ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ನೀರಾವರಿ ಇಲಾಖೆ: ಅವ್ಯವಹಾರದ ಕೂಪ

Last Updated 5 ಡಿಸೆಂಬರ್ 2013, 6:31 IST
ಅಕ್ಷರ ಗಾತ್ರ

ಶಹಾಪುರ: ನೀರು ವಂಚಿತ ಬಡ ರೈತರಿಗೆ ಬೋರ್‌ವೆಲ್‌ ಮೂಲಕ ಜಮೀನಿಗೆ ನೀರು ಒದಗಿಸಬೇಕು ಎಂಬ ಸರ್ಕಾರದ ಮಹತ್ವಕಾಂಕ್ಷೆಯ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯನ್ನು ಅನುಷ್ಠಾನ­ಗೊಳಿಸ­ಬೇಕಾದ ಸಣ್ಣ ನೀರಾವರಿ ಇಲಾಖೆ ರೈತರ ಹೆಸರಿನಲ್ಲಿ ಬಿಳಿಯಾನೆ ಆಗಿದೆ.

ಯಾದಗಿರಿ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ಅಡಿಯಲ್ಲಿ 2011–12ನೇ ಸಾಲಿನಲ್ಲಿ ರೂ1.25 ಕೋಟಿ ಮೊತ್ತದ ಕಾಮಗಾರಿ ಕೈಗೆತ್ತಿ­ಕೊಳ್ಳಲಾಗಿದೆ. ಅದರಲ್ಲಿ ರೂ55ಲಕ್ಷ ವೆಚ್ಚ ಮಾಡಲಾಗಿದೆ. ಎಸ್‌ಸಿಪಿ (ಪರಿಶಿಷ್ಟ ಜಾತಿ) 19 ಹಾಗೂ ಟಿಎಸ್‌ಪಿ 5 ಹೀಗೆ ಒಟ್ಟು 24 ಫಲಾನುಭವಿಗಳಿದ್ದಾರೆ. ಅದರಂತೆ 2012–13ನೇ ಸಾಲಿನಲ್ಲಿ 36 ಫಲಾನುಭವಿಗಳನ್ನು ಆಯ್ಕೆ ಮಾಡ­ಲಾಗಿದೆ. ರೂ2.73ಕೋಟಿ ಹಣ ಕಾಯ್ದಿರಿಸಲಾಗಿದ್ದು, ಅದರಲ್ಲಿ ರೂ8.68ಲಕ್ಷ ವೆಚ್ಚಲಾಡಲಾಗಿದೆ ಎಂದು ದಾಖಲೆಗಳು ಹೇಳುತ್ತವೆ.

ಇಲಾಖೆಯ ಅಡಿಯಲ್ಲಿ ಕೈಗೆತ್ತಿ­ಕೊಳ್ಳ­ಲಾದ ಕಾಮಗಾರಿಯ ಭಾವಚಿತ್ರ ಲಭ್ಯವಿರುವುದಿಲ್ಲ. ಫಲಾನುಭವಿಗಳ ಆಯ್ಕೆ, ನಿರ್ವಹಿಸಬೇಕಾದ ಕಾಮಗಾರಿ ಹಾಗೂ ಇನ್ನಿತರ ಮಾರ್ಗಸೂಚಿ ಲಭ್ಯವಿಲ್ಲ ಎಂದು ಸಣ್ಣ ನೀರಾವರಿ ಉಪ ವಿಭಾಗದ ಸಹಾಯಕ ಕಾರ್ಯ­ನಿರ್ವಾಹಕ ಎಂಜಿನಿಯರ್‌ ಲಿಖಿತವಾಗಿ ತಿಳಿಸಿದ್ದಾರೆ.

‘ಅಂದಾಜು ಪತ್ರಿಕೆ, ಅಳತೆ ಪುಸ್ತಕ, ಎಂ.ಬಿ.ರೆಕಾರ್ಡ್‌ ಹಾಗೂ ಇನ್ನಿತರ ದಾಖಲೆಗಳನ್ನು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಪಡೆದು ಪರಿಶೀಲಿಸಿದಾಗ ಅಕ್ರಮದ ಹೂರಣವೇ ಅದರಲ್ಲಿ ತುಂಬಿದೆ’ ಎಂದು ರೈತ ಮುಖಂಡ ಮಹಮ್ಮದ್‌ ಇಸ್ಮಾಯಿಲ್ ಚೌದ್ರಿ ತಿಳಿಸಿದ್ದಾರೆ.

ತಾಲ್ಲೂಕಿನ ವನದುರ್ಗ ಗ್ರಾಮದ ಸರ್ವೆ ನಂಬರ್‌ 3ರಲ್ಲಿ 3ಎಕರೆ 24 ಗುಂಟೆ ಜಮೀನಿನ ಮಾಲೀಕ ರಾಜಾ ವೆಂಕಟಪ್ಪ ನಾಯಕ ಬೋರ್‌ವೆಲ್‌ ಮೂಲಕ ನೀರಾವರಿ ಸೌಲಭ್ಯ ಒದಗಿಸುವುದಕ್ಕಾಗಿ 2012–13ನೇ ಸಾಲಿನಲ್ಲಿ ರೂ4.44ಲಕ್ಷ ಮೊತ್ತದ ಅಂದಾಜು ಪತ್ರಿಕೆಗೆ 2012–ಅಕ್ಟೋಬರ್‌ 3ರಂದು ಅನುಮೋದನೆ ಪಡೆದು ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಕಡತದಲ್ಲಿ ನಮೂದಿಸಲಾಗಿದೆ.

ಸೋಜಿಗದ ಸಂಗತಿಯೆಂದರೆ ಜಮೀನಿನ ಮಾಲೀಕ 1990ರಲ್ಲಿ ಕೃಷಿಯೇತರಕ್ಕಾಗಿ 3ಎಕರೆ 24ಗುಂಟೆ  ಜಮೀನು ಪರಿವರ್ತಿಸಿಕೊಂಡಿದ್ದಾನೆ. (ಎನ್‌.ಎ. ಆದೇಶ ಸಂಖ್ಯೆ90/91 11/6/90)  ನಿವೇಶನವಿರುವ ಜಾಗದಲ್ಲಿ ನೀರಾವರಿ ಸೌಲಭ್ಯ ಪಡೆಯಲು ಹೇಗೆ ಸಾಧ್ಯ? ಅಲ್ಲಿ ಕಾಮಗಾರಿ ನಡೆದಿಲ್ಲವೆಂದು ಕೃಷಿ ಕೂಲಿಕಾರ ಸಂಘದ ಜಿಲ್ಲಾ ಸಂಚಾಲಕ ದಾವಲಸಾಬ್ ನದಾಫ್‌ ತಿಳಿಸಿದ್ದಾರೆ.

ಅಲ್ಲದೇ 2012–13ನೇ ಸಾಲಿನ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ರೂ1.50ಲಕ್ಷ ವೆಚ್ಚದಲ್ಲಿ ಸರ್ವೆ ನಂಬರ್‌ 3ರಲ್ಲಿ ಬಾವಿ ಹೂಳೆತ್ತುವುದು ಎಂದು ನಮೂದಿಸಿ ಹಣ ಗುಳುಂ ಮಾಡಿದ್ದಾರೆ. 2013–14ನೇ ಸಾಲಿನ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಸರ್ವೆ ನಂ. 3 ರಲ್ಲಿ ರೂ1.45ಲಕ್ಷ ವೆಚ್ಚದಲ್ಲಿ ತಡೆಗೋಡೆ ಮತ್ತು ಚರಂಡಿ ನಿರ್ಮಾಣವೆಂದು ಕ್ರಿಯಾ ಯೋಜನೆ ಸಿದ್ಧಪಡಿಸಿದ್ದಾರೆ. ದಾಖಲೆಯ ಸಮೇತವಾಗಿ ಅಕ್ರಮವನ್ನು ಹೊರ ಹಾಕಿದೆ ಎಂದು ರೈತ ಮುಖಂಡ ಸಿದ್ದಯ್ಯ ಹಿರೇಮಠ ಹೇಳುತ್ತಾರೆ.

ಬಡ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ (ಎಸ್‌ಸಿಪಿ/­ಟಿಎಸ್‌ಪಿ) ರೈತರ ಹೆಸರಿನಲ್ಲಿ ಸಣ್ಣ ನೀರಾವರಿ ಇಲಾಖೆಯು ಲಕ್ಷಾಂತರ ವೆಚ್ಚದ ಕಾಮಗಾರಿಗಳನ್ನು ಸರಿಯಾಗಿ ಅನುಷ್ಠಾನಗೊಳಿಸದೇ ಅಕ್ರಮ ಎಸಗಿದ್ದು, ತಜ್ಞರ ತಂಡವನ್ನು ರಚಿಸಿ  ತನಿಖೆ ನಡೆಸಬೇಕು. ಅಕ್ರಮದಲ್ಲಿ ಭಾಗಿಯಾಗಿರುವ ಎಂಜಿನಿಯರ್‌ ವಿರುದ್ಧ ಹಾಗೂ ವಂಚನೆ ಮಾಡಿದ ರೈತನ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಇಲ್ಲದಿದ್ದರೆ ಕಚೇರಿಯ ಮುಂದೆ ಧರಣಿ ನಡೆಸಲಾಗುವುದು ಎಂದು ಸಿದ್ದಯ್ಯ ಎಚ್ಚರಿಕೆ ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT