ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಕ್ಕೆ ಪ್ರತಿಸ್ಪಂದಿಸುವ ವ್ಯಂಗ್ಯಚಿತ್ರ

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸಮಾಜದ ಸ್ಥಿತಿಗೆ ತಕ್ಷಣಕ್ಕೆ ಪ್ರತಿಸ್ಪಂದಿಸುವ ದೊಡ್ಡ ಶಕ್ತಿ ವ್ಯಂಗ್ಯಚಿತ್ರ ಪ್ರಕಾರಕ್ಕಿದೆ~ ಎಂದು ಹಿರಿಯ ನಾಟಕಕಾರ ಗಿರೀಶ್ ಕಾರ್ನಾಡ್ ಹೇಳಿದರು.

ನಗರದಲ್ಲಿ ಶನಿವಾರ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಆಯೋಜಿಸಿದ್ದ ಆರ್.ಕೆ.ಲಕ್ಷ್ಮಣ್ ಅವರ `ಡೂಡೂಸ್ ಡೂಡಲ್ಸ್~ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ಆರ್.ಕೆ.ಲಕ್ಷ್ಮಣ್ ಅವರ ಅಪರೂಪದ ರೇಖಾಚಿತ್ರಗಳನ್ನು ಕಾಪಾಡಿಕೊಂಡು ಅವುಗಳನ್ನು ಪ್ರದರ್ಶಿಸುತ್ತಿರುವ ಕಾರ್ಯ ಉತ್ತಮವಾದುದು. ವ್ಯಂಗ್ಯಚಿತ್ರಗಳ ಪ್ರಕಾರವನ್ನೂ ಮೀರಿ ಇಲ್ಲಿನ ರೇಖಾಚಿತ್ರಗಳು ಅತೀತತೆಯ ಕಡೆಗೆ ತುಡಿಯುತ್ತವೆ. ಗೆರೆಗಳ ಮೂಲಕ ಸಮಾಜದ ಸ್ಥಿತಿಗೆ ಪ್ರತಿಸ್ಪಂದಿಸುವ ಕಲೆ ಇದು~ ಎಂದು ಅವರು ನುಡಿದರು.

`ಆರ್.ಕೆ.ಲಕ್ಷ್ಮಣ್ ಅವರ ಜೊತೆಗೆ ಸಾಕಷ್ಟು ಒಡನಾಡಿದ್ದೇನೆ. ಅವರೊಂದಿಗೆ ಕಳೆದ ದಿನಗಳನ್ನು ಮರೆಯಲಾಗದು. ಒಮ್ಮೆ ಮುಂಬೈನಲ್ಲಿ ನಿಧಾನಗತಿಯ ರೈಲ್ವೆ ಟ್ರಾಕ್‌ನ ದುರಸ್ತಿಗೆ ಆಗ್ರಹಿಸಿ ನಡೆದ ಪ್ರತಿಭಟನೆ ರಾಜಕೀಯದ ತಿರುವು ಪಡೆದುಕೊಂಡು, ಸಮಸ್ಯೆ ಬಗೆಹರಿದಾದ ಮೇಲೆಯೂ ಪ್ರತಿಭಟನೆ ಮುಂದುವರೆದೇ ಇತ್ತು. ಈ ಘಟನೆಗೆ ಆರ್.ಕೆ.ಲಕ್ಷ್ಮಣ್ ಅವರು ತಮ್ಮ ರೇಖೆಗಳ ಮೂಲಕ ವ್ಯಂಗ್ಯದ ಉತ್ತರ ನೀಡಿದ್ದರು~ ಎಂದರು.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಮಾತನಾಡಿ, `ಸಾಮಾನ್ಯ ವ್ಯಂಗ್ಯಚಿತ್ರಗಳಿಗಿಂತಲೂ `ಡೂಡಲ್ಸ್~ ಪ್ರಯೋಗ ವಿಭಿನ್ನವಾದುದು. ಸಮಾಜಕ್ಕೆ ಪ್ರತಿಕ್ರಿಯಿಸುವ ಈ ಬಗೆಯ ರೇಖಾಚಿತ್ರಗಳು ಭಾರತದ ಪರಿಸರದಲ್ಲಿ ಅಪರೂಪ. ಈ ರೇಖೆಗಳಲ್ಲಿ ಗಂಭೀರವಾದ ವ್ಯಂಗ್ಯವಿದೆ. ಜರ್ಮನ್ ವ್ಯಂಗ್ಯಚಿತ್ರಕಾರ ಡೇವಿಡ್‌ನ ನಂತರ ಭಾರತದಲ್ಲಿ ಆರ್.ಕೆ.ಲಕ್ಷ್ಮಣ್ ಅವರ ರೇಖೆಗಳಲ್ಲಿ ಈ ರೀತಿಯ ಗಂಭೀರ ವ್ಯಂಗ್ಯವನ್ನು ಗುರುತಿಸಬಹುದು. ಇದೊಂದು ಅಪರೂಪದ ಕಲೆ~ ಎಂದು ಅವರು ಅಭಿಪ್ರಾಯ ಪಟ್ಟರು.

`ಡೂಡಲ್ಸ್~ಗಳ ಸಂಗ್ರಹಕಾರ ಹಾಗೂ ಆರ್.ಕೆ.ಲಕ್ಷ್ಮಣ್ ಅವರ ಅಣ್ಣನ ಮಗ ಆರ್.ಎಸ್.ಕೃಷ್ಣಸ್ವಾಮಿ ಮಾತನಾಡಿ, `ನಮ್ಮ ತಂದೆ ದೆಹಲಿ ಹಾಗೂ ಮೈಸೂರಿನಲ್ಲಿ ನೆಲೆಸಿದ್ದ ಕಾಲದಲ್ಲಿ ನಮ್ಮ ಮನೆಗೆ ಬರುತ್ತಿದ್ದ ಚಿಕ್ಕಪ್ಪ ಆರ್.ಕೆ.ಲಕ್ಷ್ಮಣ್ ಅವರು `ಡೂಡಲ್ಸ್~ ಗಳ ರಚನೆಯಲ್ಲಿ ತೊಡಗುತ್ತಿದ್ದರು.

 1975 ರಿಂದ 1991 ರ ವರೆಗಿನ 16 ವರ್ಷಗಳ ಅವಧಿಯಲ್ಲಿ ಅವರು ರಚಿಸಿದ 74 `ಡೂಡಲ್ಸ್~ ಗಳನ್ನು ಪ್ರದರ್ಶಿಸುವ ಮೊದಲ ಪ್ರಯತ್ನ ಇದು. ನಮ್ಮ ತಂದೆ ಆರ್.ಕೆ.ಶ್ರೀನಿವಾಸ್ ಅವರ ನಿಧನದ ನಂತರ ಇನ್ನು ಮುಂದೆ ತಾವು `ಡೂಡಲ್ಸ್~ಗಳನ್ನು ರಚಿಸುವುದಿಲ್ಲ ಎಂದು ಆರ್.ಕೆ.ಲಕ್ಷ್ಮಣ್ ಅವರು ತೀರ್ಮಾನ ತೆಗೆದುಕೊಂಡರು. ಹೀಗಾಗಿ ಈ ರೇಖಾಚಿತ್ರಗಳ ಮಹತ್ವ ಹೆಚ್ಚಿನದ್ದು~ ಎಂದರು.

ಆರ್.ಕೆ.ಲಕ್ಷ್ಮಣ್ ಅವರು ರಚಿಸಿರುವ 74 `ಡೂಡಲ್ಸ್~ ಗಳ ಪ್ರದರ್ಶನ ಮಹಾತ್ಮಾ ಗಾಂಧಿ ರಸ್ತೆಯ ಮಿಡ್‌ಫೋರ್ಡ್ ಹೌಸ್‌ನಲ್ಲಿರುವ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯಲ್ಲಿ ಮಾರ್ಚ್ 10 ರವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿ.ಜಿ.ನರೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ನೋಡಿದ್ದೇ ದೊಡ್ಡತಪ್ಪು
ಕಾರ್ಯಕ್ರಮದ ನಂತರ `ಪ್ರಜಾವಾಣಿ~ ಯೊಂದಿಗೆ ಮಾತನಾಡಿದ ಗಿರೀಶ್ ಕಾರ್ನಾಡ್, `ಸದನದಲ್ಲಿ ಖಾಸಗಿ ಟಿವಿ ಚಾನೆಲ್‌ಗಳಿಗೆ ನಿಷೇಧ ಹೇರುವ ಸರ್ಕಾರದ ಪ್ರಸ್ತಾವ ಸರಿಯಲ್ಲ. ಸದನದಲ್ಲಿ ಅಶ್ಲೀಲ ದೃಶ್ಯ ನೋಡಿದ್ದೇ ದೊಡ್ಡ ತಪ್ಪು. ಚಾನೆಲ್‌ಗಳಿಗೆ ಕಡಿವಾಣ ಹಾಕುವ ಆಲೋಚನೆ ಮತ್ತೊಂದು ತಪ್ಪು. ರಾಜಕಾರಣಿಗಳು ತಮ್ಮ ಬಣ್ಣ ಬಯಲಾಗುವ ಭಯದಿಂದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ನಿರ್ಧಾರಕ್ಕೆ ಬರುವುದು ಸರಿಯಲ್ಲ~ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT