ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ನೀಗಿಸಲು ವಾರ್ಡ್‌ವಾರು ಸಭೆ

Last Updated 14 ಸೆಪ್ಟೆಂಬರ್ 2011, 8:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಎಲ್ಲ ಪ್ರದೇಶಗಳಲ್ಲಿ ಹಂತ, ಹಂತವಾಗಿ `ಮೂರು ದಿನಕ್ಕೊಮ್ಮೆ ನೀರು~ ಪೂರೈಕೆ ಯೋಜನೆ ಅನುಷ್ಠಾನ ಆರಂಭವಾಗಿದ್ದು, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪಾಲಿಕೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ  ವಾರ್ಡ್‌ವಾರು ಸಭೆ ನಡೆಸಲು ನಿರ್ಧರಿಸಿದ್ದಾರೆ.

ಅವಳಿನಗರದಲ್ಲಿ ಅತ್ಯಧಿಕ ನೀರಿನ ಸಮಸ್ಯೆ ಎದುರಿಸಿದ್ದು ಹಳೇ ಹುಬ್ಬಳ್ಳಿ ಪ್ರದೇಶ. ಜಲ ಮಂಡಳಿ ಅಧಿಕಾರಿಗಳು ಅದೇ ಪ್ರದೇಶದಿಂದ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಆರಂಭಿಸಿದ್ದಾರೆ. `ದೊಡ್ಡ ಸವಾಲನ್ನು ಜಲ ಮಂಡಳಿ ತಡವಾದರೂ ದಿಟ್ಟತನದಿಂದ ಎದುರಿಸಿದೆ~ ಎಂಬ ಮೆಚ್ಚುಗೆ ವ್ಯಕ್ತವಾಗಿದೆ.

`ಹಳೇ ಹುಬ್ಬಳ್ಳಿ ಮಾತ್ರವಲ್ಲದೆ ದೇಶಪಾಂಡೆನಗರ ಹಾಗೂ ಉಣಕಲ್ ಭಾಗಗಳಲ್ಲಿ ಈಗಾಗಲೇ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಆರಂಭವಾಗಿದೆ. ಪ್ರತಿದಿನ ವಿವಿಧ ಬಡಾವಣೆಗಳಿಗೆ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು. ಎಲ್ಲವೂ ವ್ಯವಸ್ಥಿತವಾಗಿ ನಡೆಯಲು ಇನ್ನೂ ಹತ್ತು ದಿನವಾದರೂ ಕಾಲಾವಕಾಶಬೇಕು~ ಎಂದು ಡಾ. ತ್ರಿಲೋಕಚಂದ್ರ `ಪ್ರಜಾವಾಣಿ~ಗೆ ತಿಳಿಸಿದರು.

`ನೀರಿನ ಸಮಸ್ಯೆಗಳಿಗೆ ತಕ್ಷಣ ಪರಿಹಾರಕ್ಕೆ 3-4 ದಿನದಲ್ಲಿ ವಾರ್ಡ್‌ವಾರು ಸಭೆ ಆರಂಭಿಸಲಾಗುವುದು. ಪ್ರತಿ ವಾರ್ಡ್‌ನಲ್ಲೂ ಸಭೆ ನಡೆಸಿ, ಅಲ್ಲಿಯ ಸಮಸ್ಯೆಗೆ ತಕ್ಕಂತೆ ಪರಿಹಾರ ಕ್ರಮ ಕೈಗೊಳ್ಳಲಾಗುವುದು~ ಎಂದು ಅವರು ಹೇಳಿದರು.

`ಜಲ ಮಂಡಳಿಯ ಎಲ್ಲ ಹಿರಿಯ ಅಧಿಕಾರಿಗಳು ಕಳೆದ ಒಂದು ವಾರದಿಂದ ಬಡಾವಣೆಗಳ ನೀರು ಪಡೆಯುವ ಸರದಿಯನ್ನು ಸಿದ್ಧಪಡಿಸುವಲ್ಲಿ ತಲ್ಲೆನರಾಗಿದ್ದಾರೆ. ನಿತ್ಯ ನೀರು ಪೂರೈಕೆ ಪ್ರದೇಶ ಹೆಚ್ಚು-ಕಡಿಮೆ ದ್ವಿಗುಣ ಆಗಿದ್ದರಿಂದ ಈ ಸಂಬಂಧ ಉಂಟಾದ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಕೆಲ ದಿನಗಳು ಬೇಕಾಗಬಹುದು~ ಎಂದು ವಿವರಿಸಿದರು.

ಹುಬ್ಬಳ್ಳಿ-ಧಾರವಾಡ ಒಟ್ಟಾರೆ 191 ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಈ ಪೈಕಿ ಶೇ 10ರಷ್ಟು ಭಾಗ ಮಾತ್ರ ದಿನದ 24 ಗಂಟೆ ಅವಧಿಯೂ ನೀರು ಪಡೆಯುತ್ತಿದೆ. ಪಾಲಿಕೆ ಈ ಸೌಲಭ್ಯವನ್ನು ಶೇ 100ರಷ್ಟು ಪ್ರದೇಶಕ್ಕೆ ವಿಸ್ತರಿಸುವ ಯೋಜನೆ ಹೊಂದಿದೆ. ಪಾಲಿಕೆ ವ್ಯಾಪ್ತಿಯ ಎಲ್ಲ ಪ್ರದೇಶಕ್ಕೆ ನಿರಂತರ ನೀರು ಪೂರೈಕೆಗೆ ಸಂಬಂಧಿಸಿದಂತೆ ಟಾಟಾ ಕನ್ಸಲ್ಟೆನ್ಸಿಗೆ ವರದಿ ಸಿದ್ಧಪಡಿಸುವಂತೆ ಕೇಳಿಕೊಳ್ಳಲಾಗಿತ್ತು. ಟಾಟಾ ಕನ್ಸಲ್ಟೆನ್ಸಿ ಸಂಸ್ಥೆಯ ಅಧಿಕಾರಿಗಳು ಸೋಮವಾರ ಪಾಲಿಕೆ ಕಚೇರಿಯಲ್ಲಿ ವರದಿಯಲ್ಲಿ ಅಡಕವಾಗಿರುವ ಅಂಶಗಳನ್ನು ಪವರ್ ಪಾಯಿಂಟ್ ಮೂಲಕ ಪ್ರಸ್ತುತಪಡಿಸಿದರು. `ಅವಳಿನಗರದಲ್ಲಿ ಶೇ 94ರಷ್ಟು ನೀರು ಪೂರೈಕೆ ಜಾಲ ಸಂಪೂರ್ಣ ಹಾಳಾಗಿದ್ದು, ಬದಲಾವಣೆ ಅತ್ಯಗತ್ಯವಾಗಿದೆ~ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಆಯುಕ್ತರು ಕೆಲವೊಂದು ವಿವರ ಕೇಳಿದ್ದಲ್ಲದೆ ಒಂದಿಷ್ಟು ಮಾರ್ಪಾಡುಗಳನ್ನು ಸೂಚಿಸಿದ್ದರಿಂದ ಟಾಟಾ ಕನ್ಸಲ್ಟೆನ್ಸಿ ಸಂಸ್ಥೆ ಮುಂದಿನ ವಾರ ತನ್ನ ಅಂತಿಮ ವರದಿಯನ್ನು ಜಿಲ್ಲಾಧಿಕಾರಿ ದರ್ಪಣ್ ಜೈನ್ ಅವರಿಗೆ ಸಲ್ಲಿಸಲಿದೆ. ಜಿಲ್ಲಾಧಿಕಾರಿಗಳು ಹಾಗೂ ಪಾಲಿಕೆ ಆಯುಕ್ತರಿಬ್ಬರೂ ಅವಳಿನಗರದಲ್ಲಿ ನಿರಂತರ ನೀರು ಪೂರೈಕೆಗೆ ಉತ್ಸುಕವಾಗಿದ್ದು ಯೋಜನೆಗೆ ಸಂಬಂಧಿಸಿದಂತೆ ಅಂತಿಮ ವರದಿ ಕೈಸೇರಿದ ಮೇಲೆ ಹಣಕಾಸು ವ್ಯವಸ್ಥೆ ಹೇಗೆ ಮಾಡಿಕೊಳ್ಳುವುದು ಎಂಬುದನ್ನು ನಿರ್ಧರಿಸಲಿದ್ದಾರೆ.

ಜಲ ಮಂಡಳಿ ಮೂಲಗಳ ಪ್ರಕಾರ ನೀರು ಪೂರೈಕೆ ಜಾಲ ಬದಲಾಯಿಸಲು ರೂ 500 ಕೋಟಿಗೂ ಅಧಿಕ ಹಣ ಬೇಕು. ಇಷ್ಟೊಂದು ಹಣವನ್ನು ಎಲ್ಲಿಂದ ತರುವುದು ಎಂಬುದು ಸದ್ಯದ ಮುಖ್ಯ ಸಮಸ್ಯೆಯಾಗಿದೆ. ಈ ಬಗೆಗೆ ಡಾ. ತ್ರಿಲೋಕಚಂದ್ರ ಅವರನ್ನು ಪ್ರಶ್ನಿಸಿದಾಗ, `ಎಷ್ಟು ವೆಚ್ಚ ಆಗಲಿದೆ ಎಂಬ ಮಾಹಿತಿ ಯೋಜನಾ ವರದಿ ಕೈಸೇರಿದ ನಂತರ ತಿಳಿಯಲಿದೆ. ಆಮೇಲೆ ಹಣಕಾಸಿನ ವ್ಯವಸ್ಥೆ ಹೇಗೆ ಮಾಡಿಕೊಳ್ಳುವುದು ಎಂಬುದನ್ನು ಯೋಚಿಸಲಾಗುವುದು~ ಎಂದು ಉತ್ತರಿಸಿದರು.

`ಅವಳಿನಗರಕ್ಕೆ ನಿತ್ಯ ಪೂರೈಕೆಗೆ ಅಗತ್ಯವಾದಷ್ಟು ನೀರು ಸಿಕ್ಕರೂ ಪೈಪ್‌ಲೈನ್‌ನಲ್ಲಿ ಬದಲಾವಣೆ ಆಗದ ಹೊರತು ಪ್ರತಿದಿನ ಶೇ 30ರಷ್ಟು ಭಾಗಕ್ಕೆ ಮಾತ್ರ ನೀರು ಪೂರೈಕೆ ಮಾಡಲು ಸಾಧ್ಯ. ಲಭ್ಯವಿರುವ ನೀರಿನ ಪೈಕಿ ಬಹುದೊಡ್ಡ ಪ್ರಮಾಣ ಸೋರಿಕೆಯಾಗುತ್ತಿದೆ. ಅಕ್ರಮ ಸಂಪರ್ಕಗಳೂ ಸಾಕಷ್ಟಿದ್ದು, ಹೊಸ ಜಾಲ ಅಳವಡಿಸುವಾಗ ಅಂತಹ ಸಂಪರ್ಕಗಳು ಬೆಳಕಿಗೆ ಬರಲಿವೆ~ ಎಂದು ಅಧಿಕಾರಿಗಳು ಹೇಳುತ್ತಾರೆ. ನೆಕ್ಟ್ಸ್ ಡ್ರಾಪ್ ಸಂಸ್ಥೆಯ ಸಹಯೋಗದಲ್ಲಿ ಆರಂಭಿಸಿರುವ ನೀರು ಪೂರೈಕೆ ಕುರಿತು ಮುಂಚಿತ ಮಾಹಿತಿ ನೀಡುವ ಎಸ್‌ಎಂಎಸ್ ಯೋಜನೆಯಿಂದ ಸಾಕಷ್ಟು ಗ್ರಾಹಕರಿಗೆ ಅನುಕೂಲವಾಗಿದೆ ಎಂದು ಅವರು ವಿವರಿಸುತ್ತಾರೆ.

ಅವಳಿನಗರದಲ್ಲಿ 1912ರಲ್ಲಿ ಜನಸಂಖ್ಯೆ ಕೆಲವೇ ಸಾವಿರ ಸಂಖ್ಯೆಯಲ್ಲಿತ್ತು. 4.5 ಎಂಎಲ್‌ಡಿ ನೀರನ್ನು ಉಣಕಲ್ ಕೆರೆಯಿಂದ ಪಡೆದು ಪೂರೈಕೆ ಮಾಡಲಾಗುತ್ತಿತ್ತು. 1955ರಲ್ಲಿ 2.17 ಲಕ್ಷಕ್ಕೆ ಜನಸಂಖ್ಯೆ ತಲುಪಿದ್ದರಿಂದ ಕಲಘಟಗಿ ತಾಲ್ಲೂಕಿನ ನೀರಸಾಗರ ಕೆರೆ ನೀರನ್ನೂ ಸರಬರಾಜು ಮಾಡಲು ಆರಂಭಿಸಲಾಯಿತು. 1983ರಲ್ಲಿ ಮಲಪ್ರಭಾ ಮೊದಲ ಹಂತದ ಯೋಜನೆ ಅನುಷ್ಠಾನಕ್ಕೆ ತಂದು ನೀರು ಪಡೆಯಲಾಯಿತು ಎಂದು ಅಧಿಕಾರಿಗಳು ನೀರಿನ ವ್ಯವಸ್ಥೆ ಕುರಿತಂತೆ ವಿವರಣೆ ನೀಡುತ್ತಾರೆ.

`ಉಣಕಲ್ ಕೆರೆ ನೀರನ್ನು 1996ರಿಂದ ಕುಡಿಯಲು ಬಳಕೆ ಮಾಡುತ್ತಿಲ್ಲ. 20 ಕಿ.ಮೀ. ದೂರದ  ನೀರಸಾಗರ ಕೆರೆಯಿಂದ ಎರಡು ಹಂತ ಹಾಗೂ 55 ಕಿ.ಮೀ. ದೂರದ ಮಲಪ್ರಭಾ ನದಿಯಿಂದ ಮೂರು ಹಂತದ ಯೋಜನೆಗಳ ಮೂಲಕ ಅವಳಿನಗರಕ್ಕೆ ನೀರು ಪಡೆಯಲಾಗುತ್ತಿದೆ. ಪ್ರತಿನಿತ್ಯ 163 ಎಂಎಲ್‌ಡಿ ನೀರು ಸದ್ಯ ಲಭ್ಯವಾಗುತ್ತಿದೆ. ಸಂಪರ್ಕ ಜಾಲ ಸುಧಾರಣೆಯಾದರೆ ಯಾವ ಸಮಸ್ಯೆ ಇಲ್ಲ~ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT