ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆ ಬಹಿಷ್ಕರಿಸಿದ ವಿಪಕ್ಷ ಸದಸ್ಯರು

ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ
Last Updated 19 ಡಿಸೆಂಬರ್ 2013, 9:23 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲಾ ಮಟ್ಟದ ಅಧಿಕಾರಿಗಳು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆದ್ಯತೆ  ನೀಡುತ್ತಿಲ್ಲ ಎಂದು ಆರೋಪಿಸಿದ ವಿರೋಧ ಪಕ್ಷದ ಸದಸ್ಯರು, ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆಯಲಿದ್ದ ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 11.30ಕ್ಕೆ ಸಭೆ ಆರಂಭ ಆಗುತ್ತಿದ್ದಂತೆಯೇ ಬಿಜೆಪಿ ಮತ್ತು  ಬಿಎಸ್‌್ಆರ್‌ ಕಾಂಗ್ರೆಸ್‌ ಪಕ್ಷದ ಸದಸ್ಯರು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಅನೇಕ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಅಭಿವೃದ್ಧಿಯ ಕುರಿತು ಗಮನ ಹರಿಸದೆ, ತೀವ್ರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ, ಘೋಷಣೆ ಕೂಗುತ್ತ ಸಭೆಯಿಂದ ಹೊರನಡೆದರಲ್ಲದೆ, ಸಭಾಂಗಣದ ಎದುರು ಪ್ರತಿಭಟನೆ ನಡೆಸಿದರು.

ಮಾಜಿ ಅಧ್ಯಕ್ಷರಾದ ಅರುಣಾ ತಿಪ್ಪಾರೆಡ್ಡಿ, ಸುಮಂಗಲಾ ಗುಬಾಜಿ, ಸದಸ್ಯರಾದ ಗೋನಾಳ್‌ ರಾಜಶೇಖರಗೌಡ, ವಸಂತಗೌಡ, ಮಲ್ಲಿಕಾರ್ಜುನ, ಚೆನ್ನಬಸವನಗೌಡ ಮತ್ತಿತರರು ಪತಿಭಟನೆ ನಡೆಸಿ, ತುಂಗಭದ್ರಾ ಕಾಲುವೆ ಮೂಲಕ ಡಿಸಂಬರ್‌ ಅಂತ್ಯಕ್ಕೆ ನೀರು ಸ್ಥಗಿತಗೊಳಿಸಲಾಗುತ್ತಿದ್ದರೂ ಬಳ್ಳಾರಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಕೆರೆಗಳನ್ನು ಭರ್ತಿ ಮಾಡಲಾಗಿಲ್ಲ ಎಂದು ದೂರಿದರು.
ಸಿಂಧುವಾಳ, ರಾಮಸಾಗರ, ಯರ್ರಗುಡಿ, ರೂಪನಗುಡಿ, ಮಲಪನಗುಡಿ ಮತ್ತಿತರ ಗ್ರಾಮಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರೆತೆ, ಚಿಕಿತ್ಸೆ ಸೌಲಭ್ಯದ ಕೊರತೆ ಇದ್ದರೂ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.

ಸಭೆಗಳಲ್ಲಿ ಎಷ್ಟೇ ಚೆರ್ಚೆ ನಡೆಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಜಿಲ್ಲಾ ಪಂಚಾಯ್ತಿಯ ಸದಸ್ಯರಿಗೆ ಸ್ಪಂದಿಸುವುದೇ ಇಲ್ಲ. ತಿಂಗಳಿಗೊಮ್ಮೆ ನಡೆಯುವ ಸಾಮಾನ್ಯ ಸಭೆಗಳು ಅಧಿಕಾರಿಗಳು ನೀಡುವ ಹೇಳಿಕೆಗಳನ್ನು ದಾಖಲಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗುತ್ತಿವೆ. ಸಭೆಯಲ್ಲಿ ಮಾತನಾಡಿ, ಊಟ ಮಾಡಿ ಹೋಗುವುದಕ್ಕೆ ಮಾತ್ರ ಸದಸ್ಯರನ್ನು ಜನತೆ ಆಯ್ಕೆ ಮಾಡಿ ಕಳುಹಿಸಿದಂತಿದೆ ಎಂದು ಸದಸ್ಯ ಗೋನಾಳ್ ರಾಜಶೇಖರಗೌಡ ಆಕ್ರೋಶ ವ್ಯಕ್ತಪಡಿಸಿದರು.

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುಂಚಿತವಾಗಿಯೇ ಕ್ರಮ ಕೈಗೊಳ್ಳಲಾಗಿಲ್ಲ. ಬಳ್ಳಾರಿ ಹಾಗೂ ಕಂಪ್ಲಿ ಬಳಿಯಿರುವ ಗ್ರಾಮಗಳಲ್ಲಿನ  ಕೆರೆಗಳನ್ನು ಭರ್ತಿ ಮಾಡಿಲ್ಲ ಎಂದು ಅವರು ದೂರಿದರು.

ರೂಪನಗುಡಿ ಮತ್ತು ಮಿಂಚೇರಿ ಗ್ರಾಮಗಳೂ ಒಳಗೊಂಡಂತೆ ಜಿಲ್ಲೆಯ ವಿವಿಧ ಗ್ರಾಮಗಳ ಕೆರೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಅವರು ಹೇಳಿದರು.

ಅಭಿವೃದ್ಧಿಗಾಗಿ ಬಿಡುಗಡೆಯಾದ ಅನುದಾನ ಸೂಕ್ತವಾಗಿ ಬಳಕೆಯಾಗದೆ ಸರ್ಕಾರಕ್ಕೆ ವಾಪಸಾಗುತ್ತಿದೆ ಎಂದು ಆರೋಪಿಸಲಾಯಿತು.
ಅಧ್ಯಕ್ಷೆ ಶೋಭಾ ಬೆಂಡಿಗೇರಿ, ಉಪಾಧ್ಯಕ್ಷೆ ಮಮತಾ, ಆಡಳಿತಾರೂಢ ಪಕ್ಷದ ಸದಸ್ಯರಾದ ಕೆ.ಎಂ ಶಶಿಧರ, ಶರಣಪ್ಪ, ಅನ್ನದಾನರೆಡ್ಡಿ ಮೇಟಿ, ವಸಂತ ಮತ್ತಿತರರು ಫ್ರತಿಭಟನಾನಿರತರ ಮನವೊಲಿಸಲು ಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ.

ಬಿ.ಮಮತಾ, ಅನಿತಾ, ಎನ್.ಎಂ. ಗಾಯಿತ್ರಮ್ಮ, ಎರಿಸ್ವಾಮಿ, ಮಲ್ಲಮ್ಮ, ಮೀನಾಕ್ಷಮ್ಮ, ರಾಮುಡು, ಸಿರಗೇರಿ ವಸಂತಗೌಡ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಭೆಯಲ್ಲಿ ಗೊಂದಲ ಮೂಡಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷೆ ಶೋಭಾ ಬೆಂಡಿಗೇರಿ ಹೇಳಿದರು.

ಈಗಾಗಲೇ ಕೆಲವು ಅಧಿಕಾರಿಗಳ ವೇತನ ಬಡ್ತಿ ತಡೆ ಹಿಡಿಯಲಾಗಿದೆ. ಕೆಲರ ವಿರುದ್ಧ ವಾಗ್ದಂಡನೆ ವಿಧಿಸಲಾಗಿದೆ. ಅಧಿಕಾರಿಗಳ ಅಶಿಸ್ತಿನ ಕುರಿತು ಸಮಿತಿಯೊಂದನ್ನು ರಚಿಸಿ, ತನಿಖೆಗೆ ಆದೇಶಿಸಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT