ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಸೇವೆಗೆ ತೊಡಗುವ ಮುನ್ನ...

Last Updated 29 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ತೊಡಗ ಬಯಸುವ ವ್ಯಕ್ತಿ ಹೊಂದಿರಬೇಕಾದ ವಿದ್ಯಾರ್ಹತೆ ಏನು?- ಯುವಕರೊಂದಿಗೆ ನಾನು ಆಗಾಗ ನಡೆಸುವ ಸಂವಾದಗಳಲ್ಲಿ ಬಲು ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆ ಇದು. ಇತರರ ಸೇವೆಯಲ್ಲಿ ತೊಡಗಲು ವೈದ್ಯನೋ, ಶಿಕ್ಷಕನೋ ಅಥವಾ ವೃತ್ತಿಪರ ಸಾಮಾಜಿಕ ಕಾರ್ಯಕರ್ತನೋ ಆಗಿರಬೇಕೆಂದು ಅವರಲ್ಲಿ ಬಹುತೇಕರು ಭಾವಿಸಿರುತ್ತಾರೆ.
 
ಕ್ರಮಬದ್ಧ ವಿದ್ಯಾರ್ಹತೆ ಮತ್ತು ತರಬೇತಿ ಈ ಕ್ಷೇತ್ರದಲ್ಲಿರುವವರ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ನಿಜ. ಆದರೆ, ನಾನು ಈಗ ಇಲ್ಲಿ, ಸೇವಾ ಕ್ಷೇತ್ರದಲ್ಲಿ ತೊಡಗಲು ಇಚ್ಛಿಸುವವರು ಹೊಂದಿರಬೇಕಾದ ಮೂಲಭೂತ ಗುಣಗಳು ಯಾವುವು ಎಂಬ ಬಗ್ಗೆ ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿರುವುದನ್ನು ಪ್ರಸ್ತಾಪಿಸುತ್ತೇನೆ.

ಈಜಲು ಬಾರದಿದ್ದರೆ ಸಮುದ್ರಕ್ಕೆ ಧುಮುಕುವ ಯತ್ನ ಮಾಡಬಾರದು ಎಂಬುದು ವಿವೇಕಾನಂದರ ದೃಢ ನಿಲುವು. ಅಂತಹ ಕಾರ್ಯಕ್ಕೆ ಕೈಹಾಕುವ ಮುನ್ನ ಮಾಡಿಕೊಳ್ಳಬೇಕಾದ ಪೂರ್ವಸಿದ್ಧತೆ ಅತ್ಯಂತ ಮಹತ್ವದ್ದು ಎಂಬುದು ಅವರ ಖಚಿತ ನಂಬಿಕೆ. ಅತ್ಯಂತ ಉತ್ಸಾಹದಲ್ಲಿ ಸಾಮಾಜಿಕ ಸೇವಾ ಕ್ಷೇತ್ರಕ್ಕೆ ಇಳಿದು ನಂತರ ಅಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದಂತೆ ಉಲ್ಲಾಸಹೀನರಾಗುವ ಹಲವರನ್ನು ನಾನು ಕೂಡ ಕಂಡಿದ್ದೇನೆ.

ಪರಿಶುದ್ಧತೆ, ಸಹನೆ ಮತ್ತು ನಿರಂತರ ಪ್ರಯತ್ನಶೀಲತೆ- ಸ್ವಾಮೀಜಿ ಪ್ರಕಾರ ಇವು ಪ್ರತಿಯೊಬ್ಬ ಸಾಮಾಜಿಕ ಕಾರ್ಯಕರ್ತನಿಗೂ ಇರಬೇಕಾದ ಮೂರು ಪ್ರಮುಖ ಗುಣಗಳು. ಸಾಮಾಜಿಕ ಸೇವೆಯಲ್ಲಿ ತೊಡಗಲು ಮುಂದಾಗುವ ಮುನ್ನ ವ್ಯಕ್ತಿಯಲ್ಲಿ ಕಡ್ಡಾಯವಾಗಿ ಇರಲೇಬೇಕಾದ ಅತಿ ಮಹತ್ವದ ಹಾಗೂ ಅತ್ಯಂತ ಕಾರ್ಯಸಾಧುವಾದ ಮಂತ್ರಗಳು ಇವು.

ನಕಾರಾತ್ಮಕತೆ ಹಾಗೂ ಲಂಚಗುಳಿತನ ತಾಂಡವವಾಡುತ್ತಿರುವ ಜಗತ್ತಿನಲ್ಲಿ ಕಾಯಾ, ವಾಚಾ, ಮನಸಾ ಪರಿಶುದ್ಧತೆಯು ವ್ಯಕ್ತಿತ್ವವನ್ನು ಸದೃಢಗೊಳಿಸಲು ಪೂರಕವಾಗುತ್ತದೆ. ಈ ಗುಣದಿಂದಾಗಿ ವ್ಯಕ್ತಿಯೊಬ್ಬ ಮರುಭೂಮಿಯಲ್ಲಿನ ಓಯಸಿಸ್‌ನಂತೆ ಸಂಕಷ್ಟದಲ್ಲೂ ಸಮಾಜಕ್ಕೆ ನೆರವಾಗಬಹುದು. ಸಾಮಾಜಿಕ ಸೇವೆ ಕೂಡ ಮಾನಸಿಕ ಒತ್ತಡದ ಕಾರ್ಯವಾಗಿದ್ದು, ಯಾವುದೇ ಕ್ಷಣದಲ್ಲಿ ಹತಾಶೆಯಿಂದ ಅದನ್ನು ತೊರೆಯುವ ಸಾಧ್ಯತೆ ಇದೆ. ಸಹನೆ ಎಂಬ ಗುಣ ನೆರವಿಗೆ ಬರುವುದು ಇಂತಹ ಸಂದರ್ಭದಲ್ಲೇ.

ಸಾಮಾಜಿಕ ಸೇವೆಯಲ್ಲಿ ತೊಡಗಿರುವವರ ಉದ್ದೇಶವನ್ನು ಅನುಮಾನದ ಕಣ್ಣುಗಳಿಂದ ಪ್ರಶ್ನಿಸುವುದು ಇಂದಿನ ಬಹುತೇಕ ಜನರ ಧೋರಣೆ. ಇಂತಹ ಜನರನ್ನು ಅವರಿರುವ ರೀತಿಯಲ್ಲೇ ಸ್ವೀಕರಿಸಿ, ಹೆಸರು, ಪ್ರಸಿದ್ಧಿ ಅಥವಾ ಇನ್ನಾವುದೇ ಸ್ವಾರ್ಥ ಪ್ರತಿಫಲಾಪೇಕ್ಷೆ ನಿರೀಕ್ಷಿಸದೆ ತಮ್ಮ ಸಮಾಜ ಕೈಂಕರ್ಯ ಮುಂದುವರಿಸಲು ಅಪಾರ ಸಂಯಮ ಬೇಕು.

ಗಾಂಧೀಜಿ ಕೂಡ ಅಪಾರ ತಾಳ್ಮೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಾಮಾಜಿಕ ಸೇವೆಯಲ್ಲಿ ತೊಡಗಿದ ವ್ಯಕ್ತಿ ತಾನಾಗಿಯೇ ಜನರನ್ನು ಹುಡುಕಿಕೊಂಡು ಹೋಗಬೇಕಾದ್ದರಿಂದ ಆತನಿಗೆ ಅಪಾರ ಸಹನೆ ಅಗತ್ಯ ಎಂದು ತಮ್ಮ  `ಸಾಮಾಜಿಕ ಸೇವೆ ಹಾಗೂ ಸುಧಾರಣೆ~ ಕುರಿತ ಚಿಂತನೆಯಲ್ಲಿ ಪ್ರತಿಪಾದಿಸಿದ್ದಾರೆ.  ತಾನು ಸೇವಾ ಕಾರ್ಯ ಮಾಡುತ್ತಿದ್ದರೂ ಆ ಬಗ್ಗೆ ಯಾವ ಸ್ಪಂದನೆಯನ್ನೂ ತೋರದ ಸಮಾಜದ ಬಗ್ಗೆ ಭ್ರಮನಿರಸನಗೊಳ್ಳದಿರಲು ಇಂತಹ ಸಂಯಮ ಅಗತ್ಯ ಎಂಬುದು ಅವರ ಹಿತನುಡಿಯಾಗಿದೆ.

ಅಂತಿಮವಾಗಿ, ಸಾಮಾಜಿಕ ಬದಲಾವಣೆಯು ಅನುಕ್ರಮವಾಗಿ ಆಗುವ ಪ್ರಕ್ರಿಯೆ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು. ದಿಢೀರ್ ತುಷ್ಟೀಕರಣದ ಪ್ರಸ್ತುತದ ದಿನಮಾನದಲ್ಲಿ, ಬದಲಾವಣೆಗಾಗಿ ಪ್ರಯತ್ನಗಳನ್ನು ಸತತವಾಗಿ ಮುಂದುವರಿಸಲು ಹಾಗೂ ಸತತವಾಗಿ ಚೈತನ್ಯ ಕಾಪಾಡಿಕೊಳ್ಳಲು ಸಮಾಜ ಸೇವಾಸಕ್ತರಿಗೆ ಅಗಾಧ ಪ್ರಯತ್ನಶೀಲತೆ ಅಗತ್ಯ. ಇಂದಿನ ಸವಾಲನ್ನು ಹಿಮ್ಮೆಟ್ಟಿಸಲು ದೃಢ ಸಂಕಲ್ಪ ಅವಶ್ಯ. ಎಡೆಬಿಡದ ಪ್ರಯತ್ನವು ಯಾವತ್ತಿಗೂ, ಅಂತಿಮವಾಗಿ ಮೇಲುಗೈ ಸಾಧಿಸುತ್ತದೆ ಎಂಬುದು ವಿವೇಕಾನಂದರ ಪ್ರತಿಪಾದನೆ.

ಹೀಗಾಗಿ ಪರಿಶುದ್ಧತೆ, ಸಹನೆ ಹಾಗೂ ನಿರಂತರ ಪ್ರಯತ್ನಶೀಲತೆಯ ಗುಣಗಳನ್ನು ಮೈಗೂಡಿಸಿಕೊಂಡರೆ ಸಾಮಾಜಿಕ ಕಾರ್ಯಕರ್ತನಿಗೆ ಉತ್ತಮ ಸೇವೆ ಮಾಡುವ ಜತೆಗೆ ಆಧ್ಯಾತ್ಮಿಕವಾಗಿಯೂ ಪ್ರಬುದ್ಧತೆ ಸಾಧಿಸಲು ಸಹಕಾರಿಯಾಗುತ್ತದೆ. ವಿವೇಕಾನಂದರು ಮನುಕುಲಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವುದನ್ನು ಸ್ವಯಂ ಪರಿಶುದ್ಧವಾಗಲು ಹಾಗೂ ಮುಕ್ತಿ ಪಡೆಯಲು ಇರುವ ಅವಕಾಶವೆಂದೇ ಸದಾ ಭಾವಿಸಿದ್ದರು.  ್ಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT