ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆಗೆ ಬಹಿಷ್ಕಾರ: ಆಕ್ರೋಶ

Last Updated 4 ಅಕ್ಟೋಬರ್ 2011, 9:25 IST
ಅಕ್ಷರ ಗಾತ್ರ

ಯಾದಗಿರಿ: ಸಾಮಾನ್ಯ ಸಭೆಗೆಂದು ಆಗಮಿಸಿದ್ದ ಸದಸ್ಯರನ್ನು ಹೊರಗೆ ಕಳುಹಿಸಿ, ಅಧಿಕಾರಿಗಳ ಸಭೆ ನಡೆಸಲು ಮುಂದಾದ ಶಾಸಕ ಬಾಬುರಾವ ಚಿಂಚನಸೂರ ಅವರ ಕಾರ್ಯವೈಖರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ಸೇರಿದ ತಾಲ್ಲೂಕು ಪಂಚಾಯಿತಿ ಸದಸ್ಯರು, ಸೋಮವಾರ ಕರೆಯಲಾಗಿದ್ದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ, ಹೊರನಡೆದರು.

ಬೆಳಿಗ್ಗೆ 11 ಗಂಟೆಗೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ನಡೆಯಬೇಕಾಗಿತ್ತು. ಇದಕ್ಕೂ ಪೂರ್ವದಲ್ಲಿಯೇ ಶಾಸಕರು ಅಧಿಕಾರಿಗಳ ಸಭೆ ನಡೆಸುವುದಾಗಿ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದರು. ಆದರೆ ತಡವಾಗಿ ಬಂದ ಶಾಸಕರು, 11 ಗಂಟೆಗೆ ತಾಲ್ಲೂಕು ಪಂಚಾಯಿತಿ ಸಭಾಂಗಣ ಪ್ರವೇಶಿಸಿದರು. ಸಾಮಾನ್ಯ ಸಭೆಗಾಗಿ ಕಾದು ಕುಳಿತಿದ್ದ ಸದಸ್ಯರು, ಸಹಜವಾಗಿಯೇ ಶಾಸಕರು ಸಭೆಗೆ ಬಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಕೆಲವೇ ಕ್ಷಣಗಳಲ್ಲಿ ಅಧಿಕಾರಿಗಳನ್ನು ಹೊರತುಪಡಿಸಿ, ಉಳಿದವರೆಲ್ಲರನ್ನೂ ಹೊರಗೆ ಕಳುಹಿಸಿ ಎಂದು ಶಾಸಕ ಚಿಂಚನಸೂರ ಅಧಿಕಾರಿಗಳಿಗೆ ಸೂಚಿಸಿದರು. ಅದರಂತೆ ಅಧಿಕಾರಿಗಳು, ಸದಸ್ಯರನ್ನು ಸಭಾಂಗಣದಿಂದ ಹೊರಗೆ ಕಳುಹಿಸಿದರು. ಇದರಿಂದ ತೀವ್ರ ಆಕ್ರೋಶಗೊಂಡ ಸದಸ್ಯರು, ಸಭಾಂಗಣದಿಂದ ತಮ್ಮನ್ನು ಹೊರಗೆ ಕಳುಹಿಸಿರುವುದು ಸರಿಯಲ್ಲ. ಇದು ಶಾಸಕರು ಮಾಡಿರುವ ಅವಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಸಭಾಂಗಣದಿಂದ ಹೊರಬಂದ ಶಾಸಕ ಚಿಂಚನಸೂರ, ಸದಸ್ಯರ ಜೊತೆ ಚರ್ಚಿ ನಡೆಸಿದರು. ನಂತರ ಅಧಿಕಾರಿಗಳ ಸಭೆಯನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯಲ್ಲಿ ಮುಂದುವರಿಸುವುದಾಗಿ ತಿಳಿಸಿದರು. ಆದರೆ ಇದಕ್ಕೆ ಸಮಾಧಾನಗೊಳ್ಳದ ಸದಸ್ಯರು, ಈಗಾಗಲೇ ತಮಗೆ ಅವಮಾನ ಮಾಡಲಾಗಿದೆ. ಮರಳಿ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಬಿಜೆಪಿಯ 10 ಹಾಗೂ ಜೆಡಿಎಸ್‌ನ ಒಬ್ಬ ಸದಸ್ಯರು ಶಾಸಕರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕು ಪಂಚಾಯಿತಿಯೂ ಚುನಾಯಿತ ಸಂಸ್ಥೆಯಾಗಿದ್ದು, ಸಭೆ ನಡೆಸುವುದು ಅದರ ಕರ್ತವ್ಯ. ಇಲ್ಲಿ ಅನೇಕ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕಾಗಿದೆ. ಆದರೆ ಸಚಿವರು ಏಕಾಏಕಿ ಸಭೆಗೆ ಆಗಮಿಸಿ, ಕುಳಿತಿದ್ದ ಸದಸ್ಯರನ್ನು ಹೊರಗೆ ಕಳುಹಿಸಿದ್ದು ಸರಿಯಲ್ಲ. ಅಧಿಕಾರಿಗಳ ಸಭೆ ನಡೆಸುವುದಾದರೆ, ಸದಸ್ಯರ ಸಮ್ಮುಖದಲ್ಲಿಯೇ ಆಗಲಿ ಎಂದು ಸದಸ್ಯರಾದ ಸದಾಶಿವರೆಡ್ಡಿ ಪಾಟೀಲ, ಸಣ್ಣಸಾಬಯ್ಯ ಹಳಿಗೇರಾ, ಸುರೇಖಾ ಪಾಟೀಲ, ಶಾಂತಿಬಾಯಿ ಚವ್ಹಾಣ ಮುಂತಾದವರು ಒತ್ತಾಯಿಸಿದರು.

ಇತ್ತ ಸದಸ್ಯರು ಹಾಗೂ ಅವರ ಬೆಂಬಲಿಗರು ತೀವ್ರ ಬೇಸರ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಲು ಮುಂದಾದರು. ಆದರೆ ಇದಾವುದರ ಬಗ್ಗೆ ಅರಿವೇ ಇಲ್ಲದಂತೆ ಶಾಸಕ ಚಿಂಚನಸೂರ, ಅಧಿಕಾರಿಗಳ ಸಭೆಯನ್ನು ಮುಂದುವರಿಸಿದರು. ವಿಷಯ ವಿಕೋಪಕ್ಕೆ ತಿರುಗಿರುವ ಬಗ್ಗೆ ಮಾಹಿತಿ ಪಡೆದ ಶಾಸಕ ಚಿಂಚನಸೂರ, ಸದಸ್ಯರ ಜೊತೆಗೆ ಮತ್ತೊಮ್ಮೆ ಚರ್ಚೆ ನಡೆಸಲು ಮುಂದಾದರು. ಇದಾವುದಕ್ಕೂ ಸೊಪ್ಪು ಹಾಕಲಿಲ್ಲ. ಸಭೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದರು.

ನಂತರವೂ ಅಧಿಕಾರಿಗಳ ಜೊತೆಗೆ 15 ನಿಮಿಷ ಸಭೆ ನಡೆಸಿದ ಶಾಸಕ ಚಿಂಚನಸೂರ, ವಾಹನ ಹತ್ತಿ ಮೊಟ್ನಳ್ಳಿಯತ್ತ ಪ್ರಯಾಣ ಬೆಳೆಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯರು ಮಾತ್ರ ಸಭಾಂಗಣವನ್ನು ಪ್ರವೇಶಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT