ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಸ್ಯರಿಂದ ಸಮಸ್ಯೆಗಳ ಸುರಿಮಳೆ

ಕಡೂರು ತಾ.ಪಂ ಸಾಮಾನ್ಯ ಸಭೆ
Last Updated 5 ಸೆಪ್ಟೆಂಬರ್ 2013, 8:33 IST
ಅಕ್ಷರ ಗಾತ್ರ

ಕಡೂರು: ತಾಲ್ಲೂಕಿನಲ್ಲಿ ಹಲವಾರು ಇಲಾಖೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಪ್ರಭಾಕರ್, ಶಿವಕುಮಾರ್, ನಿಂಗಪ್ಪ, ಕುಂಕಾನಾಡು ಬಸವರಾಜ್ ಮುಂತಾದವರು ಶಿಕ್ಷಣ, ಲೋಕೋಪಯೋಗಿ, ಮೆಸ್ಕಾಂ ಮುಂತಾದ ಇಲಾಖೆಗಳ ಕಾರ್ಯನಿರ್ವಹಣೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.

ಎಸ್‌ಯುಎಸ್‌ವೈ ಯೋಜನೆಯಲ್ಲಿ ಚ್ಕಿಕನಲ್ಲೂರಿನ ಶಾಲೆಗೆ ನಿರ್ಮಿಸಲಾಗಿರುವ ಕಾಂಪೌಂಡ್ ಕಾಮಗಾರಿ ಕಳಪೆಯಾಗಿದ್ದು ಬಿಲ್ ತಡೆ ಹಿಡಿಯುವಂತೆ ಸಭಾ ನಡವಳಿಕೆಯಲ್ಲಿ ಸೂಚಿಸಲಾಗಿದ್ದರೂ ಬಿಲ್ ಪಾವತಿಸಲಾಗಿದೆ ಎಂದು ಸದಸ್ಯ ಪ್ರಭಾಕರ್ ಅಸಮಾಧಾನ ವ್ಯಕ್ತಪಡಿಸಿದರೆ, ಶಾಲಾ ಕಾಂಪೌಂಡ್‌ಗಳ ನಿರ್ಮಾಣ ಕಾರ್ಯದಲ್ಲಿ ಸತತವಾಗಿ ಅವ್ಯವಹಾರದ ದೂರುಗಳು ಕೇಳಿ ಬರುತ್ತಿದ್ದು ಶಿಕ್ಷಣಾಧಿಕಾರಿಗಳು ಇತ್ತ ಗಮನ ಹರಿಸಿಲ್ಲ ಎಂದು ಮತ್ತೊಬ್ಬ ಸದಸ್ಯ ಶಿವಕುಮಾರ್ ದೂರಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಂಗನಾಥ ಸ್ವಾಮಿ ಮಾಹಿತಿ ನೀಡಿ, ಕಳಪೆ ಕಾಮಗಾರಿಯ ಬಗ್ಗೆ ದೂರು ಬಂದಿದ್ದು, ಈ ಕುರಿತು ಇಲಾಖಾ ತನಿಖೆ ನಡೆಸಲಾಗುತ್ತಿದೆ. ತಾಲ್ಲೂಕಿನ 60 ಶಾಲೆಗಳ 5660 ಮೀಟರ್ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ, ಕಳೆದ ಸಾಲಿನ ಅನುದಾನದಲ್ಲಿ ಆರಂಭಗೊಂಡ 5 ಕಟ್ಟಡಗಳ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಕಳಪೆ ಕಾಮಗಾರಿ ಬಗ್ಗೆ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪವಿಭಾಗಕ್ಕೆ ಪತ್ರ ಬರೆದು ಸ್ಥಳಪರಿಶೀಲನೆ ಮತ್ತು ತನಿಖೆ ನಡೆಸುವಂತೆ ಕೋರಲಾಗುವುದು ಎಂದು ಜಿಲ್ಲಾಪಂಚಾಯಿತಿ ಎಇಇ ಪ್ರಭಾಕರರಾವ್ ತಿಳಿಸಿದರು.

2013-14ನೇ ಸಾಲಿಗೆ ಕುಡಿಯವ ನೀರಿನ ಯೋಜನೆಯ 54 ಕಾಮಗಾರಿಗಳ ಪೈಕಿ 20 ಕಾಮಗಾರಿಗಳು ಮುಕ್ತಾಯವಾಗಿವೆ. ಮುಂದುವರೆದ ಕ್ರಿಯಾಯೋಜನೆಯಲ್ಲಿ 2013-14ನೇ ಸಾಲಿಗೆ 312 ಯೋಜನೆಗಳಿಗೆ 28.90ಕೋಟಿ ವೆಚ್ಚದ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿ ಹಲವೆಡೆ ಕುಡಿಯುವ ನೀರಿಗೆ ತೊಂದರೆ ಮುಂದುವರೆದಿದ್ದು ಶೀಘ್ರವಾಗಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ಬಿಟ್ಟೇನಹಳ್ಳಿ ಗ್ರಾಮದಲ್ಲಿ ಕಬ್ಬಿಣದ ವಿದ್ಯುತ್ ಕಂಬಗಳಿದ್ದು ಅವುಗಳನ್ನು ತೆರವುಗೊಳಿಸಿ ಸಿಮೆಂಟ್ ಕಂಬ ಅಳವಡಿಸುವಂತೆ ಸದಸ್ಯೆ ಶಕುಂತಲಾ ಮೆಸ್ಕಾಂ ಅಧಿಕಾರಿಗಳಲ್ಲಿ ಕೋರಿದರೆ ಜೋಡಿಲಿಂಗದಹಳ್ಳಿಯ ರಸ್ತೆ ಮಧ್ಯೆ ಇರುವ ವಿದ್ಯುತ್ ಕಂಬ ತೆರವುಗೊಳಿಸುವಂತೆ ನೀಲಕಂಠಪ್ಪ ಆಗ್ರಹಿಸಿದರು. ಬೀರೂರು ಮೆಸ್ಕಾಂ ಎಇಇ ಸಭೆಗೆ ಗೈರುಹಾಜರಾಗಿದ್ದು ಅವರಿಗೆ ನೋಟಿಸ್ ಜಾರಿ ಮಾಡುವಂತೆ ಅಧ್ಯಕ್ಷ ಓಂಕಾರಪ್ಪ ಸೂಚಿಸಿದರು.

ತೋಟಗಾರಿಕೆ ಇಲಾಖೆ ವತಿಯಿಂದ 360 ಫಲಾನುಭವಿಗಳಿಗೆ ತೆಂಗಿನ ಸಸಿ ವಿತರಿಸಲಾಗಿದೆ ಎಂದು ಸಹಾಯಕ ನಿರ್ದೇಶಕ ಡಾ.ಸಂಜಯ್ ತಿಳಿಸಿದರು, ಕೃಷಿ, ಸಮಾಜಕಲ್ಯಾಣ, ಅರಣ್ಯ, ಮೀನುಗಾರಿಕೆ, ಶಿಶು ಮತ್ತು ಮಹಿಳಾ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇಲಾಖಾ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ತಾ.ಪಂ ಅಧ್ಯಕ್ಷ ಓಂಕಾರಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷೆ ಶೋಭಾ ವೆಂಕಟೇಶ್, ತಾ.ಪಂ. ಯೋಜನಾಧಿಕಾರಿ ಎಚ್.ಈ.ಮಹೇಶ್ವರಪ್ಪ ಮತ್ತು ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT