ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಗೆಲುವಿನತ್ತ ಭಾರತದ ಚಿತ್ತ

ಕ್ರಿಕೆಟ್: ಇಂದು ಅಂತಿಮ ಟ್ವೆಂಟಿ-20 ಪಂದ್ಯ, ಸಮಬಲ ಸಾಧಿಸಲು ಇಂಗ್ಲೆಂಡ್ ಹೋರಾಟ
Last Updated 21 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮುಂಬೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅನುಭವಿಸಿದ ಹೀನಾಯ ಸೋಲು ಮುಗಿದ ಹೋದ ಅಧ್ಯಾಯ. ಆದರೆ, ಅದಕ್ಕೆ ತಿರುಗೇಟು ನೀಡಬೇಕು ಎನ್ನುವುದು ಭಾರತ ತಂಡದ ಲೆಕ್ಕಾಚಾರ. ಸೋಲಿನ `ಮುಯ್ಯಿ' ತೀರಿಸುವ ಜೊತೆಗೆ ಟ್ವೆಂಟಿ-20 ಕ್ರಿಕೆಟ್ ಸರಣಿಯಲ್ಲಿ ಆಂಗ್ಲರನ್ನು ಬಗ್ಗುಬಡಿಯಬೇಕು ಎನ್ನುವ ತುಡಿತ ದೋನಿ ಬಳಗದ್ದು.

ಆತಿಥೇಯ ತಂಡದವರ ಸರಣಿ ಗೆಲುವಿನ ಕನಸು ನನಸಾಗಬೇಕಾದರೆ, ಶನಿವಾರ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ಗೆಲುವು ಸಾಧ್ಯವಾಗಬೇಕು. ಆದರೆ, 28 ವರ್ಷಗಳ ಬಳಿಕ ಭಾರತದ ನೆಲದಲ್ಲಿ    ಟೆಸ್ಟ್ ಸರಣಿ ಗೆದ್ದು ಬೀಗುತ್ತಿರುವ ಆಂಗ್ಲರು ಸರಣಿ ಸಮಬಲ ಸಾಧಿಸುವ ಗುರಿ ಹೊಂದಿದ್ದಾರೆ.

ಪುಣೆಯಲ್ಲಿ ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಕಳಪೆ ಪ್ರದರ್ಶನದಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಮಹಿ ಬಳಗದವರು ಈ ಗೆಲುವಿನ ಮೂಲಕ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಸರಣಿಯಲ್ಲಿ ದೋನಿ ಪಡೆ ಗೆಲುವು ಸಾಧಿಸುವುದು ಅಗತ್ಯವಿದೆ. ಮುಂದಿನವಾರ ಆರಂಭವಾಗಲಿರುವ ಪಾಕಿಸ್ತಾನ ವಿರುದ್ಧದ ಟ್ವೆಂಟಿ-20 ಹಾಗೂ ಏಕದಿನ ಸರಣಿಗೆ ಸಜ್ಜುಗೊಳ್ಳಲು ಈ ಸರಣಿ ವೇದಿಕೆಯಾಗಿದೆ.

ಬೌಲಿಂಗ್‌ನದ್ದೇ ಚಿಂತೆ: ಅಬ್ಬರದ ಬ್ಯಾಟಿಂಗ್ ಮೂಲಕ ಪ್ರವಾಸಿ ತಂಡವನ್ನು ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಸೋಲಿಸಿರುವ ಭಾರತಕ್ಕೆ ಬೌಲಿಂಗ್ ವಿಭಾಗದ್ದೇ ಚಿಂತೆ. ಅನುಭವಿಗಳ ಅನುಪಸ್ಥಿತಿ ದೋನಿ ಪಡೆಯನ್ನು ಕಾಡುತ್ತಿದೆ. ಅಂತರರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪರ್ವಿಂದರ್ ಅವಾನ ಮೊದಲ ಪಂದ್ಯದಲ್ಲಿ ಯಶ ಕಾಣಲಿಲ್ಲ. ದೆಹಲಿಯ ಈ ಬೌಲರ್ ಎರಡು ಓವರ್‌ಗಳಲ್ಲಿ 29 ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿದ್ದರು.

ಹಿಂದಿನ ಪಂದ್ಯದ `ಹೀರೊ' ಯುವರಾಜ್ ಸಿಂಗ್  ಲಯ ಕಂಡುಕೊಂಡಿರುವುದು ಆತಿಥೇಯ ತಂಡದಲ್ಲಿ ನವಚೈತನ್ಯ ಮೂಡಿದೆ. ಟೆಸ್ಟ್ ಸರಣಿಯಲ್ಲಿನ ನಿರಾಸೆಯನ್ನು ಮರೆತು ಭಾರತ ಟ್ವೆಂಟಿ-20ಯಲ್ಲಿ ಚಾಂಪಿಯನ್ ಆದರೆ, ಪಾಕ್ ವಿರುದ್ಧ ಹೊಸ ಹುರುಪಿನೊಂದಿಗೆ ಹೋರಾಗಲು ಅಣಿಯಾಗಬಹುದು.

`ಮೊದಲ ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿದ್ದೆವು. ಆದರೆ, ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದೆವು. ಯುವರಾಜ್ ಸಿಂಗ್ ನಿಜಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದರು. ಇದರಿಂದ ಭಾರತಕ್ಕೆ ಗೆಲುವು ಸಾಧ್ಯವಾಯಿತು' ಎಂದು ಪ್ರವಾಸಿ ತಂಡದ ನಾಯಕ ಎಯೋನ್ ಮಾರ್ಗನ್  ನುಡಿದರು. ಯುವಿ 38 ರನ್ ಗಳಿಸಿದ್ದರಲ್ಲದೇ, ಮೂರು ವಿಕೆಟ್ ಪಡೆದು ಭಾರತದ ಗೆಲುವಿಗೆ ಕಾರಣರಾಗಿದ್ದರು.

ತವರಿಗೆ ತೆರಳಿದ ಬೈಸ್ಟೋವ್: ಪ್ರವಾಸಿ ತಂಡದ ವಿಕೆಟ್ ಕೀಪರ್ ಜಾನಿ ಬೈಸ್ಟೋವ್  ಕೌಟುಂಬಿಕ ಕಾರಣದಿಂದ ಶುಕ್ರವಾರ ಇಂಗ್ಲೆಂಡ್‌ಗೆ ತೆರಳಿದರು. ಈ ಆಟಗಾರ ಮೊದಲ ಟಿ-20 ಪಂದ್ಯದಲ್ಲಿ ಆಡಿರಲಿಲ್ಲ.
ಪಂದ್ಯ ಆರಂಭ: ರಾತ್ರಿ 7ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT