ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳೀಕರಣಗೊಳಿಸುವುದು ಸೂಕ್ತ

ಭಾರತದಲ್ಲಿ ನ್ಯಾಯಾಂಗ ನಿಂದನೆಗೆ ಸಂಬಂಧಿಸಿದ ಕಾನೂನುಗಳು ಅತ್ಯಂತ ಕಠಿಣವಾಗಿವೆ. ನ್ಯಾಯಾಲಯಗಳ ತೀರ್ಪುಗಳನ್ನು ಟೀಕೆ ಮಾಡಲು ಅನೇಕ ನಿರ್ಬಂಧಗಳಿವೆ. ಇತ್ತೀಚಿನ ದಿನಗಳಲ್ಲಿ ತೀರ್ಪುಗಳಿಗೆ ಸಂಬಂಧಿಸಿದಂತೆ ಸಮಂಜಸ ವಿಮರ್ಶೆಗೆ ಸುಪ್ರೀಂ ಕೋರ್ಟ್ ಅವಕಾಶ ಮಾಡಿಕೊಟ್ಟಿದೆ. ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ನ್ಯಾ.ಮಾರ್ಕಂಡೇಯ ಕಟ್ಜು ಅವರು ನ್ಯಾಯಾಂಗ ನಿಂದನೆ ಕಾಯ್ದೆಯನ್ನು ತೆಗೆದು ಹಾಕಬೇಕು ಎಂದು ಹೇಳಿರುವುದು ಸ್ವಾಗತಾರ್ಹ.

ಭಾರತದಲ್ಲಿ ನ್ಯಾಯಾಧೀಶರಿಗೆ ಹೆಚ್ಚಿನ ರಕ್ಷಣೆ ಒದಗಿಸಲಾಗಿದೆ. ನ್ಯಾಯಾಂಗದಲ್ಲಿ ಭ್ರಷ್ಟಾಚಾರ, ಅದಕ್ಷತೆ ಇಲ್ಲ ಎನ್ನುವಂತಿಲ್ಲ. ಭಾರತದ ನ್ಯಾಯಾಂಗದಲ್ಲಿ ಶೇ 30 ರಷ್ಟು ಭ್ರಷ್ಟಾಚಾರ ಇದೆ ಎಂದು ಸುಪ್ರೀಂ ಕೋರ್ಟ್‌ನ ಹಿಂದಿನ ಮುಖ್ಯನ್ಯಾಯಮೂರ್ತಿಯೊಬ್ಬರು ಹೇಳಿದ್ದಾರೆ. ನ್ಯಾಯಾಂಗ ಭ್ರಷ್ಟಾಚಾರದಿಂದ ಹೊರತಾಗಿಲ್ಲ ಎಂಬುದನ್ನು ಇವರ ಹೇಳಿಕೆ ಪುಷ್ಟೀಕರಿಸುತ್ತದೆ. ತೀರ್ಪುಗಳನ್ನು ಕುರಿತು ಚರ್ಚೆ ಮಾಡುವುದೇ ತಪ್ಪು ಎನ್ನುವಂಥ ಸ್ಥಿತಿ ಇದೆ.

ಇಂಥ ಸಂದರ್ಭದಲ್ಲಿ ನ್ಯಾಯಮೂರ್ತಿಯೊಬ್ಬರು ಈ ಕಾನೂನನ್ನೇ ಕಿತ್ತು ಹಾಕಬೇಕು, ಸರಳೀಕರಣಗೊಳಿಸಬೇಕು ಎಂದು ಹೇಳಿರುವುದು ಸೂಕ್ತವಾಗಿದೆ. ಈ ಕಾನೂನು ತೆಗೆದು ಹಾಕಿದರೆ ನ್ಯಾಯಾಧೀಶರ ತಪ್ಪುಗಳನ್ನೂ ಬಹಿರಂಗಗೊಳಿಸಲು ಅನುವಾಗುತ್ತದೆ. ನ್ಯಾಯಾಂಗ ಬದ್ಧತೆಗೆ ಸಂಬಂಧಿಸಿದ ಕಾನೂನು (Judicial Accountability Bill) ರೂಪಿಸಲು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಈ ಕಾನೂನು ಜಾರಿಗೆ ಬಂದರೆ ಎಲ್ಲರಿಗೂ ಅನುಕೂಲವಾಗಲಿದೆ. ಸಾರ್ವಜನಿಕರೂ ತೀರ್ಪುಗಳ ಕುರಿತು ಅಭಿಮತ ವ್ಯಕ್ತಪಡಿಸಲು ಸಾಧ್ಯವಾಗಲಿದೆ.

ನ್ಯಾಯಾಧೀಶ ಸ್ಥಾನವೇ ಅತ್ಯಂತ ಶಕ್ತಿಯುತವಾದುದು. ಜನಪ್ರತಿನಿಧಿಗಳಿಂದ ಪಾಸಾದ ಮಸೂದೆಗಳಿಗೆ ಒಮ್ಮತ ಮೂಡುವುದು ಕಷ್ಟ. ಆದರೆ ನ್ಯಾಯಾಧೀಶರು ರೂಪಿಸಿದ ಆದೇಶಗಳು ಯಾವುದೇ ತೊಡಕಿಲ್ಲದೆ ಕಾನೂನುಗಳಾಗಿ ರೂಪಿತಗೊಳ್ಳುತ್ತವೆ. ಇಡೀ ದೇಶಕ್ಕೆ ಅನ್ವಯವಾಗುತ್ತವೆ. ಹೀಗಾಗಿ ನ್ಯಾಯಾಧೀಶರ ಮೇಲೂ ನಿಗಾ ಇಡುವ ವ್ಯವಸ್ಥೆ ಜಾರಿಯಾಗಬೇಕು. ಅವರು ರೂಪಿಸಿದ್ದೆಲ್ಲವೂ ಸರಿ ಎಂದೇನು ಅಲ್ಲ. ನ್ಯಾಯಾಧೀಶರು ರೂಪಿಸಿದ ನಿಯಮಗಳ ಚರ್ಚೆಗೂ ಅವಕಾಶ ಸಿಗುವಂತಾಗಬೇಕು. ನ್ಯಾಯಾಂಗ ನಿಂದನೆ ಕಾನೂನನ್ನು ಅತ್ಯಂತ ಸರಳೀಕರಣಗೊಳಿಸುವುದರಿಂದ ಇದು ಸಾಧ್ಯವಾಗುತ್ತದೆ. ಮಾಧ್ಯಮಗಳು ಮತ್ತಷ್ಟು ನಿರ್ಭಿಡೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ಕೆಲ ಪಾಶ್ಚಿಮಾತ್ಯ ದೇಶಗಳಲ್ಲಿ ತೀರ್ಪುಗಳನ್ನು ವಿಮರ್ಶಿಸಲು ಅವಕಾಶಗಳು ಇವೆ. ಭಾರತದಲ್ಲಿಯೂ ನ್ಯಾಯಾಂಗ ನಿಂದನೆ ಕಾನೂನನ್ನು ಸರಳೀಕರಣಗೊಳಿಸುವುದು ಉತ್ತಮ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT