ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನ ಸರ್ವ ಜನಾಂಗದ ಶಾಂತಿಯ ತೋಟವಾಗಲಿ

Last Updated 21 ಫೆಬ್ರುವರಿ 2011, 15:55 IST
ಅಕ್ಷರ ಗಾತ್ರ

ಒಂದಿಷ್ಟು ಅಪಸ್ವರಗಳ ನಂತರ ವಿಶ್ವಕನ್ನಡ ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಗಡಿನಾಡು ಬೆಳಗಾವಿಯಲ್ಲಿ ಕನ್ನಡಿಗರ ಗಡಿಬಿಡಿ, ಸಂಭ್ರಮ ಹೆಚ್ಚುತ್ತಿದೆ. ಮರಾಠಿಗರ ಮನೆಯಂಗಳಗಳಲ್ಲಿ ಕನ್ನಡದ ತುಳಸೀಕಟ್ಟೆಗಳಿಗೆ ಪೂಜೆ, ಪ್ರದಕ್ಷಿಣೆ ಸಲ್ಲುತ್ತಿದೆ. ಮಾರ್ಚ್ ಹನ್ನೊಂದರಿಂದ ಹದಿಮೂರು. ಆರು ಕೋಟಿ ಕನ್ನಡಿಗರ ಕಣ್ಣ ತುಂಬಾ ಸಂತಸದ ಸೊಡರು. ಕನಸುಗಳು ಸಾವಿರಾರು.

ಮೊನ್ನೆ ಬೆಂಗಳೂರಿನಲ್ಲಿ ನಡೆದದ್ದು 77ನೇ ಅಖಿಲಭಾರತ ‘ಸಾಹಿತ್ಯ’ ಸಮ್ಮೇಳನವಾದರೆ, ಇದು ವಿಶ್ವಕನ್ನಡ ಸಮ್ಮೇಳನ. ಇದರ ವ್ಯಾಪ್ತಿ, ಪ್ರಾಪ್ತಿ, ಕನಸು, ಆಶಯ, ದೀಕ್ಷೆ, ನಿರೀಕ್ಷೆ ಬೃಹತ್ತಾದುದು. ಕನ್ನಡ ಜನಪದಕ್ಕೆ ಚಿರಂತನ ಚೈತನ್ಯ ಒದಗಿಸುವ ನಿರ್ಧಾರ, ಸಂಕಲ್ಪ, ಯೋಜನೆ ಇಲ್ಲಿ ಗೋಚರಿಸಬೇಕು ಮತ್ತು ಘೋಷಣೆಗಳು ಅತಿ ತುರ್ತಿನಿಂದ ಅನುಷ್ಠಾನಕ್ಕಿಳಿಯಬೇಕು. ಕನ್ನಡಕ್ಕೆ ಬೇಕಾದುದು ‘ಅಭಿವೃದ್ಧಿ ಮಂತ್ರ’ ಅಲ್ಲ; ಅಭಿವೃದ್ಧಿ ಮಾತ್ರ! ಮನಿ ಪ್ಲಾಂಟಲ್ಲ- ‘ಮನಿ’ ಬೇಕು. ಹನಿ ಮಾತಲ್ಲ- ‘ಹನಿ’ಬೇಕು. ‘ಲಿಬರ್ಟಿ ಸ್ಟ್ಯಾಚು’ವಿನಂತೆ ಕನ್ನಡ ಭುವನೇಶ್ವರಿ ಗಗನಚುಂಬಿಯಾದರೆ ಕನ್ನಡದ ಜನಕೋಟಿಗೆ ಬಂದ ಭಾಗ್ಯವೇನು? ಕಂಟ್ರಾಕ್ಟ್‌ದಾರರು ಕೋಟಿ ಕೋಟಿ ‘ಲೂಟಿ’ ಮಾಡುತ್ತಾರೆ. ಕನ್ನಡ ಭುವನೇಶ್ವರಿಗೆ ನಿತ್ಯ ‘ಡಸ್ಟ್ ಅಲರ್ಜಿ’. ಇದೇ ಜನಪ್ರಿಯ ಘೋಷಣೆಗಳ ಮರ್ಜಿ!

ದೂರದ ಅಮೆರಿಕದಲ್ಲಿ ‘ಅಕ್ಕ’, ‘ನಾವಿಕ’ರಂತೆ ನಾವಿಲ್ಲಿ ಕನ್ನಡದ ಮನಸ್ಸುಗಳನ್ನು ಸೇರಿಸುವ ಚೊಕ್ಕ ಸಮ್ಮೇಳನ ನಡೆಸುವುದೇನೋ ಸರಿಯೇ. ಆದರೆ, ಫ್ಲೆಕ್ಸ್, ಕಟೌಟ್, ಬಂಟಿಂಗ್ಸ್, ಪ್ರಚಾರ, ಆಡಂಬರಗಳಿಗಾಗಿ ಕೋಟಿ ಕೋಟಿ ರೂಪಾಯಿಗಳನ್ನು ಚೆಲ್ಲಾಡುವುದರಿಂದ ಕನ್ನಡದ ಉದ್ಧಾರ ಖಂಡಿತ ಸಾಧ್ಯವಿಲ್ಲ.

‘ವೃತ್ತಿಪರ ಹೋರಾಟಗಾರರು’, ‘ವೃತ್ತಿಪರ ಭಾಷಣಕಾರರು’ ಕಾಮನ ಬಿಲ್ಲಿನ ಕಮಾನು ಕಟ್ಟಿದರೆ ಕತ್ತಲಾಗುವ ಮುನ್ನವೇ ಕರಗದಿರದು. ನಮ್ಮ ‘ಶಕ್ತಿ’ ಪ್ರದರ್ಶನಕ್ಕೆ ಸಮ್ಮೇಳನ ಬೇಕು, ನಿಜ. ಸಾಧಕರಿಗೆ ಸನ್ಮಾನವೂ ಬೇಕು, ಹೌದು. ಆದರೆ, ನಮ್ಮ ಜನಪದೀಯ ಕಲೆಗಳ ಉಳಿಕೆ, ಗ್ರಾಮ ಸಂಸ್ಕೃತಿಯ ಅಗ್ಗಳಿಕೆ, ಭಾಷಾ ವೈವಿಧ್ಯದ ಸೊಬಗು, ಆರಾಧನಾ ವಿಧಾನಗಳ ಸೊಗಸು, ನಂಬಿಕೆ-ನಡಾವಳಿಗಳ ಸೊಗಡು, ಜಾಗತೀಕರಣದ ಗದ್ದಲದ ನಡುವೆಯೂ ಕಾಪಿಡಬೇಕಾದ ಕಲಾ ಹಂದರ, ಹಸಿರು ಪರಿಸರ, ಸರಕು ಸಂಸ್ಕೃತಿಯ ಅಬ್ಬರದಿಂದಾಗಿ ಮುದುಡುತ್ತಿರುವ ಕನ್ನಡ ತೋಟದ ಕರವೀರ..

ಇವೆಲ್ಲಾ ನೆನಪಾಗುವುದು ಬೇಡವೆ? ಕಣ್ಣು ಪಟ್ಟಿ ಕಟ್ಟಿದ ಕುದುರೆಯಂತೆ ಕೆನೆದರೆ, ಜಿಗಿದರೆ ಸಾಕೆ? ಕನ್ನಡದ ಜೀವಕೋಶ, ಭಾವಕೋಶಗಳಿಗೆ ‘ಗೂಗಲ್ ಸರ್ಚ್’ ಸಾಧ್ಯವೆ? ನೆಲದ ಮಕ್ಕಳ ನೋವಿಗೆ ದನಿ ಬೇಡವೆ?

ವಿಶ್ವಕಪ್ ಕ್ರಿಕೆಟ್ ಮ್ಯಾಚ್ ನಡೆಯುತ್ತಿದೆ. ಕರ್ನಾಟಕದ ಯಾವ ಆಟಗಾರನೂ ಅಲ್ಲಿಲ್ಲ. ಹಾಗೆಂದು ನಮ್ಮ ಉತ್ಸಾಹವೇನೂ ಕುಂದಿಲ್ಲ. ‘ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ’ ಎನ್ನಿಸಬಹುದಾದ ‘ವಿಶ್ವಕನ್ನಡ ಸಮ್ಮೇಳನ’ ಗಡಿಭಾಗದ ನೆಲದಲ್ಲಿ ನಡೆಯುತ್ತಿದ್ದರೂ ಮರಾಠಿ, ಆಂಗ್ಲ ಭಾಷೆಗಳ ಸಾಮೀಪ್ಯ, ಸಾಹಚರ್ಯದಲ್ಲೇ ಆಯೋಜಿಸಲಾಗಿದ್ದರೂ ಕನ್ನಡದ ಸೊಲ್ಲು ಗೆಲ್ಲುವುದು ಮುಖ್ಯ. ಕನ್ನಡದ ಕವಿಗಳನ್ನು, ಕಲಿಗಳನ್ನು ಹೊಗಳುವುದಂತೂ ಇದ್ದೇ ಇದೆ.

ಮಠ-ಮಂದಿರಗಳಿಗೆ ಸತತ ಅನುದಾನಗಳನ್ನು ಘೋಷಿಸಿದಂತೆ, ಇಲ್ಲಿ ಕೂಡ ಚಪ್ಪಾಳೆ ಗಿಟ್ಟಿಸುವ ಚಪಲ ಬೇಡ. ನಮ್ಮ ರೈತರಿಗೆ ನಿವೃತ್ತಿಯೂ ಇಲ್ಲ; ‘ನಿವೃತ್ತಿ ವೇತನ’ವೂ ಇಲ್ಲ. ನಮ್ಮ ಶ್ರಮಿಕ ವರ್ಗಕ್ಕೆ ಬೆಲೆಯೂ ಇಲ್ಲ; ‘ಬೆಂಬಲ ಬೆಲೆ’ಯೂ ಇಲ್ಲ. ಕನ್ನಡ ಶಾಲೆಗಳಿಗೆ ಮಾಡೂ ಇಲ್ಲ; ಕನ್ನಡ ಮಕ್ಕಳನ್ನು ಸಂತೈಸುವ ಎದೆಗೂಡೂ ಇಲ್ಲ. ಹೀಗಿದ್ದೂ.., ‘ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು’.. ಸುಳ್ಳೇ?

ಈಗ ಕನ್ನಡಿಗರಿಗೆ ‘ವಿಶ್ವಾಸದ ಕಪ್’ ಬೇಕಾಗಿದೆ. ಸೋಲಿಗೆ ಸಮರ್ಥನೆ ಸಲ್ಲದು. ಉದ್ಯೋಗಾವಕಾಶಗಳು ಆಂಗ್ಲ ವಿದ್ಯಾಭ್ಯಾಸದಿಂದಲೇ ದಕ್ಕುವುದಾದರೆ, ಕಾಂಚಾಣದ ಕೋಟೆಗೆ ಕಂಪ್ಯೂಟರ್ ಕೋರ್ಸ್‌ಗಳಿಂದಲೇ ಹೆಬ್ಬಾಗಿಲು ತೆರೆಯುವುದಾದರೆ, ಕನ್ನಡ ಯಾರಿಗೆ ಬೇಕು? ಕನ್ನಡ-ಅಭಿಮಾನಕ್ಕೆ. ಆಂಗ್ಲ- ಆಗಸಕ್ಕೇರಲಿಕ್ಕೆ. ‘ಕನ್ನಡ ಇಲ್ಲಿಯ ಅನ್ನ; ಕಲಿಯಿರಿ ತಿನ್ನುವ ಮುನ್ನ’ ವ್ಹಾ! ಅಂತ್ಯಾಕ್ಷರ ಪ್ರಾಸದ ಸುಂದರ ಸಾಲು. ಆದರೆ, ಕನ್ನಡಿಗರ ಬದುಕು ಸುಂದರವಾಗುವುದು ಬೇಡವೆ? ಈಗೆಲ್ಲ ರೊಟ್ಟಿ, ಅನ್ನ ಯಾರಿಗೆ ಬೇಕು ಮಾರಾಯ್ರೇ? ಪಾನಿಪುರಿ, ಗೋಬಿ ಮಂಚೂರಿ, ಚಿಕನ್ ತಂದೂರಿ ಇದ್ದೇ ಇದೆಯಲ್ಲ! ಅದೇ ಅಗ್ಗ; ಸಗ್ಗ; ರುಚಿ.

‘ತಾಯಿಯಿಂದ ಉಸಿರು, ಗುರುವಿನಿಂದ ಹೆಸರು’ ಎಂಬುದೇನೋ ಸರಿಯೇ. ಆದರೆ, ‘ಕನ್ನಡಮ್ಮ’ ಎಂದೇ ಉದ್ಗರಿಸುವಾಗ ಒಂದಿಷ್ಟು ಕೀಳರಿಮೆ, ಕೃತಕತೆಯ ಭಾವ ಕಾಡುವುದೇಕೆ? ಈ ಸಮ್ಮೇಳನಗಳ ವೇದಿಕೆಗಳ ಮೇಲೆ ಮಿಂಚುವವರ ಮಕ್ಕಳು, ಮೊಮ್ಮಕ್ಕಳು ಆಂಗ್ಲ ಮಾಧ್ಯಮದಲ್ಲೇ ಓದುತ್ತಿಲ್ಲವೆ? ಹೈಟೆಕ್ ಹೈದರು ಜನಪ್ರಿಯ ಹಾಡನ್ನು ಹೀಗೆಲ್ಲಾ ಹಾಡಿದರೆ ಏನು ಗತಿ? ‘ಸಿರಿವಂತನಾದರೆ ಅಮೆರಿಕದ ಅಂಗಳದಿ ಮೆರೆವೆ, ಭಿಕ್ಷುಕನಾದೊಡೆ ಹಳ್ಳಿಯ ಬಯಲಲ್ಲಿ ಮಡಿವೆ’. ಆತ್ಮಾವಹೇಳನ ಬೇಕಾಗಿಲ್ಲ ನಿಜ. ಆದರೆ, ಆತ್ಮವಿಶ್ವಾಸ ವರ್ಧಿಸುವ ಪ್ರಯತ್ನ ಮೂರು ದಿನಗಳ ಸಮ್ಮೇಳನದಲ್ಲಿ ನಡೆಯಲೇಬೇಕು. ಮನಸ್ಸಿನ ಕಹಿ, ಕೊಳೆ, ಕೊಂಕು ‘ಎಂಡೋಸಲ್ಫಾನ್’ ವಿಷಕ್ಕಿಂತ ಹೆಚ್ಚು ಅಪಾಯಕಾರಿ. ಕೀಟನಾಶಕವನ್ನು ನಿಷೇಧಿಸಲಾಗಿದೆ. ತಾಯ್ನೆಲದ ಸ್ವಾಭಿಮಾನಕ್ಕೆ ಸೋಂಕು ಮೂಡಿಸುವ ಸೈತಾನರಿಗೆ ನಿಷೇಧ ಎಲ್ಲಿದೆ?

ಗೆಲುವಿನ ಗೋಲು ಹೊಡೆಯಬೇಕು. ಗೆಲುವಿನ ಬಾಳು ದಕ್ಕಬೇಕು. ಕನ್ನಡದ ಸೋಲು ತಪ್ಪಬೇಕು. ಕನ್ನಡ ‘ಪ್ರಚಾರ’ದಲ್ಲಿ ಅಲ್ಲ- ‘ಆಚಾರ’ದಲ್ಲಿ ಅರಳಬೇಕು. ಕಾಡುವ ಕೀಳರಿಮೆ ಅಳಿಯಬೇಕು. ಇದು ಸಾಧ್ಯವೇ...?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT