಯ ಮಾಡಿದವರಲ್ಲ. ರಸ್ತೆ ಅಗಲ ಮಾಡಿದ್ದರಿಂದ ಮನೆ ಕಳೆದುಕೊಂಡಿರುವ ಅವರಿಗೆ ಬದಲಿ ನಿವೇಶನ ಪಡೆದುಕೊಳ್ಳುವ ಹಕ್ಕಿದೆ. ನೆಲಮಂಗಲದಲ್ಲಿ ಇದ್ದ ನಿವೇಶನವನ್ನು ಮಾರಾಟ ಮಾಡಿ ಹೊಸ ಮನೆ ಖರೀದಿ ಮಾಡಿದ್ದಾರೆ. ಪಾರದರ್ಶಕವಾಗಿದ್ದರೂ ಈ ರೀತಿ ಆರೋಪ ಮಾಡಿರುವುದಕ್ಕೆ ಅವರಿಗೆ ನೋವಾಗಿರುವುದು ನಿಜ. ಸಂಪುಟದಲ್ಲಿ ಮುಂದುವರಿಯುವಂತೆ ಅವರ ಮನವೊಲಿಸಲಾಗುವುದು~ ಎಂದರು.

ಬೆಂಬಲಿಗರ ಧರಣಿ: ಆದರೆ, ಸುರೇಶ್‌ಕುಮಾರ್ ಮಾತ್ರ ತಮ್ಮ ರಾಜೀನಾಮೆ ನಿರ್ಧಾರದ ಪಟ್ಟು ಸಡಿಲಿಸಲಿಲ್ಲ. ಇದರಿಂದ ಅಸಮಾಧಾನಗೊಂಡ ಅವರ ಕ್ಷೇತ್ರದ ಕಾರ್ಯಕರ್ತರು ಮತ್ತು ಮಹಾನಗರ ಪಾಲಿಕೆ ಸದಸ್ಯರು ರಾಜೀನಾಮೆ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಪಡಿಸಿದರು. ಸ್ಥಳೀಯ ಕಾರ್ಯಕರ್ತರು ಅವರ ಮನೆ ಮುಂದೆ ಧರಣಿ ಕೂಡ ನಡೆಸಿದರು.

ಪಾಲಿಕೆ ಸದಸ್ಯರ ರಾಜೀನಾಮೆ: ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐದು ಮಂದಿ ಪಾಲಿಕೆ ಸದಸ್ಯರಾದ ಕೃಷ್ಣಪ್ಪ, ರಂಗಣ್ಣ, ಪದ್ಮರಾಜ್, ರವೀಂದ್ರ ಮತ್ತು ಜಯರತ್ನ ಅವರು ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸಲು ಮುಖ್ಯಮಂತ್ರಿಯನ್ನು ಆಗ್ರಹಪಡಿಸಿದರು. ಸಂಜೆಯಾದರೂ ಸುರೇಶಕುಮಾರ್ ನಿಲುವು ಬದಲಿಸದ ಕಾರಣ ಈ ಐವರು ಪಾಲಿಕೆ ಸದಸ್ಯರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು. ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಬ್ಬುನರಸಿಂಹ ಅವರಿಗೆ ರಾಜೀನಾಮೆ ಪತ್ರಗಳನ್ನು ಹಸ್ತಾಂತರ ಮಾಡಿದರು.

ಶನಿವಾರ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಯಿತು. ರಾಜೀನಾಮೆ ವಾಪಸ್ ಪಡೆಯುವಂತೆ ಸುರೇಶ್‌ಕುಮಾರ್ ಅವರಿಗೆ ಮನವಿ ಮಾಡಿ ಎಂದು ಎಲ್ಲ ಸಚಿವರು ಮುಖ್ಯಮಂತ್ರಿಗಳನ್ನು ಕೋರಿದರು ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಸುದ್ದಿಗಾರರಿಗೆ ತಿಳಿಸಿದರು.

ಸುರೇಶಕುಮಾರ್ ಅವರು ಸುಳ್ಳು ಮಾಹಿತಿ ನೀಡಿ ಬಿಡಿಎನಿಂದ 50/80 ಅಡಿ ವಿಸ್ತೀರ್ಣದ ನಿವೇಶನ ಪಡೆದಿದ್ದಾರೆಂದು ರಾಜಾಜಿನಗರ ಕ್ಷೇತ್ರದವರೇ ಆದ ಮಾಹಿತಿ ಹಕ್ಕು ಕಾರ್ಯಕರ್ತ ಭಾಸ್ಕರನ್ ಬಯಲಿಗೆ ಎಳೆದಿದ್ದಾರೆ. ಅವರು ಈ ಹಿಂದೆ ಬಿಜೆಪಿ ಕಾರ್ಯಕರ್ತರಾಗಿದ್ದರು.

ತಪ್ಪು ಮಾಡಿಲ್ಲ: `ಕಾನೂನುಬಾಹಿರವಾಗಿ ನಿವೇಶನ ಪಡೆದಿಲ್ಲ. ತಪ್ಪು ಮಾಹಿತಿಯನ್ನು ಒಳಗೊಂಡ ಪ್ರಮಾಣ ಪತ್ರವನ್ನೂ ನೀಡಿಲ್ಲ. ನಿಯಮಾವಳಿ ಪ್ರಕಾರವೇ ನಿವೇಶನ ಪಡೆಯಲಾಗಿದೆ. ಆದರೂ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರವಾಗಬಾರದು ಎಂಬ ದೃಷ್ಟಿಯಿಂದ ರಾಜೀನಾಮೆ ನೀಡಿದ್ದೇನೆ~ ಎಂದು ಸುರೇಶ್‌ಕುಮಾರ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

`ತೇಜೋವಧೆ ಸಲುವಾಗಿಯೇ ಆರೋಪ ಮಾಡುವ ಹುನ್ನಾರ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಇಂತಹ ಆಧಾರರಹಿತ ಆರೋಪಗಳಿಂದ ಮನನೊಂದಿದ್ದೇನೆ. ನನ್ನ ನೈತಿಕತೆಯನ್ನು ಪ್ರಶ್ನಿಸುವುದಕ್ಕೆ ಅವಕಾಶ ನೀಡಬಾರದು ಎಂಬ ದೃಷ್ಟಿಯಿಂದ ರಾಜೀನಾಮೆ ನೀಡಿದ್ದೇನೆ. ನಾನು ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ~ ಎಂದು ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.

`29 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿರುವ ನನ್ನ ಮೇಲೆ ಮಾಡಿರುವ ಆರೋಪದಲ್ಲಿ ಎಳ್ಳಷ್ಟೂ ಸತ್ಯಾಂಶವಿಲ್ಲ. ಸತ್ಯಕ್ಕೆ ಅಪಚಾರವಾಗುವ ಪ್ರಮಾಣ ಪತ್ರವನ್ನು ಬಿಡಿಎಗೆ ನೀಡಿಲ್ಲ. ಆಧಾರರಹಿತ ಆರೋಪಗಳಿಂದಾಗಿ ಬೇಸರವಾಯಿತು. ಇದರಿಂದಾಗಿ ರಾಜೀನಾಮೆ ಸಲ್ಲಿಸಲಾಗಿದೆ~ ಎಂದರು.

`ಶಿಕ್ಷಕಿಯಾಗಿದ್ದ ನನ್ನ ತಾಯಿ 1994ರಲ್ಲಿ ನಿವೃತ್ತಿಯಾದರು. ಆಗ 5.50 ಲಕ್ಷ ರೂಪಾಯಿ ನೀಡಿ ರಾಮಮೋಹನಪುರದಲ್ಲಿ ಮನೆ ಖರೀದಿ ಮಾಡಿದರು. ಆದರೆ ಬಿಬಿಎಂಪಿ 2009ರಲ್ಲಿ ರಸ್ತೆ ಅಗಲ ಮಾಡಿದ್ದರಿಂದ ಆ ಮನೆಯ ಅರ್ಧ ಭಾಗ ನೆಲಸಮವಾಯಿತು. ಬಳಿಕ ಬಿಡಿಎ ನಿವೇಶನ ಪಡೆಯಲು 2009ರ ಜೂನ್ 22ರಂದು ಅರ್ಜಿ ಸಲ್ಲಿಸಿ, ಪ್ರಮಾಣ ಪತ್ರವನ್ನೂ ನೀಡಿದ್ದೆ. ಆ ಸಂದರ್ಭದಲ್ಲಿ ನಾನಗಲಿ, ನನ್ನ ಕುಟುಂಬದ ಸದಸ್ಯರ ಹೆಸರಿನಲ್ಲಾಗಲಿ ಬಿಡಿಎ ವ್ಯಾಪ್ತಿಯಲ್ಲಿ ನಿವೇಶನ ಇರಲಿಲ್ಲ~ ಎಂದು ಸ್ಪಷ್ಟಪಡಿಸಿದರು.

`2009ರಲ್ಲಿ ಬಿಡಿಎ ನಾಗರಬಾವಿಯಲ್ಲಿ ನನಗೆ ನಿವೇಶನ ಮಂಜೂರು ಮಾಡಿತು. 2010ರ ಜನವರಿ 23ರಂದು ನೋಂದಣಿಯೂ ಆಯಿತು. ಆದರೆ ನಿವೇಶನ ಇದ್ದ ಜಾಗವನ್ನು 2010ರ ಜೂನ್ ಎರಡರಂದು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಯಿತು. ಇದಕ್ಕೆ ಬದಲಿಯಾಗಿ 2011ರ ಏಪ್ರಿಲ್ 6ರಂದು ಆರ್‌ಎಂವಿ ಎರಡನೇ ಹಂತದ ಲೊಟ್ಟೆಗೊಲ್ಲಹಳ್ಳಿಯಲ್ಲಿ ನಿವೇಶನ ಮಂಜೂರಾಯಿತು ಎಂದು ತಿಳಿಸಿದರು.

ನೆಲಮಂಗಲ ಯೋಜನಾ ಪ್ರಾಧಿಕಾರ ವ್ಯಾಪ್ತಿಯ ದಾಸನಪುರ ಹೋಬಳಿಯಲ್ಲಿ ಸತ್ಯನಾರಾಯಣ ಗೃಹ ನಿರ್ಮಾಣ ಸಹಕಾರ ಸಂಘದಿಂದ ನನ್ನ ತಾಯಿ, ಪುತ್ರಿ ಹೆಸರಿನಲ್ಲಿ 30/40 ಅಳತೆಯ ಎರಡು ನಿವೇಶನಗಳನ್ನು 2009ರ ಮೇ 7ರಂದು ಖರೀದಿಸಲಾಗಿದೆ. ಇದು ಬಿಡಿಎ ವ್ಯಾಪ್ತಿಯಿಂದ ಹೊರಗೆ ಬರುತ್ತದೆ. 2011ರಲ್ಲಿ ಲೋಕಾಯುಕ್ತಕ್ಕೆ ನೀಡಿರುವ ಮಾಹಿತಿಯಲ್ಲೂ ಈ ವಿಷಯವನ್ನು ತಿಳಿಸಲಾಗಿದೆ ಎಂದರು.

`ಮಲ್ಲೇಶ್ವರದ ಹಳೆ ಮನೆ ಹಾಗೂ ನೆಲಮಂಗಲದ ಎರಡು ನಿವೇಶನಗಳನ್ನು 2011ರ ಸೆಪ್ಟೆಂಬರ್‌ನಲ್ಲಿ ಮಾರಾಟ ಮಾಡಿ, ಶಾರದಾ ಕಾಲೊನಿಯಲ್ಲಿ ಈಗಿರುವ ಮನೆಯನ್ನು ನನ್ನ ತಾಯಿ ಖರೀದಿ ಮಾಡಿದ್ದಾರೆ. ಈ ಮನೆ ಖರೀದಿಗೆ 30 ಲಕ್ಷ ರೂಪಾಯಿ ಸಾಲ ಮಾಡಲಾಗಿದೆ. ಮಲ್ಲೇಶ್ವರದ ಹಳೆ ಮನೆ ಮಾರಾಟ ಮಾಡಿದ್ದಕ್ಕೆ 74 ಲಕ್ಷ ರೂಪಾಯಿ ಬಂದಿತ್ತು. ಹೀಗಾಗಿ ನನ್ನ ಅಥವಾ ನನ್ನ ಕುಟುಂಬದವರ ಹೆಸರಿನಲ್ಲಿ ಒಂದು ಮನೆ ಹಾಗೂ ಬಿಡಿಎ ನಿವೇಶನ ಬಿಟ್ಟರೆ ಬೇರೆ ಯಾವುದೇ ಆಸ್ತಿ ಇಲ್ಲ~ ಎಂದೂ ಅವರು ಸ್ಪಷ್ಟಪಡಿಸಿದರು.

ರಾಜೀನಾಮೆ ನಿರ್ಧಾರಕ್ಕೂ ಮುನ್ನ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ಸಂಘಟನಾ ಕಾರ್ಯದರ್ಶಿ ಸಂತೋಷ್ ಸೇರಿದಂತೆ ಇತರ ಪ್ರಮುಖರಿಗೂ ವಿಷಯವನ್ನು ತಿಳಿಸಲಾಗಿತ್ತು ಎಂದು ಸುರೇಶಕುಮಾರ್ ಹೇಳಿದರು.

ಒತ್ತಡ: ಸಚಿವರಾದ ಆರ್.ಅಶೋಕ, ಎಸ್.ಎ.ರಾಮದಾಸ್, ಮೇಯರ್ ಡಿ.ವೆಂಕಟೇಶಮೂರ್ತಿ ಸೇರಿದಂತೆ ಇತರರು ಕೂಡ ರಾಜೀನಾಮೆ ಅಂಗೀಕರಿಸದಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT