ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕ ವಿದ್ಯುತ್‌ ಪೂರೈಕೆಗೆ ಆಗ್ರಹ

Last Updated 20 ಡಿಸೆಂಬರ್ 2013, 6:56 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನಾದ್ಯಂತ ಅಸಮರ್ಪಕ ವಿದ್ಯುತ್ ಸರಬರಾಜು ಖಂಡಿಸಿ ಸಮರ್ಪಕವಾಗಿ ನೀಡುವಂತೆ ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ಸದಸ್ಯರು ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಎಂ.ಶಶಿಧರ್ ಶಿವಾ­ಚಾರ್ಯ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.

ಗ್ರಾಮೀಣ ಪ್ರದೇಶಗಳಿಗೆ ದಿನಕ್ಕೆ ಮೂರು ಪಾಳಿಯಲ್ಲಿ ತಲಾ ಒಂದು ಗಂಟೆ ವಿದ್ಯುತ್‌ ನೀಡಲಾಗುತ್ತಿದೆ. ರಾತ್ರಿ ವೇಳೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ­ಯಾಗುತ್ತಿದೆ. ರೈತರು ಪಂಪ್‌ಸೆಟ್ ಬಳಸಿ ತೋಟಗಳಿಗೆ ನೀರು ಹಾಯಿಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಈ ವರ್ಷ ಉತ್ತಮ ಮಳೆಯಿಂದ ರಾಜ್ಯದ ಜಲಾಶಯಗಳು ತುಂಬಿದ್ದರೂ ಗುಣಮಟ್ಟದ ವಿದ್ಯುತ್‌ ಪೂರೈಕೆ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ವಿದ್ಯುತ್‌ ಅಭಾವ ತಡೆಗಟ್ಟಲು ಸರ್ಕಾರ ಶೀಘ್ರ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಇಂಧನ ಖಾತೆಯನ್ನೂ ತಮ್ಮ ಸುಪರ್ದಿಯಲ್ಲೇ ಇರಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಹಿತದೃಷ್ಟಿಯಿಂದ ಸೂಕ್ತ ಸಂದರ್ಭ­ಗಳಲ್ಲಿ ಅಗತ್ಯ ತೀರ್ಮಾನಗಳನ್ನು ತೆಗೆದುಕೊಂಡಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಬೇಸಿಗೆಗೆ ಮೊದಲೇ ವಿದ್ಯುತ್‌ ಕೊರತೆ ಕಾಣಿಸಿಕೊಂಡಿದೆ. ಬೇಸಿಗೆಯಲ್ಲಿ ರಾಜ್ಯ ಕತ್ತಲೆಯ ಸಾಮ್ರಾಜ್ಯವಾದರೆ ಆಶ್ಚರ್ಯವಿಲ್ಲ. ರಾಜ್ಯ ಸರ್ಕಾರ ಇತ್ತ ಶೀಘ್ರ ಗಮನ ಹರಿಸದಿದ್ದರೆ ಭಾರತೀಯ ಜನತಾ ಪಕ್ಷದ ರೈತ ಮೋರ್ಚಾ ವತಿಯಿಂದ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಬೆಸ್ಕಾಂ ಅಧಿಕಾರಿಗಳ ಮನೆ, ಕಚೇರಿಗೆ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸಗೌಡ, ಉಪಾಧ್ಯಕ್ಷರಾದ ಆರ್‌.ಚಂದ್ರಶೇಖರ್‌, ಮುಖಂಡರಾದ ಆರ್‌.ಶ್ರೀನಿವಾಸ್‌, ಆರ್‌.ಶ್ರೀನಿವಾಸರೆಡ್ಡಿ, ಎ.ಶಿವಾನಂದ್‌, ಕೆಳಗಿನತೋಟ ಸುಬ್ಬರಾಜು ಮತ್ತಿತರರು ಉಪಸ್ಥಿತರಿದ್ದರು.

8ಗಂಟೆ ವಿದ್ಯುತ್‌ಗೆ ಮನವಿ
ನಗರ ವ್ಯಾಪ್ತಿಯಲ್ಲಿ ಪ್ರತಿದಿನ ಕನಿಷ್ಠ 8 ಗಂಟೆಯಾದರೂ ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಜೆಡಿಎಸ್‌ ಕಾರ್ಯಕರ್ತರು ಗುರುವಾರ ಬೆಸ್ಕಾಂ ಕಾರ್ಯಪಾಲಕ ಎಂಜನಿಯರ್‌ ಎಂ.ಶಶಿಧರ್ ಶಿವಾಚಾರ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ವಿದ್ಯುತ್ ಪೂರೈಕೆಯಲ್ಲಿ ಆಗುತ್ತಿ­ರುವ ಲೋಪದಿಂದ ಕುಡಿಯುವ ನೀರಿಗೂ ತೊಂದರೆಯಾಗಿದೆ. ಸಮ­ರ್ಪಕ ವಿದ್ಯುತ್‌ ಪೂರೈಸದಿದ್ದರೆ ಬೆಸ್ಕಾಂ ಕಚೇರಿಗೆ ಬೀಗ ಹಾಕಲಾಗುವುದು ಎಂದು ಎಚ್ಚರಿದರು.

ಖಾಸಗಿಯವರಿಂದ ಈ ಹಿಂದೆ ಖರೀದಿಸಿದ ವಿದ್ಯುತ್‌ ಬಿಲ್‌ ಪಾವತಿಸದ ಕಾರಣ ಇಂಥ ದುಸ್ಥಿತಿ ತಲೆದೋರಿದೆ ಎಂದು ದೂರಿದರು.
ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜು, ನಗರಸಭೆ ಅಧ್ಯಕ್ಷ ಶ್ರೀನಿವಾಸ್‌, ಜೆಡಿಎಸ್‌ ಮುಖಂಡರಾದ ಅಬ್ದುಲ್‌ ರೋಫ್‌ಸಾಬ್‌, ಕೆ.ಆರ್‌.­ರೆಡ್ಡಿ, ರಾಜಣ್ಣ, ನಾರಾಯಣಸ್ವಾಮಿ, ಶ್ರೀನಿವಾಸ್‌, ಅಮರನಾಥ್‌, ಶ್ರೀರಾಮ್‌ ಮತ್ತಿತರರು ಹಾಜರಿದ್ದರು.

ದಿನಕ್ಕೆ 10 ಗಂಟೆ ವಿದ್ಯುತ್ 
ಶಿಡ್ಲಘಟ್ಟ : ಗ್ರಾಮೀಣ ಪ್ರದೇಶಗಳಿಗೆ ಒಂದು ದಿನಕ್ಕೆ ಕನಿಷ್ಠ 10 ಗಂಟೆ 3 ಫೇಸ್ ವಿದ್ಯುತ್ ಕೊಡಬೇಕು. ಸಂಜೆ 6ರಿಂದ ರಾತ್ರಿ ೧೨ ರವರೆಗೂ ಸರಬ­ರಾಜು ಮಾಡುತ್ತಿರುವ ‘ಜ್ಯೂಸ್’ ಕರೆಂಟಿನ ಬದಲು ಸಿಂಗಲ್ ಫೇಸ್ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಬೆಸ್ಕಾಂ ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು.

ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ ರೈತರು, ವಿದ್ಯುತ್ ಇಲ್ಲದ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಒಂದು ದಿನಕ್ಕೆ ಕನಿಷ್ಠ 6 ಗಂಟೆಯಾದರೂ ವಿದ್ಯುತ್ ಸರಬ­ರಾಜಾಗುತ್ತಿಲ್ಲ ಎಂದು ದೂರಿದರು.

ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಈ ಹಿಂದೆ ಹಲವು ಬಾರಿ ಮನವಿ ಪತ್ರ ಸಲ್ಲಿಲಾಗಿತ್ತು. ಆದರೆ ಅಧಿಕಾರಿಗಳು ರೈತರ ಮನವಿಗಳತ್ತ ಗಮನ ಹರಿಸಿಲ್ಲ. ಇದೇ ಸ್ಥಿತಿ ಮುಂದುವರಿದರೆ ಬೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಚಿಂತಾಮಣಿಯ ಕಾರ್ಯಪಾಲಕ ಎಂಜಿನಿಯರ್ ಸುಭಾಷ್ ಚಂದ್ರ ರೈತರ ಮನವಿ ಸ್ವೀಕರಿಸಿದರು. ಪರಿಸ್ಥಿತಿ ಸುಧಾರಿಸಲು ಯತ್ನಿಸುವುದಾಗಿ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಹಿಂಪಡೆದರು.

ರೆೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್.ಎಂ.­ನಾರಾ­ಯಣ­ಸ್ವಾಮಿ, ವೀರಾಪುರ ಮುನಿನಂಜಪ್ಪ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಚೀಮನಹಳ್ಳಿ ಗೋಪಾಲ್, ಮುಖಂಡ­ರಾದ ರಾಯಪ್ಪನಹಳ್ಳಿ ಅಶ್ವತ್ಥರೆಡ್ಡಿ, ಆನೂರು ಶ್ರೀನಿವಾಸ್‌, ಆಂಜನೇಯ­ರೆಡ್ಡಿ, ಅಬ್ಲೂಡು ಆರ್‌.ದೇವರಾಜ್‌, ಮುರಳಿ, ಮಳಮಾಚನಹಳ್ಳಿ ದೇವ­ರಾಜ್‌, ಬೋದಗೂರು ಮುನಿರಾಜು, ಅಪ್ಪೇಗೌಡನಹಳ್ಳಿ ಅಂಬರೀಷ್‌, ಅಬ್ಲೂಡು ಅಂಬರೀಷ್‌, ವೀರಾಪುರ ರಾಮಣ್ಣ, ಬೂದಾಳ ಶ್ರೀನಿವಾಸ್‌, ತಲದುಮ್ಮನಹಳ್ಳಿ ರಾಮಚಂದ್ರಪ್ಪ, ತಾದೂರು ಮಂಜುನಾಥ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT