ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಫಾಯಿ ಕರ್ಮಚಾರಿಗಳಿಗೆ ಬದಲಿ ಕೆಲಸ

Last Updated 27 ಅಕ್ಟೋಬರ್ 2011, 7:45 IST
ಅಕ್ಷರ ಗಾತ್ರ

ಕೆಜಿಎಫ್: ಸಫಾಯಿ ಕರ್ಮಚಾರಿಗಳಿಗೆ ಲಾಭದಾಯಕ ಕೆಲಸ ಕೊಡುವುದು ಸರ್ಕಾರದ ಜವಾಬ್ದಾರಿ. ಅವರಿಗೆ ಇಷ್ಟವಾಗುವ ಹಾಗೂ ಜೀವನ ನಿರ್ವಹಿಸಲು ಅನುಕೂಲವಾಗುವ ಕೆಲಸಗಳನ್ನು ನೀಡುವ ಬಗ್ಗೆ ಚರ್ಚೆಯಾಗಬೇಕಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ನವೀನ್‌ರಾಜ್‌ಸಿಂಗ್ ಮಂಗಳವಾರ ಹೇಳಿದರು.

ಪಟ್ಟಣದ ಆಶೋಕನಗರ ಬಡಾವಣೆಯಲ್ಲಿ ಸೋಮವಾರ ಮೂವರು ಸಫಾಯಿ ಕರ್ಮಚಾರಿಗಳು ಮತಪಟ್ಟ ಹಿನ್ನಲೆಯಲ್ಲಿ ಸ್ಥಳ ಪರಿಶೀಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ 140 ಸಫಾಯಿ ಕರ್ಮಚಾರಿಗಳ ಪೈಕಿ 40 ಮಂದಿ ಬದಲಿ ಉದ್ಯೋಗ ಕೇಳುತ್ತಿದ್ದಾರೆ ಎಂದರು.

ಸರ್ಕಾರಿ ಖಾಯಂ ಉದ್ಯೋಗ ನೀಡಿ ಎನ್ನುವುದು ಅವರ ಆಗ್ರಹ. ಸ್ವಯಂ ಉದ್ಯೋಗ ಕೈಗೊಳ್ಳಲು ಇಚ್ಛಿಸುವವರಿಗೆ ವಿವಿಧ ಇಲಾಖೆಗಳಿಂದ ನೀಡುವ ಆರ್ಥಿಕ ನೆರವು ಸಬ್ಸಿಡಿ ರೂಪದಲ್ಲಿರಬೇಕೆ ಅಥವಾ ಸಾಲದ ರೂಪದಲ್ಲಿರಬೇಕೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ರೂಪುಗೊಂಡಿಲ್ಲ ಎಂದರು.

ಸಫಾಯಿ ಕರ್ಮಚಾರಿಗಳು ಮಲಗುಂಡಿಗಳಲ್ಲಿ ಇಳಿದು ಸ್ವಚ್ಛಗೊಳಿಸುವ ವಿಚಾರದಲ್ಲಿ ಕಠಿಣ ಕ್ರಮ ಜರುಗಿಸುವುದು ಅಗತ್ಯ. ಈ ಕಾರ್ಯವನ್ನು ಪ್ರೋತ್ಸಾಹಿಸುವವರ ಮೇಲೆಯೂ ಮೊಕದ್ದಮೆ ದಾಖಲಿಸಲಾಗುವುದು. ನಗರಸಭೆ ಈ ನಿಟ್ಟಿನಲ್ಲಿ ನಿಧಾನಗತಿಯಲ್ಲಿ ವರ್ತಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾಗರಿಕ ಹಕ್ಕುಜಾರಿ ನಿರ್ದೇಶನಾಲಯದ ಡಿಐಜಿ ಅರುಣ್ ಚಕ್ರವರ್ತಿ ಮಾತನಾಡಿ, ಸಫಾಯಿ ಕರ್ಮಚಾರಿಗಳ ಸಮಸ್ಯೆಯನ್ನು ಸಾಮಾಜಿಕ ಮತ್ತು ಕಾನೂನು ರೀತಿಯಲ್ಲಿ ನೋಡಬೇಕು. ಮಲದ ಗುಂಡಿಗಳನ್ನು ಸ್ವಚ್ಛಗೊಳಿಸಬಾರದು ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಅವರ ಆರ್ಥಿಕ ಅಭ್ಯುದಯಕ್ಕಾಗಿ ಹಲವು ಯೋಜನೆಗಳಿವೆ. ಅವುಗಳನ್ನು ಫಲಾನುಭವಿಯ ಅನುಕೂಲಕ್ಕೆ ತಕ್ಕಂತೆ ಮಂಜೂರು ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಫಾಯಿ ಕರ್ಮಚಾರಿಗಳಿಗೆ ಸಂಬಂಧಿಸಿದ ಕಾನೂನು ಕೆಜಿಎಫ್‌ನಲ್ಲಿ ಹೇಗೆ ಜಾರಿಯಾಗಿದೆ ಎಂಬುದನ್ನು ತಿಳಿದು ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವಜ್ಯೋತಿ ರೇ, ನಗರಸಭೆ ಉಪಾಧ್ಯಕ್ಷ ಎಂ.ಭಕ್ತವತ್ಸಲಂ, ಉಪ ವಿಭಾಗಾಧಿಕಾರಿ ಪೆದ್ದಪ್ಪಯ್ಯ, ತಹಶೀಲ್ದಾರ್ ಮಂಗಳ,  ನಗರಸಭೆ ಆಯುಕ್ತ ಬಾಲಚಂದ್ರ, ನಗರ ಅಭಿವೃದ್ಧಿ ಕೋಶದ ಅಧಿಕಾರಿ ಪದ್ಮನಾಭ ಹಾಜರಿದ್ದರು.

ಕರ್ತವ್ಯ ಲೋಪ: ಮಲಗುಂಡಿಗೆ ಬಿದ್ದು ಮೂವರು ಸಫಾಯಿ ಕರ್ಮಚಾರಿಗಳು ಮೃತಪಟ್ಟ ಹಿನ್ನಲೆಯಲ್ಲಿ ಕರ್ತವ್ಯಲೋಪದ ಆರೋಪದ ಮೇಲೆ ರಾಬರ್ಟಸನ್‌ಪೇಟೆ ನಗರಸಭೆ ಆಯುಕ್ತ, ಆರೋಗ್ಯ ನಿರೀಕ್ಷಕ  ಮತ್ತು ಇತರ ಅಧಿಕಾರಿಗಳ ವಿರುದ್ಧ ರಾಬರ್ಟ್‌ಸನ್‌ಪೇಟೆ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದಾರೆ.

ಮೃತಪಟ್ಟವರಿಗೆ ನಗರಸಭೆಯಲ್ಲಿ ನೀಡಿದ್ದ ಕೆಲಸವನ್ನು ರದ್ದುಗೊಳಿಸಿದ್ದರು. ಪಿಟ್ ತೆಗೆಯಲು ಸಕ್ಕಿಂಗ್ ಮಿಷಿನ್ ಮಾತ್ರ ಉಪಯೋಗಿಸಬೇಕು ಎಂಬ ಅಂಶವನ್ನು ಸಮರ್ಪಕವಾಗಿ ಪ್ರಚಾರ ಮಾಡದೆ ಮೂವರ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಕೆಲಸಕ್ಕೆಅಡ್ಡಿ: ಅಶೋಕನಗರದ ಮನೆಯೊಂದರಲ್ಲಿ ಮಲಗುಂಡಿ ಸ್ವಚ್ಛಗೊಳಿಸಲು ಹೋಗಿ ಮೂವರು ಮೃತಪಟ್ಟ ಸಂದರ್ಭದಲ್ಲಿ ಪೊಲೀಸರಿಗೆ ಮತ್ತು ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಅಡ್ಡಿ ಮಾಡಿದ ಕಾರಣ ಕೆಲವು ದಲಿತ ಸಂಘಟನೆಗಳ ಮುಖಂಡರ ವಿರುದ್ಧ ರಾಬರ್ಟ್‌ಸನ್‌ಪೇಟೆ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದಾರೆ.

ಸದರಿ ಸನ್ನಿವೇಶದಲ್ಲಿ ಶವವನ್ನು ಸಾಗಿಸುವ ಸಂದರ್ಭದಲ್ಲಿ ಒಂದು ಶವವನ್ನು ರಸ್ತೆ ಮಧ್ಯದಲ್ಲಿಟ್ಟು, ಮೃತನ ಕುಟುಂಬದವರಿಗೆ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ, ಪೊಲೀಸರ ಮೇಲೆ ಬಲಪ್ರಯೋಗ ಮಾಡಿ ಅವರ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮುಖಂಡರಾದ ಎಪಿಎಲ್ ರಂಗನಾಥ್, ಸೂಲಿಕುಂಟೆ ರಮೇಶ್, ಜಯಕುಮಾರ್, ನರಸಿಂಹ, ಮುತ್ತು ಮಾಣಿಕ್ಯಂ, ಪದ್ಮ, ರವಿಕುಮಾರ್ ಹಾಗೂ ಇತರರ ವಿರುದ್ಧ ಮೊಕದ್ದಮೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT